ಎಚ್‌ಡಿಕೆ ವಿರುದ್ಧದ ಭೂಹಗರಣ: ಹೊಂದಾಣಿಕೆ ರಾಜಕಾರಣಕ್ಕೆ ವಕೀಲರ ಆಕ್ಷೇಪ; ಸಮಗ್ರ ವರದಿ ಸಲ್ಲಿಸಲು ಹೈಕೋರ್ಟ್‌ ನಿರ್ದೇಶನ

“ನಿಮ್ಮ ಹಗರಣಗಳನ್ನು ನಾವು ತೆಗೆಯುವುದಿಲ್ಲ, ನಮ್ಮದನ್ನು ನೀವು ತೆಗೆಯಬೇಡಿ ಎಂಬ ಹೊಂದಾಣಿಕೆ ನಡೆಯುತ್ತಿದೆ. ಹೊಂದಾಣಿಕೆ ರಾಜಕಾರಣಕ್ಕೆ ತಾಜಾ ಉದಾಹರಣೆಯಾಗಿದೆ. ಯಾವ ಕಾರಣಕ್ಕಾಗಿ ಹೊಸದಾಗಿ ತನಿಖೆ ನಡೆಸಬೇಕು?” ಎಂದು ಪ್ರಶ್ನಿಸಿದ ಬಸವರಾಜು.
HD Kumaraswamy Karnataka HC
HD Kumaraswamy Karnataka HC
Published on

ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮಾಜಿ ಸಚಿವ ಡಿ ಸಿ ತಮ್ಮಣ್ಣ ಮತ್ತಿತರರು ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಅತಿಕ್ರಮಿಸಿದ್ದಾರೆ ಎಂದು ಆರೋಪಿಸಲಾದ ಭೂಮಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ 11 ಅಫಿಡವಿಟ್‌ಗಳನ್ನು ಆಧರಿಸಿ ಸಮಗ್ರ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಗುರುವಾರ ನಿರ್ದೇಶಿಸಿದೆ.

ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರು ಆದೇಶ ಮಾಡಿರುವುದನ್ನು ಜಾರಿ ಮಾಡುವಂತೆ ಹೈಕೋರ್ಟ್‌ ಆದೇಶಿಸಿತ್ತು. ಇದನ್ನು ಜಾರಿ ಮಾಡಲು ವಿಫಲವಾಗಿರುವ ರಾಜ್ಯ ಸರ್ಕಾರದ ನಡೆ ಪ್ರಶ್ನಿಸಿ ಎಸ್‌ ಆರ್‌ ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್‌ ಮತ್ತು ಕೆ ರಾಜೇಶ್‌ ರೈ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರು “ಸರ್ಕಾರದಿಂದ ಸೂಚನೆ ಪಡೆದಿದ್ದು, ನ್ಯಾಯಾಲಯ ಅನುಮತಿಸಿದರೆ ಹೊಸದಾಗಿ ತನಿಖೆ ನಡೆಸಲಾಗುವುದು. ತನಿಖೆಗಾಗಿ ನ್ಯಾಯಾಲಯ ಸೂಚಿಸಿದವರನ್ನೇ ನೇಮಕ ಮಾಡಲಾಗುವುದು. ಇದರ ಮೇಲೆ ನ್ಯಾಯಾಲಯ ನಿಗಾ ಇಡಬಹುದು” ಎಂದರು.

ಇದಕ್ಕೆ ತೀವ್ರ ಆಕ್ಷೇಪಿಸಿದ ಸಮಾಜ ಪರಿವರ್ತನಾ ಸಮುದಾಯ ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್‌ ಬಸವರಾಜು ಅವರು “ರಾಮನಗರ ಜಿಲ್ಲೆಯ ಹಿಂದಿನ ಮೂವರು ಜಿಲ್ಲಾಧಿಕಾರಿಗಳು ನ್ಯಾಯಾಲಯದ ನಿರ್ದೇಶನದಂತೆ ಪ್ರಾಮಾಣಿಕವಾಗಿ ತನಿಖೆ ನಡೆಸಿದ್ದಾರೆ. ಇದನ್ನು ಅನುಷ್ಠಾನಗೊಳಿಸಲು ಆನಂತರ ಬಂದ ಸರ್ಕಾರಗಳು ಮನಸ್ಸು ಮಾಡಿಲ್ಲ. ಇಲ್ಲಿ ನಿಮ್ಮ ಹಗರಣಗಳನ್ನು ನಾವು ತೆಗೆಯುವುದಿಲ್ಲ, ನಮ್ಮದನ್ನು ನೀವು ತೆಗೆಯಬೇಡಿ ಎಂಬ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ" ಎಂದು ಆಕ್ಷೇಪಿಸಿದರು.

