ಗಂಭೀರವಾಗಿ ಪ್ರತಿಭಟಿಸಿಲ್ಲ ಎಂದ ಮಾತ್ರಕ್ಕೆ ಅದು ಸಮ್ಮತಿಯಲ್ಲ: ಅಪರಾಧ ಎತ್ತಿಹಿಡಿದ ಮದ್ರಾಸ್‌ ಹೈಕೋರ್ಟ್‌

ಫಿರ್ಯಾದುದಾರೆಯನ್ನು ಮತ್ತೊಂದು ಜೀವ ಎಂದು ಪರಿಗಣಿಸದಿರುವ ಆರೋಪಿಯ ದುಷ್ಟ ಮನಸ್ಥಿತಿಯಲ್ಲಿ ಎಲ್ಲವೂ ಅಡಗಿದೆ ಎಂದು ನ್ಯಾಯಾಲಯ ಹೇಳಿದೆ.
Madras High Court, Principal Bench
Madras High Court, Principal Bench

“ಸಂತ್ರಸ್ತೆಯು ಅತ್ಯಾಚಾರದ ವೇಳೆ ಪ್ರಬಲವಾಗಿ ಪ್ರತಿಭಟಿಸಿಲ್ಲ ಎಂದ ಮಾತ್ರಕ್ಕೆ ಅದನ್ನು ಸಮ್ಮತಿ ಎಂದು ಪರಿಗಣಿಸಲಾಗದು” ಎಂದು ಮದ್ರಾಸ್‌ ಹೈಕೋರ್ಟ್‌ ವ್ಯಾಖ್ಯಾನಿಸಿದ್ದು, ಅತ್ಯಾಚಾರ ಆರೋಪಿಗೆ ವಿಧಿಸಿದ್ದ ಶಿಕ್ಷೆಯನ್ನು ಖಾತರಿಪಡಿಸಿದೆ.

ವಿಚಾರಣಾಧೀನ ನ್ಯಾಯಾಲಯವು ಭಾರತೀಯ ದಂಡ ಸಂಹಿತೆ ಸೆಕ್ಷನ್‌ 376 ಅಡಿ ಅರ್ಜಿದಾರರ ವಿರುದ್ಧ ಅಪರಾಧವನ್ನು ಎತ್ತಿ ಹಿಡಿದು, ಏಳು ವರ್ಷಗಳ ಕಠಿಣ ಸಜೆ ಮತ್ತು ₹500 ದಂಡ ವಿಧಿಸಿತ್ತು. ಇದನ್ನು ತಿರುವಣ್ಣಾಮಲೈನ ಸೆಷನ್ಸ್‌ ನ್ಯಾಯಾಧೀಶರು ಎತ್ತಿ ಹಿಡಿದಿದ್ದರು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ ಭರತ ಚಕ್ರವರ್ತಿ ಅವರಿದ್ದ ಏಕಸದಸ್ಯ ಪೀಠವು ತೀರ್ಪು ಪ್ರಕಟಿಸಿದೆ.

“ಸಂತ್ರಸ್ತೆಯ ದೃಷ್ಟಿಕೋನದಿಂದ ಇಡೀ ಪ್ರಕರಣವನ್ನು ಕಾಣಬೇಕು” ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. “ಸಂತ್ರಸ್ತೆಯು ಧೈರ್ಯದಿಂದ ಮತ್ತು ಪ್ರಬಲವಾಗಿ ಬಲವಂತದ ಸಂಭೋಗವನ್ನು ವಿರೋಧಿಸಲಿಲ್ಲ ಎಂಬ ಮಾತ್ರಕ್ಕೆ ಅದನ್ನು ಒಪ್ಪಿಗೆ ಎಂದು ಪರಿಗಣಿಸಲಾಗದು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಸಂತ್ರಸ್ತೆ ಮತ್ತು ತಾನು ದೈಹಿಕ ಸಂಬಂಧ ಹೊಂದಿದ್ದು, ತನ್ನ ಜೊತೆ ದ್ವೇಷ ಹೊಂದಿದ್ದ ಆಕೆಯ ಸಹೋದರ ನಾವಿಬ್ಬರೂ ಒಟ್ಟಿಗೆ ಇರುವುದನ್ನು ಕಂಡು ಬಲವಂತಾಗಿ ಆಕೆಯಿಂದ ನಕಲಿ ದೂರು ದಾಖಲಿಸಿದ್ದಾರೆ ಎಂದು ಆರೋಪಿ ವಾದಿಸಿದ್ದರು.

ಅಲ್ಲದೇ, “ಅತ್ಯಾಚಾರ ನಡೆದಿತ್ತು ಎಂದಾದರೆ ಸಂತ್ರಸ್ತೆಯು ಆರೋಪಿಯಿಂದ ಬಿಡಿಸಿಕೊಳ್ಳಲು ಯಾವುದೇ ತೆರನಾದ ಪ್ರಬಲವಾದ ವಿರೋಧ ವ್ಯಕ್ತಪಡಿಸಿಲ್ಲ. ದೈಹಿಕ ಸಂಬಂಧವು ಸಮ್ಮತಿಯದ್ದಾಗಿತ್ತು” ಎಂದು ವಾದಿಸಿದ್ದರು.

Also Read
ಅತ್ಯಾಚಾರ ಆರೋಪಿಗೆ ಜಾಮೀನು: ಸಂತ್ರಸ್ತೆಯು ಆರೋಪಿಗೆ ಮಾಡಿರುವ ವಿಡಿಯೊ ಕರೆಗಳನ್ನು ಪರಿಗಣಿಸಿದ ಹೈಕೋರ್ಟ್‌

“ಫಿರ್ಯಾದುದಾರೆಯು ಅಪರಾಧಕ್ಕೆ ಒಳಗಾಗಿ ಹಲವು ವರ್ಷಗಳನ್ನು ಕಳೆದಿದ್ದಾರೆ. ತೀರ್ಪು ಮರುಪರಿಶೀಲನೆ ಮನವಿ ಬಾಕಿ ಉಳಿದಿರುವಾಗಲೇ ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡಿದ್ದಾರೆ. ಘಟನೆಯು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಆಕೆಯ ಮನಸ್ಸಿನ ಮೇಲೆ ಉಂಟು ಮಾಡಿದ್ದ ಗಾಯವನ್ನು ಅಲ್ಲಗಳೆಯಲಾಗದು. ಆರೋಪಿಯನ್ನು ಸಣ್ಣ ವಯಸ್ಸಿಗೆ ಜೈಲಿಗಟ್ಟಿದ್ದು, ಈಗ ಆತ ಮದ್ಯವ್ಯಸನಿಯಾಗಿದ್ದಾರೆ. 48 ವಯೋಮಾನದ ಈ ಸಂದರ್ಭದಲ್ಲಿ ಆರೋಪಿಯು ತೀವ್ರವಾಗಿ ಅನಾರೋಗ್ಯಪೀಡಿತನಾಗಿದ್ದಾನೆ. ಕಾನೂನು ಆತನನ್ನು ಜೈಲಿಗೆ ತೆರಳುವಂತೆ ಮಾಡುತ್ತಿದೆ. ಈ ಮಧ್ಯೆ, ಆರೋಪಿಯು ವಿವಾಹವಾಗಿದ್ದು, ಬಡ ಪತ್ನಿ ಮತ್ತು ಮಕ್ಕಳು ತಮ್ಮದಲ್ಲದ ತಪ್ಪಿಗೆ ಸಾಮಾಜಿಕ ಕಳಂಕ ಎದುರಿಸಬೇಕಿದೆ… ಫಿರ್ಯಾದುದಾರೆಯನ್ನು ಮತ್ತೊಂದು ಜೀವ ಎಂದು ಪರಿಗಣಿಸದೇ ಪೈಶಾಚಿಕ ಕೃತ್ಯ ಎಸಗಿದ ಆರೋಪಿಯ ದುಷ್ಟ ಮನಸ್ಥಿತಿಯಲ್ಲಿ ಎಲ್ಲವೂ ಅಡಗಿದೆ ಎಂದು ನ್ಯಾಯಾಲಯ” ಹೇಳಿದ್ದು, ಆರೋಪಿಯ ಮೇಲ್ಮನವಿಯನ್ನು ವಜಾ ಮಾಡಿ ಶಿಕ್ಷೆ ಮತ್ತು ಅಪರಾಧವನ್ನು ಕಾಯಂಗೊಳಿಸಿದೆ.

Related Stories

No stories found.
Kannada Bar & Bench
kannada.barandbench.com