ಇಂಗ್ಲಿಷ್ ಮೇಲೆ ಪ್ರಭುತ್ವ, ಕೋಪ ನಿರ್ವಹಣೆ: ಉತ್ತಮ ವಕೀಲರಾಗಲು ಖ್ಯಾತ ವಕೀಲ ಫಾಲಿ ನಾರಿಮನ್ ನೀಡಿದ ಸಲಹೆಗಳು ಇಲ್ಲಿವೆ…

ವಕೀಲಿಕೆಯಲ್ಲಿ ಯಶಸ್ವಿಯಾಗಲು ಯುವ ವಕೀಲರು ನೆನಪಿಟ್ಟುಕೊಳ್ಳಬೇಕಾದ ಮತ್ತು ರೂಢಿಸಿಕೊಳ್ಳಬೇಕಾದ ಹಲವು ಅಂಶಗಳನ್ನು ಹಿರಿಯ ನ್ಯಾಯವಾದಿ ಫಾಲಿ ಎಸ್ ನಾರಿಮನ್ ಪ್ರಸ್ತಾಪಿಸಿದರು.
ಇಂಗ್ಲಿಷ್ ಮೇಲೆ ಪ್ರಭುತ್ವ, ಕೋಪ ನಿರ್ವಹಣೆ: ಉತ್ತಮ ವಕೀಲರಾಗಲು ಖ್ಯಾತ ವಕೀಲ ಫಾಲಿ ನಾರಿಮನ್ ನೀಡಿದ ಸಲಹೆಗಳು ಇಲ್ಲಿವೆ…
Senior Advocate Fali Sam Nariman

ಕೇರಳದ ಭಾರತೀಯ ಕಾನೂನು ಸಂಸ್ಥೆ ಗುರುವಾರ ಆಯೋಜಿಸಿದ್ದ ಆನ್‌ಲೈನ್ ಉಪನ್ಯಾಸ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದ ಹಿರಿಯ ನ್ಯಾಯವಾದಿ ಫಾಲಿ ಎಸ್‌ ನಾರಿಮನ್‌ ವಕೀಲರಾಗುವ ಕುರಿತಂತೆ ತಮ್ಮ ಒಳನೋಟ ಹಂಚಿಕೊಂಡರು. ಯುವ ವಕೀಲರು ಮತ್ತು ಕಾನೂನು ವಿದ್ಯಾರ್ಥಿಗಳು ತಮ್ಮ ವಕೀಲ ವೃತ್ತಿಯಲ್ಲಿ ಅನುಷ್ಠಾನಗೊಳಿಸಿಕೊಳ್ಳಬೇಕಾದ ಹಲವು ಉಪಯುಕ್ತ ಸಲಹೆಗಳನ್ನು ಅವರು ಈ ಸಂದರ್ಭದಲ್ಲಿ ನೀಡಿದರು.

ಇಂಗ್ಲಿಷ್ ಈಗ ವಿದೇಶಿ ಭಾಷೆಯಲ್ಲ, ಪರಿಣತಿ ಅಗತ್ಯ

ಭಾರತೀಯ ಕಾನೂನಿನ ಮೂಲ ಇಂಗ್ಲಿಷ್ ರೂಪದಲ್ಲಿದ್ದು ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯದ ಎಲ್ಲಾ ಪ್ರಮುಖ ಸಾಂವಿಧಾನಿಕ ಪರಿಕಲ್ಪನೆಗಳು ಇಂಗ್ಲಿಷ್‌ನಲ್ಲಿವೆ. ಇಂಗ್ಲಿಷ್‌ ಈಗ ವಿದೇಶಿ ಭಾಷೆಯಾಗಿ ಉಳಿದಿಲ್ಲ. ದೇಶದ ಎರಡು ಅಧಿಕೃತ ಭಾಷೆಗಳಲ್ಲಿ ಅದು ಒಂದು ಎಂದು ಅವರು ಹೇಳಿದರು.

