ಒಬ್ಬ ವ್ಯಕ್ತಿಯ ಭೂಮಿಯನ್ನು ಸ್ವಾಧೀನಪಡಿಸಿಕೊಂಡಾಗ, ಅವನು ಭೂಮಿಯ ಮಾಲೀಕತ್ವ ಕಳೆದುಕೊಂಡ ಕೂಡಲೇ ಮಾಲೀಕನಿಗೆ ಪರಿಹಾರ ಒದಗಿಸಬೇಕು ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ತಿಳಿಸಿದೆ [ದಿವಂಗತ ಗಯಾಭಾಯ್ ದಿಗಂಬರ್ ಪುರಿ ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್ ಇನ್ನಿತರರ ನಡುವಣ ಪ್ರಕರಣ].
ಪರಿಹಾರವನ್ನು ತಕ್ಷಣವೇ ಪಾವತಿಸದಿದ್ದರೆ ಭೂಮಿ ಕಳೆದುಕೊಂಡ ದಿನಂದಿಂದಲೇ ಅದರ ಮಾಲೀಕರು ಬಡ್ಡಿ ಪಡೆಯಲು ಅರ್ಹರು ಎಂದು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಸಿ ಟಿ ರವಿಕುಮಾರ್ ಅವರ ವಿಭಾಗೀಯ ಪೀಠ ಹೇಳಿದೆ.
ಪರಾಮರ್ಶನಾ ನ್ಯಾಯಾಲಯ ನೀಡಿದ್ದ ನಿರ್ದೇಶನವನ್ನು ಬದಿಗೆ ಸರಿಸಿದ್ದ ಬಾಂಬೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯಿತು. ಬಡ್ಡಿಯನ್ನು ಪಾವತಿಸುವ ಹೊಣೆ ನಿಗದಿಗೊಳಿಸಬೇಕೆ ಮತ್ತು ಭೂಮಿಯನ್ನು ಸ್ವಾಧೀನ ಪಡಿಸಿಕೊಂಡ ದಿನದಿಂದಲೇ ಬಡ್ಡಿ ಅನ್ವಯಿಸುತ್ತದೆಯೇ ಅಥವಾ ತೀರ್ಪಿನ ದಿನಾಂಕದ ಬಳಿಕ ಅನ್ವಯಿಸುತ್ತದೆಯೇ ಎಂಬುದು ಸರ್ವೋಚ್ಚ ನ್ಯಾಯಾಲಯದ ಮುಂದಿದ್ದ ಪ್ರಶ್ನೆಯಾಗಿತ್ತು.
ಆರ್ ಎಲ್ ಜೈನ್ ಮತ್ತು ಡಿಡಿಎ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಈಗಾಗಲೇ ಈ ಸಮಸ್ಯೆಯನ್ನು ಬಗೆಹರಿಸಿದೆ ಎಂದು ಅಭಿಪ್ರಾಯಪಟ್ಟ ಪೀಠ ಭೂಮಿ ಪರಭಾರೆಯಾದ ದಿನದಿಂದಲೇ ಮಾಲೀಕ ಬಡ್ಡಿಸಹಿತ ಪರಿಹಾರ ಪಡೆಯಲು ಅರ್ಹನಾಗಿರುತ್ತಾನೆ ಎಂದು ಆ ತೀರ್ಪಿನಲ್ಲಿ ಹೇಳಿರುವುದಾಗಿ ಸ್ಪಷ್ಟಪಡಿಸಿತು. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಮಿ ಕಳೆದುಕೊಂಡ ದಿನಂದಿಂದಲೇ ಅಂದರೆ ಏಪ್ರಿಲ್ 4, 1997ರ ದಿನದಿಂದಲೂ ಬಡ್ಡಿ ಹಣ ಪಡೆಯಲು ಮಾಲೀಕ ಅರ್ಹರಾಗಿರುತ್ತಾರೆ ಎಂದ ಪೀಠ ಪರಾಮರ್ಶನಾ ನ್ಯಾಯಾಲಯ ಈ ಹಿಂದೆ ನೀಡಿದ್ದ ನಿರ್ದೇಶನವನ್ನು ಮರಳಿ ಜಾರಿಗೊಳಿಸಿತು.