ಜಗದೀಶ್‌ ಅವರನ್ನು ಜೈಲಿನಲ್ಲಿಡುವುದರಿಂದ ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಹಿನ್ನಡೆ: ವಕೀಲ ಹರೀಶ್‌ ಪ್ರಭು ವಾದ

ಜಗದೀಶ್‌ಗೆ ಜಾಮೀನು ಉಳಿದ ಆರೋಪಿಗಳಾದ ಶರತ್‌ ಖದ್ರಿ, ಪ್ರಶಾಂತಿ ಸುಭಾಷ್‌ ಮತ್ತು ಜಗದೀಶ್‌ ಪುತ್ರ ಆರ್ಯಗೌಡಗೆ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಲಾಗಿರುವ ಮನವಿ ವಿಚಾರಣೆಯನ್ನು ನ್ಯಾಯಾಧೀಶರಾದ ಕಾಶಿಂ ಚೂರಿಖಾನ್‌ ಅವರ ನೇತೃತ್ವದ ಪೀಠ ನಡೆಸಿತು.
City Civil Court and Lawyer Jagadesh

City Civil Court and Lawyer Jagadesh

Published on

ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ವಕೀಲ ಕೆ ಎನ್‌ ಜಗದೀಶ್‌ ಕುಮಾರ್‌ ಅಲಿಯಾಸ್‌ ಜಗದೀಶ್‌ ಮಹದೇವ್‌ ಅವರು ಸಮಾಜದಲ್ಲಿನ ಭ್ರಷ್ಟಚಾರ ಆರೋಪಗಳನ್ನು ಹೊತ್ತಿರುವವ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಜಗದೀಶ್‌ ಅವರನ್ನು ಬಂಧನದಲ್ಲಿ ಇಡುವುದರಿಂದ ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗುತ್ತದೆ. ಹೀಗಾಗಿ ಅವರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಮಂಗಳವಾರ ಜಗದೀಶ್‌ ಪರ ವಕೀಲರು ಬೆಂಗಳೂರು ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಜಗದೀಶ್‌ ಅವರಿಗೆ ಜಾಮೀನು ಹಾಗೂ ಉಳಿದ ಆರೋಪಿಗಳಾದ ಶರತ್‌ ಖದ್ರಿ, ಪ್ರಶಾಂತಿ ಸುಭಾಷ್‌ ಮತ್ತು ಜಗದೀಶ್‌ ಪುತ್ರ ಆರ್ಯಗೌಡ ಅವರಿಗೆ ನಿರೀಕ್ಷಣಾ ಜಾಮೀನು ಕೋರಿ ವಕೀಲ ಹರೀಶ್‌ ಪ್ರಭು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು 68ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಕಾಶಿಂ ಚೂರಿಖಾನ್‌ ಅವರ ನೇತೃತ್ವದ ಪೀಠವು ವಿಚಾರಣೆ ನಡೆಸಿತು.

ವಕೀಲರು ಪ್ರಜಾಪ್ರಭುತ್ವದ ರಕ್ಷಕರಾಗಿದ್ದು, ಜಗದೀಶ್‌ ಅವರನ್ನು ಜೈಲಿನಲ್ಲಿ ಇಟ್ಟರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲಯದ ಆವರಣದಲ್ಲಿ ಐಪಿಎಸ್‌ ಅಧಿಕಾರಿಯೊಬ್ಬರ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಹೋದಾಗ ಪುತ್ರ ಆರ್ಯಗೌಡನ ಮೇಲಿನ ದಾಳಿಯನ್ನು ಸಹಿಸದೇ ನೋವಿನಿಂದ ತಂದೆಯಾಗಿ ಆಕ್ಷೇಪಾರ್ಹವಾದ ಕೆಲವು ಮಾತುಗಳನ್ನು ಜಗದೀಶ್‌ ಆಡಿದ್ದಾರೆಯೇ ವಿನಾ ವಕೀಲನಾಗಿ ಹೇಳಿದ ಮಾತುಗಳು ಅವಾಗಿರಲಿಲ್ಲ ಎಂದು ಪೀಠಕ್ಕೆ ಮನವರಿಕೆ ಮಾಡಲು ಜಗದೀಶ್‌ ಪರ ವಕೀಲರು ಯತ್ನಿಸಿದರು.

