ಭಾರತದ ವಕೀಲರಿಗೆ ಕರಡು ರಚನೆಯ ಕಲೆ ಇನ್ನೂ ಕರಗತವಾಗಿಲ್ಲ: ಸಿಜೆಐ ಸಂಜೀವ್ ಖನ್ನಾ

ಇದೇ 13ರಂದು ಸೇವೆಯಿಂದ ನಿವೃತ್ತರಾಗಲಿರುವ ಅವರು ಸುಪ್ರೀಂ ಕೋರ್ಟ್‌ನಲ್ಲಿ ತಮಗೆ ಆಳವಾದ ನಂಬಿಕೆ ಇದೆ ಎಂದರು.
CJI Sanjiv Khanna (third from left) at SCAORA Farewell
CJI Sanjiv Khanna (third from left) at SCAORA Farewell
Published on

ಭಾರತದ  ವಕೀಲರು ಸಂಕ್ಷಿಪ್ತ ಅರ್ಜಿಗಳನ್ನು ಅಥವಾ ಬೇರೆ ಕಾನೂನು ದಾಖಲೆಗಳನ್ನು ರಚಿಸುವ ಕಲೆಯನ್ನು (ಡ್ರಾಫ್ಟಿಂಗ್‌) ಇನ್ನೂ ಕರಗತ ಮಾಡಿಕೊಂಡಿಲ್ಲ, ಅವರು ಸಾಮಾನ್ಯವಾಗಿ ದೀರ್ಘ ಮನವಿಗಳನ್ನು ರಚಿಸುತ್ತಾರೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್‌ ಖನ್ನಾ ತಿಳಿಸಿದರು.

ಮೇ 13 ರಂದು ನಿವೃತ್ತರಾಗಲಿರುವ ಅವರಿಗೆ ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್ ಆನ್ ರೆಕಾರ್ಡ್ ಸಂಘ (ಎಸ್‌ಸಿಎಒಆರ್‌ಎ) ಶುಕ್ರವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡುತ್ತಾ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

Also Read
ನ್ಯಾ. ವರ್ಮಾ ಮನೆಯಲ್ಲಿ ನಗದು ದೊರೆತ ವಿವಾದ: ಸಿಜೆಐ ಖನ್ನಾ ಅವರಿಗೆ ವರದಿ ಸಲ್ಲಿಸಿದ ಆಂತರಿಕ ಸಮಿತಿ

ಅರ್ಜಿ ಬರೆಯುವಾಗ ʼಮಿತವೇ ಹಿತʼ ಎಂಬ ವಿಧಾನವನ್ನು ಅಳವಡಿಸಿಕೊಳ್ಳಬೇಕು. ಸ್ಪಷ್ಟವಾಗಿ ಅರ್ಜಿ ಬರೆಯಬೇಕು. ಅರ್ಜಿ ಉತ್ತಮವಾಗಿ ರೂಪುಗೊಂಡಿದ್ದರೆ ಪ್ರಕರಣದ ಶೇ  50ರಷ್ಟು ಕೆಲಸ ಮುಗಿದಂತೆ ಎಂದು ಅವರು ಹೇಳಿದರು.

ನ್ಯಾಯಾಧೀಶರಾಗಿ ನಾವು ಸಾಕಷ್ಟು ಬೋಧಿಸಲು ತೊಡಗುತ್ತೇವೆ. ನಾನು ಹಾಗೆ ಮಾಡಲು ಬಯಸಲಿಲ್ಲ. ಆಮೇಲೆ ಗೊತ್ತಾಯಿತು ಹಾಗೆ ಮಾಡದೆ ಇರುವುದು ಸಾಧ್ಯವಿಲ್ಲ ಎಂದು ಲಘು ಧಾಟಿಯಲ್ಲಿ ಅವರು ಹೇಳಿದರು.

ದೇಶದ ವಿವಿಧ ಭಾಗಗಳು ಮತ್ತು ಸುಪ್ರೀಂ ಕೋರ್ಟ್‌ ನಡುವಿನ ಸೇತುವೆಯಾಗಿ ಅಡ್ವೊಕೇಟ್ಸ್-ಆನ್-ರೆಕಾರ್ಡ್ (ಎಒಆರ್‌) ಕೆಲಸ ಮಾಡಲಿದ್ದು. ಈ ಕಾರ್ಯಕ್ಕೆ ಹಿರಿಯ ವಕೀಲರನ್ನು ನೇಮಿಸಿಕೊಳ್ಳುವ ಬದಲು ಎಒಆರ್‌ಗಳೇ ಖುದ್ದಾಗಿ ವಾದ ಮಂಡಿಸುವಂತಾಗಬೇಕು ಎಂದರು.

Also Read
ನಿವೃತ್ತಿ ಹಿನ್ನೆಲೆ: ವಕ್ಫ್ ತಿದ್ದುಪಡಿ ಕಾಯಿದೆ ಪ್ರಕರಣವನ್ನು ನ್ಯಾ. ಗವಾಯಿ ಪೀಠಕ್ಕೆ ವರ್ಗಾಯಿಸಿದ ಸಿಜೆಐ ಖನ್ನಾ

ತಾವು ಚಿಕ್ಕವರಿದ್ದಾಗ ಮೊದಲ ಬಾರಿಗೆ ಭೇಟಿ ನೀಡಿದ್ದ ಸರ್ವೋಚ್ಚ ನ್ಯಾಯಾಲಯದಿಂದಲೇ  ತಮ್ಮ ವೃತ್ತಿಜೀವನ ಕೊನೆಗೊಳಿಸುತ್ತಿರುವುದಾಗಿ ಹೆಮ್ಮೆ ವ್ಯಕ್ತಪಡಿಸಿದ ಅವರು ಸುಪ್ರೀಂ ಕೋರ್ಟ್‌ನಲ್ಲಿ ತಮಗೆ ಆಳವಾದ ನಂಬಿಕೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸುಪ್ರೀಂ ಕೋರ್ಟ್‌ನ ಭಾವಿ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರು ಸಿಜೆಐ ಖನ್ನಾ ಅವರ ನೇರ ನಿಲುವಿನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಅವರ ಅಧಿಕಾರಾವಧಿಯಲ್ಲಿ ನಡೆದ ಬದಲಾವಣೆ ಪಾರದರ್ಶಕತೆಯನ್ನು ನೆನೆದರು. ಸಂಘದ ಅಧ್ಯಕ್ಷ ವಿಪಿನ್ ನಾಯರ್ ಅವರು ಕೂಡ ಸಿಜೆಐ ಖನ್ನಾ ಅವರ ಸಾಧನೆಗಳನ್ನು ಮೆಲುಕು ಹಾಕಿದರು. ಎಸ್‌ಸಿಎಒಆರ್‌ಎ ಉಪಾಧ್ಯಕ್ಷ ಅಮಿತ್ ಶರ್ಮಾ,  ಕಾರ್ಯದರ್ಶಿ ನಿಖಿಲ್ ಜೈನ್  ಮಾತನಾಡಿದರು.

Kannada Bar & Bench
kannada.barandbench.com