ಸದುದ್ದೇಶಕ್ಕಾಗಿ ನಡೆಸುವ ಹೋರಾಟ ಅತಿ ಸಾರ್ಥಕತೆಯಿಂದ ಕೂಡಿರುತ್ತದೆ ಎಂದು ತಂದೆಯಿಂದ ಕಲಿತಿರುವೆ: ನ್ಯಾ. ನಾಗರತ್ನ

ಸುಪ್ರೀಂ ಕೋರ್ಟ್‌ ನ್ಯಾ. ನಾಗರತ್ನ ಅವರು ತಮ್ಮ ತಂದೆ ನಿವೃತ್ತ ಸಿಜೆಐ ಇ ಎಸ್ ವೆಂಕಟರಾಮಯ್ಯ ಅವರ ಸ್ಮರಣಾರ್ಥ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ವತಿಯಿಂದ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
Justice BV Nagarathna
Justice BV Nagarathna
Published on

ಅನ್ಯಾಯದ ವಿರುದ್ಧ ಹೋರಾಡಲು, ಹಾಗೆ ಹೋರಾಡುವಾಗ ಶಾಂತವಾಗಿರಲು ನನ್ನ ತಂದೆಯಿಂದ ಕಲಿತಿದ್ದೇನೆ ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು.

ನಿವೃತ್ತ ಸಿಜೆಐ ಹಾಗೂ ನ್ಯಾ. ನಾಗರತ್ನ ಅವರ ತಂದೆ ಇ ಎಸ್ ವೆಂಕಟರಾಮಯ್ಯ ಅವರ ಸ್ಮರಣಾರ್ಥ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ವತಿಯಿಂದ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Also Read
ರಾಜಕೀಯ ಹಸ್ತಕ್ಷೇಪ, ಸ್ವಾಯತ್ತತೆಯ ಕೊರತೆಯಿಂದ ನಮ್ಮ ಸಂಸ್ಥೆಗಳ ಕೆಲಸದ ಮೇಲೆ ಪರಿಣಾಮ: ನ್ಯಾ. ಪಿ ಎಸ್‌ ನರಸಿಂಹ

"ವೆಂಕಟರಾಮಯ್ಯ ಅವರು ನ್ಯಾಯಾಲಯದಲ್ಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿದ್ದರೂ ನ್ಯಾಯ ನೀಡುವಾಗ ಶಾಂತವಾಗಿರುತ್ತಿದ್ದರು" ಎಂದು ಅವರು ಹೇಳಿದರು.

“ನನ್ನ ತಂದೆಯ ಬಹುಮುಖಿ ವ್ಯಕ್ತಿತ್ವದಿಂದ ಜೀವನದ ಎಲ್ಲಾ ಪ್ರಮುಖ ಪಾಠಗಳನ್ನು ಕಲಿತದ್ದು ನನ್ನ ಅದೃಷ್ಟವೆಂದು ಭಾವಿಸುವೆ. ಅವರ ಮಾರ್ಗದರ್ಶನದಲ್ಲಿ ನಾನು ಸದಾ ಕಾನೂನು ವಿದ್ಯಾರ್ಥಿಯಾಗಿದ್ದೆ. ಒಳ್ಳೆಯ ಉದ್ದೇಶಕ್ಕಾಗಿ ಹೋರಾಡುವುದು ಅತ್ಯಂತ ಸಂತೃಪ್ತಿಯ ಕೆಲಸ ಎಂಬ ನನ್ನ ವೈಯಕ್ತಿಕ ನಂಬಿಕೆಯನ್ನು ಬಲಪಡಿಸಿದ ವ್ಯಕ್ತಿತ್ವದ ಶಕ್ತಿಯನ್ನು ಅವರಲ್ಲಿ ಕಂಡಿರುವೆ. ಅವರ ಶಾಂತ ಮತ್ತು ಸೌಮ್ಯವಾದ ನಡೆ  ಅವರ ಉದಾತ್ತತೆ ಮತ್ತು ನೈತಿಕತೆಯನ್ನು ಹೇಳುತ್ತದೆ. ಅವರು 27 ವರ್ಷಗಳ ಹಿಂದೆ ನಿಧನರಾಗಿದ್ದರೂ, ಅವರ ವ್ಯಕ್ತಿತ್ವ ನಮಗೆ ಯಾವಾಗಲೂ ಮಾರ್ಗದರ್ಶನ ನೀಡುತ್ತದೆ” ಎಂದು ವಿವರಿಸಿದರು.

