[ಎಚ್‌ಡಿಕೆ ವಿರುದ್ಧದ ಭೂಹಗರಣ] ಅಧಿಕಾರಶಾಹಿಯನ್ನು ಎಲ್ಲಿಗೆ ಕಳುಹಿಸಬೇಕೋ ಅಲ್ಲಿಗೆ ಕಳುಹಿಸುತ್ತೇವೆ: ಹೈಕೋರ್ಟ್‌ ಕಿಡಿ

ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಲಾಗಿದೆ ಎಂಬುದಕ್ಕೆ ಸಿಡಿಮಿಡಿಗೊಂಡ ಪೀಠವು “ಯಾವುದಾದರೂ ವಿಷಯಕ್ಕೆ ಎಸ್ಐಟಿ ರಚಿಸುವುದು ಸರ್ಕಾರಕ್ಕೆ ರೂಢಿಯಾಗಿಬಿಟ್ಟಿದೆ” ಎಂದು ಚಾಟಿ ಬೀಸಿತು.
[ಎಚ್‌ಡಿಕೆ ವಿರುದ್ಧದ ಭೂಹಗರಣ] ಅಧಿಕಾರಶಾಹಿಯನ್ನು ಎಲ್ಲಿಗೆ ಕಳುಹಿಸಬೇಕೋ ಅಲ್ಲಿಗೆ ಕಳುಹಿಸುತ್ತೇವೆ: ಹೈಕೋರ್ಟ್‌ ಕಿಡಿ
Published on

“ಪ್ರತಿವಾದಿಗಳು ಪ್ರಭಾವಿಗಳು (ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ, ಮಾಜಿ ಸಚಿವ ಡಿ ಸಿ ತಮ್ಮಣ್ಣ ಮುಂತಾದವರು) ಎಂದು ನೀವು ಐದು ವರ್ಷ ಏನೂ ಮಾಡಿಲ್ಲ ತಾನೆ? ನಿಮಗೆ ಇನ್ನೆರಡು ವಾರ ಸಮಯ ಕೊಡುತ್ತೇನೆ. ನೀವು ಅಸಮರ್ಥರು ಎಂದಾದರೆ ನಿಮ್ಮನ್ನು ಎಲ್ಲಿಗೆ ಕಳಿಸಬೇಕೊ ಅಲ್ಲಿಗೆ ಕಳಿಸುತ್ತೇನೆ. ಹದಿನೈದು ದಿನ ಜೈಲಿನಲ್ಲಿ ಇದ್ದು ಬಂದರೆ ಸರಿಹೋಗ್ತೀರಿ..” ಹೀಗೆ ಕರ್ನಾಟಕ ಹೈಕೋರ್ಟ್‌ ಮೌಖಿಕವಾಗಿ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ವಿರುದ್ಧ .

ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿ ಸರ್ಕಾರಿ ಭೂಮಿ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರು ಆದೇಶ ಮಾಡಿರುವುದನ್ನು ಜಾರಿ ಮಾಡುವಂತೆ ಹೈಕೋರ್ಟ್‌ ಆದೇಶಿಸಿತ್ತು. ಇದನ್ನು ಜಾರಿ ಮಾಡಲು ವಿಫಲವಾಗಿರುವ ರಾಜ್ಯ ಸರ್ಕಾರದ ನಡೆ ಪ್ರಶ್ನಿಸಿ ಎಸ್‌ ಆರ್‌ ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್‌ ಮತ್ತು ಟಿ ವೆಂಕಟೇಶ್‌ ನಾಯ್ಕ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಜನವರಿ 7ರಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಖುದ್ದು ನ್ಯಾಯಾಲಯದ ಮುಂದ ಬರಬೇಕು ಎಂದು ಆದೇಶಿಸಿದ್ದ ಹಿನ್ನೆಲೆಯಲ್ಲಿ ರಾಜೇಂದ್ರ ಕುಮಾರ್‌ ಕಠಾರಿಯಾ ಅವರು ಪೀಠದ ಮುಂದೆ ಹಾಜರಾಗಿ, ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಪೀಠಕ್ಕೆ ವಿವರಿಸಲು ಮುಂದಾದರು.

