“ರಾಜ್ಯ ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಕಳೆದ ಐದು ತಿಂಗಳಿಂದ ನೋಡುತ್ತಿದ್ದೇನೆ” ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರು ಮಾರ್ಮಿಕವಾಗಿ ನುಡಿದ ಘಟನೆ ಬುಧವಾರ ಹೈಕೋರ್ಟ್ ವಿಚಾರಣೆಯ ವೇಳೆ ನಡೆಯಿತು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ, ಕುಡುಪು ಹಾಗೂ ಮಂದಾರ ಪ್ರದೇಶಗಳಲ್ಲಿನ ಘನತ್ಯಾಜ್ಯ ಭೂಭರ್ತಿ ಘಟಕದಿಂದ ಉಂಟಾದ ಅನಾಹುತಗಳಿಗೆ ಸಂಬಂಧಿಸಿದಂತೆ ಕನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿ ವಿಚಾರಣೆಯನ್ನು ಸಿಜೆ ನೇತೃತ್ವದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರನ್ನೊಳಗೊಂಡ ವಿಭಾಗೀಯ ಪೀಠ ನಡೆಸಿತು.
ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರು ಮುಂದಿನ ವಿಚಾರಣೆಗೆ ಮಂಗಳೂರು ಪಾಲಿಕೆ ಆಯುಕ್ತರಿಗೆ ಖುದ್ದು ಹಾಜರಿಯಿಂದ ವಿನಾಯಿತಿ ನೀಡಬೇಕು ಎಂಬ ಕೋರಿಕೆಯನ್ನು ತಿರಸ್ಕರಿಸಿದ ಸಿಜೆ ಅವರು “ಮೊದಲು ಸಚಿವ ಸಂಪುಟದ ಅನುಮೋದನೆ ಸಿಗಲಿ. ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದನ್ನು ಕಳೆದ ಐದು ತಿಂಗಳಿಂದ ನೋಡುತ್ತಿದ್ದೇನೆ. ಆಯುಕ್ತರೇ ಸರ್ಕಾರದ ಮೇಲೆ ಒತ್ತಡ ಹೇರಿ ಕೆಲಸ ಮಾಡಿಸಲಿ, ಇಲ್ಲವಾದರೆ ಕೆಲಸಗಳು ಬೇಗ ಆಗುವುದಿಲ್ಲ. ಸಚಿವ ಸಂಪುಟದ ಅನುಮೋದನೆ ಸಿಗುವವರೆಗೆ ಆಯುಕ್ತರ ಖುದ್ದು ಹಾಜರಾತಿಗೆ ವಿನಾಯಿತಿ ನೀಡಲು ಸಾಧ್ಯವಿಲ್ಲ” ಎಂದರು.
ಮಂಗಳೂರಿನ ಪಚ್ಚನಾಡಿ ಘನತ್ಯಾಜ್ಯ ಭೂಭರ್ತಿ ಘಟಕದಲ್ಲಿ ಹಲವು ವರ್ಷಗಳಿಂದ ಸಂಗ್ರಹವಾಗಿರುವ ಘನತ್ಯಾಜ್ಯ ಸ್ಥಳಾಂತರಿಸುವ ಕಾಮಗಾರಿಗೆ ನಾಳೆಯೇ ಸಚಿವ ಸಂಪುಟದ ಅನುಮೋದನೆ ಪಡೆಯಲು ಎಲ್ಲ ರೀತಿಯ ಪ್ರಯತ್ನ ಮಾಡಬೇಕು ಎಂದು ಪೀಠವು ಸರ್ಕಾರಕ್ಕೆ ನಿರ್ದೇಶಿಸಿದೆ.
ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರು “ನ್ಯಾಯಾಲಯ ಕಳೆದ ವಿಚಾರಣೆ ವೇಳೆ ನೀಡಿದ್ದ ನಿರ್ದೇಶನದಂತೆ ಭೂಭರ್ತಿ ಘಟಕದಲ್ಲಿ ಬಹಳ ವರ್ಷಗಳಿಂದ ಶೇಖರಣೆಯಾಗಿರುವ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ವಿಚಾರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮುಂದೆ ಮಂಡಿಸಲಾಗಿತ್ತು. ತ್ಯಾಜ್ಯ ಸ್ಥಳಾಂತರ ಕಾಮಗಾರಿಗೆ ಸಚಿವ ಸಂಪುಟದ ಅನುಮೋದನೆ ಪಡೆಯುವ ನಿಟ್ಟಿನಲ್ಲಿ ಮುಖ್ಯ ಕಾರ್ಯದರ್ಶಿಗಳೇ ಕ್ರಮ ಕೈಗೊಳ್ಳುತ್ತಿದ್ದಾರೆ. ಪ್ರತಿ ಗುರುವಾರ ಸಚಿವ ಸಂಪುಟ ಸಭೆ ನಡೆಯಲಿದೆ. ನಾಳೆ (ಫೆ.24) ಅಥವಾ ಮುಂದಿನ ಗುರುವಾರದೊಳಗೆ ಸಂಪುಟದ ಅನುಮೋದನೆ ಪಡೆಯಲಾಗುವುದು ಎಂದು ಪೀಠಕ್ಕೆ ತಿಳಿಸಿದರು.
ಅದನ್ನು ಪರಿಗಣಿಸಿದ ಪೀಠ, ಸಾಧ್ಯವಾದಷ್ಟೂ ಇದೇ ಗುರುವಾರವೇ ಸಚಿವ ಸಂಪುಟದ ಅನುಮೋದನೆ ಪಡೆಯಲು ಎಲ್ಲ ಪ್ರಯತ್ನಗಳನ್ನೂ ಸರ್ಕಾರ ಮಾಡಬೇಕು ಎಂದು ತಿಳಿಸಿ, ವಿಚಾರಣೆಯನ್ನು ಫೆಬ್ರವರಿ 25ಕ್ಕೆ ಮುಂದೂಡಿತು.
ಭೂಭರ್ತಿ ಘಟಕದಲ್ಲಿ ಹಲವು ವರ್ಷಗಳಿಂದ ಸಂಗ್ರಹವಾಗಿರುವ ಘನತ್ಯಾಜ್ಯದ ಪರಿಣಾಮದಿಂದ 19 ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕಳೆದ ವಿಚಾರಣೆ ವೇಳೆ ನ್ಯಾಯಾಲಯದ ಆದೇಶದಲ್ಲಿ ದಾಖಲಿಸಲಾಗಿದೆ. ಆದರೆ, ಅಂತಹ ಯಾವುದೇ ಘಟನೆ ಸಂಭವಿಸಿಲ್ಲ ಎಂದು ಎಎಜಿ ಧ್ಯಾನ್ ಚಿನ್ನಪ್ಪ ಪೀಠಕ್ಕೆ ತಿಳಿಸಿದರು. ಇದಕ್ಕೆ ದನಿಗೂಡಿಸಿದ ಕೆಎಸ್‌ಎಲ್‌ಎಸ್‌ಎ ಪರ ವಕೀಲ ಶ್ರೀಧರ್ ಪ್ರಭು, ತ್ಯಾಜ್ಯದ ಕಾರಣದಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ, 19 ಜನರನ್ನು ಸ್ಥಳಾಂತರಿಸಿರಬಹುದು ಎಂದು ತಿಳಿಸಿದರು. ಸ್ಥಳಾಂತರಗೊಂಡಿರುವ ಎಲ್ಲರಿಗೂ ಸರ್ಕಾರದ ವತಿಯಿಂದ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಎಎಜಿ ತಿಳಿಸಿದರು. ಅದನ್ನು ಪೀಠವು ಆದೇಶದಲ್ಲಿ ದಾಖಲಿಸಿಕೊಂಡಿತು.