ಲಖೀಂಪುರ್ ಕೇರಿ ಹಿಂಸಾಚಾರ ಪ್ರಕರಣ: ಬಾಯಿ ಮಾತಿನಲ್ಲಷ್ಟೇ ರಾಜ್ಯ ಸರ್ಕಾರದ ಕ್ರಮ; ತನಿಖೆ ಬಗ್ಗೆ ಸುಪ್ರೀಂ ಅಸಮಾಧಾನ

“ಬಾಯಿ ಮಾತಿನಲ್ಲಿ ಮಾತ್ರ ರಾಜ್ಯ ಸರ್ಕಾರವು ಕ್ರಮದ ಸೂಚನೆ ನೀಡಿದೆ. ಘಟನೆಗೆ ಸಂಬಂಧಿಸಿದಂತೆ ನಾವು ಯಾವ ಸಂದೇಶವನ್ನು ರವಾನಿಸುತ್ತಿದ್ದೇವೆ?” ಎಂದು ಪ್ರಶ್ನಿಸಿದ ಪೀಠ.
Lakhimpur Kheri, Supreme Court
Lakhimpur Kheri, Supreme Court

ಉತ್ತರ ಪ್ರದೇಶದ ಲಖೀಂಪುರ್ ಕೇರಿಯಲ್ಲಿ ರೈತರು ಸೇರಿದಂತೆ ಎಂಟು ಮಂದಿಯ ಸಾವಿಗೆ ಕಾರಣವಾದ ಘಟನೆಯನ್ನು ಅಲ್ಲಿನ ರಾಜ್ಯ ಸರ್ಕಾರ ಮತ್ತು ಪೊಲೀಸರು ಮುನ್ನಡೆಸುತ್ತಿರುವ ರೀತಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದೆ.

ಈ ಪ್ರಕರಣದಲ್ಲಿ ಎಫ್‌ಐಆರ್ ನೋಂದಣಿ ಹಾಗೂ ಘಟನೆಯಲ್ಲಿ ಭಾಗಿಯಾದ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಕೋರಿ ಬರೆದಿರುವ ಪತ್ರಗಳ ಆಧಾರದ ಮೇಲೆ ದಾಖಲಿಸಲಾದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಹಿಮಾ ಕೊಹ್ಲಿ ನೇತೃತ್ವದ ತ್ರಿಸದಸ್ಯ ಪೀಠವು ನಡೆಸಿತು.

ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹರೀಶ್‌ ಸಾಳ್ವೆ ಅವರು “ಪ್ರತಿಭಟನಾನಿರತ ರೈತರ ಮೇಲೆ ಕಾರು ಹರಿಸಿದ ಆಶೀಶ್‌ ಮಿಶ್ರಾ ಅವರನ್ನು ನಾಳೆ 11 ಗಂಟೆಗೆ ಹಾಜರಿರುವಂತೆ ಸೂಚಿಸಲಾಗಿದೆ” ಎಂದರು. “ಮರಣೋತ್ತರ ಪರೀಕ್ಷೆ ನಡೆಸಿದಾಗ ದೇಹದಲ್ಲಿ ಯಾವುದೇ ಗುಂಡು ಪತ್ತೆಯಾಗಿಲ್ಲ ಎಂದು ನನಗೆ ಹೇಳಲಾಗಿದೆ. ಇದಕ್ಕಾಗಿ ಸಿಆರ್‌ಪಿಸಿ 160 ನೋಟಿಸ್‌ ನೀಡಲಾಗಿದೆ… ಕಾರನ್ನು ಓಡಿಸಿದ ರೀತಿಯ ಕುರಿತಾದ ಆರೋಪ ಸತ್ಯವಾಗಿದೆ. ಆರೋಪಗಳು ನಿಜವಾಗಿದ್ದು, ಐಪಿಸಿ ಸೆಕ್ಷನ್‌ 302ರ ಪ್ರಕರಣ ದಾಖಲಿಸಲಾಗಿದೆ” ಎಂದರು.

ಇದಕ್ಕೆ ಸಿಜೆಐ ರಮಣ ಅವರು “ರಾಜ್ಯ ಸರ್ಕಾರ ಮತ್ತು ಪೊಲೀಸರು ಜವಾಬ್ದಾರರಾಗಿದ್ದಾರೆ. ಕೊಲೆ ಅಥವಾ ಗುಂಡಿನ ದಾಳಿಯ ಕುರಿತು ಗಂಭೀರ ಆರೋಪಗಳಿದ್ದಾಗ ದೇಶದಲ್ಲಿ ಇತರೆ ಆರೋಪಿಗಳನ್ನು ಇದೇ ರೀತಿ ಪರಿಗಣಿಸಲಾಗುತ್ತದೆಯೇ?” ಎಂದು ಪ್ರಶ್ನಿಸಿದರು.

