ಲಖಿಂಪುರ್ ಖೇರಿ ಪ್ರಕರಣ: ಆಶಿಶ್ ಮಿಶ್ರಾಗೆ ಜಾಮೀನು ವಿರೋಧಿಸಿ ಸುಪ್ರೀಂ ಮೊರೆ ಹೋದ ಮೃತ ರೈತರ ಕುಟುಂಬ ಸದಸ್ಯರು

ಮೇಲ್ಮನವಿ ಸಲ್ಲಿಸಲು ಉತ್ತರ ಪ್ರದೇಶ ಸರ್ಕಾರ ವಿಫಲವಾಗಿರುವುದರಿಂದ ಕುಟುಂಬ ಸದಸ್ಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದು ಅನಿವಾರ್ಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
Lakhimpur Kheri and Supreme Court

Lakhimpur Kheri and Supreme Court

ಕೇಂದ್ರ ಸಚಿವ ಅಜಯ್ ಮಿಶ್ರಾ ಟೇನಿ ಅವರ ಪುತ್ರ ಆಶಿಶ್ ಮಿಶ್ರಾಗೆ ಲಖಿಂಪುರ್ ಖೇರಿ ಪ್ರಕರಣದಲ್ಲಿ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಘಟನೆಯಲ್ಲಿ ಸಾವನ್ನಪ್ಪಿದ್ದ ರೈತರ ಕುಟುಂಬಸ್ಥರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ.

ಆಶಿಶ್‌ಗೆ ಜಾಮೀನು ನೀಡಿರುವ ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಉತ್ತರ ಪ್ರದೇಶ ಸರ್ಕಾರ ವಿಫಲವಾಗಿರುವುದರಿಂದ ಕುಟುಂಬ ಸದಸ್ಯರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವುದು ಅನಿವಾರ್ಯವಾಗಿದೆ ಎಂದು ವಕೀಲ ಪ್ರಶಾಂತ್ ಭೂಷಣ್ ಅವರ ಮೂಲಕ ಸಲ್ಲಿಸಲಾದ ಮನವಿಯಲ್ಲಿ ತಿಳಿಸಲಾಗಿದೆ.

ಮಿಶ್ರಾ ವಿರುದ್ಧದ ಆರೋಪಪಟ್ಟಿಯನ್ನು ದಾಖಲೆಯಲ್ಲಿ ನೀಡದೇ ಇರುವುದರಿಂದ ಹೈಕೋರ್ಟ್‌ ಬಲವಾದ ಸಾಕ್ಷ್ಯಗಳನ್ನು ಪರಿಗಣಿಸಲಿಲ್ಲ. ಅಲ್ಲದೆ ಅಪರಾಧದ ಘೋರ ಸ್ವರೂಪ, ಚಾರ್ಜ್‌ಶೀಟ್‌ನಲ್ಲಿರುವ ಆರೋಪಿಯ ವಿರುದ್ಧದ ಬಲವಾದ ಸಾಕ್ಷ್ಯಗಳ ಸ್ವರೂಪ, ಸಂತ್ರಸ್ತರು ಮತ್ತು ಸಾಕ್ಷಿಗಳಿಗೆ ಹೋಲಿಸಿದರೆ ಆರೋಪಿಯ ಸ್ಥಾನಮಾನ, ಕಾನೂನಿನಿಂದ ಆರೋಪಿ ನುಣುಚಿಕೊಳ್ಳುವ ಸಾಧ್ಯತೆ, ಅಪರಾಧದ ಪುನರಾವರ್ತನೆ ಹಾಗೂ ಸಾಕ್ಷಿಗಳನ್ನು ತಿರುಚಿ ನ್ಯಾಯದ ಹಾದಿಗೆ ತಡೆ ಒಡ್ಡುವ ಸಾಧ್ಯತೆಯನ್ನು ಪರಿಶೀಲಿಸಿಲ್ಲ ಎಂದು ದೂರಲಾಗಿದೆ.

