ಭೂಕಬಳಿಕೆ ಪ್ರಕರಣದಲ್ಲಿ ವಕೀಲರು ಭಾಗಿ ಆರೋಪ: ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ಹೈಕೋರ್ಟ್ ಸಮ್ಮತಿ

ನಕಲಿ ದಾಖಲೆಗಳು ಮತ್ತು ನ್ಯಾಯಾಲಯಗಳ ಆದೇಶಗಳ ತಿರುಚಿದ ಪ್ರತಿಗಳ ಮೂಲಕ ಖಾಸಗಿ ವ್ಯಕ್ತಿಗಳ ಆಸ್ತಿ ಕಬಳಿಕೆ ಪ್ರಕರಣಗಳಲ್ಲಿ ವಕೀಲರು ಭಾಗಿಯಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ನ್ಯಾಯಾಲಯ.
Karnataka High Court with lawyers
Karnataka High Court with lawyers

ನ್ಯಾಯಾಲಯದ ಆದೇಶಗಳ ಪ್ರತಿಗಳನ್ನು ತಿರುಚಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಾಸಗಿ ವ್ಯಕ್ತಿಗಳ ಆಸ್ತಿ ಕಬಳಿಕೆ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲು ಕರ್ನಾಟಕ ಹೈಕೋರ್ಟ್ ಮಂಗಳವಾರ ಸಮ್ಮತಿಸಿದೆ.

ನಕಲಿ ದಾಖಲೆಗಳು ಮತ್ತು ನ್ಯಾಯಾಲಯಗಳ ಆದೇಶಗಳ ತಿರುಚಿದ ಪ್ರತಿಗಳ ಮೂಲಕ ಖಾಸಗಿ ವ್ಯಕ್ತಿಗಳ ಆಸ್ತಿ ಕಬಳಿಕೆ ಪ್ರಕರಣಗಳಲ್ಲಿ ವಕೀಲರು ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ಅಮಿಕಸ್‌ ಕ್ಯೂರಿ ಆಗಿರುವ ವಕೀಲ ಶ್ರೀಧರ್ ಪ್ರಭು ಅವರು “ಪ್ರಕರಣದಲ್ಲಿ ವಕೀಲರು ಹಾಗೂ ನೋಟರಿಗಳು ಭಾಗಿಯಾಗಿರುವ ಆರೋಪವಿದೆ. ಕೋವಿಡ್ ಬಳಿಕ ನ್ಯಾಯಾಲಯದ ಕಾರ್ಯಗಳು ಬಹುತೇಕ ಡಿಜಿಟಲೀಕರಣಗೊಂಡಿವೆ. ಹೀಗಾಗಿ, ಡಿಜಿಟಲ್ ದಾಖಲೆಗಳನ್ನು ನೋಟರಿ ಮೂಲಕ ದೃಢೀಕರಿಸುವ ಅಗತ್ಯವಿದೆ. ಆಗ ನಕಲಿ ದಾಖಲೆಗಳನ್ನು ಸಲ್ಲಿಸುವುದಕ್ಕೆ ತಡೆಯೊಡ್ಡಬಹುದಾಗಿದೆ. ಸಾರ್ವಜನಿಕ ಹಿತಾಸಕ್ತಿಯಿಂದ ಈ ಕುರಿತು ಸೂಕ್ತ ನಿಯಮಗಳನ್ನು ರೂಪಿಸಬೇಕಿದೆ. ಅದಕ್ಕಾಗಿ ಕೇಂದ್ರ ಸರ್ಕಾರವನ್ನೂ ಪ್ರಕರಣದಲ್ಲಿ ಪ್ರತಿವಾದಿ ಮಾಡಿ, ಸೂಕ್ತ ನಿರ್ದೇಶನ ನೀಡಬೇಕು” ಎಂದು ಕೋರಿದರು.

ಅಮಿಕಸ್‌ ವಾದವನ್ನುಅಂತಿಮ ಆದೇಶದ ವೇಳೆಗೆ ಪರಿಗಣಿಸಲಾಗುವುದು ಎಂದು ತಿಳಿಸಿದ ಪೀಠವು ಪ್ರಸ್ತುತ ಮೂಲ ದಾಖಲೆಗಳನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸುವ ಅಗತ್ಯವಿದೆ. ಅದರಂತೆ ಮೂಲ ದಾಖಲೆಗಳನ್ನು ತನಿಖಾಧಿಕಾರಿಗಳು ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿಕೊಡಬಹುದು ಎಂದು ಸೂಚಿಸಿತು. ಅಲ್ಲದೇ ತನಿಖೆಯನ್ನು ತ್ವರಿತವಾಗಿ ನಡೆಸುವಂತೆ ಸಿಐಡಿಗೆ ನಿರ್ದೇಶಿಸಿ, ವಿಚಾರಣೆಯನ್ನು ಫೆಬ್ರವರಿ 25ಕ್ಕೆ ಮುಂದೂಡಿತು.

Also Read
ವಕೀಲರು ಮತ್ತು ವಕೀಲರ ಒಕ್ಕೂಟಗಳ ಪ್ರತಿಭಟನೆಯನ್ನು ಕಾನೂನುಬಾಹಿರ ಮಾಡುವ ನಿಯಮಾವಳಿ ರಚನೆಗೆ ಮುಂದಾದ ಬಿಸಿಐ

ಬೆಂಗಳೂರಿನ ಶಾ ಹರಿಲಾಲ್ ಬಿಕಾಭಾಯಿ ಎಂಬುವರ ಆಸ್ತಿ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠವು ನ್ಯಾಯಾಲಯಗಳ ತೀರ್ಪಿನ ಪ್ರತಿಗಳನ್ನು ತಿರುಚಿದ್ದನ್ನು ಗಮನಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ತನಿಖೆ ವೇಳೆ, ಕೆಲ ವ್ಯಕ್ತಿಗಳು ಖಾಸಗಿ ಆಸ್ತಿಗಳಿಗೆ ನಕಲಿ ದಾಖಲೆಗಳು ಮತ್ತು ನಕಲಿ ಬಾಡಿಗೆದಾರರನ್ನು ಸೃಷ್ಟಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿ, ನಂತರ ನಕಲಿ ವ್ಯಕ್ತಿಗಳೇ ರಾಜಿ ಮೂಲಕ ಡಿಕ್ರಿ ಪಡೆದು ಆಸ್ತಿ ಕಬಳಿಸುತ್ತಿದ್ದುದು ಬೆಳಕಿಗೆ ಬಂದಿತ್ತು. ಇಂತಹ ಪ್ರಕರಣಗಳಲ್ಲಿ ವಕೀಲರು ಮತ್ತು ನೋಟರಿಗಳು ಶಾಮೀಲಾಗಿದ್ದುದು ಪತ್ತೆಯಾಗಿ, ತನಿಖಾಧಿಕಾರಿಗಳು ಕೆಲ ವಕೀಲರನ್ನೂ ಬಂಧಿಸಿದ್ದರು. ಇದೇ ರೀತಿ 118 ಪ್ರಕರಣಗಳು ಪತ್ತೆಯಾಗಿವೆ ಎನ್ನಲಾಗಿದೆ. ವಕೀಲರು ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಹೈಕೋರ್ಟ್ ಸಿಜೆ ನೇತೃತ್ವದ ವಿಭಾಗೀಯ ಪೀಠ ಈ ಕುರಿತು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.

Related Stories

No stories found.
Kannada Bar & Bench
kannada.barandbench.com