ಕೇಂದ್ರಾಡಳಿತ ಪ್ರದೇಶದ ಹೊರಗಿನ ಭಾರತೀಯರು ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಮಿ ಖರೀದಿಸಲು ಅನುಕೂಲವಾಗುವ ತಿದ್ದುಪಡಿಯನ್ನು ಕೇಂದ್ರ ಸರ್ಕಾರ ಮಾಡಿದೆ. ಈ ಹಿಂದೆ ಸಂವಿಧಾನದ ವಿಧಿಗಳಾದ 35A ಮತ್ತು 370 ಅನ್ನು ರದ್ದುಗೊಳಿಸುವುದಕ್ಕೂ ಮುನ್ನ ಅಲ್ಲಿನ ನಿವಾಸಿಗಳಾಗಿದ್ದವರು ಮಾತ್ರ ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಮಿ ಖರೀದಿಸಲು ಅವಕಾಶವಿತ್ತು.
ಕೇಂದ್ರಾಡಳಿತ ಪ್ರದೇಶದಲ್ಲಿ ಭೂಮಿ ಮಾರಾಟಕ್ಕೆ ಸಂಬಂಧಿಸಿದ ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿ ಕಾಯಿದೆಯ ಸೆಕ್ಷನ್‌ಗಳಾದ 2 ಮತ್ತು 17ರ ಅಡಿ ಇದ್ದ "ರಾಜ್ಯದ ಶಾಶ್ವತ ನಿವಾಸಿಗಳು" ಎಂಬ ನುಡಿಗಟ್ಟನ್ನು ಕೇಂದ್ರ ಸರ್ಕಾರ ತೆಗೆದು ಹಾಕಿದೆ. ಕೆಲವು ನಿರ್ದಿಷ್ಟ ಷರತ್ತುಗಳಿಗೆ ಒಳಪಟ್ಟು ಜಮ್ಮು ಮತ್ತು ಕಾಶ್ಮೀರದ ಹೊರಗಿನವರೂ ಅಲ್ಲಿ ಈಗ ಭೂಮಿ ಖರೀದಿಸಬಹುದಾಗಿದೆ.
ಜಮ್ಮು ಮತ್ತು ಕಾಶ್ಮೀರ ಪುನರ್ವಿಂಗಡನೆ ಕಾಯಿದೆ – 2019ರ ಸೆಕ್ಷನ್ 96ರ ಅಡಿ ದೊರೆತಿರುವ ಅಧಿಕಾರ ಚಲಾಯಿಸಿ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರ ಭೂ ಕಂದಾಯ ಕಾಯಿದೆ – 1996, ಜಮ್ಮು ಮತ್ತು ಕಾಶ್ಮೀರ ಕೃಷಿ ಸುಧಾರಣಾ ಕಾಯಿದೆ – 1976 ಮತ್ತು ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿ ಕಾಯಿದೆ – 1970ಗೆ ತಿದ್ದುಪಡಿ ತಂದಿದೆ. ಮೇಲಿನ ಬದಲಾವಣೆಗಳನ್ನು ಒಳಗೊಂಡಿರುವ ಆದೇಶವನ್ನು ಜಮ್ಮು ಮತ್ತು ಕಾಶ್ಮೀರ ಪುನರ್ವಿಂಗಡಣಾ (ಕೇಂದ್ರ ಸರ್ಕಾರದ ಕಾನೂನುಗಳ ಅಳವಡಿಕೆ) ಮೂರನೇ ಆದೇಶ – 2020 ಎಂದು ಹೆಸರಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಭೂ ಕಂದಾಯ ಕಾಯಿದೆ – 1996ರ ಅನ್ವಯ ಕೃಷಿ ಭೂಮಿಯನ್ನು ಕೃಷಿಯೇತರರಿಗೆ ವರ್ಗಾಯಿಸುವುದು ಸೇರಿದಂತೆ ಕೆಲವು ಸಾಮಾನ್ಯ ನಿಷೇಧಗಳನ್ನು ಕೇಂದ್ರ ಸರ್ಕಾರ ಹೇರಿದ್ದು, ಶಿಕ್ಷಣ ಅಥವಾ ಆರೋಗ್ಯ ಚಟುವಟಿಕೆಗಳನ್ನು ನಡೆಸುವ ಚಾರಿಟೆಬಲ್ ಟ್ರಸ್ಟ್ ಮತ್ತು ನೋಂದಾಯಿತ ಸಾರ್ವಜನಿಕ ಉಪಯೋಗ ಸೇರಿದಂತೆ ಇತರ ಕಡೆಗೆ ಭೂಮಿ ವರ್ಗಾಯಿಸಲು ಅನುವು ಮಾಡಿಕೊಡಲಾಗಿದೆ (ಸೆಕ್ಷನ್‌ಗಳಾದ 133H ರಿಂದ 133K).
ಜಮ್ಮು ಮತ್ತು ಕಾಶ್ಮೀರ ಭೂ ಕಂದಾಯ ಕಾಯಿದೆ – 1996ರ ಸೆಕ್ಷನ್ 133Bರ ಅನ್ವಯ ಕೇಂದ್ರ ಸರ್ಕಾರವು ಗೋಮಾಳಗಳನ್ನು ಜಿಲ್ಲಾಧಿಕಾರಿಯ ಅನುಮತಿ ಇಲ್ಲದೇ ಇತರೆ ಕೆಲಸಗಳಿಗೆ ಬಳಸುವುದು ಮತ್ತು ವರ್ಗಾಯಿಸುವುದಕ್ಕೆ ನಿಷೇಧ ಹೇರಿದೆ. ನಿರ್ದಿಷ್ಟ ಕಾಯಿದೆಗಳ ಅನ್ವಯ ಸಾರ್ವಜನಿಕ ಅವಶ್ಯಕಗಳಿಗೆ ಶಾಶ್ವತ/ತಾತ್ಕಾಲಿಕವಾಗಿ ಭೂಮಿ ವಶಪಡಿಸಿಕೊಳ್ಳುವುದಕ್ಕೆ ವಿನಾಯಿತಿ ನೀಡಲಾಗಿದೆ.
“ಸಂವಿಧಾನದ ವಿಧಿಗಳಾದ 370 ಮತ್ತು 35A ಅನ್ನು ರದ್ದುಗೊಳಿಸಿರುವುದರ ನೇರ ಪರಿಣಾಮಗಳೇ ನೂತನ ತಿದ್ದುಪಡಿಗಳಾಗಿವೆ. ಇದನ್ನು ಭಾರತದ ಜೊತೆ ಜಮ್ಮು ಮತ್ತು ಕಾಶ್ಮೀರವನ್ನು ಒಂದಾಗಿಸುವ ಯತ್ನ ಎಂದು ಘೋಷಿಸಲಾಗಿದೆ” ಎಂದು ಜಮ್ಮು ಮತ್ತು ಕಾಶ್ಮೀರದ ವಕೀಲ ಅಂಕುರ್ ಶರ್ಮಾ ಅವರು “ಬಾರ್ ಅಂಡ್ ಬೆಂಚ್”ಗೆ ಪ್ರತಿಕ್ರಿಯಿಸಿದ್ದಾರೆ.