Also Read
ಲಖಿಂಪುರ್ ಖೇರಿ ಪ್ರಕರಣ: ಆಶಿಶ್ ಮಿಶ್ರಾಗೆ ಜಾಮೀನು ನೀಡಿದ ಅಲಾಹಾಬಾದ್ ಹೈಕೋರ್ಟ್

ಜಾಮೀನು ಪ್ರಕರಣದ ವಿಚಾರಣೆಯಿಂದ 18 ಜನವರಿ 2022ರಂದು ತಮ್ಮ ಪರ ವಕೀಲರು ಹಿಂದೆ ಸರಿದಿದ್ದರು. ಹೀಗಾಗಿ ಸಂತ್ರಸ್ತರು ಘಟನೆಗೆ ಸಂಬಂಧಿಸಿದ ಸಂಗತಿಗಳನ್ನು ಹೈಕೋರ್ಟ್‌ಗೆ ತಿಳಿಸುವುದಕ್ಕೆ ಅಡ್ಡಿಯಾಗಿದೆ. ವಕೀಲರು ಯಾವುದೇ ವಾದ ಮಂಡಿಸದೇ ಇರುವುದು ಮತ್ತು ನ್ಯಾಯಾಲಯದ ಸಿಬ್ಬಂದಿ ಅವರನ್ನು ಸಂಪರ್ಕಿಸಲು ಯತ್ನಿಸಿ ವಿಫಲವಾಗಿರುವುದರಿಂದ ಪ್ರಕರಣವನ್ನು ಮರು ಆಲಿಸುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕೇಂದ್ರ ಸರ್ಕಾರದ ಕೃಷಿ ಕಾಯಿದೆಗಳನ್ನು ರದ್ದುಗೊಳಿಸಬೇಕೆಂದು ಉತ್ತರಪ್ರದೇಶದ ಲಖಿಂಪುರ್‌ ಖೇರಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಆಶಿಶ್‌ ಅವರಿದ್ದ ನಾಲ್ಕು ಚಕ್ರದ ವಾಹನ ರೈತರು ಸೇರಿದಂತೆ ಎಂಟು ಮಂದಿಯ ಮೇಲೆ ಹರಿದು ಅವರು ಸಾವನ್ನಪ್ಪಿದ್ದರು ಎನ್ನಲಾಗಿತ್ತು. ಆಶಿಶ್‌ ಅವರನ್ನು ಬಂಧಿಸಿದ್ದ ಉತ್ತರಪ್ರದೇಶ ಪೊಲೀಸರು 5,000 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಆಶಿಶ್‌ ಪ್ರಮುಖ ಆರೋಪಿ ಎಂದು ಉಲ್ಲೇಖಿಸಲಾಗಿತ್ತು. ವಿಚಾರಣಾ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿದ್ದರಿಂದ ಆಶಿಶ್‌ ಅಲಾಹಾಬಾದ್ ಹೈಕೋರ್ಟ್‌ ಮೆಟ್ಟಿಲೇರಿದ್ದರು. ನ್ಯಾ. ರಾಜೀವ್‌ ಸಿಂಗ್‌ ಅವರಿದ್ದ ಏಕಸದಸ್ಯ ಪೀಠ ಫೆಬ್ರವರಿ 10ರಂದು ಆಶಿಶ್‌ಗೆ ಜಾಮೀನು ನೀಡಿತ್ತು. ವಾಹನ ಚಾಲಕ ಪ್ರತಿಭಟನಾಕಾರರಿಂದ ಜೀವ ಉಳಿಸಿಕೊಳ್ಳಲು ವಾಹನದ ವೇಗ ಹೆಚ್ಚಿಸಿರುವ ಸಾಧ್ಯತೆ ಇದೆ ಎಂದು ಈ ವೇಳೆ ಪೀಠ ತಿಳಿಸಿತ್ತು.

Related Stories

No stories found.
Kannada Bar & Bench
kannada.barandbench.com