ಕೆಎಸ್‌ಆರ್‌ಟಿಸಿ-ಬಿಎಂಟಿಸಿ ನೌಕರರ ಮುಷ್ಕರ: ಕ್ರಮ ಕೈಗೊಂಡ ವಿವರ ನೀಡಿದ ಸರ್ಕಾರ; ಅರ್ಜಿ ವಿಲೇವಾರಿ ಮಾಡಿದ ಹೈಕೋರ್ಟ್‌

ಕೆಎಸ್‌ಆರ್‌ಟಿಸಿ-ಬಿಎಂಟಿಸಿ ನೌಕರರು ಎರಡು ಬಾರಿ ಮುಷ್ಕರ ನಡೆಸಿದ್ದರಿಂದ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ಹೀಗಾಗಿ, ಕೋಡಿಹಳ್ಳಿ ಚಂದ್ರಶೇಖರ್‌ ಸೇರಿದಂತೆ ಹಲವು ಸಿಬ್ಬಂದಿಯ ವಿರುದ್ದ ದಾವೆ ಹೂಡಿರುವುದಾಗಿ ಆಕ್ಷೇಪಣೆಯಲ್ಲಿ ಸರ್ಕಾರ ತಿಳಿಸಿದೆ.
KSRTC-BMTC Strike, Kodihalli Chandrashekhar and Karnataka HC
KSRTC-BMTC Strike, Kodihalli Chandrashekhar and Karnataka HC

ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನೌಕರರು ನಾಲ್ಕು ದಿನಗಳ ಕಾಲ ಕೈಗೊಂಡಿದ್ದ ಮುಷ್ಕರದಿಂದ ರಾಜ್ಯ ಸರ್ಕಾರಕ್ಕೆ ಆಗಿರುವ ನಷ್ಟ ವಸೂಲಿ ಮತ್ತು ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ವಿಲೇವಾರಿ ಮಾಡಿದೆ.

ಸಮರ್ಪಣಾ ಎಂಬ ಟ್ರಸ್ಟ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠವು ರಾಜ್ಯ ಸರ್ಕಾರ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ವಿವರವಾಗಿ ಕ್ರಮಕೈಗೊಳ್ಳುವುದಾಗಿ ತಿಳಿಸಿದೆ. ಹೀಗಾಗಿ, ಪಿಐಎಲ್‌ ಅನ್ನು ವಿಲೇವಾರಿ ಮಾಡಲಾಗಿದೆ ಎಂದು ಹೇಳಿತು.

ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರು ಮತ್ತು ಸಂಘಟನೆಗಳು ಮುಷ್ಕರ ನಡೆಸಿದ್ದರಿಂದ ಡಿಸೆಂಬರ್‌ 11ರಿಂದ 14ರವರೆಗೆ 7.93 ಕೋಟಿ ರೂಪಾಯಿ ನಷ್ಟವಾಗಿದೆ. ಇದನ್ನು ವಸೂಲಿ ಮಾಡುವ ಸಂಬಂಧ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶಿಸಬೇಕು. ಅಲ್ಲದೇ, ಮುಷ್ಕರದಲ್ಲಿ ಭಾಗಿಯಾಗಿದ್ದ ಆರೋಪಿಗಳ ವಿರುದ್ಧ ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆದೇಶಿಸಬೇಕು. ಮುಷ್ಕರದ ಸಂದರ್ಭದಲ್ಲಿ ಬಸ್‌ಗಳ ಮೇಲೆ ಕಲ್ಲು ತೂರಾಟದಿಂದ ಹಲವು ಬಸ್‌ಗಳಿಗೆ ಹಾನಿಯಾಗಿದ್ದು, ಅವುಗಳ ರಿಪೇರಿಗೆ 1.34 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಇದನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಲು ಆದೇಶಿಸಿಬೇಕು ಎಂದು ಮನವಿಯಲ್ಲಿ ಕೋರಲಾಗಿತ್ತು.

