ಮುಡಾ ಪ್ರಕರಣ: ಸಾಕ್ಷ್ಯಾಧಾರ ಕೊರತೆಯಿಂದ ಸಿಎಂ ಸಿದ್ದು, ಪತ್ನಿ ಸೇರಿ ನಾಲ್ವರಿಗೆ ಲೋಕಾಯುಕ್ತ ಪೊಲೀಸರಿಂದ ಕ್ಲೀನ್‌ಚಿಟ್

2024ರ ಆಗಸ್ಟ್‌ 8ರಂದು ಸ್ನೇಹಮಯಿ ಕೃಷ್ಣ ಖಾಸಗಿ ದೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಭಾವಮೈದುನ ಮಲ್ಲಿಕಾರ್ಜುನ ಸ್ವಾಮಿ, ಜೆ ದೇವರಾಜು ಹಾಗೂ ಇತರೆ ಹೆಸರಿನಡಿ ಐವರನ್ನು ಆರೋಪಿಗಳನ್ನಾಗಿಸಲಾಗಿತ್ತು.
CM Siddaramaiah, MUDA, Bengaluru City Civil Court
CM Siddaramaiah, MUDA, Bengaluru City Civil Court
Published on

ದೇಶದ ಗಮನಸೆಳೆದಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣದಲ್ಲಿ ಆರೋಪಿಗಳಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ‌, ಅವರ ಪತ್ನಿ ಬಿ ಎಂ ಪಾರ್ವತಿ, ಭಾವಮೈದುನ ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಮತ್ತು ಆಕ್ಷೇಪಾರ್ಹವಾದ ಭೂಮಿಯ ಮಾಲೀಕ ಜೆ ದೇವರಾಜು ಅವರನ್ನು ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಮೈಸೂರು ಲೋಕಾಯುಕ್ತ ಪೊಲೀಸರು ಆರೋಪ ಮುಕ್ತಗೊಳಿಸಿದ್ದು, ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

ರಾಜಕೀಯವಾಗಿ ಮಹತ್ವದ ಪ್ರಕರಣವಾಗಿರುವ ಮುಡಾ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದ ಬೆನ್ನಿಗೇ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಕುಟುಂಬವನ್ನು ಆರೋಪ ಮುಕ್ತಗೊಳಿಸಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ಬಲ ತುಂಬಿದೆ. ಈ ಸಂಬಂಧ ಲೋಕಾಯುಕ್ತ ಪೊಲೀಸರು ದೂರುದಾರ ಸ್ನೇಹಮಯಿ ಕೃಷ್ಣಗೆ ನೋಟಿಸ್‌ ನೀಡಿದ್ದು, ಸಾಕ್ಷ್ಯಾಧಾರ ಕೊರತೆಯಿಂದ ನಾಲ್ವರಿಗೆ ಸಂಬಂಧಿಸಿದ ಪ್ರಕರಣವನ್ನು ಮುಕ್ತಾಯಗೊಳಿಸಲಾಗುತ್ತಿದೆ. ಇದಕ್ಕೆ ಒಂದು ವಾರದಲ್ಲಿ ತಾವು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿರೋಧ ದಾಖಲಿಸಬಹುದು ಎಂದು ತಿಳಿಸಲಾಗಿದೆ.

ಸಿದ್ದರಾಮಯ್ಯ, ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ ಮತ್ತು ಜೆ ದೇವರಾಜು ಅವರ ಮೇಲಿನ ಆರೋಪಗಳು ಸಾಕ್ಷ್ಯಾಧಾರಗಳ ಕೊರತೆಯಿಂದ ಸಾಬೀತಾಗಿಲ್ಲದೇ ಇರುವುದರಿಂದ ಅಂತಿಮ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಲಾಗುತ್ತಿದೆ. ಮುಡಾದಿಂದ 2016-2024ರವರೆಗೆ 50:50 ಅನುಪಾತದಲ್ಲಿ ಪರಿಹಾರಾತ್ಮಕ ನಿವೇಶನಗಳನ್ನು ನೀಡಿರುವ ಆರೋಪಗಳ ಬಗ್ಗೆ ಹೆಚ್ಚುವರಿ ತನಿಖೆ ನಡೆಸಿ ಸಿಆರ್‌ಪಿಸಿ ಸೆಕ್ಷನ್‌ 173(8) ಅಡಿ ನ್ಯಾಯಾಲಯಕ್ಕೆ ಹೆಚ್ಚುವರಿ ಅಂತಿಮ ವರದಿ ಸಲ್ಲಿಸಲಾಗುವುದು ಎಂದು ಲೋಕಾಯುಕ್ತ ಮೈಸೂರು ಪೊಲೀಸ್‌ ಅಧೀಕ್ಷಕರ ನೋಟಿಸ್‌ನಲ್ಲಿ ವಿವರಿಸಲಾಗಿದೆ.

