Twitter
Twitter

ಸುಳ್ಳು ಸುದ್ದಿ, ದ್ವೇಷ ಭಾಷೆ ನಿಗ್ರಹಿಸಲು ತಾಣದ ನೀತಿ, ಕಾನೂನು ಚೌಕಟ್ಟು ಸಾಕೆಂದು ಹೈಕೋರ್ಟ್‌ಗೆ ತಿಳಿಸಿದ ಟ್ವಿಟರ್

ಆನ್‌ಲೈನ್‌ನಲ್ಲಿನ ದ್ವೇಷ ಭಾಷೆ ಮತ್ತು ಸುಳ್ಳು ಸುದ್ದಿ ತೆಗೆಯಲು ಕೋರಿದ್ದ ಅರ್ಜಿಗೆ ಟ್ವಿಟರ್ ಇಂಕ್ ಸಲ್ಲಿಸಿರುವ ಪ್ರತಿ ಅಫಿಡವಿಟ್ ನಲ್ಲಿ ಹೀಗೆ ಹೇಳಲಾಗಿದೆ.

ಸುಳ್ಳು ಸುದ್ದಿ ಮತ್ತು ದ್ವೇಷ ಭಾಷೆ ಆತಂಕಗಳನ್ನು ಪರಿಹರಿಸಲು ತನ್ನ ನೀತಿ ಹಾಗೂ ಈಗಾಗಲೇ ಅಸ್ತಿತ್ವದಲ್ಲಿರುವ ಕಾನೂನು ಚೌಕಟ್ಟು ಸಾಕು ಎಂದು ದೆಹಲಿ ಹೈಕೋರ್ಟ್‌ಗೆ ಟ್ವಿಟರ್ ಇಂಕ್ ತಿಳಿಸಿದೆ (ಕೆ ಎನ್ ಗೋವಿಂದಾಚಾರ್ಯ ವರ್ಸಸ್ ಭಾರತ ಸರ್ಕಾರ ಮತ್ತು ಇತರರು).

ಆನ್‌ಲೈನ್‌ನಲ್ಲಿನ ದ್ವೇಷ ಭಾಷೆ ಮತ್ತು ಸುಳ್ಳು ಸುದ್ದಿ ತೆಗೆಯಲು ಕೋರಿದ್ದ ಅರ್ಜಿಗೆ ಟ್ವಿಟರ್ ಇಂಕ್ ಸಲ್ಲಿಸಿರುವ ಪ್ರತಿ ಅಫಿಡವಿಟ್‌ನಲ್ಲಿ ಈ ಹೇಳಿಕೆ ಉಲ್ಲೇಖಿಸಲಾಗಿದೆ. ಕೆ ಎನ್ ಗೋಂವಿದಾಚಾರ್ಯ ಸಲ್ಲಿಸಿರುವ ಮನವಿಯಲ್ಲಿ ಸುಳ್ಳು ಸುದ್ದಿ ಮತ್ತು ದ್ವೇಷ ಭಾಷೆ ತಡೆಯಲು ಮನವಿ ಮಾಡಲಾಗಿದ್ದು, ಇದನ್ನು ತಡೆಯಲು ಸಾಮಾಜಿಕ ಮಾಧ್ಯಮ ಕಂಪೆನಿಗಳು ಗೊತ್ತುಪಡಿಸಿರುವ ಅಧಿಕಾರಿಯ ಮಾಹಿತಿ ಬಹಿರಂಗಪಡಿಸಲು ಸೂಚಿಸುವಂತೆ ನ್ಯಾಯಾಲಯಕ್ಕೆ ಕೋರಲಾಗಿದೆ.

ಟ್ವಿಟರ್‌ನಂಥ ಸಾಮಾಜಿಕ ಮಾಧ್ಯಮಗಳ ಕಾರ್ಯವೈಖರಿ ಮತ್ತು ಅವುಗಳ ಬಗ್ಗೆ ತಪ್ಪು ತಿಳಿವಳಿಕೆಯಿಂದ ರಿಟ್ ಅರ್ಜಿ ಸಲ್ಲಿಕೆಯಾಗಿದೆ ಎಂದಿರುವ ಟ್ವಿಟರ್, ಮಾಹಿತಿ ತಂತ್ರಜ್ಞಾನ ಕಾಯಿದೆ -2000ರ ಸೆಕ್ಷನ್ 2(1)(w) ಅಡಿ ತಾನು ಕೇವಲ ಮಧ್ಯಸ್ಥಿಕೆ ಕೆಲಸ ಮಾಡುತ್ತಿರುವುದಾಗಿ ವಿವರಿಸಿದೆ. ಅದು ನೀಡಿರುವ ವಿವರಣೆ ಹೀಗಿದೆ:

ಬರಹಗಾರ ಮತ್ತು ಓದುಗನ ನಡುವಿನ ಕೊಂಡಿಯಾಗಿ ಟ್ವಿಟರ್ ಕೆಲಸ ಮಾಡುತ್ತಿದೆ. ಬಳಕೆದಾರರಿಂದ ವಿಷಯ ಸಂಗ್ರಹಿಸಿ, ಅಡಕಗೊಳಿಸಿ ಮತ್ತು ಎಲೆಕ್ಟ್ರಾನಿಕ್ ರೆಕಾರ್ಡ್ ರೂಪದಲ್ಲಿ ಪ್ರಸಾರ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ವಿಷಯವನ್ನು ಮುಂಚಿತವಾಗಿ ಟ್ವಿಟರ್ ಪರಿಶೀಲಿಸುವುದಿಲ್ಲ. ಬರಹಗಾರರೇ ಪ್ರಕಾಶಕರಾಗಿರುತ್ತಾರೆ.

