ಕೇರಳ ಹೈಕೋರ್ಟ್‌ನಿಂದ ಕರ್ನಾಟಕ ಹೈಕೋರ್ಟ್‌ಗೆ ಕಾನೂನು ವ್ಯಾಪ್ತಿ ಬದಲಿಸಲು ಮುಂದಾದ ಲಕ್ಷದ್ವೀಪದ ಆಡಳಿತ

ಲಕ್ಷದ್ವೀಪದ ಆಡಳಿತದ ಇತ್ತೀಚಿನ ನೀತಿಗಳ ವಿರುದ್ಧ ಕೇರಳ ಹೈಕೋರ್ಟ್‌ಗೆ ಹಲವು ಪ್ರಕರಣಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಸ್ತಾವನೆ ಮುಂದಿಡಲಾಗಿದ್ದು ಲಕ್ಷದ್ವೀಪದ ಜನ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕೇರಳ ಹೈಕೋರ್ಟ್‌ನಿಂದ ಕರ್ನಾಟಕ ಹೈಕೋರ್ಟ್‌ಗೆ ಕಾನೂನು ವ್ಯಾಪ್ತಿ ಬದಲಿಸಲು ಮುಂದಾದ ಲಕ್ಷದ್ವೀಪದ ಆಡಳಿತ
Published on

ತನ್ನ ಕೆಲವು ನೀತಿಗಳ ಬಗ್ಗೆ ವ್ಯಾಪಕ ಪ್ರತಿಭಟನೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಲಕ್ಷದ್ವೀಪ ಆಡಳಿತ, ಅಲ್ಲಿನ ಕಾನೂನು ವ್ಯಾಪ್ತಿಯನ್ನು ಕೇರಳ ಹೈಕೋರ್ಟ್‌ನಿಂದ ಕರ್ನಾಟಕ ಹೈಕೋರ್ಟ್‌ಗೆ ಬದಲಿಸುವ ಪ್ರಸ್ತಾವನೆ ರೂಪಿಸುತ್ತಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಸಂವಿಧಾನದ 241 ನೇ ವಿಧಿ ಪ್ರಕಾರ ಹೈಕೋರ್ಟ್‌ನ ಅಧಿಕಾರ ವ್ಯಾಪ್ತಿಯನ್ನು ಸಂಸತ್ತಿನ ಕಾಯಿದೆಯ ಮೂಲಕ ಮಾತ್ರ ಬದಲಿಸಬಹುದಾಗಿದೆ. 241ನೇ ವಿಧಿಯ ಅನುಚ್ಛೇದ (1)ರ ಪ್ರಕಾರ ಸಂಸತ್ತು ತನ್ನ ಕಾಯಿದೆಯ ಮೂಲಕ ಕೇಂದ್ರಾಡಳಿತ ಪ್ರದೇಶಕ್ಕಾಗಿ ಹೈಕೋರ್ಟ್‌ ಸ್ಥಾಪಿಸಬಹುದು. ಅಥವಾ ಸಂವಿಧಾನದ ಉದ್ದೇಶಗಳಿಗಾಗಿ ಆ ಪ್ರದೇಶದಲ್ಲಿರುವ ನ್ಯಾಯಾಲಯವನ್ನು ಹೈಕೋರ್ಟ್‌ ಆಗಿ ರೂಪಿಸಬಹುದು.

ಉದ್ದೇಶಿತ ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರ ನಿಯಂತ್ರಣ ನಿಯಮಾವಳಿ ಮಸೂದೆ, ಲಕ್ಷದ್ವೀಪ ಸಾಮಾಜಿಕ ವಿರೋಧಿ ಚಟುವಟಿಕೆಗಳ ನಿಯಂತ್ರಣ ವಿಧೇಯಕ, ಗೋಮಾಂಸ ನಿಷೇಧವನ್ನು ಪರಿಣಾಮಕಾರಿಯಾಗಿ ಪರಿಚಯಿಸುವ ಲಕ್ಷದ್ವೀಪ ಪ್ರಾಣಿ ಸಂರಕ್ಷಣಾ ನಿಯಂತ್ರಣವನ್ನು ಜಾರಿಗೆ ತರಲು ದ್ವೀಪಸಮೂಹದ ನೂತನ ಆಡಳಿತಗಾರ ಪ್ರಫುಲ್‌ ಪಟೇಲ್‌ ಉದ್ದೇಶಿಸಿದ್ದರು. ಇದನ್ನು ಪ್ರಶ್ನಿಸಿ ಹಲವು ಅರ್ಜಿಗಳು ಕೇರಳ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ದ್ವೀಪದ ನ್ಯಾಯವ್ಯಾಪ್ತಿಯನ್ನು ಬದಲಿಸಲು ಆಡಳಿತ ಮುಂದಾಗಿದೆ.

ನೂತನ ಆಡಳಿತಗಾರರ ಕೆಲ ನೀತಿ ನಿರ್ಧಾರಗಳನ್ನು ವಿರೋಧಿಸಿ ಕೇಂದ್ರಾಡಳಿತ ಪ್ರದೇಶದ ನಿವಾಸಿಗಳು ಬೀದಿಗಳಿದು, ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರತಿಭಟನೆ ನಡೆಸಿದ್ದರು. ಕೋವಿಡ್‌ ಸಮಯದಲ್ಲಿ ದ್ವೀಪಕ್ಕೆ ಭೇಟಿ ನೀಡಲು ಅನುವಾಗುವಂತೆ ಪ್ರಮಾಣಿತ ಕಾರ್ಯಾಚರಣಾ ವಿಧಾನದಲ್ಲಿ (ಎಸ್‌ಒಪಿ) ಬದಲಾವಣೆ ಮಾಡಲು ಹೊರಟಿದ್ದು, ಮೀನುಗಾರರ ಗುಡಿಸಲುಗಳ ನೆಲಸಮ ಹಾಗೂ ಪಂಚಾಯತ್‌ ಚುನಾವಣೆಗೆ ನಿಲ್ಲುವ ಅರ್ಹತಾ ಮಾನದಂಡಗಳನ್ನು ಬದಲಿಸಿದ್ದು ಈ ನೀತಿಗಳಲ್ಲಿ ಸೇರಿವೆ.

Also Read
ಲಕ್ಷದ್ವೀಪ ನೂತನ ಕರಡು ಪ್ರಶ್ನಿಸಿ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ: ಪ್ರತಿವಾದಿಗಳ ಪ್ರತಿಕ್ರಿಯೆ ಕೇಳಿದ ನ್ಯಾಯಾಲಯ

ಪ್ರತಿಭಟನೆಯಿಂದಾಗಿ ಹಲವು ಬಂಧನಗಳು ನಡೆದಿದ್ದು ಮುಖ್ಯವಾಗಿ ಚಲನಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನಾ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 ಎ ಅಡಿಯಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ.

ನೂತನ ಆಡಳಿಗಾರ ಪಟೇಲ್‌ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಒತ್ತಾಯಿಸಿ ಕೇರಳ ವಿಧಾನಸಭೆ ಇತ್ತೀಚೆಗೆ ಸರ್ವಾನುಮತದ ನಿರ್ಣಯವನ್ನು ಕೂಡ ಕೈಗೊಂಡಿತ್ತು.

Kannada Bar & Bench
kannada.barandbench.com