ಬೇಷರತ್‌ ಕ್ಷಮೆಯಾಚಿಸಿದ ವಕೀಲ ಜಗದೀಶ್‌; ₹2 ಲಕ್ಷ ದಂಡ ವಿಧಿಸಿ, ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಟ್ಟ ಹೈಕೋರ್ಟ್‌

ದಂಡದ ಮೊತ್ತದ ಈ ಪೈಕಿ ₹1 ಲಕ್ಷವನ್ನು ಕೆಎಸ್‌ಎಲ್‌ಎಸ್‌ಎ, ₹50,000 ರೂಪಾಯಿಯನ್ನು ಬೆಂಗಳೂರು ವಕೀಲರ ಸಂಘ ಮತ್ತು ₹50,000 ರೂಪಾಯಿಗಳನ್ನು ವಕೀಲರ ಗುಮಾಸ್ತರ ಕಲ್ಯಾಣ ನಿಧಿಗೆ ಠೇವಣಿಯನ್ನು ಎರಡು ವಾರಗಳಲ್ಲಿ ನೀಡಬೇಕು ಎಂದು ಪೀಠವು ಆದೇಶಿಸಿದೆ.
Karnataka HC and Lawyer K N Jagadesh Kumar
Karnataka HC and Lawyer K N Jagadesh Kumar

ಕಳೆದ ಫೆಬ್ರವರಿಯಲ್ಲಿ ಬೆಂಗಳೂರಿನ ನಗರ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ದುವರ್ತನೆ, ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿರುದ್ಧ ಕೆಟ್ಟ ಪದ ಬಳಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ವಕೀಲ ಕೆ ಎನ್‌ ಜಗದೀಶ್‌ ಕುಮಾರ್‌ ಅವರು ಬೇಷರತ್‌ ಕ್ಷಮೆಯಾಚಿಸಿರುವುದನ್ನು ಪರಿಗಣಿಸಿ, ಅವರಿಗೆ ₹2 ಲಕ್ಷ ದಂಡ ವಿಧಿಸಿ ಅವರ ವಿರುದ್ಧದ ಸ್ವಯಂಪ್ರೇರಿತ ಕ್ರಿಮಿನಲ್‌ ನ್ಯಾಯಾಂಗ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಕೈಬಿಟ್ಟಿದೆ.