ಬಳಕೆದಾರರು ಬರೆಯುವ ಟ್ವೀಟ್ ಮೇಲೆ ಟ್ವಿಟರ್ ಗೆ ಯಾವುದೇ ತೆರನಾದ ಹಿಡಿತವಿರುವುದಿಲ್ಲ ಎಂದು ಟ್ವಿಟರ್ ವಿವರಿಸಿದೆ.

“ಮೂರನೇ ವ್ಯಕ್ತಿಯ (ಥರ್ಡ್ ಪಾರ್ಟಿ) ಟ್ವಿಟರ್ ಅನ್ನು ಟ್ವಿಟರ್ ಸೃಷ್ಟಿಸುವುದಿಲ್ಲ. www.twitter.com ನಲ್ಲಿ ಮೂರನೇ ವ್ಯಕ್ತಿಯ ವಿಷಯಕ್ಕೆ ಟ್ವಿಟರ್ ಜವಾಬ್ದಾರಿಯಲ್ಲ” ಎಂದು ಟ್ವಿಟರ್ ಹೇಳಿದೆ.

Also Read
ಧಾರ್ಮಿಕ ಆಚರಣೆಗೆ ಕೋಟಿಗಟ್ಟಲೆ ಹಣ ಖರ್ಚು ಮಾಡಬಹುದಾದರೆ ಸಾಮಾಜಿಕ ಭದ್ರತಾ ಪಿಂಚಣಿಗೆ ಏಕಿಲ್ಲ: ಆಂಧ್ರಪ್ರದೇಶ ಹೈಕೋರ್ಟ್

ಟ್ವಿಟರ್‌ನಲ್ಲಿ ಪ್ರಕಟಿಸಲ್ಪಟ್ಟ ವಿಷಯವು ಟ್ವಿಟರ್ ಬಳಕೆದಾರರ ಒಪ್ಪಂದವಾದ ಸೇವಾ ನಿಯಮಗಳು, ಖಾಸಗಿ ನೀತಿ, ಟ್ವಿಟರ್ ನಿಯಮಗಳು ಮತ್ತು ನೀತಿಗಳು ಮತ್ತು ಮತ್ತಿತರ ನೀತಿಗಳಿಗೆ ಒಳಪಟ್ಟಿರುತ್ತದೆ. ಮಾಹಿತಿ ತಂತ್ರಜ್ಞಾನ ನಿಯಮಗಳು -2011ರ ಅನ್ವಯ ಸುಳ್ಳು ಸುದ್ದಿ ಮತ್ತು ದ್ವೇಷ ಭಾಷೆ ಮಾಹಿತಿ ನೀಡಲು ಟ್ವಿಟರ್ ನಿರ್ದಿಷ್ಟ ಕುಂದುಕೊರತೆ ಅಧಿಕಾರಿಯನ್ನು ನೇಮಿಸಿದೆ. ಕುಂದು ಕೊರತೆ ಅಧಿಕಾರಿಯ ಮಾಹಿತಿಯು ಸಾರ್ವಜನಿಕವಾಗಿದೆ. ಗೊತ್ತುಪಡಿಸಿದ ಅಧಿಕಾರಿಯ ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಕಾನೂನು ಅವಶ್ಯಕತೆ ಇಲ್ಲ ಎಂದು ಟ್ವಿಟರ್ ಹೇಳಿದೆ.

“ಬಾಯ್ಸ್ ಲಾಕರ್ ರೂಮ್” ಪ್ರಕರಣದ ನಂತರ ಅಕ್ರಮ ಗುಂಪುಗಳನ್ನು ಸಾಮಾಜಿಕ ಜಾಲತಾಣದಿಂದ ತೆಗೆಯುವಂತೆ ಕೋರಿದ್ದ ಅರ್ಜಿದಾರರ ಮನವಿಗೆ ಪ್ರತಿಕ್ರಿಯಿಸಿರುವ ಟ್ವಿಟರ್, ಮನವಿಯು ವ್ಯಾಪ್ತಿ ಮೀರಿದೆ ಎಂದು ಹೇಳಿದೆ. 13 ವಯೋಮಾನದ ಕೆಳಗಿರುವವರು ಟ್ವಿಟರ್ ಖಾತೆ ಹೊಂದಲು ಅವಕಾಶ ನೀಡಿಲ್ಲ. ಸೂಕ್ಷ್ಮವಾದ ಮಾಧ್ಯಮ, ಅಸಮ್ಮತಿಯ ನಗ್ನತೆ, ಛೇದ್ಮವೇಷಧಾರಣೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಟ್ವಿಟರ್ ಹೇಳಿದೆ.

Related Stories

No stories found.
Kannada Bar & Bench
kannada.barandbench.com