CJI DY Chandrachud
CJI DY Chandrachud

ಸ್ವಾತಂತ್ರ್ಯಗಳಿಸುವಲ್ಲಿ, ಸ್ವತಂತ್ರ ನ್ಯಾಯಾಂಗ ರೂಪಿಸುವಲ್ಲಿ ವಕೀಲರ ಪಾತ್ರ ಮಹತ್ವದ್ದು: ಸಿಜೆಐ ಡಿ ವೈ ಚಂದ್ರಚೂಡ್‌

ಸ್ವಾತಂತ್ರ್ಯ ನಂತರವೂ ನಮ್ಮ ದೇಶದಲ್ಲಿ ವಕೀಲರು ಮತ್ತು ವಕೀಲವರ್ಗ ಸಕಾರಾತ್ಮಕ ಶಕ್ತಿಯಾಗಿ ಮುಂದುವರಿದಿದೆ ಎಂದು ಸಿಜೆಐ ಅಭಿಪ್ರಾಯಪಟ್ಟರು.
Published on

 ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಅನೇಕ ವಕೀಲರು ತಮ್ಮ ಲಾಭದಾಯಕ ಕಾನೂನು ವೃತ್ತಿಯನ್ನು ತ್ಯಜಿಸಿದರು. ಅಷ್ಟೇ ಅಲ್ಲದೆ, ರಾಷ್ಟ್ರಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡರು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಗುರುವಾರ ಹೇಳಿದರು.

ಸುಪ್ರೀಂ ಕೋರ್ಟ್‌ ವಕೀಲರ ಪರಿಷತ್‌ (ಎಸ್‌ಸಿಬಿಎ) ಆಯೋಜಿಸಿದ್ದ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ ಸ್ವಾತಂತ್ರ್ಯ ಪಡೆಯಲು ವಕೀಲರು ಪ್ರಮುಖ ಪಾತ್ರವಹಿಸಿದ್ದಲ್ಲದೇ ಪ್ರಬಲ ಮತ್ತು ಸ್ವತಂತ್ರ ನ್ಯಾಯಾಂಗ ರೂಪಿಸುವಲ್ಲಿಯೂ ಅವರು ಮಹತ್ತರ ಕೊಡುಗೆ ನೀಡಿದ್ದಾರೆ ಎಂದರು.

“ಹಲವು ವಕೀಲರು ತಮ್ಮ ಲಾಭದಾಯಕ ವೃತ್ತಿ ನಿರ್ವಹಣೆ ಬಿಟ್ಟು ದೇಶಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಭಾರತ ಸ್ವಾತಂತ್ರ್ಯ ಪಡೆಯಲು ಅವರು ನಿರ್ಣಾಯಕ ಪಾತ್ರವಹಿಸಿದ್ದು, ಸ್ವತಂತ್ರ ನ್ಯಾಯಾಂಗ ರೂಪಿಸುವಲ್ಲಿಯೂ ಮಹತ್ತರ ಸ್ಥಾನ ನಿಭಾಯಿಸಿದ್ದಾರೆ. ಆದರೆ, ದೇಶಭಕ್ತ ವಕೀಲರು ಮತ್ತು ನ್ಯಾಯವಾದಿ ವರ್ಗದ ಕೆಲಸವು ಸ್ವಾತಂತ್ರ್ಯ ಪಡೆಯುವುದರೊಂದಿಗೆ ಮುಗಿಯಲಿಲ್ಲ. ಸ್ವಾತಂತ್ರ್ಯದ ಬಳಿಕವೂ ವಕೀಲರು ಮತ್ತು ನ್ಯಾಯವಾದಿ ವರ್ಗ ರಾಷ್ಟ್ರದಲ್ಲಿ ಸಕಾರಾತ್ಮಕ ಶಕ್ತಿಯಾಗಿ ನಿರಂತರತೆ ಕಾಯ್ದುಕೊಂಡಿದೆ. ಜನರ ಘನತೆ ಮತ್ತು ಹಕ್ಕುಗಳನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಲಯದ ಪಾತ್ರ ಅತ್ಯಂತ ಪ್ರಮುಖವಾಗಿದೆ. ಸಂವಿಧಾನ ಮತ್ತು ಕಾನೂನನ್ನು ನ್ಯಾಯವಾದಿ ವರ್ಗ ವರಿಸಿದ್ದು, ಇದು ನ್ಯಾಯಾಲಯಗಳ ಆತ್ಮಸಾಕ್ಷಿಯನ್ನು ಎತ್ತಿಹಿಡಿಯುವಲ್ಲಿ ನಿರ್ಣಾಯಕ ಕೆಲಸ ಮಾಡುತ್ತದೆ” ಎಂದು ಸಿಜೆಐ ಹೇಳಿದರು.

ವಿದ್ವತ್ಪೂರ್ಣ ಮತ್ತು ತತ್ವ ಹೊಂದಿರುವ ವಕೀಲರ ಪರಿಷತ್‌ ಜಾಗರೂಕ ಮತ್ತು ಎಚ್ಚರಿಕೆಯ ನ್ಯಾಯಾಂಗವನ್ನು ರೂಪಿಸುತ್ತದೆ. ಇದು ಜನರು ಮತ್ತು ನ್ಯಾಯಾಲಯಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಿಜೆಐ ಹೇಳಿದರು.