ಬೆಂಗಳೂರಿನ ನ್ಯಾಯಾಲಯದ ಆವರಣದಲ್ಲಿ ದುರ್ವರ್ತನೆ, ಕಿರಿಕಿರಿ, ನ್ಯಾಯಾಲಯದ ಕಲಾಪಕ್ಕೆ ಅಡ್ಡಿ, ರಿಜಿಸ್ಟ್ರಾರ್‌ ಅವರ ವಿರುದ್ದ ಅಸಂಸದೀಯ ಪದ ಬಳಕೆ, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರ ವಿರುದ್ದ ಕೆಟ್ಟ ಪದ ಬಳಕೆ ಮಾಡುವ ಮೂಲಕ ಸಂಸ್ಥೆಯ ಘನತೆಗೆ ಕುಂದು ಉಂಟು ಮಾಡಿದ ಆರೋಪದಲ್ಲಿ ಹೈಕೋರ್ಟ್‌ನ ಆಡಳಿತ ವಿಭಾಗದ ಮುಖ್ಯಸ್ಥರಾದ ಮುಖ್ಯ ನ್ಯಾಯಮೂರ್ತಿ ಅವರ ನಿರ್ದೇಶನದಂತೆ ರಿಜಿಸ್ಟ್ರಾರ್‌ ಜನರಲ್‌ ಅವರು ಕೆ ಎನ್‌ ಜಗದೀಶ್‌ಕುಮಾರ್‌ ಅಲಿಯಾಸ್‌ ಜಗದೀಶ್‌ ಮಹದೇವ್‌ ಅಲಿಯಾಸ್‌ ಜಗದೀಶ್‌ ಅವರ ವಿರುದ್ಧ ಸ್ವಯಂಪ್ರೇರಿತ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರು. ಇದರ ವಿಚಾರಣೆಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಆರೋಪಿಯಾಗಿರುವ ಜಗದೀಶ್‌ ಕುಮಾರ್‌ ಅವರು ನವೆಂಬರ್‌ 24ರಂದು ಬೇಷರತ್‌ ಕ್ಷಮೆ ಯಾಚಿಸಿ ಅಫಿಡವಿಟ್‌ ಸಲ್ಲಿಸಿದ್ದು, ಅದರಲ್ಲಿ 2022ರ ಫೆಬ್ರವರಿ 10, 11 ಮತ್ತು 12ರಂದು ನ್ಯಾಯಾಲಯದಲ್ಲಿ ವರ್ತಿಸಿದ ರೀತಿಗೆ ನಾನು ಬೇಷರತ್‌ ಕ್ಷಮೆಯಾಚಿಸುತ್ತೇನೆ. ಮುಂದೆ ನ್ಯಾಯಾಲಯದ ಒಳಗೆ ಮತ್ತು ಹೊರಗೆ ಗೌರವ, ಘನತೆಯುತ ಮತ್ತು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. ಆರೋಪಿಯು ವಿನಯಪೂರ್ವಕವಾಗಿ ತಮ್ಮ ವರ್ತನೆಗೆ ವಿಷಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿ ಜಗದೀಶ್‌ ಅವರ ವಿರುದ್ಧದ ಕ್ರಿಮಿನಲ್‌ ನ್ಯಾಯಾಂಗ ಪ್ರಕ್ರಿಯೆಯನ್ನು ಕೈಬಿಡಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಅಲ್ಲದೇ, “ಆರೋಪಿ ಜಗದೀಶ್‌ಗೆ ₹2 ಲಕ್ಷ ದಂಡ ವಿಧಿಸಿದ್ದು, ಈ ಪೈಕಿ ₹1 ಲಕ್ಷವನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ, ₹50,000 ರೂಪಾಯಿಯನ್ನು ಬೆಂಗಳೂರು ವಕೀಲರ ಸಂಘ (ಇದನ್ನು ವಕೀಲರಿಗೆ ಅನುಕೂಲವಾಗಿಸಲು ಪುಸ್ತಕ ಖರೀದಿಸಲು ಬಳಕೆ ಮಾಡಬೇಕು) ಮತ್ತು ₹50,000 ರೂಪಾಯಿಗಳನ್ನು ವಕೀಲರ ಗುಮಾಸ್ತರ ಕಲ್ಯಾಣ ನಿಧಿಗೆ ಠೇವಣಿಯನ್ನು ಎರಡು ವಾರಗಳಲ್ಲಿ ನೀಡಬೇಕು. ಈ ಸಂಬಂಧದ ದಾಖಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಆ ಬಳಿಕ ಆರೋಪಿ ಜಗದೀಶ್‌ ವಿರುದ್ಧದ ಕ್ರಿಮಿನಲ್‌ ಪ್ರಕ್ರಿಯೆ ಕೈಬಿಡುವ ಆದೇಶ ಜಾರಿಗೆ ಬರಲಿದೆ” ಎಂದು ಪೀಠವು ಆದೇಶದಲ್ಲಿ ಸ್ಪಷ್ಟಪಡಿಸಿದೆ. ಆದೇಶ ಪಾಲನೆಗೆ ಸಂಬಂಧಿಸಿದ್ದನ್ನು ಪರಿಶೀಲಿಸಲು ಡಿಸೆಂಬರ್‌ 16ಕ್ಕೆ ವಿಚಾರಣೆ ನಿಗದಿಪಡಿಸಲಾಗಿದೆ.

