ಭೂಕಬಳಿಕೆ ಆರೋಪವೊಂದರ ಕುರಿತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹಾಗೂ ಶಾಸಕ ಆರ್ ಶಂಕರ್ ವಿರುದ್ಧ ದಾಖಲಾಗಿದ್ದ ಖಾಸಗಿ ದೂರಿಗೆ ಸಂಬಂಧಿಸಿದಂತೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಮಂಗಳವಾರ ಕರ್ನಾಟಕ ಹೈಕೋರ್ಟ್ ಫೆಬ್ರವರಿ ಎರಡನೇ ವಾರದವರೆಗೆ ವಿಸ್ತರಿಸಿದೆ.
ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿ, ಸಮನ್ಸ್ ಜಾರಿಗೊಳಿಸಿದ್ದ 42ನೇ ಎಸಿಎಂಎಂ ಕೋರ್ಟ್ ಆದೇಶ ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ ಆರ್ ಪುರ ಪೊಲೀಸರು ಸಲ್ಲಿಸಿದ ಬಿ ರಿಪೋರ್ಟ್ ತಿರಸ್ಕರಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ರದ್ದು ಕೋರಿ ಬೈರತಿ ಬಸವರಾಜ್ ಹಾಗೂ ಆರ್ ಶಂಕರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ವಾದ ಮತ್ತು ಪ್ರತಿವಾದ ಆಲಿಸಿದ ಪೀಠವು ವಿಚಾರಣೆಯನ್ನು ಫೆಬ್ರವರಿ ಎರಡನೇ ವಾರಕ್ಕೆ ಮುಂದೂಡಿತು. ಜತೆಗೆ, ಅರ್ಜಿದಾರರ ವಿರುದ್ಧದ ಎಸಿಎಂಎಂ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗೆ ತಡೆ ನೀಡಿ 2021ರ ಡಿಸೆಂಬರ್ 21ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಮುಂದಿನ ವಿಚಾರಣೆವರೆಗೆ ವಿಸ್ತರಿಸಿತು.
ಬೆಂಗಳೂರು ಪೂರ್ವ ತಾಲೂಕಿನ ಕೆ ಆರ್ ಪುರ ಹೋಬಳಿಯ ಕಲ್ಕೆರೆ ಗ್ರಾಮದ ಸರ್ವೇ ಸಂಖ್ಯೆ 375/2ರಲ್ಲಿ 22.43 ಎಕರೆ ಜಮೀನು ನನ್ನ ತಂದೆ ಅದೂರ್ ಅಣ್ಣಯ್ಯಪ್ಪ ಅವರಿಗೆ ಸೇರಿದೆ. ಆ ಜಾಗವನ್ನು ಎ ಎಂ ಮಾದಪ್ಪ ಮತ್ತು ಪಿಳ್ಳಮಾದಪ್ಪ ಎಂಬುವರು ಖಾಲಿ ಕಾಗದಗಳ ಮೇಲೆ ತಂದೆಯ ಸಹಿ ಮತ್ತು ಹೆಬ್ಬೆಟ್ಟು ಪಡೆದುಕೊಂಡು, ಪಾಲುದಾರಿಕೆ ಕರಾರು ಸಿದ್ಧಪಡಿಸಿಕೊಂಡು ಬೈರತಿ ಬಸವರಾಜ್ ಅವರಿಗೆ 2003ರ ಮೇ 21ರಂದು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಅದೂರ್ ಅಣ್ಣಯ್ಯಪ್ಪ ಪುತ್ರ ಎ.ಮಾದಪ್ಪ ಖಾಸಗಿ ದೂರು ದಾಖಲಿಸಿದ್ದರು.
ದೂರಿನ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೆ ಆರ್ ಪುರ ಪೊಲೀಸರಿಗೆ 2018ರ ಡಿಸೆಂಬರ್ 13ರಂದು ಎಸಿಎಂಎಂ ಕೋರ್ಟ್ ಆದೇಶಿಸಿತ್ತು.
ಎಸಿಎಂಎಂ ಕೋರ್ಟ್ ನಿರ್ದೇಶನದಂತೆ ತನಿಖೆ ನಡೆಸಿದ್ದ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಈ ಮಧ್ಯೆ ಪ್ರಕರಣ 82ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ವಿಶೇಷ ನ್ಯಾಯಾಲಯಕ್ಕೆ (ಜನಪ್ರತಿನಿಧಿಗಳ ನ್ಯಾಯಾಲಯ) ವರ್ಗಾವಣೆಯಗಿತ್ತು. ವಿಶೇಷ ನ್ಯಾಯಾಲಯ 2021ರ ಸೆಪ್ಟೆಂಬರ್ 9ರಂದು ಬಿ ರಿಪೋರ್ಟ್ ತಿರಸ್ಕರಿಸಿತ್ತು. ನಂತರ ಪ್ರಕರಣ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು. ಈ ನ್ಯಾಯಾಲಯವು ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿ 2021ರ ನವೆಂಬರ್ 25ರಂದು ಬೈರತಿ ಬಸವರಾಜ್, ಆರ್ ಶಂಕರ್, ಮಾದಪ್ಪ ಮತ್ತು ಪಿಳ್ಳಮಾದಪ್ಪ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಇದರಿಂದ, ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು