ಬಿಸಿಐ ಸದಸ್ಯ ಸದಾಶಿವ ರೆಡ್ಡಿ ವಜಾ ಅವಿಶ್ವಾಸ ನಿಲುವಳಿ ಹಿಂಪಡೆದ ಕೆಎಸ್‌ಬಿಸಿ; ಅಧ್ಯಕ್ಷ ಕಾಶೀನಾಥ್‌ಗೆ ಬಿಸಿಐ ನೋಟಿಸ್‌

“ನ.1ರಂದು ನಡೆದ ಸಭೆಯಲ್ಲಿ ಏ.10ರಂದು ಕೈಗೊಂಡಿದ್ದ ಕ್ರಮ/ನಿಲುವಳಿ ಹಾಗೂ ಬಿಸಿಐಗೆ ಕೆಎಸ್‌ಬಿಸಿಯಿಂದ ಸದಸ್ಯರೊಬ್ಬರನ್ನು ಆಯ್ಕೆ/ನಾಮನಿರ್ದೇಶನ ಮಾಡುವ ಇಂದಿನ ಸಭೆಯ ವಿಚಾರವನ್ನು ಹಿಂಪಡೆದು, ರದ್ದುಪಡಿಸಲಾಗಿದೆ” ಎಂದು ತಿಳಿಸಿರುವ ಕೆಎಸ್‌ಬಿಸಿ.
KSBC and BCI
KSBC and BCI

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನಿಂದ (ಕೆಎಸ್‌ಬಿಸಿ) ಭಾರತೀಯ ವಕೀಲರ ಪರಿಷತ್‌ಗೆ (ಬಿಸಿಐ) ಸದಸ್ಯರಾಗಿರುವ ವಕೀಲ ವೈ ಆರ್‌ ಸದಾಶಿವ ರೆಡ್ಡಿ ಅವರು ಕೆಎಸ್‌ಬಿಸಿ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿರುವುದರಿಂದ ಅವರನ್ನು ಕೆಳಗಿಳಿಸಲಾಗುತ್ತಿದೆ ಎಂಬ ಒಕ್ಕಣೆ ಹೊಂದಿದ್ದ ಅವಿಶ್ವಾಸ ನಿಲುವಳಿಯನ್ನು ಕೆಎಸ್‌ಬಿಎಸ್‌ಯು ಹಿಂಪಡೆದಿದೆ. ಬಿಸಿಐ ಬರೆದಿರುವ ಖಡಕ್‌ ಪತ್ರಕ್ಕೆ ಬೆದರಿ, ಕೆಎಸ್‌ಬಿಸಿ ಈ ನಿರ್ಧಾರ ಕೈಗೊಂಡಿದೆ ಎಂದು ವಕೀಲರ ಸಮುದಾಯ ವ್ಯಾಖ್ಯಾನಿಸಿದೆ.

“ಕರ್ನಾಟಕ ರಾಜ್ಯ ವಕೀಲ ಪರಿಷತ್‌ನಲ್ಲಿ 2022ರ ನವೆಂಬರ್‌ 1ರಂದು ನಡೆದ ಸಭೆಯಲ್ಲಿ 2022ರ ಏಪ್ರಿಲ್‌ 10ರಂದು ಕೈಗೊಂಡಿದ್ದ ಕ್ರಮ/ನಿಲುವಳಿ (ಅವಿಶ್ವಾಸ ನಿಲುವಳಿ) ಹಾಗೂ ಬಿಸಿಐಗೆ ಕೆಎಸ್‌ಬಿಸಿಯಿಂದ ಸದಸ್ಯರೊಬ್ಬರನ್ನು ಆಯ್ಕೆ/ನಾಮನಿರ್ದೇಶನ ಮಾಡುವ ಇಂದಿನ ಸಭೆಯ ವಿಚಾರವನ್ನು ಹಿಂಪಡೆದು, ರದ್ದುಪಡಿಸಲಾಗಿದೆ” ಎಂದು ಕೆಎಸ್‌ಬಿಸಿ ಹಾಲಿ ಅಧ್ಯಕ್ಷ ಮೋತಕಪಲ್ಲಿ ಕಾಶೀನಾಥ್‌ ಅವರು ತಿಳಿಸಿರುವ ಪತ್ರವನ್ನು ನವೆಂಬರ್‌ 3ರಂದು ಬಿಸಿಐ ಕಾರ್ಯದರ್ಶಿಗೆ ಕೆಎಸ್‌ಬಿಸಿ ಕಾರ್ಯದರ್ಶಿ ಕಳುಹಿಸಿಕೊಟ್ಟಿದ್ದಾರೆ.

