
ತಮ್ಮ ರಾಜೀನಾಮೆ ಪಡೆಯಲು ಒತ್ತಾಯಿಸಿದ ಮೈಕ್ರೋಸಾಫ್ಟ್ ಕಾರ್ಪೊರೇಷನ್ (ಇಂಡಿಯಾ) ಮತ್ತದರ ಉನ್ನತ ಆಡಳಿತ ಮಂಡಳಿಯ ವಿರುದ್ಧ ಕಂಪೆನಿಯ ಮಾಜಿ ಹಿರಿಯ ಕಾರ್ಯನಿರ್ವಾಹಕಿ ಲತಿಕಾ ಪೈ ಅವರು ಸಲ್ಲಿಸಿದ್ದ ಅರ್ಜಿಯನ್ನು ಈಚೆಗೆ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಅವರು ಬೆಂಗಳೂರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.
ಉದ್ಯೋಗ ಒಪ್ಪಂದದ ಉಲ್ಲಂಘನೆ ಮತ್ತು ಉದ್ಯೋಗ ನಷ್ಟದ ಆರೋಪದ ಮೇಲೆ ಅವರು ಸಿವಿಲ್ ಮೊಕದ್ದಮೆ ಹೂಡಿರುವ ಲತಿಕಾ ₹35 ಕೋಟಿ ಪರಿಹಾರ ಕೋರಿದ್ದರು. ಪ್ರಕರಣವನ್ನು ಮೇ 7 ರಂದು ಹೈಕೋರ್ಟ್ ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ಮುಂದೆ ಪಟ್ಟಿ ಮಾಡಲಾಗಿತ್ತು.
ಆದರೆ ಮೊಕದ್ದಮೆಯ ನಿರ್ವಹಣೆ ಬಗ್ಗೆ ಮೈಕ್ರೋಸಾಫ್ಟ್ ಆಕ್ಷೇಪ ವ್ಯಕ್ತಪಡಿಸಿತು. ಮೊಕದ್ದಮೆಯನ್ನು ಪರಿಗಣಿಸಲು ದೆಹಲಿ ಹೈಕೋರ್ಟ್‌ಗೆ ಪ್ರಾದೇಶಿಕ ನ್ಯಾಯವ್ಯಾಪ್ತಿಯ ಕೊರತೆಯಿದೆ ಎಂದು ಹಿರಿಯ ವಕೀಲ ಅಮಿತ್ ಸಿಬಲ್ ವಾದಿಸಿದರು.
ಲತಿಕಾ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಜ್ಜನ್ ಪೂವಯ್ಯ ಅವರ ತಂಡ ಅರ್ಜಿಯನ್ನು ವಿಚಾರಣೆ ನಡೆಸುವ ಅಧಿಕಾರ ಹೊಂದಿರುವ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಅನುಮತಿ ಕೋರಿತು.
ಅಂತೆಯೇ ನ್ಯಾಯಮೂರ್ತಿ ಸಿಂಗ್ ಅವರು ದೆಹಲಿ ಹೈಕೋರ್ಟ್‌ನಿಂದ ಮೊಕದ್ದಮೆ ಹಿಂಪಡೆಯಲು ಅನುಮತಿ ನೀಡಿದರು. ಜೂನ್ 9ರಂದು ಬೆಂಗಳೂರು ನ್ಯಾಯಾಲಯಕ್ಕೆ ಪಕ್ಷಕಾರರು ಹಾಜರಾಗಬೇಕು ಎಂದು ಹೈಕೋರ್ಟ್ ಆದೇಶಿಸಿತು.
ಕಚೇರಿ ಯೋಜನೆಯೊಂದರ ಕುರಿತು ಅನಗತ್ಯವಾಗಿ ನಾಲ್ಕು ವರ್ಷಗಳ ಕಾಲ ತನ್ನನ್ನು ತನಿಖೆಗೆ ಒಳಪಡಿಸಲಾಗಿದೆ. ತಮ್ಮ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ತನಿಖೆಯನ್ನು ಅನಿರ್ದಿಷ್ಟಾವಧಿಗೆ ಮುಂದುವರೆಸಲಾಗಿದೆ. ಕಂಪನಿ ತನ್ನ ಕುರಿತಾದ ದಾಖಲೆಗಳನ್ನು ಮರೆಮಾಚುತ್ತಿದೆ. ಅವುಗಳನ್ನು ತನ್ನ ಸುಪರ್ದಿಗೆ ಒಪ್ಪಿಸಬೇಕು. ಜೊತೆಗೆ ತನ್ನ ವಿರುದ್ಧ ವೈಯಕ್ತಿಕ ತಾರತಮ್ಯ ಉಂಟು ಮಾಡಿದ್ದು ಸೇಡಿನ ವಾತಾವರಣ ಸೃಷ್ಟಿಸಲಾಗಿದೆ. ಇದು ಮೈಕ್ರೊಸಾಫ್ಟ್ ನೀತಿಗಳಿಗೆ ವಿರುದ್ಧ ಎಂದು ಲತಿಕಾ ದೂರಿದ್ದರು.
ಸಂಬಳ ಮತ್ತು ಬೋನಸ್ ರೂಪದಲ್ಲಿ ನೀಡಬೇಕಿದ್ದ ಹಣವನ್ನು ಸಂಸ್ಥೆ ನೀಡಲ್ಲ ಎಂದಿರುವ ಅವರು ಜೊತೆಗೆ ತನಗೆ ಉಂಟಾಗಿರುವ ಮಾನಸಿಕ ಆಘಾತಕ್ಕೂ ಪರಿಹಾರ ನೀಡಬೇಕೆಂದು ಕೋರಿದ್ದರು.