“ನ್ಯಾಯವಾದಿ ವರ್ಗವು ಜನತೆ ಮತ್ತು ನ್ಯಾಯಮೂರ್ತಿಗಳ ನಡುವಿನ ಸಂಪರ್ಕ ಸೇತುವೆಯಾಗಿದ್ದಾರೆ. ಜನರ ನೋವು ಮತ್ತು ನಾಡಿಮಿಡಿತ ನಮಗೆ ವಕೀಲರಿಂದ ಅರ್ಥವಾಗುತ್ತದೆ. ಜನರ ಮುಂದೆ ನ್ಯಾಯವಾದಿ ವರ್ಗವು ವೃತ್ತಿಯ ಪ್ರತಿನಿಧಿಯಾಗಿದ್ದು, ನ್ಯಾಯಮೂರ್ತಿಗಳ ವಿಸ್ತರಣೆಯಾಗಿದೆ. ಈ ರೀತಿಯಲ್ಲಿ ನ್ಯಾಯವಾದಿ ವರ್ಗವು ಜನತೆ ಮತ್ತು ನ್ಯಾಯಾಲಯದ ನಡುವಿನ ದ್ವಿಮುಖ ಸೇತುವೆಯಾಗಿದೆ. ವಿದ್ವತ್‌ಪೂರ್ಣ ಮತ್ತು ತತ್ವನಿಷ್ಠ ನ್ಯಾಯವಾದಿ ವರ್ಗವು ಎಚ್ಚರಿಕೆಯ, ಜಾಗೃತವಾದ ನ್ಯಾಯಾಂಗವನ್ನು ರೂಪಿಸುತ್ತದೆ” ಎಂದು ಸಿಜೆಐ ಹೇಳಿದರು.

Also Read
ಕೇಜ್ರಿವಾಲ್ ಸಿಬಿಐ ಬಂಧನ ಎತ್ತಿ ಹಿಡಿದ ದೆಹಲಿ ಹೈಕೋರ್ಟ್: ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯಕ್ಕೆ ತೆರಳಲು ಸ್ವಾತಂತ್ರ್ಯ

“ನ್ಯಾಯಾಲಯಗಳ ಕೆಲಸದಲ್ಲಿ ಸಾಮಾನ್ಯ ಭಾರತೀಯರು ದಿನನಿತ್ಯ ಜೀವಿಸುವ ಯಾತನಾಮಯ ಬದುಕು ಕಾಣುತ್ತದೆ ಎಂದು ನಾನು ನನ್ನ ಕೈಯನ್ನು ಎದೆಯ ಮೇಲಿಟ್ಟು ಹೇಳಬಯಸುತ್ತೇನೆ. ಸುಪ್ರೀಂ ಕೋರ್ಟ್‌ನಲ್ಲಿ ಗ್ರಾಮದಿಂದ ಮೆಟ್ರೊ ಸಿಟಿಯವರೆಗೆ ಎಲ್ಲಾ ಧರ್ಮ, ಪ್ರಾಂತ್ಯ, ಜಾತಿ ಮತ್ತು ಜನಾಂಗದ ಜನರು ನ್ಯಾಯ ಕೋರಿ ಬರುತ್ತಾರೆ. ಈ ನಾಗರಿಕರಿಗೆ ವಕೀಲ ಸಮುದಾಯವು ನ್ಯಾಯಾಲಯದಿಂದ ನ್ಯಾಯ ಕೊಡಿಸಲು ಮಾಡುವ ಕೆಲಸವು” ಎಂದರು. ಈ ಜನತೆಗೆ ನ್ಯಾಯಾಲಯವು ನ್ಯಾಯ ನೀಡಲು ನ್ಯಾಯವಾದಿ ವರ್ಗವು ಕೊಡಮಾಡುವ ಅವಕಾಶ ಯಾವುದೇ ರೀತಿಯಲ್ಲೂ ಅಲ್ಪವಾದುದಲ್ಲ.

ಸಂವಿಧಾನವನ್ನು ಮೂಲ ರಚನೆಯಲ್ಲಿ ಆಳವಾಗಿ ಬೇರೂರಿಸುವಲ್ಲಿ ಕಾನೂನು ಕ್ಷೇತ್ರದಲ್ಲಿರುವವರ ಕೊಡುಗೆ ಮಹತ್ತರವಾಗಿದೆ. ಮಹಿಳೆಯರು, ಲಿಂಗ ಅಲ್ಪಸಂಖ್ಯಾತರು, ಮಂಗಳಮುಖಿಯರು ಮತ್ತು ಇತರೆ ಅಂಚಿನಲ್ಲಿರುವ ಸಮುದಾಯಗಳನ್ನು ರಕ್ಷಿಸುವಲ್ಲಿ ವಕೀಲರ ಪಾತ್ರ ಮಹತ್ತರವಾಗಿದೆ ಎಂದರು. 

Kannada Bar & Bench
kannada.barandbench.com