ಕೊಲೆ ಯತ್ನ ಪ್ರಕರಣವೊಂದರಲ್ಲಿ ತನ್ನ ವಿರುದ್ಧ ಶಿಕ್ಷೆ ರದ್ದಾಗಿದ್ದರೂ ತಮ್ಮ ಸಂಸತ್ ಸದಸ್ಯತ್ವವನ್ನು ಪುನರ್‌ಸ್ಥಾಪಿಸಿಲ್ಲ ಎಂದು ದೂರಿ ಎನ್‌ಸಿಪಿ ನಾಯಕ ಹಾಗೂ ಅನರ್ಹಗೊಂಡಿರುವ ಲಕ್ಷದ್ವೀಪದ ಸಂಸದ ಪಿ ಪಿ ಮೊಹಮ್ಮದ್ ಫೈಜಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠದೆದುರು ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಅವರು ಕೋರಿದರು. ನಾಳೆ ವಿಚಾರಣೆ ನಡೆಸಲು ಪೀಠವು ಸಮ್ಮತಿ ಸೂಚಿಸಿತು.
ಶಿಕ್ಷೆಯನ್ನು ರದ್ದುಗೊಳಿಸಿದ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಆದರೂ ಫೈಜಲ್ ಅವರಿಗೆ ಸಂಸತ್ ಸದಸ್ಯತ್ವ ನೀಡಿಲ್ಲ. ಲಕ್ಷದ್ವೀಪ ಆಡಳಿತ ಸಲ್ಲಿಸಿದ್ದ ವಿಶೇಷ ಅನುಮತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಾಲ್ಕು ಬಾರಿ ವಿಚಾರಣೆ ನಡೆಸಿದ್ದು, ಪ್ರಕರಣ ನಾಳೆ ವಿಚಾರಣೆಗೆ ಬರಲಿದೆ ಎಂದು ಸಿಂಘ್ವಿ ನ್ಯಾಯಾಲಯಕ್ಕೆ ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಜಲ್ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಕೇರಳ ಹೈಕೋರ್ಟ್ ಅಮಾನತುಗೊಳಿಸಿತ್ತು. ಈ ಆದೇಶಕ್ಕೆ ತಡೆ ಕೋರಿ ಲಕ್ಷದ್ವೀಪ ಆಡಳಿತ ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಕಳೆದ ಫೆಬ್ರವರಿಯಲ್ಲಿ ತಿರಸ್ಕರಿಸಿತ್ತು.
ಜನವರಿ 25 ರಂದು ನಡೆದಿದ್ದ ವಿಚಾರಣೆ ವೇಳೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಲಕ್ಷದ್ವೀಪ ಆಡಳಿತ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿದ್ದ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರಿದ್ದ ಪೀಠ ಪ್ರಕರಣದ ವಿಚಾರಣೆಯನ್ನು ಮಾರ್ಚ್ 28 ಕ್ಕೆ (ನಾಳೆಗೆ) ಮುಂದೂಡಿತ್ತು.