"ಇಂಗ್ಲಿಷ್ ವಿದೇಶಿ ಭಾಷೆಯಲ್ಲ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು, ಇದು ಭಾರತದ ಎರಡು ರಾಷ್ಟ್ರೀಯ (ಅಧಿಕೃತ) ಭಾಷೆಗಳಲ್ಲಿ ಒಂದಾಗಿದೆ. ಆದ್ದರಿಂದ, ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ಓದುವ ಮೂಲಕ ನಿಮ್ಮ ಜ್ಞಾನ ಹೆಚ್ಚಿಸಿಕೊಳ್ಳುವುದು ಮತ್ತು ಇಂಗ್ಲಿಷ್‌ನಲ್ಲಿ ಪ್ರಾವೀಣ್ಯತೆ ಗಳಿಸಿಕೊಳ್ಳುವುದು. ನೀವು ನಿಮ್ಮನ್ನು ಸಾಬೀತುಪಡಿಸಿಕೊಳ್ಳಲು ಇದು ಅವಕಾಶ ನೀಡುತ್ತದೆ. ಏಕೆಂದರೆ ಭಾರತದಲ್ಲಿ ಕಾನೂನು ಇಂಗ್ಲಿಷ್‌ ರೂಪದಲ್ಲಿದ್ದು ಅದೇ ರೂಪದಲ್ಲಿ ಮುಂದುವರೆಯಲಿದೆ. ಎಲ್ಲಾ ಮಹಾನ್‌ ಕಲ್ಪನೆಗಳೂ ಆಂಗ್ಲೋ ಸ್ಯಾಕ್ಸನ್‌ ಆಗಿವೆ” ಎಂದರು.

ನಿರಂತರ ಕಲಿಕೆ

"ಒಮ್ಮೆ ನೀವು ವಕೀಲರಾದರೆ, ಜೀವನ ಪೂರ್ತಿ ಕಾನೂನು ವಿದ್ಯಾರ್ಥಿಯಾಗುತ್ತೀರಿ ಎಂಬುದನ್ನು ನೀವು ನೆನಪಿಟ್ಟುಕೊಳ್ಳಬೇಕು. ನೀವು ಕಾನೂನು ಸಂಸ್ಥೆಯಲ್ಲಿಯೇ ಇರಿ ಅಥವಾ ವಕೀಲರ ಕಚೇರಿಯಲ್ಲೇ ಕೆಲಸ ಮಾಡುತ್ತಿರಿ ಇಲ್ಲವೇ ಅಥವಾ ನೀವು ಪ್ರಾಕ್ಟೀಸ್‌ ಮಾಡುತ್ತಿರಿ ಅಥವಾ ನ್ಯಾಯಾಧೀಶರಾದಗಲೂ ಕೂಡ ನೀವು ಕಾನೂನು ವಿದ್ಯಾರ್ಥಿಯೇ” ಎಂದು ಅವರು ಪ್ರತಿಪಾದಿಸಿದರು.


ನಿರ್ದಿಷ್ಟವಾಗಿ ದೊರೆಯುವ ಹಣ, ಕಠಿಣ ಪರಿಶ್ರಮದ ಶತ್ರು

ಹಿರಿಯ ವಕೀಲರು ಪಾವತಿಸುವ ನಿಶ್ಚಿತ ಹಣ/ ಸ್ಟೈಫಂಡ್‌ ಮೇಲೆ ಕಿರಿಯ ವಕೀಲರು ಅವಲಂಬಿತರಾಗಿರಬಾರದು ಎಂದು ನಾರಿಮನ್‌ ಹೇಳಿದರು. “ನಿರ್ದಿಷ್ಟವಾಗಿ ದೊರೆಯುವ ಹಣ, ಕಠಿಣ ಪರಿಶ್ರಮದ ಶತ್ರು. ಅಂತಹ ಭತ್ಯೆಯಿಂದ ಯುವ ವಕೀಲರು ಪ್ರೋತ್ಸಾಹ ಕಳೆದುಕೊಳ್ಳುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.

"ಖಂಡಿತವಾಗಿಯೂ, ಬದುಕಲು ಅಗತ್ಯವಿದ್ದರೆ, ಸ್ಟೈಪೆಂಡ್‌ ತೆಗೆದುಕೊಳ್ಳಿ. ಆದರೆ ಅದನ್ನು ಶಾಶ್ವತವಾಗಿ ಅವಲಂಬಿಸಬೇಡಿ. ಏಕೆಂದರೆ ನೀವು ಉದ್ಯೋಗಿ ಅಥವಾ ಕಚೇರಿ ಗುಮಾಸ್ತರ ಸ್ಥಾನದಲ್ಲಿ ಉಳಿಯುತ್ತೀರಿ. ನೀವು ಆಗಿನಿಂದ ಕಚೇರಿ ಅವಧಿಯಲ್ಲಿ ಮಾತ್ರ ಇನ್ನಷ್ಟು ಮತ್ತಷ್ಟು ಕಡಿಮೆ ಕೆಲಸ ಮಾಡಲು ಪ್ರಾರಂಭಿಸುತ್ತೀರಿ. ಬಳಿಕ ಇತರೆ ವಕೀಲರ ಬಳಿ ಎಷ್ಟು ಕಡಿಮೆ ಸಂಬಳ ಪಡೆಯುತ್ತಿದ್ದೇನೆ ಎಂದು ದೂರಲು ಪ್ರಾರಂಭಿಸುತ್ತೀರಿ” ಎಂದರು.