ಇದಕ್ಕೆ ರಾಜ್ಯ ಸರ್ಕಾರವು ಆಕ್ಷೇಪಣೆಯಲ್ಲಿ ವಿವರವಾಗಿ ಉತ್ತರಿಸಿದೆ. ರಾಜ್ಯ ರಸ್ತೆ ಸಾರಿಗೆ ಉದ್ಯೋಗಿಗಳ ಸಂಘಟನೆ ಮತ್ತು ಕೋಡಿಹಳ್ಳಿ ಚಂದ್ರಶೇಖರ್‌ ಮತ್ತಿತರರು ಕಾನೂನುಬಾಹಿರವಾಗಿ ನಡೆಸಿದ ಮುಷ್ಕರದಿಂದ ಬಿಎಂಟಿಸಿಯ 23 ಬಸ್‌ಗಳಿಗೆ ಹಾನಿಯಾಗಿದ್ದು, 12 ಎಫ್‌ಐಆರ್‌ ಮತ್ತು 11 ಎನ್‌ಸಿಆರ್‌ಗಳನ್ನು ಆರೋಪಿಗಳ ವಿರುದ್ಧ ದಾಖಲಿಸಲಾಗಿದೆ. ಅಕ್ರಮ ಮುಷ್ಕರದಲ್ಲಿ ಭಾಗವಹಿಸಿದ್ದ ಸಿಬ್ಬಂದಿಗೆ ಷೋಕಾಸ್‌ ನೋಟಿಸ್‌ ನೀಡಲಾಗಿದೆ. ಒಟ್ಟಾರೆ ಬಿಎಂಟಿಸಿ ವ್ಯಾಪ್ತಿಯಲ್ಲಿ 3,676 ಸಿಬ್ಬಂದಿ ಮುಷ್ಕರದಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿದ್ದು, ಈ ಪೈಕಿ 43 ಸಿಬ್ಬಂದಿಯ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ವಿವರಿಸಲಾಗಿದೆ.

ಅಲ್ಲದೇ, ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಯೂನಿಯನ್‌ಗಳ ವಿರುದ್ಧ ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು, ಸಿಬ್ಬಂದಿ ವೇತನ 2.65 ಕೋಟಿ ರೂಪಾಯಿ ಮತ್ತು ಬಸ್‌ಗಳಿಗೆ ಹಾನಿ ಮಾಡಿದ್ದರ ನಷ್ಟ 1.34 ಲಕ್ಷ ರೂಪಾಯಿ ಸೇರಿದಂತೆ ಒಟ್ಟು 2.66 ಕೋಟಿ ರೂಪಾಯಿಯನ್ನು ಮುಷ್ಕರದಲ್ಲಿ ಭಾಗವಹಿಸಿದ್ದವರಿಂದ ತುಂಬಿಸಿಕೊಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

1,292 ಸಿಬ್ಬಂದಿಯ ವಿರುದ್ದ ಕ್ರಮ

ಸಂಘಟನೆ ನೇತೃತ್ವದಲ್ಲಿ ಸಿಬ್ಬಂದಿ ಮತ್ತೆ ಇದೇ ವರ್ಷದ ಏಪ್ರಿಲ್‌ 7ರಿಂದ 21ರವರೆಗೆ ಮುಷ್ಕರ ನಡೆಸಿದ್ದು, ಇದರಿಂದ ಅಪಾರ ಪ್ರಮಾಣದಲ್ಲಿ ನಿಗಮಗಳಿಗೆ ಆರ್ಥಿಕ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ 359 ಟ್ರೈನಿ ಉದ್ಯೋಗಿಗಳನ್ನು ಕರ್ತವ್ಯದಿಂದ ವಜಾ ಮಾಡಲಾಗಿದೆ. 230 ಸಿಬ್ಬಂದಿಯನ್ನು (ಪ್ರೊಬೆಷನರ್ಸ್‌) ಸೇವೆಯಿಂದ ಬಿಡುಗಡೆ ಮಾಡಲಾಗಿದೆ. 27 ಮಂದಿಯನ್ನು ಅವಧಿಗೂ ಮುನ್ನ ನಿವೃತ್ತಿಯಾಗುವಂತೆ ಸೂಚಿಸಲಾಗಿದೆ. 676 ಮಂದಿಯನ್ನು ಸೇವೆಯಿಂದ ವಜಾ ಮಾಡಲಾಗಿದೆ. ಒಟ್ಟಾರೆ 1,292 ಮಂದಿಯ ವಿರುದ್ಧ ಕ್ರಮವಹಿಸಲಾಗಿದೆ ಎಂದು ಸರ್ಕಾರವು ಆಕ್ಷೇಪಣೆಯಲ್ಲಿ ವಿವರಿಸಿದೆ.

ಪ್ರಸಕ್ತ ವರ್ಷದ ಏಪ್ರಿಲ್‌ 7ರಿಂದ 21ರ ವರೆಗೆ ಮುಷ್ಕರದಲ್ಲಿ ಭಾಗವಹಿಸಿದ್ದ 2,494 ಸಿಬ್ಬಂದಿಯನ್ನು ಸೇವೆಯಿಂದ ಅಮಾನತ್ತು ಮಾಡಲಾಗಿತ್ತು. ಬಳಿಕ 2,421 ಮಂದಿಯ ವಿರುದ್ಧದ ಅಮಾನತು ಆದೇಶವನ್ನು ಹಿಂಪಡೆಯಲಾಗಿದ್ದು, 73 ಮಂದಿ ಇನ್ನೂ ಅಮಾನತಿನಲ್ಲಿ ಇದ್ದಾರೆ. ಕಳೆದ ವರ್ಷದ ಡಿಸೆಂಬರ್‌ 11-14 ಮತ್ತು ಪ್ರಸಕ್ತ ವರ್ಷದ ಏಪ್ರಿಲ್‌ 7-21ರ ಅವಧಿಯಲ್ಲಿ ಮುಷ್ಕರದಲ್ಲಿ ಭಾಗವಹಿಸಿದ್ದವರ ವಿರುದ್ಧ ಶಿಸ್ತು ಕ್ರಮವಹಿಸಲಾಗಿದ್ದು, ಹಲವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ನಷ್ಟವನ್ನು ತುಂಬಿಕೊಳ್ಳುವ ಉದ್ದೇಶದಿಂದ ಮುಷ್ಕರಕ್ಕೆ ಕರೆ ನೀಡಿದ್ದ ಸಂಘಟನೆ ಮತ್ತು ಅದರಲ್ಲಿ ಭಾಗವಹಿಸಿದ್ದವರ ವಿರುದ್ಧ ಬಿಎಂಟಿಸಿ ವತಿಯಿಂದ ದಾವೆ ಹೂಡಲಾಗಿದೆ ಎಂದು ಆಕ್ಷೇಪಣೆಯಲ್ಲಿ ತಿಳಿಸಲಾಗಿದೆ.

Also Read
[ವಲಸೆ ಬಿಕ್ಕಟ್ಟು] 8 ಕೋಟಿ ವಲಸೆ ಕಾರ್ಮಿಕರಿಗೆ ಪಡಿತರ ಪುನಾರಂಭಕ್ಕೆ, ಸಾರಿಗೆ ವ್ಯವಸ್ಥೆಗೆ ಸುಪ್ರೀಂನಲ್ಲಿ ಮನವಿ

ಕೆಎಸ್‌ಆರ್‌ಟಿಸಿಗೆ 28.52 ಕೋಟಿ ರೂಪಾಯಿ ನಷ್ಟ

ಕಳೆದ ವರ್ಷದ ಡಿಸೆಂಬರ್‌ 11-14ವರೆಗೆ ನಡೆಸಿದ ಮುಷ್ಕರದಿಂದ ಕೆಎಸ್‌ಆರ್‌ಟಿಸಿಗೆ 28.52 ಕೋಟಿ ರೂಪಾಯಿ ನಷ್ಟವಾಗಿದ್ದು, 56 ಬಸ್‌ಗಳಿಗೆ ಹಾನಿಯಾಗಿದೆ. ಇದರಿಂದ 2.5 ಲಕ್ಷ ರೂಪಾಯಿ ನಷ್ಟವಾಗಿದೆ. 18 ಸಿಬ್ಬಂದಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ತಿಳಿಸಲಾಗಿದೆ. ಏಪ್ರಿಲ್‌ 7-21 ಅವಧಿಯಲ್ಲಿ ಮುಷ್ಕರದಲ್ಲಿ ಭಾಗವಹಿಸಿದ್ದ ಕೆಎಸ್‌ಆರ್‌ಟಿಸಿಯ 156 ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದ್ದು, ಈ ಪೈಕಿ 11 ಮಂದಿಯ ವಿರುದ್ಧದ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ. 136 ಸಿಬ್ಬಂದಿಯ ವಿರುದ್ದ ಸಾರ್ವಜನಿಕ ಆಸ್ತಿಗೆ ನಷ್ಟ ಉಂಟುಮಾಡಿದ್ದು, ಸಾಮಾಜಿಕ ಮಾಧ್ಯಮಗಳ ಮೂಲಕ ಸಿಬ್ಬಂದಿಯನ್ನು ಪ್ರಚೋದಿಸಿದ ಆರೋಪ ನಿಗದಿಪಡಿಸಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ವಿವರಿಸಲಾಗಿದೆ.

ಆರಂಭದಲ್ಲಿ 839 ಸಿಬ್ಬಂದಿಯನ್ನು ವರ್ಗಾವಣೆ ಮಾಡುವ ಆದೇಶ ಮಾಡಲಾಗಿದ್ದು, ಈ ಪೈಕಿ 511 ಮಂದಿಯ ವಿರುದ್ಧದ ಆದೇಶವನ್ನು ಹಿಂಪಡೆಯಲಾಗಿದೆ. ಬಾಕಿ 328 ಸಿಬ್ಬಂದಿಯ ಪೈಕಿ 81 ಮಂದಿಯ ವಿರುದ್ಧ ವಿವಿಧ ಆರೋಪಗಳ ಅಡಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಕ್ರಮವಹಿಸಿರುವುದನ್ನು ರಾಜ್ಯ ಸರ್ಕಾರವು ಆಕ್ಷೇಪಣೆಯಲ್ಲಿ ವಿವರಿಸಿದೆ.

Related Stories

No stories found.
Kannada Bar & Bench
kannada.barandbench.com