ಇದಕ್ಕೂ ಮುನ್ನ, 2022ರ ಏಪ್ರಿಲ್‌ 1ರಂದು ಕೆಎಸ್‌ಬಿಸಿ ಅಧ್ಯಕ್ಷರಾದ ಕಾಶೀನಾಥ್‌ ಅವರು ಬಿಸಿಐ ಹಾಲಿ ಸದಸ್ಯ ಸದಾಶಿವ ರೆಡ್ಡಿ ಅವರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಒಪ್ಪಿಗೆ ಪಡೆಯಲು ಸಭೆ ಕರೆದಿದ್ದರು. ಇದಕ್ಕೆ ವಕೀಲ ಜೆ ಎಂ ಅನಿಲ್‌ ಕುಮಾರ್‌ ಅವರು ತೀವ್ರ ವಿರೋಧ ದಾಖಲಿಸಿದ್ದರು. ಅಲ್ಲದೇ, ಹಾಜರಾತಿ ರಿಜಿಸ್ಟರ್‌ಗೆ ಸಹಿ ಹಾಕಲು ನಿರಾಕರಿಸಿದ್ದ ಪತ್ರ ʼಬಾರ್‌ ಅಂಡ್‌ ಬೆಂಚ್‌ʼಗೆ ಲಭ್ಯವಾಗಿದೆ.

ಬಿಸಿಐ ಹಾಲಿ ಸದಸ್ಯರಾದ ಸದಾಶಿವ ರೆಡ್ಡಿ ಅವರು ಉದ್ದೇಶಪೂರ್ವಕವಾಗಿ ಕೆಎಸ್‌ಬಿಸಿ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದು, ಇಂದು ಉದ್ದೇಶಪೂರ್ವಕವಾಗಿ ಸಭೆಯಲ್ಲಿ ಭಾಗವಹಿಸಿಲ್ಲ. ಒಂದು ವರ್ಷದ ಒಳಗೆ ಬಿಸಿಐ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ನೀಡಿದ್ದ ಭರವಸೆಗೆ ವಿರುದ್ಧವಾಗಿ ನಡೆದುಕೊಂಡಿದ್ದು, ಕೆಎಸ್‌ಬಿಸಿ ಹಿತಾಸಕ್ತಿಗೆ ಪೂರಕವಾಗಿ ಏನನ್ನೂ ಮಾಡಿಲ್ಲ. ಬಿಸಿಐನಲ್ಲಿನ ಬೆಳವಣಿಗೆಗಳನ್ನು ಕೆಎಸ್‌ಬಿಸಿಗೆ ತಿಳಿಸಿಲ್ಲ. ಹೀಗಾಗಿ, ವಕೀಲರ ಸಮುದಾಯದ ಹಿತಾಸಕ್ತಿ ದೃಷ್ಟಿಯಿಂದ ಸದಾಶಿವ ರೆಡ್ಡಿ ಅವರನ್ನು ವಜಾ ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ, ಅವಿಶ್ವಾಸ ನಿಲುವಳಿಗೆ ತಮ್ಮ ಒಪ್ಪಿಗೆ ಇದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ 22 ಸದಸ್ಯರ ಪೈಕಿ 16 ಮಂದಿ ಬೆಂಬಲ ಸೂಚಿಸಿದ್ದರು ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಅಧ್ಯಕ್ಷರಾದ ಕಾಶೀನಾಥ್‌, ಉಪಾಧ್ಯಕ್ಷರಾದ ಬಿ ಆರ್‌ ಚಂದ್ರಮೌಳಿ, ಸದಸ್ಯರಾದ ಪದ್ಮ ಪ್ರಸಾದ್‌ ಹೆಗ್ಡೆ, ವಿಶಾಲ್‌ ರಘು ಎಚ್‌ ಎಲ್‌, ಆರ್‌ ರಾಜಣ್ಣ, ಕಮರೆಡ್ಡಿ ವೆಂಕಟರೆಡ್ಡಿ ದೇವರೆಡ್ಡಿ, ಶ್ರೀನಿವಾಸ ಬಾಬು, ಕೆ ಬಿ ನಾಯಕ್‌, ಆಸೀಫ್‌ ಅಲಿ ಶೇಖ್‌ ಹುಸೇನ್‌, ಅಪ್ಪು ಆನಂದಕುಮಾರ್‌ ಮಗದುಮ್‌, ಎಸ್‌ ಎಫ್‌ ಗೌತಮ್‌ ಚಾಂದ್‌, ಎಸ್‌ ಬಸವರಾಜು, ಎಸ್‌ ಹರೀಶ್‌, ಬಾಳಾಸಾಹೇಬ್‌ ವಿನಯ್‌ ಮಂಗಳೇಕರ್‌, ಎಂ ಎನ್‌ ಮಧುಸೂಧನ್‌ ಅವರು ಕೈ ಎತ್ತುವ ಮೂಲಕ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ಸೂಚಿಸಿದ್ದರು.