ಜಗದೀಶ್‌ ಅವರು ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ವಿರುದ್ಧದ ಅತ್ಯಾಚಾರ ಪ್ರಕರಣ ಮತ್ತು ಐಪಿಎಸ್‌ ಅಧಿಕಾರಿಯೊಬ್ಬರ ವಿರುದ್ಧ ಕಾನೂನಾತ್ಮಕವಾಗಿ ಭ್ರಷ್ಟಾಚಾರ ಹೋರಾಟ ಕೈಗೊಂಡಿದ್ದಾರೆ. ಅಲ್ಲದೇ, ಕಾರ್ಯಾಂಗದಲ್ಲಿ ಕೆಲವು ಭ್ರಷ್ಟ ಶಕ್ತಿಗಳು ಜಗದೀಶ್‌ ಅವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಹವಣಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಜಗದೀಶ್‌ ವಿರುದ್ಧ ಪ್ರಕರಣವನ್ನು ಸಂಚಿನಿಂದ ದಾಖಲಿಸಲಾಗಿದೆ ಎಂದು ಜಗದೀಶ್‌ ಪರ ವಾದಿಸಲಾಯಿತು.

ದೂರುದಾರ ವಕೀಲ ನಾರಾಯಣ ಸ್ವಾಮಿ ಅವರ ದೂರನ್ನು ಆಧರಿಸಿ ಐಪಿಸಿ ಸೆಕ್ಷನ್‌ 307ರ ಅಡಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಸೆಕ್ಷನ್‌ 307ರ ಅಡಿ ಅಪರಾಧ ಎಸಗಲು ಅಗತ್ಯವಾದ ಸಿದ್ಧತೆ, ಉದ್ದೇಶ ಇರಬೇಕು. ಆದರೆ, ಈ ಪ್ರಕರಣದಲ್ಲಿ ಅದಾವುದೂ ಕಾಣುತ್ತಿಲ್ಲ. ಒಂದೂವರೆ ದಿನ ತಡವಾಗಿ ದೂರು ನೀಡಲಾಗಿದೆ. ದೂರು ನೀಡಿರುವವರು ವಕೀಲರಾಗಿದ್ದಾರೆ. ವಕೀಲರಾದವರು ತಡವಾಗಿ ದೂರು ನೀಡುವುದಾದರು ಹೇಗೆ? ಸಾಮಾನ್ಯ ವ್ಯಕ್ತಿಯಾದರೆ ಅದಕ್ಕೆ ಕಾರಣ ನೀಡಬಹುದು. ಇಲ್ಲಿ ಬಹಳ ಯೋಚಿಸಿ, ಚರ್ಚಿಸಿದ ಬಳಿಕ ದೂರು ನೀಡುವ ನಿರ್ಧಾರ ಮಾಡಲಾಗಿದೆ ಎಂದು ಘಟನೆಯನ್ನು ವಕೀಲರು ವಿವರಿಸಿದರು.

ಭಾರಿ ಹೊಡೆತ ತಿಂದ ವ್ಯಕ್ತಿ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದರೂ ಸೆಕ್ಷನ್‌ 307ರ ಅಡಿ ಪ್ರಕರಣ ದಾಖಲಿಸುವುದು ಕಷ್ಟಸಾಧ್ಯ. ಆದರೆ, ಯಾವುದೇ ಗಾಯ ಕಾಣದಿದ್ದರೂ ಸೆಕ್ಷನ್‌ 307ರ ಅಡಿ ದೂರು ದಾಖಲಿಸಲಾಗಿದೆ. ಇಲ್ಲಿ ಪೊಲೀಸರ ಉದ್ದೇಶ ಸ್ಪಷ್ಟವಾಗಿ ಗೋಚರಿಸುತ್ತದೆ. ವಕೀಲ ನಾರಾಯಣ ಸ್ವಾಮಿ ಅವರನ್ನು ಬಳಸಿಕೊಂಡು ಅವರು ದೂರು ನೀಡುವುದಕ್ಕಾಗಿ ಕಾಯುತ್ತಿದ್ದ ಪೊಲೀಸರು ಸೆಕ್ಷನ್‌ 307ರ ಅಡಿ ಜಗದೀಶ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದರು.