Justice ES Venkataramiah
Justice ES Venkataramiah

ತಮ್ಮ ತಂದೆಯ ಅಪಾರ ಶ್ರಮ ಮತ್ತು ಅವರಿಗೆ ತಾಯಿ ಪದ್ಮ ಅವರು ಅವಿರತವಾಗಿ ಬೆಂಬಲವಾಗಿ ನಿಂತದ್ದನ್ನು ನೆನದು ನ್ಯಾಯಮೂರ್ತಿ ನಾಗರತ್ನ ಅವರು ಗದ್ಗದಿತರಾದರು.

ನ್ಯಾಯಮೂರ್ತಿ ವೆಂಕಟರಾಮಯ್ಯ ಅವರು ಜೂನ್ 19, 1989 ರಿಂದ ಡಿಸೆಂಬರ್ 17, 1989 ರವರೆಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದರು. ಮಾರ್ಚ್ 8, 1979 ರಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಹಿರಿಮೆ ಅವರದಾಗಿತ್ತು.

Also Read
ಕಾರ್ಯಾಂಗ ತನ್ನ ಎಲ್ಲೆ ಮೀರಿದ್ದಕ್ಕೆ 'ಬುಲ್ಡೋಜರ್ ನ್ಯಾಯʼ ಉದಾಹರಣೆ: ನ್ಯಾ. ಬಿ ವಿ ನಾಗರತ್ನ

1946ರಲ್ಲಿ ಅಖಿಲ ಭಾರತ ವಕೀಲರ ಸಮ್ಮೇಳನದಲ್ಲಿ ಭಾಗವಹಿಸಲು ನಾಗಪುರಕ್ಕೆ ತೆರಳಲೆಂದು ಹೊರಟಿದ್ದ ಇಬ್ಬರು ಯುವಕರು ರೈಲು ಪ್ರಯಾಣದ ವೇಳೆ ಒಬ್ಬರಿಗೊಬ್ಬರು ಪರಿಚಿತರಾದರು. 43 ವರ್ಷದ ನಂತರ ಈ ಇಬ್ಬರಲ್ಲಿ ಒಬ್ಬರು ರಾಷ್ಟ್ರಪತಿಗಳಾದರೆ ಮತ್ತೊಬ್ಬರು ಭಾರತದ ಮುಖ್ಯ ನ್ಯಾಯಮೂರ್ತಿಯಾದರು ಎಂದು ಕ್ರಮವಾಗಿ ಆರ್ ವೆಂಕಟರಾಮನ್ ಹಾಗೂ ತಮ್ಮ ತಂದೆ ಕುರಿತು ನ್ಯಾ. ನಾಗರತ್ನ ನೆನೆದರು. ರಾಷ್ಟ್ರಪತಿಯಾಗಿದ್ದ ಆರ್‌. ವೆಂಕಟರಾಮನ್‌ ಅವರೇ ವೆಂಕಟರಾಮಯ್ಯ ಅವರಿಗೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಬೋಧಿಸಿದ ವಿಶೇಷ ಸನ್ನಿವೇಶವನ್ನು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಿ ಎಸ್ ನರಸಿಂಹ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಮತ್ತು ಕರ್ನಾಟಕ ಹೈಕೋರ್ಟ್‌ನ ವಿವಿಧ ನ್ಯಾಯಮೂರ್ತಿಗಳು ಕಾನೂನು ಶಾಲೆಯ ಕುಲಪತಿ ಸುಧೀರ್‌ ಕೃಷ್ಣಸ್ವಾಮಿ, ಕುಲಸಚಿವ ನಿಗಮ್‌ ನುಗ್ಗೆಹಳ್ಳಿ ಹಾಗೂ ಹಿರಿಯ ವಕೀಲರು ಉಪಸ್ಥಿತರಿದ್ದರು.

Kannada Bar & Bench
kannada.barandbench.com