ತಮ್ಮ ಖಾಸಗಿ ದೂರಿನ ಆಧಾರದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನಿರ್ದೇಶನದ ಮೇರೆಗೆ ಐಪಿಸಿ ಸೆಕ್ಷನ್‌ಗಳಾದ 120(ಬಿ), 166, 403, 406, 420, 426, 465, 468, 340, 351, ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ಗಳಾದ 9, 13, ಬೇನಾಮಿ ಆಸ್ತಿ ವಹಿವಾಟು ತಡೆ ಕಾಯಿದೆ ಸೆಕ್ಷನ್‌ 3, 53 ಮತ್ತು 54, ಹಾಗೂ ಕರ್ನಾಟಕ ಭೂ ಕಬಳಿಕೆ ಕಾಯಿದೆ ಸೆಕ್ಷನ್‌ 3, 4 ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿದ್ದು, ಪ್ರಕರಣವು ಸಿವಿಲ್‌ ಸ್ವರೂಪದ್ದಾಗಿದೆ. ತನಿಖೆ ನಡೆಸಲು ತಕ್ಕದಾದ ಪ್ರಕರಣವಲ್ಲ, ಇದು ಕಾನೂನಿನ ತಪ್ಪು ತಿಳಿವಳಿಕೆಯಿಂದ ಕೂಡಿದ್ದು, ಹೀಗಾಗಿ ಕ್ರಮ ಜರುಗಿಸಲು ತಕ್ಕದಾದ ಪ್ರಕರಣವಲ್ಲ (ಇದರ ಅಡಿಯಲ್ಲಿ ತನಿಖೆ ನಡೆಸದೇ ವಜಾ ಮಾಡಿದ ಮೊಕದ್ದಮೆಗಳು ಬರುತ್ತವೆ) ಮತ್ತು ಸಾಕ್ಷ್ಯಾಧಾರಗಳ ಕೊರತೆ ಕಂಡು ಬಂದಿದೆ ಎಂದು ಲೋಕಾಯುಕ್ತ ಪೊಲೀಸರು ಸ್ನೇಹಮಯಿ ಕೃಷ್ಣಗೆ ನೀಡಿರುವ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ತಮ್ಮ ವರದಿಯನ್ನು ನೋಟಿಸ್‌ ತಲುಪಿದ ಒಂದು ವಾರದಲ್ಲಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ವಿರೋಧಿಸಬಹುದು ಎಂದು ವಿವರಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ ಎಂ ಪಾರ್ವತಿ ಅವರು ಅಕ್ರಮವಾಗಿ 14 ನಿವೇಶನ ಪಡೆದಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸೇರಿ ಐವರು ಆರೋಪಿಗಳ ವಿರುದ್ಧ ವಿಶೇಷ ತನಿಖಾ ದಳ ಅಥವಾ ಬೇರಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶಿಸಬೇಕು ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ 2024ರ ಆಗಸ್ಟ್‌ 8ರಂದು ಸ್ನೇಹಮಯಿ ಕೃಷ್ಣ ದೂರು ನೀಡಿದ್ದರು. ದೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಭಾವ ಮೈದುನ ಮಲ್ಲಿಕಾರ್ಜುನ ಸ್ವಾಮಿ, ಜೆ ದೇವರಾಜು ಹಾಗೂ ಇತರೆ ಹೆಸರಿನಡಿ ಐವರನ್ನು ಆರೋಪಿಗಳನ್ನಾಗಿಸಲಾಗಿತ್ತು.

Also Read
ಮುಡಾ ಪ್ರಕರಣ: ಸಿಎಂ, ಪತ್ನಿ ಸೇರಿ ಐವರ ವಿರುದ್ಧ ಸಿಬಿಐ ತನಿಖೆ ಕೋರಿ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಕೆ

ಇದರ ಬೆನ್ನಿಗೇ ರಾಜ್ಯಪಾಲರು ಸಿದ್ದರಾಮಯ್ಯ ಮತ್ತು ಇತರೆ ಆರೋಪಿಗಳ ತನಿಖೆಗೆ ಅನುಮತಿಸಿದ್ದರು. ಇದನ್ನು ಸಿದ್ದರಾಮಯ್ಯ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ರಾಜ್ಯಪಾಲರ ನಿರ್ಣಯ ಹೈಕೋರ್ಟ್‌ ಎತ್ತಿ ಹಿಡಿಯುತ್ತಿದ್ದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಆದೇಶಿಸಿತ್ತು. ಇದರ ಅನ್ವಯ 2024ರ ಸೆಪ್ಟೆಂಬರ್‌ 27ರಂದು ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.

Kannada Bar & Bench
kannada.barandbench.com