ಸಿಟಿ ಸಿವಿಲ್‌ ನ್ಯಾಯಾಲಯದ ಆವರಣದಲ್ಲಿ ಎರಡನೇ ಶನಿವಾರ ಮಧ್ಯಾಹ್ನ ಹೊಡೆದಾಟದ ಘಟನೆ ನಡೆದಿದೆ. ಇಲ್ಲಿ ಯಾವುದೇ ರೀತಿಯಲ್ಲೂ ತನಿಖೆ ನಡೆಸದೇ ಆರೋಪಿಯನ್ನು ಬಂಧಿಸಲಾಗಿದೆ. ಜಗದೀಶ್‌ ಅವರನ್ನು ಬಂಧಿಸಬೇಕೆಂಬ ಏಕೈಕ ಉದ್ದೇಶದಿಂದ ಸೆಕ್ಷನ್‌ 307ರ ಅಡಿ ಪ್ರಕರಣ ದಾಖಲಿಸಲಾಗಿದೆ. ಅರ್ಜಿದಾರ ಜಗದೀಶ್‌, ದೂರುದಾರ ನಾರಾಯಣ ಸ್ವಾಮಿ ಮತ್ತು ವಕೀಲರ ಸಂಘ ಮೋಸ ಹೋಗಿದ್ದಾರೆ ಎಂದು ವಾದ ಮಂಡಿಸಲಾಗಿದೆ.

2022ರ ಫೆಬ್ರವರಿ 14ರಂದು ಐಪಿಎಸ್‌ ಅಧಿಕಾರಿಯೊಬ್ಬರ ವಿರುದ್ಧದ ಭ್ರಷ್ಟಾಚಾರದ ವಿರುದ್ಧ ಹೈಕೋರ್ಟ್‌ನಲ್ಲಿ ಸಿಬಿಐ ತನಿಖೆಗೆ ಕೋರಲಾಗುವುದು ಎಂದು ಸಾಮಾಜಿಕ ಜಾಲತಾಣದಲ್ಲಿ ಜಗದೀಶ್‌ ಪೋಸ್ಟ್‌ ಒಂದನ್ನು ಹಾಕಿದ್ದರು. ಇದನ್ನು ತಡೆಯುವ ಉದ್ದೇಶದಿಂದ ಜಗದೀಶ್‌ ಬಂಧನವಾಗಿದೆ. ಜಗದೀಶ್‌ ನೀಡಿದ್ದ ದಿನಾಂಕದ ಒಳಗೆ ಅವರನ್ನು ಜೈಲಿಗೆ ಅಟ್ಟಲು ಸಂಚು ರೂಪಿಸಲಾಗಿದೆ. ಐಪಿಎಸ್‌ ಅಧಿಕಾರಿ ವಿರುದ್ಧ ಸಿಬಿಐ ತನಿಖೆ ಕೋರುವುದನ್ನು ತಡೆಯುವ ಉದ್ದೇಶವನ್ನು ಹೊಂದಲಾಗಿತ್ತು. ಈಗ ಜಗದೀಶ್‌ ಬಂಧನವಾಗುವ ಮೂಲಕ ಸ್ಥಾಪಿತ ಹಿತಾಸಕ್ತಿಗಳನ್ನು ಅದರಲ್ಲಿ ಯಶಸ್ವಿಯಾಗಿವೆ ಎಂದು ಪೀಠದ ಗಮನಕ್ಕೆ ತರುವ ಪ್ರಯತ್ನ ಮಾಡಲಾಯಿತು.

ಅರ್ಜಿದಾರ ಜಗದೀಶ್‌ ಅವರಿಂದ ತಪ್ಪಾಗಿದೆ. ದೂರುದಾರರ ವಿರುದ್ಧ ಜಗದೀಶ್‌ ಅವರು ಬಳಸಿದ ಭಾಷೆ ಸರಿಯಾಗಿಲ್ಲ ಮತ್ತು ಅವರಿಗೆ ಬೆದರಿಕೆ ಹಾಕಲಾಗಿದೆ. ಇದಕ್ಕೆ ಜಾಮೀನು ಸಿಗುವ ಐಪಿಸಿ ಸೆಕ್ಷನ್‌ 504, 506ರ ಅಡಿ ಪ್ರಕರಣ ದಾಖಲಿಸಬಹುದಿತ್ತು. ಜಗದೀಶ್‌ ಅವರು ಮಾಡಿರುವ ಅಪರಾಧಕ್ಕೂ ಅವರ ವಿರುದ್ಧ ದಾಖಲಿಸಿರುವ ದೂರಿಗೂ ಯಾವುದೇ ಸಂಬಂಧವಿಲ್ಲ. ಬಂಧಿಸುವ ಏಕೈಕ ಉದ್ದೇಶದಿಂದ ಐಪಿಸಿ ಸೆಕ್ಷನ್‌ 307 ಹಾಕಲಾಗಿದೆ. ಹೀಗಾಗಿ, ದುರುದ್ದೇಶದಿಂದ ಜಗದೀಶ್‌ ಅವರ ಬಂಧನವಾಗಿದ್ದು, ಅವರನ್ನು ಬಿಡುಗಡೆ ಮಾಡಬೇಕು ಎಂದು ಕೋರಲಾಗಿದೆ.

ಜಗದೀಶ್‌ ಅವರು ನ್ಯಾಯಾಂಗ ಮತ್ತು ವಕೀಲ ಸಮುದಾಯದ ವಿರುದ್ಧ ಬಳಸಿರುವ ಆಕ್ಷೇಪಾರ್ಹವಾದ ಭಾಷೆಗೆ ಸಂಬಂಧಿಸಿದಂತೆ ಜೈಲಿನಿಂದ ಬಿಡುಗಡೆಯಾದ ಬಳಿಕ ಅವರು ಕ್ಷಮೆ ಕೋರಲಿದ್ದಾರೆ ಎಂದೂ ವಕೀಲ ಹರ್ಷ ಅವರು ಪೀಠಕ್ಕೆ ವಿವರಿಸಿದರು.

ವಿಶೇಷ ಸರ್ಕಾರಿ ಅಭಿಯೋಜಕರು ಇಂದಷ್ಟೇ ನಮಗೆ ಪ್ರಕರಣದ ದಾಖಲೆಗಳು ಸಿಕ್ಕಿದ್ದು, ಮುಂದಿನ ವಿಚಾರಣೆಯಂದು ವಾದ ಮಂಡಿಸುವುದಾಗಿ ತಿಳಿಸಿದರು. ವಾದ ಆಲಿಸಿದ ಪೀಠವು ವಿಚಾರಣೆಯನ್ನು ಫೆಬ್ರವರಿ 24ಕ್ಕೆ ಮುಂದೂಡಿತು.

Also Read
ವಕೀಲರ ವಿರುದ್ಧ ಅವಾಚ್ಯ ಶಬ್ದ ಬಳಸಿದ್ದರಿಂದ ಜಗದೀಶ್‌ ವಿರುದ್ದ ದೂರು: ಎಎಬಿ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ

ಜಗದೀಶ್ ವಿರುದ್ಧ ಮೂರು ಪ್ರತ್ಯೇಕ ದೂರು

ಆರೋಪಿ ಜಗದೀಶ್‌ ಅವರ ವಿರುದ್ಧ ಬೆಂಗಳೂರಿನ ಹಲಸೂರು ಗೇಟ್‌ನಲ್ಲಿ ವಕೀಲ ನಾರಾಯಣ ಸ್ವಾಮಿ ದೂರು ದಾಖಲಿಸಿದ್ದಾರೆ. ಈ ದೂರನ್ನು ಆಧರಿಸಿ ಜಗದೀಶ್‌ ಅವರ ಬಂಧನವಾಗಿದ್ದು, ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದಲ್ಲದೇ, ಕುಮಾರಸ್ವಾಮಿ ಲೇಔಟ್‌ನ ನಿವಾಸಿಯಾದ ಮುತ್ತಯ್ಯ ಎಂಬವರು ಫೆಬ್ರವರಿ 14ರಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯಿದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿ ಕೊಡಿಗೇಹಳ್ಳಿ ಠಾಣೆಯಲ್ಲಿ ಜಗದೀಶ್‌ ಅವರ ವಿರುದ್ದ ದೂರು ದಾಖಲಿಸಿದ್ದಾರೆ. ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಆಯುಕ್ತರ ಸಹಾಯಕ ಸಿಬ್ಬಂದಿ ರಮೇಶ್‌ ಎಂಬವರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಬೆದರಿಕೆ ಆರೋಪದ ಹಿನ್ನೆಲೆಯಲ್ಲಿ ರಮೇಶ್‌ ಅವರ ಪರವಾಗಿ ಪೊಲೀಸ್‌ ಸಿಬ್ಬಂದಿ ನಾಗರಾಜ್‌ ಕೇನಿಕರ್‌ ಅವರು ನೀಡಿದ ದೂರು ಆಧರಿಸಿ ಫೆಬ್ರವರಿ 13ರಂದು ವಿಧಾನ ಸೌಧ ಪೊಲೀಸ್‌ ಠಾಣೆಯಲ್ಲಿ ಜಗದೀಶ್‌ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 506, 290, 353ರ ಅಡಿ ಪ್ರಕರಣ ದಾಖಲಿಸಲಾಗಿದೆ.

Kannada Bar & Bench
kannada.barandbench.com