ಬಳಕೆದಾರರು ವಾಟ್ಸಾಪ್‌ ಬಳಕೆ ನಿಲ್ಲಿಸಲು ಸ್ವತಂತ್ರರು: ದೆಹಲಿ ಹೈಕೋರ್ಟ್‌ಗೆ ವಾಟ್ಸಾಪ್‌ ವಿವರಣೆ

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ 2021ರ ತನ್ನ ನೂತನ ಗೌಪ್ಯತಾ ನೀತಿಯು ಮೈಕ್ರೋಸಾಫ್ಟ್‌, ಜೊಮ್ಯಾಟೊ, ಗೂಗಲ್‌, ಜೂಮ್‌, ಬಿಗ್‌ ಬಾಸ್ಕೆಟ್‌, ಟ್ರೂಕಾಲರ್‌, ಕೂ, ರಿಪಬ್ಲಿಕ್‌ ವರ್ಲ್ಡ್‌, ಆರೋಗ್ಯ ಸೇತು ಇತ್ಯಾದಿಗಳ ರೀತಿಯಲ್ಲಿಯೇ ಇದೆ ಎಂದಿದೆ.
WhatsApp
WhatsApp
Published on

ತನ್ನ 2021ರ ನೂತನ ಗೌಪ್ಯತಾ ಪರಿಷ್ಕರಣೆಯು ಕಡ್ಡಾಯವಲ್ಲ. ಅದನ್ನು ಒಪ್ಪಿಕೊಳ್ಳುವಂತೆ ಯಾವುದೇ ಬಳಕೆದಾರರನ್ನು ಒತ್ತಾಯಿಸುವುದಿಲ್ಲ ಎಂದು ದೆಹಲಿ ಹೈಕೋರ್ಟ್‌ಗೆ ವಾಟ್ಸಾಪ್‌ ಎಲ್‌ಎಲ್‌ಸಿ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ (ಡಾ. ಸೀಮಾ ಸಿಂಗ್‌ ವರ್ಸಸ್‌ ಭಾರತ ಸರ್ಕಾರ).

ಬಳಕೆದಾರರು ವಾಟ್ಸಾಪ್‌ ಬಳಕೆ ನಿಲ್ಲಿಸಲು ಸ್ವತಂತ್ರರು. ತಮ್ಮ ಖಾತೆಗಳನ್ನು ಯಾವುದೇ ಸಂದರ್ಭದಲ್ಲಿ ಬೇಕಾದರೂ ಅಳಿಸಿ ಹಾಕಬಹುದು ಎಂದು ಮೆಸೆಂಜರ್‌ ಅಪ್ಲಿಕೇಶನ್‌ ಹೇಳಿದೆ. ತಮ್ಮ ನಿಯಮಗಳಿಗೆ ಸಮ್ಮತಿಸದ ಬಳಕೆದಾರರಿಗೆ ಸೇವೆಗಳನ್ನು ಒದಗಿಸದಿರಲು ಕಾನೂನು ಅನುಮತಿಸುತ್ತದೆ. ಬಳಕೆದಾರರಿಗೆ “ಹೊರಗುಳಿಯುವಿಕೆ” (ಅಪ್ಟ್‌ ಔಟ್) ಒದಗಿಸುವ ಯಾವುದೇ ಕಾನೂನುಬದ್ಧ ಬಾಧ್ಯತೆ ತನಗಿಲ್ಲ. ಇದು ಉದ್ಯಮ ಕ್ಷೇತ್ರದಲ್ಲಿರುವ ಸಾಮಾನ್ಯ ಅಭ್ಯಾಸವಾಗಿದೆ ಎಂದು ಫೇಸ್‌ಬುಕ್ ಒಡೆತನದ ವಾಟ್ಸಾಪ್‌ ಹೇಳಿದೆ.

ತನ್ನ ನೂತನ ಗೌಪ್ಯತಾ ನೀತಿ ನವೀಕರಣದಲ್ಲಿ ಹಸ್ತಕ್ಷೇಪ ಮಾಡುವುದರಿಂದ ಇಂಟರ್ನೆಟ್ ಆಧಾರಿತ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳ ಸಂಪೂರ್ಣ ಉದ್ಯಮವನ್ನು ದುರ್ಬಲಗೊಳಿಸಿದಂತಾಗುತ್ತದೆ ಎಂದು ವಾಟ್ಸಾಪ್ ವಾದಿಸಿದೆ.

