ಪಾರ್ಕಿಂಗ್ ವಾಹನ, ಟ್ಯಾಕ್ಸಿಗಳಲ್ಲಿ ನೋಟರಿ: ಅಮಿಕಸ್‌ ಸಲಹೆ ಪರಿಗಣಿಸಲು ಕೇಂದ್ರಕ್ಕೆ ಸೂಚಿಸಿದ ಬಾಂಬೆ ಹೈಕೋರ್ಟ್

ನೋಟರಿಗಳಾಗಿ ನೇಮಕಗೊಂಡ ವಕೀಲರು ವೃತ್ತಿಪರವಲ್ಲದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕುರಿತಂತೆ ಸಲ್ಲಿಸಲಾದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಪಾರ್ಕಿಂಗ್ ವಾಹನ, ಟ್ಯಾಕ್ಸಿಗಳಲ್ಲಿ ನೋಟರಿ: ಅಮಿಕಸ್‌ ಸಲಹೆ ಪರಿಗಣಿಸಲು ಕೇಂದ್ರಕ್ಕೆ ಸೂಚಿಸಿದ ಬಾಂಬೆ ಹೈಕೋರ್ಟ್
Published on

ನೋಟರಿ (ತಿದ್ದುಪಡಿ) ಮಸೂದೆ-2021ಕ್ಕೆ ಸಂಬಂಧಿಸಿದಂತೆ ಅಮಿಕಸ್ ಕ್ಯೂರಿ ವರದಿಯಲ್ಲಿರುವ ಸಲಹೆಗಳನ್ನು ಪರಿಗಣಿಸಲು ಬಾಂಬೆ ಹೈಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ [ಧನಲಕ್ಷ್ಮಿ ಚಂದು ದೇವ್ರುಕರ್ ಮತತು ಟೌನ್ ಪ್ಲಾನಿಂಗ್ ಮತ್ತು ಸಂಬಂಧಿತ ಮನವಿಗಳು].

ಮಸೂದೆಗೆ ಸಂಬಂಧಿಸಿದ ಅಭಿಪ್ರಾಯ ಮತ್ತು ಸಲಹೆಗಳನ್ನು ಡಿಸೆಂಬರ್ 15, 2022 ರೊಳಗೆ ಸಲ್ಲಿಸುವಂತೆ ಕಾನೂನು ವ್ಯವಹಾರಗಳ ಇಲಾಖೆ ಪ್ರಕಟಣೆ ಹೊರಡಿಸಿರುವುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಎಸ್‌ ಜೆ ಕಥವಲ್ಲಾ ಮತ್ತು ಮಿಲಿಂದ್ ಜಾಧವ್ ಅವರಿದ್ದ ಪೀಠ ಈ ಆದೇಶ ಜಾರಿ ಮಾಡಿದೆ.

ನೋಟರಿಗಳಾಗಿ ನೇಮಕಗೊಂಡ ವಕೀಲರು ವಾಹನ, ಪಾರ್ಕಿಂಗ್‌ ಸ್ಥಳದಲ್ಲೇ ಕಾರ್ಯ ನಿರ್ವಹಿಸುತ್ತಿರುವ ವೃತ್ತಿಪರವಲ್ಲದ ವಿಧಾನ ಬಗ್ಗೆ ನ್ಯಾಯಾಲಯ ಇದೇ ಸಂದರ್ಭದಲ್ಲಿ ಖೇದ ವ್ಯಕ್ತಪಡಿಸಿತು.

