ಕಾನೂನು ಅಧಿಕಾರಿಗಳು ರಾಜಕೀಯಕ್ಕೆ ಅಂಟಿಕೊಳ್ಳಬಾರದು, ನ್ಯಾಯಾಲಯದಲ್ಲಿ ಘನತೆಯಿಂದ ವರ್ತಿಸಬೇಕು: ಸಿಜೆಐ ಚಂದ್ರಚೂಡ್

ಶನಿವಾರ ನಡೆದ ಕಾಮನ್‌ವೆಲ್ತ್‌ ಅಟಾರ್ನಿ ಮತ್ತು ಸಾಲಿಸಿಟರ್ ಜನರಲ್‌ಗಳ ಸಮ್ಮೇಳನ ಉದ್ಘಾಟಿಸಿ ಸಿಜೆಐ ಮಾತನಾಡಿದರು.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್

ಖಾಸಗಿಯಾಗಿ ಪ್ರಾಕ್ಟೀಸ್‌ ಮಾಡುವ ವಕೀಲರಿಗೆ ಹೋಲಿಸಿದರೆ ನೈತಿಕ ಮಾನದಂಡಗಳನ್ನು ಎತ್ತಿಹಿಡಿಯುವ ಹೆಚ್ಚಿನ ಹೊಣೆಗಾರಿಕೆ ಕಾನೂನು ಅಧಿಕಾರಿಗಳ ಮೇಲಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಅಟಾರ್ನಿ ಜನರಲ್‌ ಮತ್ತು ಸಾಲಿಸಿಟರ್‌ ಜನರಲ್‌ ಕಚೇರಿ ಹಾಗೂ ಕಾಮನ್‌ವೆಲ್ತ್‌ ಕಾನೂನು ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ನವದೆಹಲಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕಾಮನ್‌ವೆಲ್ತ್‌ ಅಟಾರ್ನಿ ಮತ್ತು ಸಾಲಿಸಿಟರ್ ಜನರಲ್‌ಗಳ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಾಂಗದ ಉತ್ತರದಾಯಿತ್ವ ಎಂಬುದು ನ್ಯಾಯಾಲಯದ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುವ ಸರ್ಕಾರದ ಕಾನೂನು ಅಧಿಕಾರಿಗಳ ನೈತಿಕ ನಡೆ ಮತ್ತು ಜವಾಬ್ದಾರಿಯನ್ನು ಹೆಚ್ಚು ಅವಲಂಬಿಸಿದೆ ಎಂದು ಅವರು ತಿಳಿಸಿದರು.

"ಕಾನೂನು ಅಧಿಕಾರಿಗಳು ಇಂದಿನ ರಾಜಕೀಯಕ್ಕೆ ಅಂಟಿಕೊಳ್ಳದೆ ನ್ಯಾಯಾಲಯದಲ್ಲಿ ಘನತೆಯಿಂದ ವರ್ತಿಸುವುದು, ಕಾನೂನು ಪ್ರಕ್ರಿಯೆಗಳ ಸಮಗ್ರತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅತ್ಯಗತ್ಯವಾದ ಸಂಗತಿಯಾಗಿದೆ" ಎಂದು ಅವರು ಹೇಳಿದರು.

ಈ ನಿಟ್ಟಿನಲ್ಲಿ ಮಾಜಿ ಅಟಾರ್ನಿ ಜನರಲ್ ದಿವಂಗತ ಸೋಲಿ ಸೊರಾಬ್ಜಿ ಅನುಕರಣೀಯ ವ್ಯಕ್ತಿಯಾಗಿದ್ದು ಕೇಂದ್ರ ಸರ್ಕಾರದ ಪರ ಪ್ರಕರಣವು ಸಮರ್ಥವಾಗಿಲ್ಲ ಎಂದಾಗ ಈ ಬಗ್ಗೆ ಸಲಹೆ ನೀಡಿ ನ್ಯಾಯದೆಡೆಗಿನ ಬದ್ಧತೆಯನ್ನು ಪ್ರದರ್ಶಿಸುತ್ತಿದ್ದರು ಎಂದರು.

ಸರ್ಕಾರಿ ಅಧಿಕಾರಿಗಳಿಗೆ ನ್ಯಾಯಾಲಯಗಳು ಮನಬಂದಂತೆ ಸಮನ್ಸ್‌ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಈಚೆಗೆ ನೀಡಿದ ತೀರ್ಪನ್ನು ಅವರು ಪ್ರಸ್ತಾಪಿಸಿದರು.

"ಸರ್ಕಾರದ ಮೇಲೆ ಒತ್ತಡ ಹೇರಲು ಅಧಿಕಾರಿಗಳನ್ನು ನ್ಯಾಯಾಲಯಕ್ಕೆ ಕರೆಸುವ ಅಧಿಕಾರವನ್ನು ಬಳಸಿಕೊಳ್ಳುವುದರ ವಿರುದ್ಧ ಅದು (ಸುಪ್ರೀಂ ಕೋರ್ಟ್‌ ನೀಡಿರುವ ಆದೇಶ) ಎಚ್ಚರಿಕೆ ನೀಡುತ್ತದೆ. ಅಂತಹ ಕ್ರಮಗಳನ್ನು ನ್ಯಾಯಿಕ ಆಡಳಿತದ ನಿರ್ಣಾಯಕ ಸಂದರ್ಭಗಳಿಗೆ ಮೀಸಲಿಡಬೇಕು ಎಂದು ಒತ್ತಿಹೇಳುತ್ತದೆ. ಕಾನೂನು ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ನ್ಯಾಯಾಂಗವನ್ನು ಒಳಗೊಂಡ ಈ ಸಹಯೋಗದ ವಿಧಾನವು ನ್ಯಾಯಾಂಗ ವ್ಯವಸ್ಥೆಯೊಳಗೆ ಪರಸ್ಪರ ಗೌರವ ಮತ್ತು ಸಹಕಾರದ ಸಂಸ್ಕೃತಿಯನ್ನು ಬೆಳೆಸುತ್ತದೆ, ಕಾರ್ಯಾಂಗದ ಹೊಣೆಗಾರಿಕೆಯ ನೈತಿಕ ಆಧಾರವನ್ನು ಬಲಪಡಿಸುತ್ತದೆ" ಎಂದು ಅವರು ಹೇಳಿದರು.

ಕಾನೂನು ಶಾಲೆಗಳಿಗೆ ಪ್ರವೇಶಾತಿ ಮತ್ತು ನೇಮಕಾತಿ ಪ್ರಕ್ರಿಯೆಗಳು ಸಾಮಾಜಿಕ-ಆರ್ಥಿಕ ಹಿನ್ನೆಲೆ, ವೈವಿಧ್ಯತೆ ಮತ್ತು ಜೀವನಾನುಭವಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

"ನಾವು ಕಾನೂನು ಶಿಕ್ಷಣವನ್ನು ಆಧುನೀಕರಿಸಲು ಪ್ರಯತ್ನಿಸುತ್ತಿರುವಾಗ, ಕಾನೂನು ಶಿಕ್ಷಣ ಸಮಾನವಾಗಿ ದೊರೆಯುತ್ತಿದೆಯೇ ಪ್ರಶ್ನೆಯನ್ನು ಕೂಡ ನಾವು ಎದುರಿಸಬೇಕಾಗುತ್ತದೆ. ಕಾನೂನು ಶಾಲೆಗಳ ಪ್ರವೇಶಾತಿ ಪರೀಕ್ಷೆಗಳನ್ನು ರದ್ದುಗೊಳಿಸಬಾರದು. ಪ್ರವೇಶಾತಿ ಪ್ರಕ್ರಿಯೆಗಳು ನ್ಯಾಯಯುತ, ಪಾರದರ್ಶಕ ಮತ್ತು ಅಂತರ್ಗತವಾಗಿವೆಯೇ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಇದಕ್ಕೆ ಸಮಗ್ರ ವಿಧಾನದ ಅಗತ್ಯವಿದೆ" ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ , ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್, ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಹಾಗೂ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ʼನ್ಯಾಯ ವಿತರಣೆಯಲ್ಲಿ ಗಡಿಯಾಚೆಗಿನ ಸವಾಲುಗಳುʼ ಎಂಬುದು ಈ ಬಾರಿಯ ಸಮ್ಮೇಳನದ ಚರ್ಚಾವಿಷಯವಾಗಿತ್ತು.

[ಭಾಷಣದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
CASGC Speech CJI DYC.pdf
Preview

Related Stories

No stories found.
Kannada Bar & Bench
kannada.barandbench.com