ವಕೀಲ ಸದಸ್ಯರಾದ ಕೆ ಕೆ ತುಕಾರಾಂ, ಎಂ ದೇವರಾಜ, ಎನ್‌ ಶಿವಕುಮಾರ್‌, ಬಿ ವಿ ಶ್ರೀನಿವಾಸ, ಜೆ ಎಂ ಅನಿಲ್‌ ಕುಮಾರ್‌, ಎಸ್‌ ಎಸ್‌ ಮಿಟ್ಟಲ್‌ಕೋಡ್‌ ಅವರು ಅವಿಶ್ವಾಸ ನಿರ್ಣಯಕ್ಕೆ ವಿರುದ್ಧ ಮತ ಹಾಕಿದ್ದರು.

16:6 ಬಹುಮತದ ಆಧಾರದಲ್ಲಿ ಕೆಎಸ್‌ಬಿಸಿಯಿಂದ ಬಿಸಿಐ ಸದಸ್ಯರಾಗಿದ್ದ ಸದಾಶಿವ ರೆಡ್ಡಿ ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ವಜಾ ಮಾಡಲಾಗಿದೆ. ಬಿಸಿಐಗೆ ಹೊಸ ಸದಸ್ಯರ ನೇಮಕಾತಿಗೆ ಸಂಬಂಧಿಸಿದಂತೆ ಚುನಾವಣೆ ನಡೆಸಲು ಕಾನೂನು ಪ್ರಕಾರವಾಗಿ ಕ್ರಮಕೈಗೊಳ್ಳಲು ನಿರ್ದೇಶಿಸಲಾಗಿದೆ ಎಂಬ ಒಕ್ಕಣೆ ಹೊಂದಿದ್ದ ಪತ್ರವನ್ನು ಬಿಸಿಐಗೆ ಕಳುಹಿಸಿಕೊಡಲಾಗಿತ್ತು.

ಇದಕ್ಕೆ ಪ್ರತಿಯಾಗಿ, ಅಕ್ಟೋಬರ್‌ 29ರಂದು ಕಟು ಶಬ್ದ ಪ್ರಯೋಗಿಸಿರುವ ಪತ್ರವನ್ನು ಕೆಎಸ್‌ಬಿಸಿಗೆ ಬಿಸಿಐ ರವಾನಿಸಿದೆ. ಕರ್ನಾಟಕ ರಾಜ್ಯದಿಂದ ಬಿಸಿಐಗೆ ಸದಸ್ಯರ ಸ್ಥಾನ ಖಾಲಿ ಇಲ್ಲದಿದ್ದರೂ ನೂತನ ಸದಸ್ಯರ ಆಯ್ಕೆ/ನಾಮನಿರ್ದೇಶನ ಕುರಿತಾದ ಅಜೆಂಡಾವನ್ನು ನಿರ್ಧರಿಸಲು ಹೇಗೆ ಕೆಎಸ್‌ಬಿಸಿ ಕೈಗೆತ್ತಿಕೊಂಡಿದೆ ಎಂಬುದು ನಮಗೆ ಆಶ್ಚರ್ಯ ಹಾಗೂ ಆಘಾತ ಉಂಟು ಮಾಡಿದೆ. ದುರ್ನಡತೆಯಲ್ಲಿ ತಪ್ಪಿತಸ್ಥರು ಎಂಬುದು ಸಾಬೀತಾಗದ ಹೊರತು ಬಿಸಿಐ ಸದಸ್ಯರನ್ನು ಯಾವುದೇ ರಾಜ್ಯ ವಕೀಲರ ಪರಿಷತ್‌ ವಜಾ ಮಾಡಲಾಗದು. ಬಿಸಿಐ ಮಾತ್ರ ಅಂಥ ನಿರ್ಣಯ ಕೈಗೊಳ್ಳಬಹುದೇ ವಿನಾ ರಾಜ್ಯ ವಕೀಲ ಪರಿಷತ್‌ ಅಲ್ಲ ಎಂದು ಸ್ಪಷ್ಟಪಡಿಸಿದೆ.