ಮುಂದುವರೆದು, "ಈ ಪ್ರಕರಣ ಹೊಂದಾಣಿಕೆ ರಾಜಕಾರಣಕ್ಕೆ ತಾಜಾ ಉದಾಹರಣೆಯಾಗಿದೆ. ಯಾವ ಕಾರಣಕ್ಕಾಗಿ ಹೊಸದಾಗಿ ತನಿಖೆ ನಡೆಸಬೇಕು? ಒಂದೊಮ್ಮೆ ನ್ಯಾಯಾಲಯಕ್ಕೆ ಆದೇಶ ಅನುಪಾಲನೆಯಾಗಿದೆ ಎನಿಸಿದರೆ ನ್ಯಾಯಾಂಗ ನಿಂದನೆ ಪ್ರಕರಣವನ್ನು ಮುಕ್ತಾಯಗೊಳಿಸಬಹುದು. 15-20 ಬಾರಿ ವಿಚಾರಣೆಯಲ್ಲಿ ಭಾಗಿಯಾಗಿದ್ದೇನೆ. ಯಾವುದೇ ಬೆಳವಣಿಗೆಯಾಗಿಲ್ಲ. ಈ ಪ್ರಕರಣದ ಸಂಬಂಧ ನ್ಯಾ. ವೀರಪ್ಪ ಅವರಿಂದ ಹಿಡಿದು ಹಲವು ಪೀಠಗಳು ಬದಲಾಗಿವೆ. ಮೂವರು ಅಡ್ವೊಕೇಟ್‌ ಜನರಲ್‌ ಬಂದು ಹೋಗಿದ್ದಾರೆ. ನಮ್ಮ ವೈಯಕ್ತಿಕ ಹಿತಾಸಕ್ತಿ ಈ ಪ್ರಕರಣದಲ್ಲಿ ಏನೂ ಇಲ್ಲ. ಈ ಪ್ರಕರಣದಲ್ಲಿ ದೈನಂದಿನ ಆದೇಶಗಳನ್ನೇ ಇಟ್ಟುಕೊಂಡು ಒಂದು ಬುಕ್‌ಲೆಟ್‌ ಮಾಡಬಹುದು” ಎಂದು ಬೇಸರ ವ್ಯಕ್ತಪಡಿಸಿದರು.

ಈ ಹಂತದಲ್ಲಿ ವಿಚಾರಣೆಗೆ ಹಾಜರಾದ ಅಡ್ವೊಕೇಟ್‌ ಜನರಲ್‌ ಅವರು “ಇದುವರೆಗೆ ರಾಜ್ಯ ಸರ್ಕಾರದಿಂದ 11 ಅಫಿಡವಿಟ್‌ ಸಲ್ಲಿಕೆಯಾಗಿವೆ. ಅವುಗಳನ್ನು ಅಧ್ಯಯನ ಮಾಡಿ ಹೊಸದಾಗಿ ಸಮಗ್ರವಾದ ವರದಿಯೊಂದನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಅದಕ್ಕಾಗಿ ಮೂರು ವಾರ ಕಾಲಾವಕಾಶ ನೀಡಬೇಕು. ಹೊಸದಾಗಿ ತನಿಖೆ ನಡೆಸುತ್ತೇವೆ ಎಂಬುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರುವುದನ್ನು ಕೇಳುತ್ತಿರುವುದು ಇದೇ ಮೊದಲು” ಎಂದು ಬಸವರಾಜು ಅವರನ್ನು ಕುರಿತು ಹೇಳಿದರು.

Also Read
ಎಚ್‌ಡಿಕೆ ವಿರುದ್ಧದ ಭೂಹಗರಣ: ಹೈಕೋರ್ಟ್‌ ಆದೇಶ ಹೇಗೆ ಪಾಲಿಸಲಾಗಿದೆ ಎಂದು ವಿವರಿಸಲು ಪ್ರಧಾನ ಕಾರ್ಯದರ್ಶಿಗೆ ಸೂಚನೆ

ಇದರಿಂದ ಮತ್ತಷ್ಟು ಕೆರಳಿದ ಬಸವರಾಜು ಅವರು ಸರ್ಕಾರಿ ಭೂಮಿ ಮತ್ತು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಕಪ್ಪತಗುಡ್ಡ ಮತ್ತು ಹಂಪಿಯಲ್ಲಿ ಸಾಕಷ್ಟು ಹೋರಾಟ ಮಾಡಿದ್ದೇನೆ. ಇದರಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿ ಇರಲಿಲ್ಲ. ಅಧಿಕಾರಿಗಳು ಪ್ರಾಮಾಣಿಕವಾಗಿ ತನಿಖೆ ಮಾಡಿರುವ ವರದಿಯನ್ನು ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ. ಇದರ ಹಿಂದೆ ಇರುವುದು ಹೊಂದಾಣಿಕೆಯ ರಾಜಕಾರಣವಲ್ಲದೆ ಬೇರೇನು ಎಂದು ಆಕ್ರೋಶ ಭರಿತವಾಗಿ ನುಡಿದರು.

ವಾದಗಳನ್ನು ಆಲಿಸಿದ ಪೀಠವು ಹೊಸದಾಗಿ ತನಿಖೆಗೆ ನಿರಾಕರಿಸಿತು. ಸಮಗ್ರ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ನವೆಂಬರ್‌ 20ಕ್ಕೆ ಮುಂದೂಡಿತು. ತಪ್ಪಿದ್ದಲ್ಲಿ ಪ್ರತಿವಾದಿ/ಆರೋಪಿಗಳಾಗಿರುವ ಅಧಿಕಾರಿಗಳನ್ನು ನ್ಯಾಯಾಲಯದ ಮುಂದೆ ಹಾಜರಾಗಲು ಅಡ್ವೊಕೇಟ್‌ ಜನರಲ್‌ ಸೂಚಿಸಬೇಕು ಎಂದು ಆದೇಶಿಸಿತು.

Kannada Bar & Bench
kannada.barandbench.com