ಡಾ. ವಂದನಾ ದಾಸ್ ಹತ್ಯೆ ಪ್ರಕರಣ: ವೈದ್ಯೆಯ ಕುಟುಂಬಕ್ಕೆ ಪರಿಹಾರ ದೊರಕಿಸಿಕೊಡುವಂತೆ ಕೇರಳ ಹೈಕೋರ್ಟ್‌ಗೆ ವಕೀಲ ಮನವಿ

ರಾಜ್ಯದೆಲ್ಲೆಡೆಯ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು, ದಾದಿಯರು ಹಾಗೂ ಇತರ ಸಿಬ್ಬಂದಿಗೆ ಪೊಲೀಸ್ ಭದ್ರತೆ ಒದಗಿಸುವುದಕ್ಕಾಗಿ ನ್ಯಾಯಾಲಯ ಮಾರ್ಗಸೂಚಿಗಳನ್ನು ಹೊರಡಿಸಬೇಕೆಂದೂ ಅರ್ಜಿದಾರರು ಕೋರಿದ್ದಾರೆ.
Kerala High Court
Kerala High Court

ಪೊಲೀಸರು ಚಿಕಿತ್ಸೆಗೆಂದು ಕರೆತಂದಿದ್ದ ವ್ಯಕ್ತಿಯಿಂದಲೇ ಬರ್ಬರವಾಗಿ ಹತ್ಯೆಗೀಡಾಗಿದ್ದ 23 ವರ್ಷದ ಸ್ಥಾನಿಕ ವೈದ್ಯೆ ಡಾ. ವಂದನಾ ದಾಸ್‌ ಅವರ ಕುಟುಂಬ ಸದಸ್ಯರಿಗೆ ₹1 ಕೋಟಿ ಪರಿಹಾರ ಒದಗಿಸುವಂತೆ ಕೋರಿ ವಕೀಲರೊಬ್ಬರು ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ [ಡಾ. ಮನೋಜ್‌ ರಾಜಗೋಪಾಲ್‌ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಅಮಾನತುಗೊಂಡಿದ್ದ ಸಂದೀಪ್‌ ಎಂಬ ಶಾಲಾ ಶಿಕ್ಷಕ ಕುಟುಂಬಸ್ಥರೊಂದಿಗೆ ಗಲಾಟೆ ಮಾಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ವೈದ್ಯಕೀಯ ಪರೀಕ್ಷೆಗೆಂದು ಮೇ 10ರ ಬೆಳಗಿನ ಜಾವ ಆಸ್ಪತ್ರೆಗೆ ಕರೆತಂದಿದ್ದರು. ಆಗ ಆತ ಕೃತ್ಯ ಎಸಗಿದ್ದ. ಬಿಜೆಪಿ ಕಾನೂನು ಘಟಕದ ರಾಜ್ಯ ಸಮಿತಿಯ ಸದಸ್ಯ, ವಕೀಲ ಮನೋಜ್ ರಾಜಗೋಪಾಲ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯ ಪ್ರಮುಖ ಅಂಶಗಳು

  • ಆಸ್ಪತ್ರೆಗೆ ಸೂಕ್ತ ಭದ್ರತೆ ಒದಗಿಸಿದ್ದರೆ ಘಟನೆ ತಪ್ಪಿಸಬಹುದಿತ್ತು. ಭದ್ರತೆ ಒದಗಿಸುವಂತೆ ವೈದ್ಯ ಸಮುದಾಯ ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದ್ದರೂ ವೈದ್ಯರ ಮೇಲೆ ಹಲ್ಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

  • ಸರ್ಕಾರಿ ಆಸ್ಪತ್ರೆಯಲ್ಲಿ ಪೊಲೀಸರ ಭದ್ರತೆ ಒದಗಿಸಿದ್ದರೂ ಆರೋಪಿಯ ಕಾನೂನು ಬಾಹಿರ ಕೃತ್ಯಗಳನ್ನು ತಡೆಯುವಲ್ಲಿ ಪೊಲೀಸರು ನಿಷ್ಕ್ರಿಯರಾಗಿದ್ದರು. ಪೊಲೀಸರು ಅಂತಹ ಸಂದರ್ಭದಲ್ಲಿ ಎನ್‌ಕೌಂಟರ್‌ ಮಾಡದೇ ಇರುವುದು ಸಮರ್ಥನೀಯವಾಗದು. ಹೀಗಾಗಿ ವೈದ್ಯೆ ಹತ್ಯೆ ಹಿಂದೆ ವ್ಯವಸ್ಥಿತ ವೈಫಲ್ಯ ಇದೆ.

  • ಸಂದೀಪ್‌ ಆಡಳಿತಾರೂಢ ಸಿಪಿಎಂ ಪಕ್ಷದಿಂದ ಸಂಯೋಜಿತವಾಗಿರುವ ಸೇವಾ ಸಂಘಟನೆಯೊಂದರ ಸದಸ್ಯನಾಗಿರುವುದರಿಂದ ತನಿಖೆಯನ್ನು ದಿಕ್ಕುತಪ್ಪಿಸಲಾಗಿದೆ.

  • ಪೊಲೀಸರು ಎಫ್‌ಐಆರ್‌ನಲ್ಲಿ ನಿರೂಪಿಸಿರುವ ಘಟನೆಯಲ್ಲಿ ವ್ಯತ್ಯಾಸಗಳಿರುವುದು ಆತಂಕಕಾರಿ ವಿಚಾರ.

  • ವಂದನಾ ದಾಸ್‌ ಪೋಷಕರಿಗೆ ನಿಗದಿತ ಗಡುವಿನೊಳಗೆ ₹1 ಕೋಟಿ ಪರಿಹಾರ ದೊರಕಿಸಿಕೊಡಬೇಕು. 

  • ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಪ್ರಕರಣದ ತನಿಖೆ ನಡೆಯುವಂತಾಗಲು ಹೈಕೋರ್ಟ್‌ ಆದೇಶ ನೀಡಬೇಕು.

  • ರಾಜ್ಯದೆಲ್ಲೆಡೆಯ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು, ದಾದಿಯರುಹಾಗೂ ಇತರ ಸಿಬ್ಬಂದಿಗೆ ಪೊಲೀಸ್‌ ಭದ್ರತೆ ಒದಗಿಸುವುದಕ್ಕಾಗಿ ನ್ಯಾಯಾಲಯ ಮಾರ್ಗಸೂಚಿಗಳನ್ನು ಹೊರಡಿಸಬೇಕು.

Related Stories

No stories found.
Kannada Bar & Bench
kannada.barandbench.com