ಈಗಾಗಲೇ ತೀರ್ಮಾನವಾದ ಪ್ರಕರಣಗಳನ್ನು ಉಲ್ಲೇಖಿಸಿ…

ವಕೀಲರು ನ್ಯಾಯಾಲಯದಲ್ಲಿ ನಿರ್ವಹಿಸಬೇಕಾದ ನೈತಿಕ ಕರ್ತವ್ಯದ ಕುರಿತೂ ಅವರು ಪ್ರತಿಪಾದಿಸಿದರು. ಈ ಹಿಂದೆ ಒಂದು ತೀರ್ಪು ಬಂದಿದ್ದು ಅದನ್ನು ಉಲ್ಲೇಖಿಸಬೇಕಿದ್ದರೆ ಅದು ತಮ್ಮ ಕಕ್ಷೀದಾರರ ವಿರುದ್ಧ ಬಂದ ತೀರ್ಪಾಗಿದ್ದರೂ ಕೂಡ ಅದನ್ನು ನ್ಯಾಯಾಲಯದ ಗಮನಕ್ಕೆ ತರಬೇಕು ಎಂದರು.

ಈಗಾಗಲೇ ತೀರ್ಪು ನೀಡಿದ ಪ್ರಕರಣವನ್ನು ನ್ಯಾಯಾಲಯದ ಗಮನಕ್ಕೆ ತರುವುದು ನಿಮ್ಮ ಕರ್ತವ್ಯ. ಅದರ ಬಗ್ಗೆ ಅಂತರ ಕಾಯ್ದುಕೊಂಡಿದ್ದರೂ ನೀವು ಅದನ್ನು ಉಲ್ಲೇಖಿಸಬೇಕು. ಆದರೆ ವಜಾಗೊಂಡ ಪ್ರಕರಣವನ್ನು ಎಂದಿಗೂ ಉಲ್ಲೇಖಿಸದಿರಿ ಎಂದು ಕಿವಿಮಾತು ಹೇಳಿದರು.

Also Read
ಐವತ್ತನೇ ಮುದ್ರಣ ಕಂಡ ʼಸಂವಿಧಾನ ಓದುʼ ಕೃತಿ: ಲೇಖಕ ನ್ಯಾ. ನಾಗಮೋಹನ್ ದಾಸ್ ಅವರ ವಿಶೇಷ ಸಂದರ್ಶನ

ನಿಮ್ಮ ಕೋಪವನ್ನು ಕೋರ್ಟಿನ ಹೊರಗೇ ಬಿಡಿ...

ವೃತ್ತಿಯ ಕೆಲ ಗುಟ್ಟುಗಳನ್ನು ಹಂಚಿಕೊಳ್ಳುತ್ತಾ ಅವರು ವಕೀಲರ ಧ್ವನಿ ವಾದದ ಬಲ ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದರು.

"ನ್ಯಾಯಾಲಯದಲ್ಲಿ ಎಂದಿಗೂ ಉತ್ಪ್ರೇಕ್ಷೆಯ ಮಾತುಗಳನ್ನಾಡದಿರಿ. ಮೆಲುದನಿಯಲ್ಲಿ ವಾದ ಮಾಡಿ. ಆಲಂಕಾರಿಕ ಮಾತುಗಳನ್ನು ತಪ್ಪಿಸಿ ಮತ್ತು ತುಂಬಾ ಬುದ್ಧಿ ಪ್ರದರ್ಶನ ಮಾಡದಿರಿ. ನ್ಯಾಯಾಲಯದಲ್ಲಿ ಹಾಸ್ಯಾಸ್ಪದವಾಗಿರುವುದನ್ನು ತಪ್ಪಿಸಿ! ಇಲ್ಲದಿದ್ದರೆ ನೀವು ಅಜಾಗರೂಕ ವ್ಯಕ್ತಿತ್ವದವರು ಎಂದು ಕಳಂಕಿತರಾಗುತ್ತೀರಿ. ಅಲ್ಲಿ ಸಿಡುಕುತನ ತೋರದಿರಿ. ನಿಮ್ಮ ಕೋಪವನ್ನು ಮತ್ತು ಅದರೊಟ್ಟಿಗಿನ ಆಕ್ಷೇಪಾರ್ಹ ವಿಚಾರಗಳನ್ನು ನ್ಯಾಯಾಲಯದ ಹೊರಗೇ ಬಿಟ್ಟುಬಿಡಿ” ಎಂದು ಅವರು ಒತ್ತಿ ಹೇಳಿದರು.

