ಮಹಾ ಕುಂಭಮೇಳ ಸಂಚಾರ ದಟ್ಟಣೆ: ಹಲವು ಪ್ರಕರಣಗಳನ್ನು ಮುಂದೂಡಿದ ಅಲಾಹಾಬಾದ್ ಹೈಕೋರ್ಟ್

ವಕೀಲರಿಗೆ ಹೈಕೋರ್ಟ್ ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯ ಒದಗಿಸಿದ್ದರೂ ಸಹ ಪ್ರಕರಣ ಮುಂದೂಡುವ ಸ್ಥಿತಿ ಒದಗಿದೆ.
Allahabad High Court
Allahabad High Court
Published on

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಕುಂಭಮೇಳದಿಂದಾಗಿ ಸಂಚಾರ ದಟ್ಟಣೆ ಉಂಟಾಗಿರುವುದರಿಂದ ಅಲಾಹಾಬಾದ್‌ ಹೈಕೋರ್ಟ್‌ ಕೆಲ ವಾರಗಳಿಂದ ವಿವಿಧ ಪ್ರಕರಣಗಳನ್ನು ಮುಂದೂಡತ್ತಾ ಬಂದಿದೆ.   

ದ್ವೇಷಕ್ಕೆ ಕುಮ್ಮಕ್ಕು ನೀಡುತ್ತಿರುವುದಾಗಿ ಆರೋಪಿಸಿ ತನ್ನ ವಿರುದ್ಧ ಗಾಜಿಯಾಬಾದ್‌ನ ದಾಸ್ನಾ ದೇವಿ ದೇವಸ್ಥಾನದ ಅರ್ಚಕ ಯತಿ ನರಸಿಂಹಾನಂದ ಅವರ ಬೆಂಬಲಿಗರು ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಮೊಹಮ್ಮದ್ ಜುಬೇರ್ ಅವರು ಬಂಧನದಿಂದ ರಕ್ಷಣೆ ಕೋರಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಸೋಮವಾರ ಮುಂದೂಡಿದೆ.

Also Read
ಮಹಾಕುಂಭ ಕಾಲ್ತುಳಿತ ದುರಂತ: ಪಿಐಎಲ್ ತಿರಸ್ಕರಿಸಿದ ಸುಪ್ರೀಂ; ಅಲಾಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸೂಚನೆ

ಪ್ರಯಾಗ್‌ರಾಜ್‌ನಲ್ಲಿ ಕುಂಭಮೇಳದಿಂದಾಗಿ ಸಂಚಾರ ದಟ್ಟಣೆ ಉಂಟಾಗಿದ್ದು ಕಕ್ಷಿದಾರರು ನ್ಯಾಯಾಲಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ ವರ್ಮಾ ಮತ್ತು ಯೋಗೇಂದ್ರ ಕುಮಾರ್ ಶ್ರೀವಾಸ್ತವ ಅವರಿದ್ದ ಪೀಠ , ಪ್ರಕರಣ ಮುಂದೂಡಿತು.

ಬಾರ್‌ ಅಂಡ್‌ ಬೆಂಚ್‌ ಜೊತೆಗೆ ಮಾತನಾಡಿದ ಪ್ರಕರಣದ ವಕೀಲರು "ಇಂದು, ಸಂಚಾರ ನಿರ್ಬಂಧ ಇರುವುದರಿಂದ ಯಾವುದೇ ಪ್ರತಿಕೂಲ ಆದೇಶ ನೀಡುತ್ತಿಲ್ಲ. ಎಲ್ಲಾ ಕಕ್ಷಿದಾರರು ಒಂದೇ ಕಾರಣಕ್ಕಾಗಿ (ಸಂಚಾರ ದಟ್ಟಣೆ) ನ್ಯಾಯಾಲಯ ತಲುಪಲು ಸಾಧ್ಯವಾಗುತ್ತಿಲ್ಲ" ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಜುಬೈರ್ ಅವರಿಗೆ ಈ ಹಿಂದೆ ಬಂಧನದಿಂದ ನೀಡಿದ್ದ ರಕ್ಷಣೆಯನ್ನು ಮುಂದಿನ ವಿಚಾರಣೆ ನಡೆಯುವ ಫೆಬ್ರವರಿ 17ರವರೆಗೆ ವಿಸ್ತರಿಸಿತು.

 ಸಂಚಾರ ದಟ್ಟಣೆಯಿಂದಾಗಿ, ವಕೀಲರ ಅನುಪಸ್ಥಿತಿ ಇದ್ದು ಹೀಗಾಗಿ ವಿವಿಧ ಪ್ರಕರಣಗಳಲ್ಲಿ ಯಾವುದೇ ಪ್ರತಿಕೂಲ ಆದೇಶಗಳನ್ನು  ನೀಡದಂತೆ ವಕೀಲ ಸಮುದಾಯ ನ್ಯಾಯಮೂರ್ತಿಗಳನ್ನು ಕೋರಿದೆ.

Also Read
ಕುಂಭಮೇಳ ಕಾಲ್ತುಳಿತ ದುರಂತ: ಉತ್ತರ ಪ್ರದೇಶ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕೋರಿ ಸುಪ್ರೀಂಗೆ ಪಿಐಎಲ್

ವಕೀಲರಿಗೆ ಹೈಕೋರ್ಟ್ ವಿಡಿಯೋ ಕಾನ್ಫರೆನ್ಸ್‌ ಸೌಲಭ್ಯ ಒದಗಿಸಿದ್ದರೂ ಸಹ ಪ್ರಕರಣಗಳಿಗೆ ಸಂಬಂಧಪಟ್ಟವರು ಹಾಜರಾಗದೇ ಇರುವುದರಿಂದ ಉಳಿದ ಪ್ರಕರಣಗಳನ್ನೂ  ಮುಂದೂಡುವ ಸ್ಥಿತಿ ಒದಗಿದೆ.

ಪ್ರಯಾಗರಾಜ್‌ಗೆ ಹೋಗುವ ಮಾರ್ಗದಲ್ಲಿ ನೂರಾರು ಕಿ.ಮೀನಷ್ಟು ಸಂಚಾರ ದಟ್ಟಣೆ ಉಂಟಾಗಿರುವುದರಿಂದ ಮಹಾ ಕುಂಭ ಮೇಳಕ್ಕೆ ತೆರಳುವ ಸಾವಿರಾರು ಭಕ್ತರು ಹೆದ್ದಾರಿಗಳಲ್ಲಿಯೇ ಪರಿತಪಿಸುವಂತಾಗಿದೆ ಎಂದು ಸೋಮವಾರ ಮಾಧ್ಯಮಗಳಲ್ಲಿ ವರದಿಯಾಗಿದೆ.  

Kannada Bar & Bench
kannada.barandbench.com