Also Read
ಇಂಗ್ಲಿಷ್ ಮೇಲೆ ಪ್ರಭುತ್ವ, ಕೋಪ ನಿರ್ವಹಣೆ: ಉತ್ತಮ ವಕೀಲರಾಗಲು ಖ್ಯಾತ ವಕೀಲ ಫಾಲಿ ನಾರಿಮನ್ ನೀಡಿದ ಸಲಹೆಗಳು ಇಲ್ಲಿವೆ…

"ಇತ್ತೀಚೆಗೆ ನೋಟರಿಗಳು ಕಚೇರಿ/ಚೇಂಬರ್ ಬದಲಿಗೆ ಸಾರ್ವಜನಿಕ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡಿದ ವಾಹನಗಳಿಂದಲೇ ದಾಖಲೆಗಳನ್ನು ನೋಟರಿ ಮಾಡಲು ಪ್ರಾರಂಭಿಸಿದ್ದಾರೆ ಎಂದು ತಿಳಿದುಬಂದಿದೆ. ಈ ನ್ಯಾಯಾಲಯದ ಸುತ್ತಮುತ್ತ ಸಾರ್ವಜನಿಕ ಟ್ಯಾಕ್ಸಿಗಳ ಮೂಲಕ ನೋಟರಿಗಳು ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸಲಾಗಿದೆ. ಇದು ನ್ಯಾಯಾಂಗಕ್ಕೆ ಮಾತ್ರವಲ್ಲದೆ ಸಾಮಾನ್ಯ ಜನರ ದೃಷ್ಟಿಯಲ್ಲಿ ವೃತ್ತಿಯ ಘನತೆಯನ್ನು ಕಡಿಮೆ ಮಾಡಲಿದ್ದು ವಕೀಲ ವೃತ್ತಿ ಎಷ್ಟು ಅಧೋಗತಿಗೆ ಇಳಿದಿದೆ ಎಂಬುದನ್ನು ತೋರಿಸುತ್ತದೆ” ಎಂದು ಆದೇಶದಲ್ಲಿ ವಿವರಿಸಲಾಗಿದೆ.

ದಾಖಲೆಗಳನ್ನು ನೋಟರಿ ಮಾಡುವ ಸಂದರ್ಭದಲ್ಲಿ ವಕೀಲರು, ನೋಟರಿ ಅಥವಾ ಪಕ್ಷಕಾರರಿಂದ ಗೊಂದಲ ತಪ್ಪಿಸುವ ಸಲುವಾಗಿ ರೂಪಿಸಿರುವ ನೋಟರಿ ಕಾಯಿದೆ ಮತ್ತು ನಿಯಮಗಳಲ್ಲಿ ಅಗತ್ಯ ಬದಲಾವಣೆಗಳ ಕುರಿತು ಸಲಹೆಗಳು/ಶಿಫಾರಸುಗಳನ್ನು ನ್ಯಾಯಾಲಯ ಕೋರಿದೆ.

ಸುಳ್ಳು ದಾಖಲೆಗಳ ಬಗ್ಗೆ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕಾಯಿದೆ ಮತ್ತು ನಿಯಮಗಳಿಗೆ ದೊಡ್ಡಮಟ್ಟದ ಸುಧಾರಣೆ ತರುವ ಅಗತ್ಯವಿದೆ ಎಂದು ನ್ಯಾಯಾಲಯ ಇದೇ ಸಂದರ್ಭದಲ್ಲಿ ತಿಳಿಸಿತು. ಬಳಿಕ ಕಾಯಿದೆ ತಿದ್ದುಪಡಿ ಮಾಡುವ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿಕಸ್‌ ಕ್ಯೂರಿಯಾಗಿ ನೇಮಕಗೊಂಡಿರುವ ನೌಶರ್‌ ಕೊಹ್ಲಿ ಅವರ ವರದಿ ಪರಿಗಣನೆಗೆ ತೆಗೆದುಕೊಳ್ಳುವುದಕ್ಕಾಗಿ ಕಾನೂನು ವ್ಯವಹಾರಗಳ ಇಲಾಖೆಗೆ ಸಲ್ಲಿಸುವಂತೆ ಪೀಠ ಸೂಚಿಸಿತು.

Kannada Bar & Bench
kannada.barandbench.com