ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆ ಕುರಿತಾದ ತಪ್ಪು ಮತ್ತು ಆನ್‌ಲೈನ್‌ನಲ್ಲಿನ ಸುಳ್ಳು ಸುದ್ದಿಯನ್ನು ಪತ್ತೆ ಹಚ್ಚಲು ಮಾಹಿತಿ ತಂತ್ರಜ್ಞಾನ (ಐಟಿ) ನಿಯಮದ ಅಡಿ ಸತ್ಯ ಪರಿಶೀಲನಾ ಘಟಕದ ರಚನೆಗೆ ಜುಲೈ 5 ರವರೆಗೆ ಅಧಿಸೂಚನೆ ಹೊರಡಿಸುವುದಿಲ್ಲ ಎಂದು ಗುರುವಾರ ಬಾಂಬೆ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದೆ.
ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ಸಂಹಿತೆ) ನಿಯಮ 2021ಕ್ಕೆ ಈಚೆಗೆ ಮಾಡಲಾಗಿರುವ ತಿದ್ದುಪಡಿ ಪ್ರಶ್ನಿಸಿ ಹಾಸ್ಯ ಕಲಾವಿದ ಕುನಾಲ್ ಕಮ್ರಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಿ ಎಸ್ ಪಾಟೀಲ್ ಮತ್ತು ನೀಲಾ ಗೋಖಲೆ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್, ವಕೀಲರಾದ ಆದಿತ್ಯ ಟಕ್ಕರ್ ಮತ್ತು ಡಿ ಪಿ ಸಿಂಗ್ ಅವರು ಸತ್ಯ ಪರಿಶೀಲನಾ ಘಟಕದ ರಚನೆಗೆ ಸಂಬಂಧಿಸಿದಂತೆ ಜುಲೈ 5ರವರೆಗೆ ಅಧಿಸೂಚನೆ ಪ್ರಕಟಿಸುವುದಿಲ್ಲ ಎಂದು ತಿಳಿಸಿದರು. ಅಲ್ಲದೇ, ಮುಂದಿನ ನಿರ್ದೇಶನಕ್ಕಾಗಿ ಜೂನ್ 8ಕ್ಕೆ ಅರ್ಜಿ ವಿಚಾರಣೆ ನಿಗದಿಪಡಿಸುವಂತೆ ಕೋರಿದರು.
ಕಮ್ರಾ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಡೇರಿಯಸ್ ಖಂಬಾಟ ಮತ್ತು ಆರತಿ ರಾಘವನ್ ಅವರು “ಒಮ್ಮೆ ಅಧಿಸೂಚನೆ ಪ್ರಕಟಸಿದರೆ ಅದು ಪೂರ್ವಾನ್ವಯವಾಗಲಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಆಗ ಪೀಠವು “ಅಧಿಸೂಚನೆ ಪ್ರಕಟಿಸುವವರೆಗೆ ಸತ್ಯ ಪರಿಶೀಲನೆ ಘಟಕಕ್ಕೆ ನಿಯಮ ಅನ್ವಯಿಸುವುದಿಲ್ಲ. ಈ ನಡುವೆ ಮಧ್ಯಂತರವಾಗಿ ಅರ್ಜಿ ವಿಚಾರಣೆ ನಡೆಸಿದರೂ ಅದನ್ನೂ ಪೂರ್ತಿಯಾಗಿ ಆಲಿಸಬೇಕಿದೆ. ಅರ್ಜಿಯನ್ನು ಪರಿಗಣಿಸುವ ಆರಂಭಿಕ ಹಂತದಲ್ಲೆ ಅರ್ಜಿ ವಿಚಾರಣೆ ನಡೆಸಿ ಇತ್ಯರ್ಥಪಡಿಸಲು ಸಾಧ್ಯವಿರುವಾಗ ಎರಡು ಬಾರಿ ಈ ವಿಚಾರ ಆಲಿಸಬೇಕು ಎಂದೆನಿಸುತ್ತಿಲ್ಲ” ಎಂದು ಆದೇಶದಲ್ಲಿ ದಾಖಲಿಸಿ, ವಿಚಾರಣೆಯನ್ನು ಜೂನ್ 8ಕ್ಕೆ ಮುಂದೂಡಿತು.
ಐಟಿ ನಿಯಮದ ಅಡಿ ಪರಿಷ್ಕರಿಸಲಾಗಿರುವ 3(1)(ಬಿ)(v), 3(ಐ)(II)(ಎ), (ಸಿ) ನಿಯಮಗಳು ಐಟಿ ಕಾಯಿದೆ ಸೆಕ್ಷನ್ 79, ಸಂವಿಧಾನದ 14 ಮತ್ತು 19(1)(ಎ), (ಜಿ)ಗೆ ವಿರುದ್ಧವಾಗಿರುವುದರಿಂದ ಅವುಗಳನ್ನು ರದ್ದುಪಡಿಸುವಂತೆ ಕಮ್ರಾ ಕೋರಿದ್ದಾರೆ. ಸತ್ಯ ಪರಿಶೀಲನಾ ಘಟಕ ಸೂಚಿಸಿದ ಮಾಹಿತಿಗೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಲು ಟೆಲಿಕಾಂ ಸೇವೆ ನೀಡುವ ಸಂಸ್ಥೆಗಳು ಮತ್ತು ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಅವಕಾಶವಾಗಲಿದೆ. ಇದರಿಂದ ಐಟಿ ಕಾಯಿದೆ ಸೆಕ್ಷನ್ 79ರ ಅಡಿ ದೊರೆಯುತ್ತಿದ್ದ ನೆರವು ಕೈತಪ್ಪಲಿದೆ ಎಂಬುದು ಕಮ್ರಾ ವಾದವಾಗಿದೆ.
ತಪ್ಪು ಮತ್ತು ದಾರಿತಪ್ಪಿಸುವ ಮಾಹಿತಿಯು ಚುನಾವಣಾ ಪ್ರಜಾಪ್ರಭುತ್ವಕ್ಕೆ ಹಾನಿ ಮಾಡಲಿದ್ದು, ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ಜನರ ನಂಬಿಕೆಯನ್ನು ಸಡಿಲಗೊಳಿಸಲಿದೆ ಎಂದು ಕೇಂದ್ರ ಸರ್ಕಾರವು ಅರ್ಜಿಗೆ ಆಕ್ಷೇಪಿಸಿದೆ.