ಮೈಕ್ರೋಸಾಫ್ಟ್, ಜೊಮ್ಯಾಟೊ, ಗೂಗಲ್, ಜೂಮ್, ಬಿಗ್ ಬಾಸ್ಕೆಟ್, ಟ್ರೂಕಾಲರ್, ಕೂ, ರಿಪಬ್ಲಿಕ್ ವರ್ಲ್ಡ್ ಸೇರಿದಂತೆ ಹಲವಾರು ಕಂಪನಿಗಳ ಗೌಪ್ಯತೆ ನೀತಿಗಳಲ್ಲಿ ಬಳಕೆದಾರರ ದತ್ತಾಂಶವನ್ನು ಸಂಗ್ರಹಿಸುವ ಹಕ್ಕನ್ನು ಉಳಿಸಿಕೊಳ್ಳಲಾಗಿದೆ ಎಂದು ವಾಟ್ಸಾಪ್ ಹೈಕೋರ್ಟ್ ಮುಂದೆ ಸಲ್ಲಿಸಿದ ತನ್ನ ಪ್ರಾಥಮಿಕ ಅಫಿಡವಿಟ್‌ನಲ್ಲಿ ತಿಳಿಸಿದೆ.

ಆರೋಗ್ಯ ಸೇತು, ಐಆರ್‌ಸಿಟಿಸಿ, ಭೀಮ್ ಮುಂತಾದ ಸಾರ್ವಜನಿಕ ಸೇವೆಗಳನ್ನು ಒದಗಿಸುವ ವಿವಿಧ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳ ಗೌಪ್ಯತೆ ನೀತಿಗಳು ಸಹ ವಾಟ್ಸಾಪ್‌ನಂತೆಯೇ ಇವೆ ಎಂದು ವಾಟ್ಸಪ್‌ ಹೇಳಿದೆ.

Also Read
ನವೀಕೃತ ಗೌಪ್ಯತಾ ನೀತಿಯನ್ನು ಜಾರಿಗೊಳಿಸದಂತೆ ವಾಟ್ಸಾಪ್‌ ನಿರ್ಬಂಧಿಸಬಹುದು: ದೆಹಲಿ ಹೈಕೋರ್ಟ್‌ಗೆ ಕೇಂದ್ರದ ಹೇಳಿಕೆ

ತನ್ನ ಬಳಕೆದಾರರಿಂದ ವಾಟ್ಸಾಪ್‌ ಒಪ್ಪಿಗೆ ಪಡೆಯುವ ವಿಧಾನವು ಉದ್ಯಮದ ಅಭ್ಯಾಸಕ್ಕಿಂತ ಮೇಲ್ಮಟ್ಟದ್ದಾಗಿದ್ದು, ಅದನ್ನು ಮೀರಿದ್ದು ಎಂದು ಸಂಸ್ಥೆಯು ಹೇಳಿಕೊಂಡಿದೆ.

ನೂತನ ಗೌಪ್ಯತಾ ನೀತಿಯನ್ನು ಹಿಂತೆಗೆದುಕೊಳ್ಳಲು ಅಥವಾ ಬಳಕೆದಾರರಿಗೆ ಹೊರಗುಳಿಯುವ ಆಯ್ಕೆಯನ್ನು ಒದಗಿಸಲು ವಾಟ್ಸಾಪ್‌ಗೆ ಆದೇಶಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಡಾ. ಸೀಮಾ ಸಿಂಗ್‌, ಮೇಘನ್‌ ಮತ್ತು ವಿಕ್ರಮ್‌ ಸಿಂಗ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಗೆ ಸಂಬಂಧಿಸಿದಂತೆ ವಾಟ್ಸಾಪ್‌ ಅಫಿಡವಿಟ್‌ ಸಲ್ಲಿಸಿದೆ.

ಪಿಐಎಲ್‌ಗೆ ಪ್ರತಿಕ್ರಿಯಿಸಿದ್ದ ಕೇಂದ್ರ ಸರ್ಕಾರವು ನೂತನ ನವೀಕರಣ ನೀತಿಯು 2011ರ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಉಲ್ಲಂಘಿಸಿದೆ. ನೂತನ ಗೌಪ್ಯತಾ ನೀತಿಯ ಸಿಂಧುತ್ವ ಅಂತಿಮವಾಗಿ ನ್ಯಾಯಾಲಯದಲ್ಲಿ ನಿರ್ಧಾರವಾಗುವವರೆಗೆ ವಾಟ್ಸಾಪ್ ನೂತನ ನೀತಿ ಅನುಷ್ಠಾನಕ್ಕೆ ತಡೆ ವಿಧಿಸಬೇಕು ಎಂದು ಕೇಂದ್ರ ಸರ್ಕಾರ ಹೇಳಿತ್ತು. ಮೇ 17ಕ್ಕೆ ವಿಚಾರಣೆ ನಿಗದಿಗೊಳಿಸಲಾಗಿದೆ.

Kannada Bar & Bench
kannada.barandbench.com