ಕೆಎಸ್‌ಬಿಸಿಯಿಂದ ಬಿಸಿಐಗೆ ಸದಸ್ಯರಾಗಿರುವ ವಕೀಲರೊಬ್ಬರನ್ನು ಅಕ್ರಮ ಮತ್ತು ಅನೈತಿಕವಾಗಿ ಸ್ಥಾನ ತೊರೆಯುವಂತೆ ಮಾಡಲಾಗಿದ್ದು, ಅದನ್ನು ಬಿಸಿಐ ಗಮನಕ್ಕೆ ತರಲಾಗಿತ್ತು. ಹೀಗಾಗಿ, ಅಕ್ರಮವಾಗಿ ಕ್ರಮಕೈಗೊಳ್ಳದಂತೆ ಹಾಗೂ ಅಕ್ರಮವಾದ ಅವಿಶ್ವಾಸ ನಿರ್ಣಯವನ್ನು ಹಿಂಪಡೆಯುವಂತೆ ಕೆಎಸ್‌ಬಿಸಿ ಸದಸ್ಯರು ಮತ್ತು ಅಧ್ಯಕ್ಷರಿಗೆ ಕೋರಲಾಗಿತ್ತು ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಬಿಸಿಐ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಳ್ಳದಂತೆ ಮತ್ತು ಬಿಸಿಐ ಹಾಲಿ ಸದಸ್ಯರ ವಜಾ ಅಥವಾ ನೂತನ ಸದಸ್ಯರ ಆಯ್ಕೆಗೆ ಸಂಬಂಧಿಸಿದಂತೆ ಮುಂದುವರಿಯದಂತೆ ಕೆಎಸ್‌ಬಿಸಿಗೆ ಬಿಸಿಐ ಸೂಚಿಸಿತ್ತು. ಕೆಎಸ್‌ಬಿಸಿಯ ಕೆಲವು ಸದಸ್ಯರು ನಿಯಮಗಳಿಗೆ ವಿರುದ್ಧವಾಗಿ ಮತ್ತು ಸ್ವಹಿತಾಸಕ್ತಿಗೋಸ್ಕರ ಸಂಸ್ಥೆಗೆ ಹಾನಿ ಮಾಡುವ ಪ್ರಯತ್ನ ನಡೆಸಿದ್ದಾರೆ ಎಂದು ಬಿಸಿಐ ಪತ್ರದಲ್ಲಿ ಶಂಕಿಸಿದೆ.

ಕೆಎಸ್‌ಬಿಸಿಯ ಕೆಲವು ಸದಸ್ಯರು ಕಾನೂನು ಶಿಕ್ಷಣ ಕೇಂದ್ರಗಳ ಮ್ಯಾನೇಜ್‌ಮೆಂಟ್‌ಗಳ ಸಂಪರ್ಕದಲ್ಲಿದ್ದು, ಬಿಸಿಐನ ಪ್ರತಿನಿಧಿಗಳು ತಾವಾಗಿದ್ದೇವೆ. ಸಂಬಂಧಿತ ರಾಜ್ಯಗಳ ಕಾನೂನು ಶಿಕ್ಷಣ ಕೇಂದ್ರಗಳ ವಿಚಾರಗಳನ್ನು ತಾವು ನೋಡಿಕೊಳ್ಳಲು ಸಶಕ್ತರಾಗಿದ್ದೇವೆ ಎಂಬ ಭಾವನೆ ಉಂಟು ಮಾಡುತ್ತಿರುವ ಕುರಿತು ವಿಶ್ವಸನೀಯ ಮೂಲಗಳಿಂದ ಬಿಸಿಐಗೆ ಮಾಹಿತಿ ಸಿಕ್ಕಿದೆ. ಇದು ಸತ್ಯವಾಗಿದ್ದರೆ, ಅದು ದುಸ್ಥಿತಿಯಾಗಿದ್ದು, ಇದು ದುರ್ನಡತೆಯಾಗಿದೆ. ಇಂಥ ಆರೋಪಗಳ ಕುರಿತು ತನಿಖೆ ನಡೆಸಲಾಗುತ್ತಿದ್ದು, ಸಂಬಂಧಿತರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಪತ್ರದಲ್ಲಿ ವಿವರಿಸಲಾಗಿದೆ.

