[ಎಚ್‌ಡಿಕೆ ವಿರುದ್ಧದ ಭೂಕಬಳಿಕೆ ಪ್ರಕರಣ] 19 ವರ್ಷವಾದರೂ ಭೂಮಿ ರಕ್ಷಣೆಗೆ ಕ್ರಮಕೈಗೊಂಡಿಲ್ಲ: ಹೈಕೋರ್ಟ್‌ ಅಸಮಾಧಾನ

ಪ್ರಾಮಾಣಿಕ ಸಿಎಸ್‌ ನ್ಯಾಯಾಲಯದ ಮುಂದೆ ಇದ್ದಾರೆ. ಅವರನ್ನು ಬಂಧ ಮುಕ್ತಗೊಳಿಸಿದರೆ ಅದ್ಭುತ ಸೃಷ್ಟಿಸಲಿದ್ದಾರೆ. ಈಚೆಗಷ್ಟೇ ನಾವು ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಿದ್ದೇವೆ. ಮಹಿಳಾ ಸಬಲೀಕರಣವನ್ನು ಜಾರಿಗೊಳಿಸಿ ಎಂದ ಪೀಠ.
HD Kumaraswamy Karnataka HC
HD Kumaraswamy Karnataka HC
Published on

ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮದ್ದೂರು ಶಾಸಕ ಡಿ ಸಿ ತಮ್ಮಣ್ಣ ಮತ್ತಿತರರು ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಕಬಳಿಸಿದ್ದಾರೆ ಎನ್ನಲಾದ 14.04 ಎಕರೆ ಸರ್ಕಾರಿ ಜಮೀನನ್ನು 19 ವರ್ಷಗಳಾದರೂ ರಕ್ಷಿಸಲು ಸರ್ಕಾರ ಮುಂದಾಗಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಅಸಮಾಧಾನ ವ್ಯಕ್ತಪಡಿಸಿತು. ಪ್ರಕರಣದ ಸಂಬಂಧ ನ್ಯಾಯಾಲಯದ ಈ ಹಿಂದಿನ ಆದೇಶದಂತೆ ಖುದ್ದು ಮುಖ್ಯ ಕಾರ್ಯದರ್ಶಿಯವರೇ ಹಾಜರಾಗಿದ್ದರು.

ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರು ಆದೇಶ ಮಾಡಿರುವುದನ್ನು ಜಾರಿ ಮಾಡುವಂತೆ ಹೈಕೋರ್ಟ್‌ ಆದೇಶಿಸಿತ್ತು. ಇದನ್ನು ಜಾರಿ ಮಾಡಲು ವಿಫಲವಾಗಿರುವ ರಾಜ್ಯ ಸರ್ಕಾರದ ನಡೆ ಪ್ರಶ್ನಿಸಿ ಎಸ್‌ ಆರ್‌ ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ವೆಂಕಟೇಶ್‌ ನಾಯಕ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಲೋಕಾಯುಕ್ತರ ಆದೇಶವನ್ನು ಎರಡು ತಿಂಗಳಲ್ಲಿ ಜಾರಿಗೊಳಿಸಲಾಗುವುದು ಎಂದು 2020ರಲ್ಲಿ ವಿಭಾಗೀಯ ಪೀಠಕ್ಕೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ತಿಳಿಸಿದ್ದರು. ದುರದೃಷ್ಟಕರವೆಂದರೆ ಆ ಆದೇಶವನ್ನು ಅನುಪಾಲಿಸಲಾಗಿಲ್ಲ. ಆನಂತರ ಲೋಕಾಯುಕ್ತರ ಆದೇಶ ಜಾರಿ ಮಾಡಲು ಹಲವು ಆದೇಶ ಮಾಡಲಾಗಿದೆ. ಲೋಕಾಯುಕ್ತ ಮತ್ತು ವಿಭಾಗೀಯ ಪೀಠದ ಆದೇಶದ ಬಳಿಕವೂ ಸರ್ಕಾರವು ಯಾವುದೇ ಕ್ರಮಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿಗೆ ನ್ಯಾಯಾಲಯದ ಮುಂದೆ ಹಾಜರಾಗಲು ಸಮನ್ಸ್‌ ನೀಡದೆ ಬೇರೆ ದಾರಿ ಇರಲಿಲ್ಲ. ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು ಅನುಪಾಲನಾ ಅಫಿಡವಿಟ್‌ ಸಲ್ಲಿಸಿದ್ದಾರೆ. 19 ವರ್ಷ ಕಳೆದರೂ, ಲೋಕಾಯುಕ್ತರು ವರದಿ ಸಲ್ಲಿಸಿದ್ದರೂ ಇದುವೆರೆಗೂ ಸರ್ಕಾರವು ಆದೇಶವನ್ನು ಜಾರಿಗೆ ತಂದಿಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ಈ ಮಧ್ಯೆ, ಅಡ್ವೊಕೇಟ್‌ ಜನರಲ್‌ ಅವರು ಮುಖ್ಯ ಕಾರ್ಯದರ್ಶಿ ಮತ್ತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ನ್ಯಾಯಾಲಯದ ಮುಂದೆ ಹಾಜರಾಗಿದ್ದು, ಲೋಕಾಯುಕ್ತ ವರದಿ ಅನುಸಾರ ಮತ್ತು 2004ರಲ್ಲಿ ತಹಶೀಲ್ದಾರ್‌ ಅವರು ಕೇತಗಾನಹಳ್ಳಿಯಲ್ಲಿನ 14.04 ಎಕರೆ ಭೂಮಿ ವಶಕ್ಕೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ತಕ್ಷಣ ಭೂಮಿ ವಶಕ್ಕೆ ಪಡೆಯಲು ಸರ್ಕಾರ ಮುಂದಾಗಲಿದೆ ಎಂದು ಎಜಿ ಭರವಸೆ ನೀಡಿದ್ದಾರೆ. ಸರ್ಕಾರವು ತನ್ನ ಭೂಮಿ ರಕ್ಷಿಸುವ ಮತ್ತು ಪ್ರಕ್ರಿಯೆ ಆರಂಭಿಸುವ ಇಚ್ಛೆ ಹೊಂದಿದೆಯೇ ಎಂಬುದನ್ನು ಪರಿಶೀಲಿಸಲು ಹಾಗೂ ಸ್ಥಿತಿಗತಿ ವರದಿ ಸಲ್ಲಿಸಲು ಪ್ರಕರಣವನ್ನು ಎರಡು ವಾರಗಳ ಕಾಲ ಮುಂದೂಡಲಾಗಿದೆ. ಮುಖ್ಯ ಕಾರ್ಯದರ್ಶಿ ಮತ್ತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನ್ಯಾಯಾಲಯದ ಮುಂದೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಮತ್ತು ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಿದ್ದು, ಮೂರು ತಿಂಗಳಲ್ಲಿ ಆಕ್ಷೇಪಾರ್ಹವಾದ ಭೂಮಿಯನ್ನು ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಇದಕ್ಕೂ ಮುನ್ನ ಪೀಠವು ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರನ್ನು ಕುರಿತು “ಲೋಕಾಯುಕ್ತ ಆದೇಶದ ಆನಂತರ ವಿಭಾಗೀಯ ಪೀಠವು ಆದೇಶ ಮಾಡಿದೆ. ಆದರೆ, ಏನೂ ಆಗಿಲ್ಲ. ಲೋಕಾಯುಕ್ತರು 2014ರಲ್ಲಿ, ವಿಭಾಗೀಯ ಪೀಠವು 2020ರಲ್ಲಿ ಆದೇಶ ಮಾಡಿದೆ. ಈಗ ನೀವು (ಎಜಿ) ಅಫಿಡವಿಟ್‌ ಸಲ್ಲಿಸಿ 14.04 ಎಕರೆ ಭೂಮಿಯ ಕುರಿತು ಸರ್ಕಾರ ಪರಿಶೀಲಿಸಲಿದೆ ಎಂದು ಹೇಳಿದ್ದೀರಿ. ಲೋಕಾಯುಕ್ತ ಆದೇಶ ಬಳಿಕ ತನಿಖೆ, ಪರಿಶೀಲನೆ ನಡೆಸಿರುವ ಬಗ್ಗೆ ಇದುವರೆಗೆ ಯಾವುದೇ ದಾಖಲೆ ಸಲ್ಲಿಸಲಾಗಿಲ್ಲ. ಮಹಜರ್‌ ಸಹ ಮಾಡಿಲ್ಲ. ಸರ್ಕಾರದ ಜಮೀನನ್ನು ವಶಕ್ಕೆ ಪಡೆದಿಲ್ಲ. ರಾಜ್ಯ ಸರ್ಕಾರದ ಜಮೀನಿನ ಬಗ್ಗೆ ಯಾವುದೇ ಖಾತರಿ ಇಲ್ಲ. ಈ ಜಾಮೀನಿನ ಆರ್‌ಟಿಸಿ ಎಲ್ಲಿದೆ” ಎಂದು ಮೌಖಿಕವಾಗಿ ಪ್ರಶ್ನಿಸಿತು.