ಪ್ರತಿಕೂಲ ತೀರ್ಪು ಬಂದಾಗ ನ್ಯಾಯಾಧೀಶರ ಬಗ್ಗೆ ಕೆಟ್ಟ ಮಾತು ಬೇಡ

ಘನತೆಯಿಂದ ಸೋಲೊಪ್ಪುವುದನ್ನು ಕಲಿಯಿರಿ ಎಂದ ಅವರು, ಪ್ರತಿಕೂಲ ತೀರ್ಪು ಬಂದಾಗ ನ್ಯಾಯಾಧೀಶರ ಬಗ್ಗೆ ಕೆಟ್ಟ ಮಾತುಗಳನ್ನಾಡದಿರಿ ಎಂದು ಅವರು ಸಲಹೆ ನೀಡಿದರು.

"ವಕೀಲರು ಏನನ್ನಾದರೂ ಹೇಳುವುದಿದ್ದರೆ ಅದನ್ನು ನ್ಯಾಯಾಲಯದಲ್ಲಿಯೇ ಹೇಳಬೇಕು ಮನವಿಯ ರೂಪದಲ್ಲಿ ಹೇಳಬೇಕೇ ವಿನಾ ನ್ಯಾಯಾಲಯದ ಹೊರಗಲ್ಲ ಎಂದು ಅವರು ತಿಳಿಸಿದರು. “ನಿಮ್ಮ ಪ್ರಕರಣ ಆಲಿಸುವ ನ್ಯಾಯಾಧೀಶರ ಬಗ್ಗೆ ತೀರ್ಮಾನಗಳಿಗೆ ಬರಬೇಡಿ. ನಮ್ಮ ಕಾನೂನು ವ್ಯವಸ್ಥೆಯ ಸಂಪೂರ್ಣ ಅಸ್ತಿತ್ವ ನ್ಯಾಯಾಧೀಶ ವರ್ಗ ಮತ್ತು ವಕೀಲ ಸಮುದಾಯದ ಪರಸ್ಪರ ಒಳ್ಳೆಯ ನಂಬಿಕೆಯನ್ನು ಅವಲಂಬಿಸಿರುತ್ತದೆ” ಎಂದರು.

ಮಾಧ್ಯಮಗಳೊಂದಿಗೆ ಮಾತನಾಡುವಾಗ ಎಚ್ಚರವಿರಲಿ

ಮಾಧ್ಯಮಗಳೊಂದಿಗೆ ಮಾತನಾಡುವಾಗ ಅತ್ಯಂತ ಜಾಗರೂಕವಾಗಿರಿ. ತಾನು ವಾದ ಮಂಡಿಸಲಿರುವ ಪ್ರಕರಣದ ಬಗ್ಗೆ ಎಂದಿಗೂ ಅವರು ಮಾಧ್ಯಮಗಳ ಮುಂದೆ ಮಾತನಾಡಬಾರದು. ಇದು ಅಗ್ಗದ ಪ್ರಚಾರಕ್ಕೆ ಕಾರಣವಾಗುತ್ತದೆ. ನ್ಯಾಯಾಧೀಶರಿಗೆ ಅನ್ಯಾಯ ಮಾಡಿದಂತಾಗುತ್ತದೆ. ತೀರ್ಪನ್ನು ಟೀಕಿಸಬೇಕಾದಾಗ, ಅಂತಹ ಟೀಕೆಗಳು ಅನಾದರಣೀಯ ಕಡೆಗಳಿಂದ ಬಂದಿದ್ದರೆ ಅದನ್ನು ಪ್ರಶಂಸಿಸಲಾಗುತ್ತದೆ" ಎಂದು ನಾರಿಮನ್ ಹೇಳಿದರು.

ವಾದಕ್ಕೆ ಸಮಯ ದೊರೆಯಲಿಲ್ಲ ಎಂದು ಎಂದಿಗೂ ದೂರದಿರಿ…

ವಾದಕ್ಕೆ ದೊರೆತ ಸಮಯ ಸಮರ್ಪಕವಾಗಿಲ್ಲ ಎಂದು ದೂರುವುದನ್ನು ಬಿಡಬೇಕು, ಹಾಗೆ ಮಾಡಿದರೆ ವಕೀಲರು ತಮ್ಮ ಅಸಾಮರ್ಥ್ಯ ಪ್ರದರ್ಶಿಸಿದಂತಾಗುತ್ತದೆ ಎಂದು ಅವರು ಹೇಳಿದರು.

Related Stories

No stories found.
Kannada Bar & Bench
kannada.barandbench.com