ಆರೋಪಿತ ಪೊಲೀಸರ ವಿರುದ್ಧ ಕ್ರಮಕೈಗೊಳ್ಳುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗವು (ಕೆಎಸ್‌ಎಚ್‌ಸಿ) ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಬಹುದೇ ವಿನಾ ನಿರ್ದೇಶಿಸಲಾಗದು ಎಂದು ಈಚೆಗೆ ಕರ್ನಾಟಕ ಹೈಕೋರ್ಟ್ ಪುನರುಚ್ಚರಿಸಿದೆ.
ಪೊಲೀಸ್ ಇನ್‌ಸ್ಪೆಕ್ಟರ್ ಸಿ ಗಿರೀಶ್ ನಾಯಕ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠವು ಭಾಗಶಃ ಪುರಸ್ಕರಿಸಿದೆ.
2020ರ ಮಾರ್ಚ್ 12ರಂದು ಕೆಎಸ್‌ಎಚ್‌ಸಿ ನೀಡಿರುವ ವರದಿಯನ್ನು ಶಿಫಾರಸ್ಸು ಎಂದು ಪರಿಗಣಿಸಬೇಕೆ ವಿನಾ ನಿರ್ದೇಶನ ಎಂದಲ್ಲ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
2020ರ ಮಾರ್ಚ್ 12ರಂದು ಆಯೋಗವು ಕೆಲವು ಶಿಫಾರಸ್ಸುಗಳನ್ನು ಮಾಡಿದೆ. ಅವರ ಶಿಫಾರಸ್ಸುಗಳನ್ನು ನೋಡಿದರೆ ಅವು ನಿರ್ದೇಶನದ ರೂಪದಲ್ಲಿವೆ. ಇದು ಮಾನವ ಹಕ್ಕುಗಳ ರಕ್ಷಣಾ ಕಾಯಿದೆ ಸೆಕ್ಷನ್ 18ರ ಅಡಿ ವ್ಯಾಪ್ತಿ ಮೀರಿವೆ ಎಂದು ಅರ್ಜಿದಾರರು ವಾದಿಸಿದ್ದರು.
ಕಾಯಿದೆಯ ಸೆಕ್ಷನ್ 29ರ ಅಡಿ ಕೆಎಸ್‌ಎಚ್‌ಸಿ ನಡೆಸಿದ ತನಿಖೆಯು ಕಾಯಿದೆಯ ಸೆಕ್ಷನ್ 18ರ ಅಡಿ ನಿಯಂತ್ರಿಸಲ್ಪಡುತ್ತದೆ. ಕಾಯಿದೆಯ ಸೆಕ್ಷನ್ 18(ಎ)ರ ಅಡಿ ತನಿಖೆಯಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗಿರುವುದು ಕಂಡುಬಂದರೆ ಸೆಕ್ಷನ್ 18(ಎ) ಅಡಿ ಬರುವ ಉಪ ಸೆಕ್ಷನ್ (i), (ii) ಮತ್ತು (iii) ಅಡಿ ಕ್ರಮಕ್ಕೆ ಶಿಫಾರಸ್ಸು ಮಾಡಬಹುದು ಎಂದು ಹೇಳಿದೆ.
ಅಲ್ಲದೇ, ಕೆಎಸ್‌ಎಚ್‌ಸಿಯು 2020ರ ಮಾರ್ಚ್ 12ರಂದು ಸಲ್ಲಿಸಿರುವ ವರದಿ/ಶಿಫಾರಸ್ಸು ಆಧರಿಸಿ ಸೂಕ್ತ ಕ್ರಮಕೈಗೊಳ್ಳಲು ಅಧಿಕೃತ ಪ್ರತಿವಾದಿಗಳು ಸ್ವತಂತ್ರವಾಗಿದ್ದಾರೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.