ವಿಚಾರಣೆಯ ಲಿಪ್ಯಂತರಗಳು ತಂದ ಪಾರದರ್ಶಕತೆಯಿಂದಾಗಿ ಸುಪ್ರೀಂ ಕೋರ್ಟ್ ನ್ಯಾಯಿಕತೆಯ ಗುಣಮಟ್ಟ ಹೆಚ್ಚಿದ್ದು ನ್ಯಾಯಾಂಗವನ್ನು ಹೆಚ್ಚು ಜವಾಬ್ದಾರಿಯುತವಾಗಿಸಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಹೇಳಿದ್ದಾರೆ.
ಚಂಡೀಗಢ ನ್ಯಾಯಾಂಗ ಅಕಾಡೆಮಿ ಶನಿವಾರ ಆಯೋಜಿಸಿದ್ದ ʼಭಾರತೀಯ ನ್ಯಾಯಾಲಯಗಳಲ್ಲಿ ತಂತ್ರಜ್ಞಾನದ ಸ್ಥಿತಿಗತಿʼ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ - ಎಐ) ಬಳಸಿ ರಚಿಸಲಾದ ಇಂತಹ ಲಿಪ್ಯಂತರಗಳು ಅಮೂಲ್ಯವಾದ ಸಂಪನ್ಮೂಲಗಳಾಗಿದ್ದು ವಕೀಲರು, ಸಂಶೋಧಕರು ಮತ್ತು ಶಿಕ್ಷಣತಜ್ಞರಿಗೆ ದೃಷ್ಟಿಕೋನಗಳಿಗೆ ಮೂಲವಾಗಿದೆ ಎಂದು ಸಿಜೆಐ ಹೇಳಿದರು.
ಭಾರತದಂತೆಯೇ ಭಾಷಾ ವೈವಿಧ್ಯತೆಯನ್ನು ಹೊಂದಿರುವ ದೇಶಗಳಲ್ಲಿ, ಜನ ನ್ಯಾಯಾಂಗದೊಂದಿಗೆ ಅದರಲ್ಲಿಯೂ ಇಂಗ್ಲಿಷ್ ಬಳಸುವ ಉನ್ನತ ನ್ಯಾಯಾಲಯಗಳೊಂದಿಗೆ ತೊಡಗಿಸಿಕೊಳ್ಳಲು ಭಾಷೆಯು ದೊಡ್ಡ ಕಂದರವಾಗಿದೆ ಎಂದು ಸಿಜೆಐ ಹೇಳಿದರು.
ಪ್ರಜಾಪ್ರಭುತ್ವ ನಿಜವಾಗಿಯೂ ಪ್ರವರ್ಧಮಾನಕ್ಕೆ ಬರಲು, ಎಲ್ಲಾ ನಾಗರಿಕರು ರಾಷ್ಟ್ರೀಯ ಸಂಸ್ಥೆಗಳೊಂದಿಗೆ ನೈಜ ಸಂಪರ್ಕ ಹೊಂದಿರಬೇಕಿದ್ದು ಇದರಲ್ಲಿ ನ್ಯಾಯಾಂಗ ಪ್ರಮುಖ ಪಾತ್ರ ವಹಿಸಬೇಕಿದ್ದು ನ್ಯಾಯಾಂಗಕ್ಕೆ ನೆರವಾಗಲು ಎಐ ಗುರುತರ ಹೆಜ್ಜೆ ಇರಿಸಲಿದೆ ಎಂದು ಅವರು ನುಡಿದರು.
ತಂತ್ರಜ್ಞಾನ ಎಂಬುದು ಅಲಂಕಾರಿಕ ವಿಷಯವಾಗಿರದೆ ಪಾರದರ್ಶಕತೆ ಮತ್ತು ಸಮಾನತೆಯ ಮೌಲ್ಯಗಳಿಗೆ ಸಂಬಂಧಿಸಿದ್ದಾಗಿದೆ ಎಂದು ಸಿಜೆಐ ಹೇಳಿದರು. 'ಗೌಪ್ಯತೆಯು ಅಸ್ಪಷ್ಟವಾಗಿರುತ್ತದೆ, ಅದೇ ಮುಕ್ತತೆಯು ಪ್ರಕಾಶಮಾನವಾಗಿರುತ್ತದೆ' ಎಂದು ಪಾರದರ್ಶಕತೆಯ ಅಗತ್ಯತೆಯ ಕುರಿತು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಈಗ ರೂಢಿಗತವಾಗಿರುವ ವರ್ಚುವಲ್ ವಿಚಾರಣೆಗಳು ನ್ಯಾಯಾಂಗದ ಎಲ್ಲಾ ಭಾಗೀದಾರರ ಪಾಲಿಗೆ ಪಾರದರ್ಶಕತೆ ವರ್ಧಿಸುವಂತೆ ಮಾಡುತ್ತಿದ್ದು ದಾವೆದಾರರು ದೇಶದ ಎಲ್ಲಾ ನ್ಯಾಯಾಲಯಗಳಲ್ಲಿ ಹಾಜರಾಗಲು ಸಾಧ್ಯವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಅಲ್ಲದೆ ಪ್ರತಿ ನ್ಯಾಯಾಲಯಗಳು ಇ ಸೇವಾ ಕೇಂದ್ರಗಳನ್ನು ಹೊಂದಿರಬೇಕು ಎಂದ ಅವರು ಕೃತಕ ಬುದ್ಧಿಮತ್ತೆ ಎಂಬುದು ನ್ಯಾಯಾಲಯಗಳ ಸೃಜನಶೀಲ ಪ್ರಕ್ರಿಯೆಗಳ ಮೇಲೆ ಸವಾರಿ ಮಾಡಬಾರದು, ಏಕೆಂದರೆ ಅದು ಮಾನವಿಕವಾಗಿ ಅಂತರ್ಗತವಾದುದು ಎಂದು ಕೂಡ ಎಚ್ಚರಿಸಿದರು.
ಇದೇ ವೇಳೆ ಮಾತನಾಡಿದ ನ್ಯಾಯಮೂರ್ತಿ ಸೂರ್ಯ ಕಾಂತ್ ನ್ಯಾಯವ್ಯವಸ್ಥೆ ಮತ್ತು ಎಲೆಕ್ಟ್ರಾನಿಕ್ ದಾಖಲಾತಿಯನ್ನು ವೇಗಗೊಳಿಸಲು ತಂತ್ರಜ್ಞಾನ ಸಹಾಯ ಮಾಡುತ್ತದೆ ಎಂದರು.