ಆಗ ನ್ಯಾಯಮೂರ್ತಿ ಸೋಮಶೇಖರ್‌ ಅವರು “ಕೆ ವಾಸುದೇವನ್‌ ವರ್ಸಸ್‌ ಟಿ ಆರ್‌ ಧನಂಜಯ ಅವರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಾಂಗ ನಿಂದನೆ ಮೊಕದ್ದಮೆಗಳಲ್ಲಿ ಅದೂ ಸಾರ್ವಜನಿಕ ಕಾಳಜಿಯುಳ್ಳ ಪ್ರಕರಣಗಳಲ್ಲಿ ಆಡಳಿತಾಂಗಕ್ಕೆ ಕಿಂಚಿತ್ತೂ ಕರುಣೆ ತೋರಬಾರದು ಎಂದಿದೆ. ಇದನ್ನೇ ನಾನೂ ಅನುಸರಿಸಬೇಕಾಗುತ್ತದೆ” ಎಂದು ಗುಡುಗಿದರು.

“ನಿಮ್ಮ ವಿರುದ್ಧ ಈಗಲೇ ನ್ಯಾಯಾಂಗ ನಿಂದನೆಯ ದೋಷಾರೋಪ ನಿಗದಿಗೊಳಿಸುವ ಪ್ರಕ್ರಿಯೆ ಆರಂಭಿಸುತ್ತೇನೆ. ನೀವು ನೆಪ ಹೇಳಿ ತಪ್ಪಿಸಿಕೊಳ್ಳಲು ಅವಕಾಶವೇ ಇಲ್ಲ. ವ್ಯವಸ್ಥೆ ನೋಡಿ ಜನ ನಗ್ತಾ ಇದ್ದಾರೆ ಗೊತ್ತಾ? ನೀವೆಲ್ಲಾ ನ್ಯಾಯಾಲಯದ ಆದೇಶಗಳನ್ನು ಪಾಲನೆ ಮಾಡುವ ತನಕ ನಿಮ್ಮ ಸಂಬಳ ತಡೆಹಿಡಿದರೆ ಗೊತ್ತಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಾಲಯಕ್ಕೆ ಉತ್ತರಿಸಲು ಮುಂದಾದ ಕಠಾರಿಯಾ ಅವರು “ವ್ಯವಸ್ಥೆ ತುಂಬಾ ಕೆಟ್ಟಾದಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಸರ್. ಆದರೂ, ಸರ್ಕಾರ ತನ್ನೆಲ್ಲಾ ಪ್ರಯತ್ನ ಮಾಡುತ್ತಿದೆ. ನಾವು 14 ಎಕರೆಗೂ ಹೆಚ್ಚು ಅಕ್ರಮಿತ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆದಿದ್ದೇವೆ. ಸಮಗ್ರ ಮತ್ತು ನಿಷ್ಪಕ್ಷಪಾತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಎಸ್‌ಐಟಿ ರಚನೆ ಮಾಡಿದ್ದೇವೆ. ಭ್ರಷ್ಟಾಚಾರ ನಿರ್ಮೂಲನೆಗೆ ಶ್ರಮಿಸುತ್ತಿದ್ದೇವೆ” ಎಂದು ಸಮಜಾಯಿಷಿ ನೀಡಿದರು.

ಇದಕ್ಕೆ ಧ್ವನಿಗೂಡಿಸಿದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಕಿರಣ್‌ ವಿ.ರೋಣ ಅವರು, “ಕಠಾರಿಯಾ ಅವರು ಕಂದಾಯ ಇಲಾಖೆಯ ಸುಧಾರಣೆಗೆ ಇ–ಖಾತಾ ವ್ಯವಸ್ಥೆ ರೂಪಿಸಿದ್ದಾರೆ” ಎಂದರು. ಆಗ ನ್ಯಾ. ಸೋಮಶೇಖರ್ “ಇ–ಖಾತಾ ಎಂಬುದೇ ಭ್ರಷ್ಟಾಚಾರದ ಆಗರ. ನಮ್ಮಲ್ಲಿ ಮಾನಸಿಕ ಭ್ರಷ್ಟಾಚಾರ, ಪೂರ್ವಗ್ರಹಪೀಡಿತ ಭಾವನೆಯ ಭ್ರಷ್ಟಾಚಾರ, ಹಣದ ಭ್ರಷ್ಟಾಚಾರ ಎಂಬೆಲ್ಲಾ ಶ್ರೇಣೀಕೃತ ವ್ಯವಸ್ಥೆ ಇದೆ. ಮೊದಲು ಪೂರ್ವಗ್ರಹಪೀಡಿತ ಭಾವನೆಯ ಭ್ರಷ್ಟತೆ ಪರಿಧಿಯಿಂದ ಹೊರಬನ್ನಿ” ಎಂದರು.

ಈ ನಡುವೆ ಕಿರಣ್‌ ರೋಣ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡಿರುವ ಕ್ರಮ ಮತ್ತು ಈತನಕ ಹೈಕೋರ್ಟ್‌ಗೆ ಸಲ್ಲಿಸಿರುವ ಅನುಪಾಲನಾ ಅಫಿಡವಿಟ್‌ಗಳ ಕುರಿತು ವಿವರಿಸಲು ಮುಂದಾದರು. “ಹೈಕೋರ್ಟ್‌ ಆದೇಶದ ಅನುಪಾಲನೆಗೆ ಮೂರು ತಿಂಗಳಾದರೂ ಕಾಲಾವಕಾಶ ನೀಡಬೇಕು” ಎಂದು ಕೋರಿದರು. ಆದರೆ, ನ್ಯಾಯಮೂರ್ತಿ ಸೋಮಶೇಖರ್‌ ಅವರು ರೋಣ ಅವರ ಮನವಿಯನ್ನು ಸಾರಾಸಗಟಾಗಿ ಆಕ್ರೋಶದಿಂದ ತಳ್ಳಿ ಹಾಕಿದರು.

Also Read
ಎಚ್‌ಡಿಕೆ ವಿರುದ್ಧದ ಭೂಹಗರಣ: ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಿಗೆ ನಿರ್ದೇಶಿಸಿದ ಹೈಕೋರ್ಟ್‌

“ಇನ್ನೆರಡು ವಾರಗಳ ಕಾಲಾವಕಾಶ ನೀಡುತ್ತೇನೆ. ಅಷ್ಟರೊಳಗೆ ಆದೇಶ ಪಾಲಿಸಿದರೆ ಸರಿ. ಇಲ್ಲಾಂದ್ರೆ, ಎಲ್ಲ ಪ್ರತಿವಾದಿಗಳನ್ನೂ ಬೆಂಗಾವಲಿನಲ್ಲಿ ಕರೆಯಿಸಿಬಿಡುತ್ತೇನೆ. ಅಧಿಕಾರಿಗಳನ್ನು ಎಲ್ಲಿಗೆ ಕಳುಹಿಸಬೇಕೊ ಅಲ್ಲಿಗೆ ಕಳುಹಿಸುತ್ತೇನೆ” ಎಂದು ಅಬ್ಬರಿಸಿದರು. ಅಲ್ಲದೆ, “ಯಾವುದಾದರೂ ವಿಷಯಕ್ಕೆ ಎಸ್ಐಟಿ ರಚಿಸುವುದು ಸರ್ಕಾರಕ್ಕೆ ರೂಢಿಯಾಗಿಬಿಟ್ಟಿದೆ” ಎಂದು ಚಾಟಿ ಬೀಸಿದರು.

ಅರ್ಜಿದಾರರ ಪರ ಹಿರಿಯ ವಕೀಲ ಎಸ್‌ ಬಸವರಾಜು ಅವರು “ಕೇತಗಾನಹಳ್ಳಿ ವ್ಯಾಪ್ತಿಯಲ್ಲಿನ ಸರ್ಕಾರಿ ಜಮೀನನ್ನು ಎಚ್‌ ಡಿ ಕುಮಾರಸ್ವಾಮಿ ಮತ್ತಿತರರು ಒತ್ತುವರಿ ಮಾಡಿರುವುದನ್ನು ತಹಶೀಲ್ದಾರ್ ಮತ್ತು ಸಂಬಂಧಿಸಿದ ಕಂದಾಯ ಅಧಿಕಾರಿಗಳು ಗುರುತಿಸಿದ್ದಾರೆ. ಅಂತೆಯೇ, ಲೋಕಾಯುಕ್ತ ನೀಡಿರುವ ಆದೇಶವನ್ನು ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿಲ್ಲ” ಎಂದು ಪುನರುಚ್ಚರಿಸಿದರು. ಅಂತಿಮವಾಗಿ ಸರ್ಕಾರಕ್ಕೆ ಎರಡು ವಾರ ಕಾಲಾವಕಾಶ ನೀಡಿದ ನ್ಯಾಯಾಲಯವು ವಿಚಾರಣೆಯನ್ನು ಫೆಬ್ರುವರಿ 21ಕ್ಕೆ ಮುಂದೂಡಿತು.

Kannada Bar & Bench
kannada.barandbench.com