ಮರಣೋತ್ತರ ವರದಿಯಲ್ಲಿ ಗುಂಡಿನಿಂದ ದಾಳಿ ನಡೆಸಿರುವ ಗಾಯದ ಕುರಿತು ಯಾವುದೇ ಉಲ್ಲೇಖ ಇಲ್ಲ ಎಂದು ಸಾಳ್ವೆ ಹೇಳಿದರು. ಆಗ ಪೀಠವು “ಆರೋಪಿಗಳನ್ನು ವಶಕ್ಕೆ ಪಡೆಯದಿರುವುದಕ್ಕೆ ಇದು ಆಧಾರವೇ?” ಎಂದು ಪ್ರಶ್ನಿಸಿತು.

“ಪೊಲೀಸರಿಗೆ ಎರಡು ಕಾಟ್ರಿಡ್ಜ್‌ಗಳು ಸಿಕ್ಕಿವೆ. ಗುಂಡು ಹೊಡೆಯುವವನಿಗೆ ಕೆಟ್ಟ ಉದ್ದೇಶ ಇದ್ದಿರಬೇಕು ಮತ್ತು ಅವರು ತಪ್ಪಿಸಿಕೊಂಡಿದ್ದಾರೆ” ಎಂದು ಸಾಳ್ವೆ ಹೇಳಿದರು.

ತನಿಖೆ ನಡೆಯುತ್ತಿರುವ ರೀತಿಯನ್ನು ನೋಡಿದರೆ ಅಧಿಕಾರಿಗಳು ಪ್ರಕರಣದ ಕುರಿತು ಗಂಭೀರವಾಗಿಲ್ಲ ಎಂದು ಸಿಜೆಐ ರಮಣ ಈ ಸಂದರ್ಭದಲ್ಲಿ ಹೇಳಿದರು. “ಬಾಯಿ ಮಾತಿನಲ್ಲಿ ಮಾತ್ರ ಕ್ರಮದ ಬಗ್ಗೆ ಮಾತನಾಡಲಾಗುತ್ತಿದೆ. ಯಾವ ಸಂದೇಶವನ್ನು ನಾವು ರವಾನಿಸುತ್ತಿದ್ದೇವೆ?” ಎಂದು ಅವರು ಕಠಿಣವಾಗಿ ಪ್ರಶ್ನಿಸಿದರು.

ಆಗ ನ್ಯಾ. ಸೂರ್ಯಕಾಂತ್‌ ಅವರು “ಎಂಟು ಜನರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಎಲ್ಲಾ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು” ಎಂದರು. ಇಂದು ಮತ್ತು ನಾಳೆಯ ಒಳಗೆ ಎಲ್ಲವನ್ನೂ ಸರಿಪಡಿಸಲಾಗುವುದು ಎಂದು ಸಾಳ್ವೆ ಹೇಳಿದರು.

ರಾಜ್ಯ ಸರ್ಕಾರವು ಪ್ರಕರಣವನ್ನು ಸಿಬಿಐಗೆ ವಹಿಸಿದೆಯೇ ಎಂದು ನ್ಯಾಯಾಲಯವು ಪ್ರಶ್ನಿಸಿತು. ಆಗ ಸಾಳ್ವೆ ಅವರು “ಎಲ್ಲವೂ ಗೌರವಾನ್ವಿತ ನ್ಯಾಯಮೂರ್ತಿಗಳಾದ ನಿಮ್ಮ ಕೈಯಲ್ಲಿದೆ. ರಾಜ್ಯ ಸರ್ಕಾರವು ತನಿಖೆಯ ಬಗ್ಗೆ ಯಾವುದೇ ಕೋರಿಕೆ ಮಾಡಿಲ್ಲ. ಪ್ರಕರಣದ ಪ್ರಗತಿಯ ಬಗ್ಗೆ ನಿಮಗೆ ಸಮಾಧಾನವಿಲ್ಲದಿದ್ದರೆ ಸಿಬಿಐಗೆ ಪ್ರಕರಣ ವಹಿಸಿ” ಎಂದರು.

