ಮುಸ್ಲಿಮರು ಕಡಿಮೆ ಇರುವ ಪ್ರದೇಶಗಳಲ್ಲಿಯೂ ಉರ್ದುವನ್ನು ಒಂದು ಭಾಷೆಯಾಗಿ ಕಲಿಸಬಹುದಾಗಿದ್ದು ಅಂತಹ ಪ್ರದೇಶಗಳಲ್ಲಿ ಮುಸ್ಲಿಮರ ಸಂಖ್ಯೆ ಕಡಿಮೆ ಇರುವ ಮಾತ್ರಕ್ಕೆ ಉರ್ದು ಶಿಕ್ಷಕರ ಸೇವೆ ಸ್ಥಗಿತಗೊಳಿಸಲು ಸರ್ಕಾರ ಮುಕ್ತವಾಗಿರುವುದಿಲ್ಲ ಎಂದು ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.
ಯಾವುದೇ ನಿರ್ದಿಷ್ಟ ಭಾಷೆಯನ್ನು ಯಾವುದೇ ನಿರ್ದಿಷ್ಟ ಧರ್ಮದೊಂದಿಗೆ ತಳಕು ಹಾಕಲು ಮೇಲ್ನೋಟದ ದೃಷ್ಟಿಯಲ್ಲಿ ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಅಶ್ವನಿ ಕುಮಾರ್ ಮಿಶ್ರಾ ಅವರಿದ್ದ ಏಕ ಸದಸ್ಯ ಪೀಠ ತಿಳಿಸಿತು.
“ಯಾವುದೇ ನಿರ್ದಿಷ್ಟ ಭಾಷೆಯನ್ನು ಯಾವುದೇ ನಿರ್ದಿಷ್ಟ ಧರ್ಮದೊಂದಿಗೆ ತಳಕು ಹಾಕಲು ಸಾಧ್ಯವಿಲ್ಲ. ಮುಸ್ಲಿಮರು ಕಡಿಮೆ ಇರುವ ಪ್ರದೇಶಗಳಲ್ಲೂ ಉರ್ದುವನ್ನು ಕಲಿಸಬಹುದು. ಜಾತ್ಯತೀತ ದೇಶವೊಂದರಲ್ಲಿ ಮುಸ್ಲಿಂ ಜನಸಂಖ್ಯೆ ಕಡಿಮೆ ಇರುವ ಕಾರಣಕ್ಕೆ ಉರ್ದು ಶಿಕ್ಷಕರ ಸೇವೆ ಸ್ಥಗಿತಗೊಳಿಸುವ ನೀತಿ ರೂಪಿಸಲು ಸಾಧ್ಯವಾಗದು” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರದೇಶವೊಂದರಲ್ಲಿ ಮುಸ್ಲಿಂ ಜನಸಂಖ್ಯೆ ಶೇ 20ಕ್ಕಿಂತ ಕಡಿಮೆ ಇರುವುದರಿಂದ ತನ್ನ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಉರ್ದು ಶಿಕ್ಷಕರೊಬ್ಬರು ನ್ಯಾಯಾಲಯದಲ್ಲಿ ಅಳಲುತೋಡಿಕೊಂಡಿದ್ದರು.
ಅರ್ಜಿ ಆಲಿಸಿದ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದ್ದು “ಮೇಲಿನ ಅವಲೋಕನಗಳ ಹಿನ್ನೆಲೆಯಲ್ಲಿ ಸರ್ಕಾರದ ನೀತಿ ಏನು ಎಂಬುದನ್ನು ನೀತಿಯನ್ನು ಮೂಲ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಲ್ಲಿಸಬೇಕು” ಎಂದು ತಿಳಿಸಿದೆ. ಆಗಸ್ಟ್ 16ಕ್ಕೆ ಪ್ರಕರಣದ ವಿಚಾರಣೆ ನಿಗದಿಯಾಗಿದೆ.