ಪ್ರಕರಣದ ಹಿನ್ನೆಲೆ: 2022ರ ಫೆಬ್ರವರಿ 11ರಂದು ಸಿಸಿಎಚ್‌-61ರಲ್ಲಿ ಅಸಲು ದಾವೆಯ ವಿಚಾರಣೆಯೊಂದರ ಸಂದರ್ಭದಲ್ಲಿ ಹಾಜರಿದ್ದ ವಕೀಲರು, ಆರೋಪಿ ಜಗದೀಶ್‌ ವಿರುದ್ಧ ಆತ 60-70 ಗೂಂಡಾಗಳನ್ನು ನ್ಯಾಯಾಲಯಕ್ಕೆ ಕರೆದು ತಂದಿದ್ದಾರೆ ಎಂದು ಆರೋಪಿಸಿದ್ದರು. ನ್ಯಾಯಮೂರ್ತಿಗಳ ಹೊರ ಹೋಗುವ ದ್ವಾರದ ಬಳಿ ನೆರದು, ವಕೀಲರನ್ನು ಹೊರತುಪಡಿಸಿ ಬೇರೆಯವರು ನ್ಯಾಯಾಲಯಕ್ಕೆ ಪ್ರವೇಶಿಸಿರುವುದರ ಕುರಿತು ವಾಕ್ಸಮರ ನಡೆಸಿದ್ದರು. ಇದರಿಂದ ವಕೀಲರ ನಡುವೆ ಮಾರಾಮಾರಿ ನಡೆದಿತ್ತು. ಈ ವೇಳೆ ಪರಿಸ್ಥಿತಿ ತಿಳಿಸಿಗೊಳಿಸಲು ಸಿಟಿ ಸಿವಿಲ್‌ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರು ಮತ್ತು ರಿಜಿಸ್ಟ್ರಾರ್‌ ಅವರು ಪ್ರಯತ್ನಿಸಿದ್ದರು.

ಆನಂತರ ಆರೋಪಿ ಜಗದೀಶ್‌ ಅವರು ಫೆಬ್ರವರಿ 12ರಂದು ಫೇಸ್‌ಬುಕ್‌ ಲೈವ್‌ನಲ್ಲಿ “ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳೇ ನೀವು ಪೀಠದಲ್ಲಿದ್ದೀರಾ? ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮತ್ತು ರಾಷ್ಟ್ರಪತಿ ಅವರಿಗೆ ನಿಮ್ಮ ವಿರುದ್ಧ ದೂರು ಬರೆಯುತ್ತೇನೆ. ಮುಖ್ಯ ನ್ಯಾಯಮೂರ್ತಿ ಇದ್ದಾರೆಯೇ ಅಥವಾ ಗಾಂಡು ವಕೀಲರಿಗೆ ಶರಣಾಗಿದ್ದಾರೆಯೇ? ಸಾರ್ವಜನಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನನಗೆ ಅನ್ನಿಸುತ್ತಿದೆ” ಎಂದು ಹೇಳಿರುವುದಾಗಿ ಸ್ವಯಂಪ್ರೇರಿತ ಪ್ರಕರಣದ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೊ ದಾಖಲೆಗಳನ್ನು ಒದಗಿಸಲಾಗಿತ್ತು. ಈ ಕುರಿತು ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲಯದ ರಿಜಿಸ್ಟ್ರಾರ್‌ ಅವರು ವರದಿ ನೀಡಿದ್ದರು. ಈ ವರದಿಯನ್ನು ಪ್ರಧಾನ ನ್ಯಾಯಾಧೀಶರು ಹೈಕೋರ್ಟ್‌ಗೆ ಸಲ್ಲಿಸಿದ್ದರು.

ವಿಶೇಷ ಸರ್ಕಾರಿ ಅಭಿಯೋಜಕರಾದ ಕಿರಣ್‌ ಜವಳಿ ಅವರು ಹೈಕೋರ್ಟ್‌ಅನ್ನು ಪ್ರತಿನಿಧಿಸಿದ್ದರು.

Related Stories

No stories found.
Kannada Bar & Bench
kannada.barandbench.com