

ದೇಶದಲ್ಲಿ ಕಾನೂನು ಶಿಕ್ಷಣದ ನಡಾವಳಿ ಕುರಿತು ದೆಹಲಿ ಹೈಕೋರ್ಟ್ ಸೋಮವಾರ ವಿವರವಾದ ಮಾರ್ಗಸೂಚಿ ಹೊರಡಿಸಿದ್ದು ವಿದ್ಯಾರ್ಥಿಗಳ ಹಾಜರಾತಿ ಕೊರತೆ ಅವರ ಶೈಕ್ಷಣಿಕ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಬೆರಳು ಮಾಡಿದೆ [ಐಪಿ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿ ಸುಶಾಂತ್ ರೋಹಿಲ್ಲಾ ಆತ್ಮಹತ್ಯೆ ಪ್ರಕರಣದಲ್ಲಿ ದಾಖಲಿಸಿಕೊಂಡ ಸ್ವಯಂಪ್ರೇರಿತ ಪ್ರಕರಣ].
ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗದಂತೆ ತಡೆಯುವಂತಿಲ್ಲ ಮತ್ತು ಮುಂದಿನ ಸೆಮಿಸ್ಟರ್‌ನಲ್ಲಿ ಅಧ್ಯಯನ ನಡೆಸದಂತೆಯೂ ತಡೆಯಬಾರದು ಎಂದು ನ್ಯಾಯಮೂರ್ತಿಗಳಾದ ಪ್ರತಿಭಾ ಎಂ ಸಿಂಗ್ ಮತ್ತು ಅಮಿತ್ ಶರ್ಮಾ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
ಬಿಸಿಐ ನಿಯಮಾವಳಿ ಮೀರಿ ಯಾವುದೇ ಹಾಜರಾತಿ ಮಾನದಂಡಗಳನ್ನು ಕಾನೂನು ಕಾಲೇಜುಗಳು ವಿಧಿಸಬಾರದು ಎಂದಿರುವ ಅದು ಕಡಿಮೆ ಹಾಜರಾತಿ ಇರುವ ವಿದ್ಯಾರ್ಥಿಗಳಿಗೆ ಗರಿಷ್ಠ 5% ಅಂಕ ಕಡಿತ ಅಥವಾ ಸಿಜಿಪಿಎ ಗ್ರೇಡಿಂಗ್ ವ್ಯವಸ್ಥೆ ಇರುವೆಡೆ 0.33%ರಷ್ಟು ಅಂಕ ಕಡಿತ ಮಾಡಬಹುದು ಎಂದು ಅದು ಹೇಳಿದೆ.
ಹಾಜರಾತಿ ಕಡಿಮೆ ಇರುವ ಮಾಹಿತಿಯನ್ನು ವಿದ್ಯಾರ್ಥಿ ಹಾಗೂ ಪೋಷಕರಿಗೆ ತಿಳಿಸಬೇಕು. ಕಡಿಮೆ ಹಾಜರಾತಿ ಇದ್ದವರಿಗೆ ಹೆಚ್ಚುವರಿಯಾಗಿ ಭೌತಿಕವಾಗಿ ಇಲ್ಲವೇ ಆನ್‌ಲೈನ್ ಮೂಲಕ ತರಗತಿಗಳನ್ನು ನಡೆಸಬೇಕು ಎಂದು ಪೀಠ ನಿರ್ದೇಶಿಸಿತು.
ಇದಲ್ಲದೆ, ಎಲ್ಲಾ ಕಾನೂನು ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಕುಂದುಕೊರತೆ ನಿವಾರಣಾ ಆಯೋಗಗಳನ್ನು ರಚಿಸುವುದು ಕಡ್ಡಾಯ. ಆಯೋಗದ 51% ಸದಸ್ಯರು ವಿದ್ಯಾರ್ಥಿಗಳೇ ಆಗಿರಬೇಕು ಎಂದಿದೆ.
ಕಾಲೇಜುಗಳಲ್ಲಿ ಆಪ್ತಸಮಾಲೋಚಕರು ಇಲ್ಲವೇ ಮನೋವೈದ್ಯರು ಲಭ್ಯವಾಗುವಂತೆ ನಿಯಮಾವಳಿಗೆ ಅಗತ್ಯ ತಿದ್ದುಪಡಿ ಮಾಡುವಂತೆ ಅದು ಬಿಸಿಐಗೆ ನಿರ್ದೇಶನ ನೀಡಿದೆ. ವಿದ್ಯಾರ್ಥಿಗಳು ಭಾಗಿಯಾಗುವ ಅಣಕು ನ್ಯಾಯಾಲಯ, ಇಂಟರ್ನ್‌ಶಿಪ್, ಕ್ಲಿನಿಕಲ್ ಲೀಗಲ್ ಚಟುವಟಿಕೆಗಳಿಗೆ ಅಂಕ ನೀಡಬೇಕು ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ಇದೇ ವೇಳೆ ಪೀಠವು ಬಿಸಿಐಗೆ, ಪ್ರಶಿಕ್ಷಣಾರ್ಥಿಗಳನ್ನು ಹುಡುಕುತ್ತಿರುವ ಹಿರಿಯ ವಕೀಲರು, ವಕೀಲರು, ಕಾನೂನು ಸಂಸ್ಥೆಗಳು ಹಾಗೂ ಇತರ ಸಂಸ್ಥೆಗಳ ಹೆಸರುಗಳನ್ನು ಪ್ರಕಟಿಸುವ ಮೂಲಕ, ವಿಶೇಷವಾಗಿ ಹಿಂದುಳಿದ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್‌ಗಳ ವಿವರಗಳನ್ನು ಲಭ್ಯವಾಗುವಂತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿತು.
ಅಮಿಟಿ ವಿವಿಯ ಕಾನೂನು ವಿದ್ಯಾರ್ಥಿ ಸುಶಾಂತ್ ರೋಹಿಲ್ಲಾ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ದಾಖಲಿಸಿಕೊಳ್ಳಲಾಗಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ವಿಲೇವಾರಿ ಮಾಡಿದ ನ್ಯಾಯಾಲಯ ಈ ಮಾರ್ಗಸೂಚಿ ಹೊರಡಿಸಿದೆ. ಹಾಜರಾತಿ ಕೊರತೆ ಕಾರಣಕ್ಕೆ ರೋಹಿಲ್ಲಾ ಅವರಿಗೆ ಕಾಲೇಜು ಸಿಬ್ಬಂದಿ ಕಿರುಕುಳ ನೀಡಿದ್ದ ಪರಿಣಾಮ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು.