ಸಹಯೋಗ್ ಪೋರ್ಟಲ್ ವಿರುದ್ಧ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ಹಾಸ್ಯ ಕಲಾವಿದ ಕಾಮ್ರಾ, ಹಿರಿಯ ವಕೀಲ ಹರೇಶ್ ಜಗ್ತಿಯಾನಿ
ಎಕ್ಸ್, ಮೆಟಾ, ಯೂಟ್ಯೂಬ್ ಮುಂತಾದ ಸಾಮಾಜಿಕ ಮಾಧ್ಯಮ ಮಧ್ಯಸ್ಥವೇದಿಕೆಗಳಿಂದ ವಸ್ತು ವಿಷಯ ತೆಗೆದು ಹಾಕಲು ಆದೇಶಿಸಲು ಬಳಸುವ ಆನ್‌ಲೈನ್ ವೇದಿಕೆ ಸಹಯೋಗ್ ಪೋರ್ಟಲ್ ಸಿಂಧುತ್ವ ಪ್ರಶ್ನಿಸಿ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಮತ್ತು ಹಿರಿಯ ವಕೀಲ ಹರೇಶ್ ಜಗ್ತಿಯಾನಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸಹಯೋಗ್ ರೂಪಿಸಲು ಆಧಾರವಾಗಿರುವ ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ವೇದಿಕೆಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಾವಳಿ 2023ರಲ್ಲಿನ ನಿಯಮ 3(1)(d) ಅನ್ನು ಕೂಡ ಅವರು ಪ್ರಶ್ನಿಸಿದ್ದಾರೆ.
ನಿಯಮ 3(1)(ಡಿ) ತಿದ್ದುಪಡಿ ಪ್ರಕಾರ, “ಅಕ್ರಮ ಕೃತ್ಯ”ಕ್ಕೆ ಬಳಸಲ್ಪಟ್ಟ ಮಾಹಿತಿಯ ಬಗ್ಗೆ “ವಾಸ್ತವಿಕ ಅರಿವು" ದೊರೆತರೆ, ಮಧ್ಯವರ್ತಿಗಳು 36 ಗಂಟೆಗಳೊಳಗೆ ಆ ವಿಷಯವನ್ನು ತೆಗೆದುಹಾಕಬೇಕು ಅಥವಾ ಅದಕ್ಕೆ ಪ್ರವೇಶ ನಿರ್ಬಂಧಿಸಬೇಕು. ಇಂತಹ ಆದೇಶಗಳಲ್ಲಿ ಕಾನೂನು ಆಧಾರ, ಸಂಬಂಧಿತ ವಿಧಿ, ಅಕ್ರಮ ಕೃತ್ಯದ ಸ್ವರೂಪ ಹಾಗೂ ಆನ್‌ಲೈನ್ ವಿಷಯದ ನಿಖರ ಸ್ಥಳ ಸ್ಪಷ್ಟವಾಗಿ ಉಲ್ಲೇಖಿಸಬೇಕು ಎಂದಿದೆ. ಈ ಪ್ರಕ್ರಿಯೆಯನ್ನು ವೇಗವಾಗಿ ಜಾರಿಗೆ ತರುವ ಉದ್ದೇಶದಿಂದ ಸಹಯೋಗ್ ಪೋರ್ಟಲ್ ಅನ್ನು ಸೈಬರ್ ಪೋರ್ಟಲ್ ರೂಪದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಆದರೆ ಕಾಮ್ರಾ ಅವರು ತಮ್ಮ ಅರ್ಜಿಯಲ್ಲಿ, ಸಹಯೋಗ್ ಪೋರ್ಟಲ್ ಸರ್ಕಾರಕ್ಕೆ ಏಕಪಕ್ಷೀಯವಾಗಿ ಸಾಮಾಜಿಕ ಮಾಧ್ಯಮಗಳ ವಸ್ತುವಿಷಯ ತಡೆಗಟ್ಟುವ ಅಥವಾ ತೆಗೆದುಹಾಕುವ ಅಧಿಕಾರ ನೀಡುತ್ತದೆ. ವಸ್ತು ವಿಷಯ ರಚಿಸಿದ ವ್ಯಕ್ತಿಗೆ ನೋಟಿಸ್ ನೀಡುವುದು ಮತ್ತು ವಿಚಾರಣೆ ನಡೆಸುವುದು ಎಂಬ ಕಡ್ಡಾಯ ಕಾನೂನು ಭದ್ರತೆಗಳು ಪಾಲನೆಯಾಗುತ್ತಿಲ್ಲ. ಇಂತಹ ಭದ್ರತೆಗಳು ಸಂವಿಧಾನಾತ್ಮಕವಾಗಿವೆ ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಒತ್ತಿ ಹೇಳಿದೆ. ಅಗತ್ಯ ಭದ್ರತಾ ಕ್ರಮಗಳ ಕೊರತೆಯಿಂದ, ನಿಯಮ 3(1)(d) ಮತ್ತು ಸಹಯೋಗ್ ಪೋರ್ಟಲ್‌ಗಳು ಐಟಿ ಕಾಯ್ದೆ, 2000ಕ್ಕೆ ವಿರುದ್ಧವಾಗಿದ್ದು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ತೀರ್ಪುಗಳಿಗೆ ವ್ಯತಿರಿಕ್ತವಾಗಿವೆ ಎಂದಿದ್ದಾರೆ.
ಇದಕ್ಕೂ ಮೊದಲು ಸಹಯೋಗ್ ಪೋರ್ಟಲ್ ಮಾನ್ಯತೆಯನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಎಕ್ಸ್ (ಟ್ವಿಟರ್) ಪ್ರಶ್ನಿಸಿತ್ತು. ಆದರೆ 2025ರ ಸೆಪ್ಟೆಂಬರ್‌ನಲ್ಲಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪೋರ್ಟಲ್ ಮಾನ್ಯತೆಯನ್ನು ಎತ್ತಿಹಿಡಿದಿತ್ತು. ಆ ತೀರ್ಪಿನ ವಿರುದ್ಧ ಸಲ್ಲಿಸಿದ ಮೇಲ್ಮನವಿ ಈಗ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠದೆದುರು ಬಾಕಿ ಇದೆ.