ನವೆಂಬರ್‌ 1ರ ಸಭೆಗೆ ಕಾನೂನುಬಾಹಿರವಾದ ಅಜೆಂಡಾ ನಿರ್ಧರಿಸಲು ಕೈಗೆತ್ತುಕೊಂಡಿರುವುದಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಏಕೆ ಕ್ರಮಕೈಗೊಳ್ಳಬಾರದು ಎಂದು ಕೆಎಸ್‌ಬಿಸಿ ಅಧ್ಯಕ್ಷರಿಗೆ ಬಿಸಿಐ ನೋಟಿಸ್‌ ಜಾರಿ ಮಾಡಿದೆ. ಇದಕ್ಕೆ ಮೂರು ವಾರಗಳಲ್ಲಿ ಉತ್ತರಿಸಬೇಕು. ಇಲ್ಲವಾದಲ್ಲಿ ಪ್ರಕರಣವನ್ನು ಏಕಪಕ್ಷೀಯವಾಗಿ ಪರಿಗಣಿಸಿ, ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಪತ್ರದಲ್ಲಿ ವಿವರಿಸಲಾಗಿದೆ.

ನೂತನ ಸದಸ್ಯರ ಆಯ್ಕೆ/ನಾಮನಿರ್ದೇಶನ ಕುರಿತಾದ ಅಜೆಂಡಾವನ್ನು ಏತಕ್ಕಾಗಿ, ಕಾನೂನಿನ ಯಾವ ನಿಬಂಧನೆಯಡಿ ಸಭೆಯಲ್ಲಿ ನಿರ್ಧರಿಸಲು ಇಡಲಾಗಿದೆ. ಕೆಎಸ್‌ಬಿಸಿಯ ಕೆಲವು ಸದಸ್ಯರ ಅಕ್ರಮ ಮತ್ತು ಅನೈತಿಕ ಒತ್ತಡಕ್ಕೆ ಹಾಲಿ ಬಿಸಿಐ ಸದಸ್ಯರನ್ನು ವಜಾ ಮಾಡುವ ಒತ್ತಡ ಸೃಷ್ಟಿಸಲಾಗಿತ್ತೆ ಎಂಬುದಕ್ಕೆ ಕೆಎಸ್‌ಬಿಸಿ ಅಧ್ಯಕ್ಷರು ಉತ್ತರಿಸಬೇಕು. ಈ ಕುರಿತು 2022ರ ಡಿಸೆಂಬರ್‌ 3ರಂದು ಪಕ್ಷಕಾರರ ವಾದವನ್ನು ಆಲಿಸಲಾಗುವುದು. ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ಕೆಎಸ್‌ಬಿಸಿಯಿಂದ ಬಿಸಿಐ ಸದಸ್ಯರಾಗಿರುವವರ ವಜಾ ಅಥವಾ ಆಯ್ಕೆಗೆ ಸಂಬಂಧಿಸಿದಂತೆ ಯಾವುದೇ ಸಭೆ ನಡೆಸದಂತೆ ನಿರ್ಬಂಧಿಸಲಾಗಿದೆ. ಸದಾಶಿವ ರೆಡ್ಡಿ ಅವರು ನಿಲುವಳಿಯಿಂದ ಹಿಂದೆ ಸರಿದಿದ್ದಾರೆ ಎಂದು ಬಿಸಿಐ ಕಾರ್ಯದರ್ಶಿ ಶ್ರೀಮಂತೋ‌ ಸೇನ್ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com