ಇದಕ್ಕೆ ರಮಣ ಅವರು “ನಿಮ್ಮ ಮೇಲೆ ನಮಗೆ ಗೌರವವಿದೆ. ಪ್ರಕರಣವು ಸೂಕ್ಷ್ಮವಾಗಿರುವುದರಿಂದ ರಾಜ್ಯ ಸರ್ಕಾರವು ಅಗತ್ಯ ಕ್ರಮಕೈಗೊಳ್ಳಲಿದೆ ಎಂಬ ಭರವಸೆಯನ್ನು ನಾವು ಹೊಂದಿದ್ದೇವೆ. ನಾವು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ನಿಮಗೆ ಗೊತ್ತಿರುವ ಕಾರಣಗಳಿಂದಾಗಿಯೇ ಸಿಬಿಐ ಎಲ್ಲದಕ್ಕೂ ಪರಿಹಾರವಲ್ಲ…. ಕೆಲವು ವ್ಯಕ್ತಿಗಳಿಂದಾಗಿ ಹೀಗಾಗಿದ್ದು... ಪ್ರಕರಣವನ್ನು ಬೇರೆಯವರು ಮುಂದುವರಿಸುವುದು ಒಳಿತು” ಎಂದರು.

ದಸರಾ ರಜಾದ ಬಳಿಕ ವಿಚಾರಣೆ ಮುಂದುವರಿಸುವ ಇರಾದೆಯನ್ನು ಪೀಠ ವ್ಯಕ್ತಪಡಿಸಿತು. “ಮತ್ತೊಂದು ಸಂಸ್ಥೆ ತನಿಖೆ ಕೈಗೆತ್ತಿಕೊಳ್ಳುವವರೆಗೆ ಸಾಕ್ಷಿಗಳನ್ನು ನಾಶಪಡಿಸದಂತೆ ಡಿಜಿಪಿಗೆ ಹೇಳಿ” ಎಂದು ಪೀಠವು ಸೂಚಿಸಿತು.

Also Read
ಲಖಿಂಪುರ್ ಖೇರಿ ಹಿಂಸಾಚಾರ: ಆರೊಪಿಗಳ ಸೆರೆ, ಎಫ್ಐಆರ್ ಬಗ್ಗೆ ಸ್ಥಿತಿಗತಿ ವರದಿ ಕೇಳಿದ ಸುಪ್ರೀಂ

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಸುದ್ದಿ ಪ್ರಕಟಿಸುವುದಕ್ಕೂ ಪೀಠವು ಆಕ್ಷೇಪ ವ್ಯಕ್ತಪಡಿಸಿತು. “ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮಾಧ್ಯಮಗಳು ಹೇಗೆ ಮೀರುತ್ತಿವೆ ಎಂಬುದನ್ನು ನೋಡಿ ಬೇಸರವಾಗುತ್ತಿದೆ” ಎಂದಿದ್ದಾರೆ.

ಈ ಸಂಬಂಧ ಆದೇಶದಲ್ಲಿ ದಾಖಲಿಸಿರುವ ಪೀಠವು “ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಸರ್ಕಾರದ ಪರ ವಕೀಲರು ವಿವರಿಸಿದ್ದಾರೆ. ಸ್ಥಿತಿಗತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಆದರೆ, ಕ್ರಮಕೈಗೊಂಡಿರುವ ಬಗ್ಗೆ ನಮಗೆ ಸಮಾಧಾನವಿಲ್ಲ” ಎಂದಿದೆ.

“ವಕೀಲರು ನ್ಯಾಯಾಲಯವನ್ನು ತೃಪ್ತಿಪಡಿಸುವುದಾಗಿ ಭರವಸೆ ನೀಡಿದ್ದು, ಪರ್ಯಾಯ ಏಜೆನ್ಸಿ ತನಿಖೆ ನಡೆಸಬಹುದಾದ ಕುರಿತು ನ್ಯಾಯಾಲಯಕ್ಕೆ ತಿಳಿಸುತ್ತಾರೆ. ನ್ಯಾಯಾಲಯ ಪುನಾರಂಭವಾದ ತಕ್ಷಣ ಪ್ರಕರಣವನ್ನು ವಿಚಾರಣೆಗೆ ನಿಗದಿಪಡಿಸಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ರಕ್ಷಿಸಿಡುವಂತೆ ರಾಜ್ಯದ ಅತ್ಯುನ್ನತ ಪೊಲೀಸ್‌ ಅಧಿಕಾರಿಗೆ ಸೂಚಿಸಲಾಗುವುದು” ಎಂದು ವಕೀಲರು ನ್ಯಾಯಾಲಯಕ್ಕೆ ಭರವಸೆ ನೀಡಿದರು.

Related Stories

No stories found.
Kannada Bar & Bench
kannada.barandbench.com