ನಾಲ್ವರು ನ್ಯಾಯಮೂರ್ತಿಗಳ ವರ್ಗಾವಣೆಗೆ ವಿರೋಧ: ಎಎಬಿಯಿಂದ ಮಂಗಳವಾರ ಪ್ರತಿಭಟನೆ; ಮಧ್ಯಾಹ್ನ ಸಾಮಾನ್ಯ ಸಭೆ

ಹೈಕೋರ್ಟ್‌ನ ಗೋಲ್ಡನ್ ಗೇಟ್‌ ಮುಂಭಾಗ ಮಂಗಳವಾರ ಬೆಳಿಗ್ಗೆ 10.15 ರಿಂದ 11.30ರವರೆಗೆ ವಕೀಲರು ಪ್ರತಿಭಟನೆ ನಡೆಸಲಿದ್ದಾರೆ. ಈ ಮೂಲಕ ನ್ಯಾಯಮೂರ್ತಿಗಳ ವರ್ಗಾವಣೆಯ ಶಿಫಾರಸು ನಿರ್ಧಾರವನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಲಿದ್ದಾರೆ.
ನಾಲ್ವರು ನ್ಯಾಯಮೂರ್ತಿಗಳ ವರ್ಗಾವಣೆಗೆ ವಿರೋಧ: ಎಎಬಿಯಿಂದ ಮಂಗಳವಾರ ಪ್ರತಿಭಟನೆ; ಮಧ್ಯಾಹ್ನ ಸಾಮಾನ್ಯ ಸಭೆ
Published on

ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳ ಹಠಾತ್‌ ವರ್ಗಾವಣೆ ವಿರೋಧಿಸಿರುವ ಬೆಂಗಳೂರು ವಕೀಲರ ಸಂಘ (ಎಎಬಿ), ಹೈಕೋರ್ಟ್‌ನ ಹಿರಿಯ ವಕೀಲರು ಹಾಗೂ ಎಲ್ಲ ವಕೀಲರು ಈ ಕುರಿತಂತೆ ಮಂಗಳವಾರ (ಏ.22) ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದಾರೆ. ಅಂತೆಯೇ, ಈ ಕುರಿತ ಮುಂದಿನ ಕ್ರಮಗಳನ್ನು ಚರ್ಚಿಸಲು ಮಧ್ಯಾಹ್ನ 1.30ಕ್ಕೆ ಎಎಬಿ ಸಾಮಾನ್ಯ ಸಭೆಯನ್ನು ಕರೆಯಲಾಗಿದೆ.

ವರ್ಗಾವಣೆ ಶಿಫಾರಸ್ಸಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನ ಸಭಾಂಗಣದಲ್ಲಿ ಸೋಮವಾರ ಕರೆಯಲಾಗಿದ್ದ ಹಿರಿಯ ವಕೀಲರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಎಎಬಿ ಅಧ್ಯಕ್ಷ ವಿವೇಕ ರೆಡ್ಡಿ, ಉಪಾಧ್ಯಕ್ಷ ಗಿರೀಶ್‌ ಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್‌ ವಿ ಪ್ರವೀಣ್‌ ಗೌಡ ಮತ್ತು ಖಜಾಂಚಿ ಶ್ವೇತಾ ರವಿಶಂಕರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ʼಹೈಕೋರ್ಟ್‌ನ ʼಗೋಲ್ಡನ್ ಗೇಟ್‌ʼ ಮುಂಭಾಗ ಮಂಗಳವಾರ (ಏ.22) ಬೆಳಿಗ್ಗೆ 10.15 ರಿಂದ 11.30ರವರೆಗೆ ವಕೀಲರು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ನ್ಯಾಯಮೂರ್ತಿಗಳ ವರ್ಗಾವಣೆಯ ಶಿಫಾರಸು ನಿರ್ಧಾರವನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುವ ದಿಸೆಯಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆʼ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Also Read
ಕರ್ನಾಟಕದ ನಾಲ್ವರು ನ್ಯಾಯಮೂರ್ತಿಗಳ ವರ್ಗಾವಣೆಗೆ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸ್ಸು

ಹಿರಿಯ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರನ್ನು ಒಡಿಶಾ, ನ್ಯಾ. ಕೆ ನಟರಾಜನ್‌ ಅವರನ್ನು ಕೇರಳ, ನ್ಯಾ. ಎನ್‌ ಎಸ್‌ ಸಂಜಯ್‌ ಗೌಡ ಅವರನ್ನು ಗುಜರಾತ್‌ ಮತ್ತು ನ್ಯಾ. ಹೇಮಂತ್‌ ಚಂದನಗೌಡರ್‌ ಅವರನ್ನು ಮದ್ರಾಸ್‌ ಹೈಕೋರ್ಟ್‌ಗೆ ವರ್ಗಾಯಿಸಿಲು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸ್ಸು ಮಾಡಿದೆ.

Kannada Bar & Bench
kannada.barandbench.com