ವಕೀಲರು ಮತ್ತು ನ್ಯಾಯಾಂಗ ಅಧಿಕಾರಿಗಳ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಮತ್ತು ದೇಶದೆಲ್ಲೆಡೆ ನ್ಯಾಯಾಲಯಗಳ ಡಿಜಿಟಲೀಕರಣಕ್ಕೆ ಬೆಂಬಲ ನೀಡಬೇಕು ಎಂದು ಒಡಿಶಾ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಹಾಗೂ ಹಿರಿಯ ನ್ಯಾಯವಾದಿ ಎಸ್ ಮುರಳೀಧರ್ ಕರೆ ನೀಡಿದ್ದಾರೆ.
ಚೆನ್ನೈನ ವಿನಾಯಕ ಮಿಷನ್ ಕಾನೂನು ಶಾಲೆಯ ಸೆಂಟರ್ ಫಾರ್ ಜಸ್ಟಿಸ್ ಥ್ರೂ ಟೆಕ್ನಾಲಜಿ ಶನಿವಾರ ಆಯೋಜಿಸಿದ್ದ ನ್ಯಾಯಾಲಯದ ಡಿಜಿಟಲೀಕರಣ - ಪೀಠದ ಅನುಭವಗಳು ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾ. ಮುರಳೀಧರ್, ನ್ಯಾಯಾಲಯ ದಾಖಲೆಗಳ ಡಿಜಿಟಲೀಕರಣ ಮತ್ತು ದೇಶಾದ್ಯಂತ ದೃಢವಾದ ಇ-ಕೋರ್ಟ್ ವ್ಯವಸ್ಥೆ ಈಗಿನ ಅಗತ್ಯವಾಗಿದೆ ಎಂದು ಹೇಳಿದರು.
"ಡಿಜಿಟಲೀಕರಣ ಪ್ರಕ್ರಿಯೆಯಿಂದ ಹೆಚ್ಚಿನ ಲಾಭ ಪಡೆಯಬಹುದಾದ ವಕೀಲರು ಮತ್ತು ಕಾನೂನು ಗುಮಾಸ್ತರು ಅದಕ್ಕಾಗಿ ಎಂದಿಗೂ ಬೇಡಿಕೆ ಇಟ್ಟಿಲ್ಲ ಅಥವಾ ಒತ್ತಾಯಿಸಿಲ್ಲ ಎಂಬುದು ನಮ್ಮ ಆತಂಕ. ಈ ಯೋಜನೆಗೆ ನ್ಯಾಯಾಧೀಶರ ವಲಯದಿಂದ ಬೆಂಬಲ ವ್ಯಕ್ತವಾಗಿದೆ. ವಾಸ್ತವವಾಗಿ, ಕೇರಳ ಹೈಕೋರ್ಟ್‌ನಲ್ಲಿ, ನ್ಯಾಯಾಲಯದ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಮಾದರಿ ಕಾರ್ಯ ಪ್ರಗತಿಯಲ್ಲಿದ್ದಾಗ ವಕೀಲರು ಮತ್ತು ಕಾನೂನು ಗುಮಾಸ್ತರು ಪ್ರತಿಭಟನೆ ನಡೆಸಿದ್ದಾರೆ. ತಮ್ಮೆಲ್ಲಾ ಕೆಲಸಗಳು ಆನ್‌ಲೈನ್‌ಗೆ ವರ್ಗಾವಣೆಗೊಂಡ ಬಳಿಕ ತಾವು ಅನಗತ್ಯವಾಗುತ್ತೇವೆ ಎಂದು ಕಾನೂನು ಗುಮಾಸ್ತರು ಭೀತಿಗೊಂಡಿದ್ದರು. ಅದು ಹೇಗೆ ನಿಜವಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಲು ನ್ಯಾಯಾಂಗ ಶ್ರಮಿಸುತ್ತಿದೆ" ಎಂದು ಅವರು ವಿವರಿಸಿದರು.
ಒಡಿಶಾದ ಎಲ್ಲಾ ಜಿಲ್ಲಾ ನ್ಯಾಯಾಲಯಗಳು ಮತ್ತು ಹೈಕೋರ್ಟ್‌ಗಳ ಡಿಜಿಟಲೀಕರಣದ ನೇತೃತ್ವ ವಹಿಸಿರುವ ನ್ಯಾ. ಮುರಳೀಧರ್, ಅಲ್ಲಿ "ತಾಂತ್ರಿಕ ಕಂದರ" ಅಸ್ತಿತ್ವದಲ್ಲಿದೆ. ಎಲ್ಲಾ ವಕೀಲರು ತಂತ್ರಜ್ಞಾನ ಬಳಸುವ ಅನುಕೂಲಕರ ಸ್ಥಿತಿ ಅಲ್ಲಿಲ್ಲ. ಎಲ್ಲಾ ವಕೀಲರಿಗೂ ಸ್ಮಾರ್ಟ್‌ಫೋನ್ ಅಥವಾ ಎಲೆಕ್ಟ್ರಾನಿಕ್ ಸಾಧನ ಪಡೆಯುವ ಶಕ್ತಿ ಇಲ್ಲ ಎಂದರು.
ಡಿಜಿಟಲೀಕರಣದ ಬೇಡಿಕೆ ನಿರ್ಣಾಯಕವಾಗಿದ್ದರೂ ತಾವು ಒಡಿಶಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದಾಗ ಇ ಫೈಲಿಂಗ್ ಕಡ್ಡಾಯಗೊಳಿಸದಿರಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದು ಅವರು ಹೇಳಿದರು. ವಕೀಲರು ತರುವ ಹಾರ್ಡ್‌ಕಾಪಿಯನ್ನು ಸ್ಕ್ಯಾನ್ ಮಾಡಿ ಅದನ್ನು ಕೇಂದ್ರ ವ್ಯವಸ್ಥೆಗೆ ಅಪ್‌ಲೋಡ್ ಮಾಡಿ ಒಂದು ಹೆಜ್ಜೆ ಮುಂದೆ ಇರಿಸಿದ್ದೆವು. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಇ ಸೇವಾ ಕಿಯೋಸ್ಕ್‌ನಲ್ಲಿ ವಕೀಲರಿಗೆ ತರಬೇತಿ ನೀಡಿದ್ದೆವು ಎಂದು ಅವರು ತಿಳಿಸಿದರು.
ಮುಖ್ಯ ನ್ಯಾಯಮೂರ್ತಿಗಳ ನ್ಯಾಯಾಲಯವನ್ನು ಸಂಪೂರ್ಣ ಕಾಗದರಹಿತವನ್ನಾಗಿಸಲು ಒಡಿಶಾ ಹೈಕೋರ್ಟ್ ಕಂಪ್ಯೂಟರ್ ಸಮಿತಿಯು ಹಗಲಿರುಳು ಶ್ರಮಿಸಿತು ಎಂದು ನೆನೆದ ಅವರು ಇ-ಕೋರ್ಟ್ ಯೋಜನೆ ಸಂಪೂರ್ಣ ಯಶಸ್ವಿಯಾಗಲು ನ್ಯಾಯಾಂಗಕ್ಕೆ ಸಮರ್ಪಿತ ಮತ್ತು ವಿಶೇಷ ತಾಂತ್ರಿಕ ಬೆಂಬಲದ ಅಗತ್ಯವಿದೆ ಎಂದರು.