Also Read
ಎಚ್‌ಡಿಕೆ ವಿರುದ್ಧದ ಭೂಕಬಳಿಕೆ ಪ್ರಕರಣ: ಕಂದಾಯ ಇಲಾಖೆ ಕಾರ್ಯದರ್ಶಿ ಅಫಿಡವಿಟ್‌ಗೆ ಹೈಕೋರ್ಟ್‌ ಅತೃಪ್ತಿ

ಮುಂದುವರಿದು, “ಬಡ ವ್ಯಕ್ತಿಯಾದರೆ ಆತನನ್ನು ಆಚೆಗೆ ಎಸೆಯುತ್ತೀರಿ. ದೊಡ್ಡ ವ್ಯಕ್ತಿಯಾದರೆ ಈ ರೀತಿ ಆಗುತ್ತದೆ. ಇದುವರೆಗೆ ಸಲ್ಲಿಸಿದ್ದ ಅಫಿಡವಿಟ್‌ಗಳಲ್ಲಿ ಎಲ್ಲವನ್ನೂ ಜಾರಿ ಮಾಡಿದ್ದೇವೆ ಎಂದು ಹೇಳಿದ್ದೀರಿ. ಈಗ ಸಲ್ಲಿಸಲಾದ ಅಫಿಡವಿಟ್‌ ಹಿಂದಿನ ಅಫಿಡವಿಟ್‌ಗಳನ್ನು ಸುಳ್ಳು ಮಾಡಿದೆ. 2004ರಲ್ಲಿ ತಹಶೀಲ್ದಾರ್‌ ಆದೇಶ ಮಾಡಿದ್ದು, ಈಗ 2023. ಇದುವರೆಗೆ ಆ ಭೂಮಿಯನ್ನು ವಶಕ್ಕೆ ಪಡೆಯಲಾಗಿಲ್ಲ. 19 ವರ್ಷಗಳಾಗಿವೆ” ಎಂದು ಪೀಠ ಬೇಸರಿಸಿತು.

ಮಹಿಳಾ ಸಬಲೀಕರಣ ಜಾರಿಗೊಳಿಸಿ: ಪ್ರಾಮಾಣಿಕ ಮುಖ್ಯ ಕಾರ್ಯದರ್ಶಿ (ಸಿಎಸ್‌) ನ್ಯಾಯಾಲಯದ ಮುಂದೆ ಇದ್ದಾರೆ ಎಂಬುದು ನಮಗೆ ಗೊತ್ತಿದೆ. ಆಕೆಯನ್ನು ಬಂಧ ಮುಕ್ತಗೊಳಿಸಿದರೆ ಅವರು ಅದ್ಭುತ ಸೃಷ್ಟಿಸಲಿದ್ದಾರೆ. ನೀವು (ಸಿಎಸ್‌) ಹೆಚ್ಚು ಚಿಂತಿಸಬೇಡಿ. ಈಚೆಗಷ್ಟೇ ನಾವು ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಿದ್ದೇವೆ. ಆ ಮಹಿಳಾ ಸಬಲೀಕರಣವನ್ನು ಜಾರಿಗೆ ತನ್ನಿ” ಎಂದು ಪೀಠವು ಮೌಖಿಕವಾಗಿ ಹೇಳಿತು.

Kannada Bar & Bench
kannada.barandbench.com