ಮಂಗಳೂರಿನ ಪಚ್ಚನಾಡಿ ಕಸ ಸುರಿಯುವ ಸ್ಥಳದಲ್ಲಿ ಸುದೀರ್ಘ ಕಾಲದಿಂದ ಸಂಗ್ರಹವಾಗಿರುವ ತ್ಯಾಜ್ಯ ವಿಲೇವಾರಿ ವಿಚಾರದಲ್ಲಿ ನಾನಾ ಸಬೂಬುಗಳನ್ನು ಹೇಳಿಕೊಂಡು ಕಾಲದೂಡಿತ್ತಿರುವುದಕ್ಕೆ ಗುರುವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕರ್ನಾಟಕ ಹೈಕೋರ್ಟ್, ʼಈಗಿರುವುದು ಅತ್ಯಂತ ಸಂವೇದನಾರಹಿತ ಸರ್ಕಾರ, ಸರ್ಕಾರಕ್ಕೆ ಛೀಮಾರಿ ಹಾಕುತ್ತೇವೆʼ ಎಂದು ಮೌಖಿಕವಾಗಿ ಚಾಟಿ ಬೀಸಿತು.
ಮಂಗಳೂರಿನ ಪಚ್ಚನಾಡಿ ಪ್ರದೇಶ ಮತ್ತು ಮರವೂರ ಜಲಾಶಯದ ವ್ಯಾಪ್ತಿಯಲ್ಲಿ ಕುಡಿಯುವ ನೀರು ಕಲುಷಿತವಾಗಿರುವುದರಿಂದ 13 ಗ್ರಾಮಗಳ ಜನರಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂದು ಆಕ್ಷೇಪಿಸಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುತಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
“ಮಾಲಿನ್ಯಕ್ಕೆ ಎಡೆಮಾಡಿಕೊಡುತ್ತಿರುವ ಮಂಗಳೂರಿನ ಪಚ್ಚನಾಡಿ ಕಸ ಸುರಿಯುವ ಸ್ಥಳದಲ್ಲಿ ಸುದೀರ್ಘ ಕಾಲದಿಂದ ಸಂಗ್ರಹವಾಗಿರುವ ತ್ಯಾಜ್ಯ ವಿಲೇವಾರಿ ಮಾಡುವುದಕ್ಕೆ ಸಂಬಂಧಿಸಿದಂತೆ ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಪ್ರತಿವಾದಿಗಳು ನಡೆದುಕೊಳ್ಳುತ್ತಿರುವ ರೀತಿಯು ಅತ್ಯಂತ ಆಘಾತ ಉಂಟು ಮಾಡುವಂತಿದೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.
“ಜಲ ಮಾಲಿನ್ಯಕ್ಕೆ ಕಾರಣವಾಗಿರುವ ಸುದೀರ್ಘ ಕಾಲದಿಂದ ಸಂಗ್ರಹವಾಗಿರುವ ತ್ಯಾಜ್ಯ ವಿಲೇವಾರಿಗೆ ರಾಜ್ಯ ಸರ್ಕಾರವು 73 ಕೋಟಿ ರೂಪಾಯಿ ಹಂಚಿಕೆ ಮಾಡಿದೆ ಎಂಬ ವಿಚಾರ ನಮ್ಮ ಗಮನದಲ್ಲಿದೆ. ಆದರೆ, ಇದುವರೆಗೂ ತ್ಯಾಜ್ಯ ವಿಲೇವಾರಿ ಮಾಡುವ ಕೆಲಸ ಆರಂಭವಾಗಿಲ್ಲ. ಫಲ್ಗುಣಿ ಉಪನದಿಯ ಕುಡಿಯುವ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದ್ದು, ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಪ್ರತಿವಾದಿಗಳು ಕೆಲಸ ಆರಂಭಿಸುವ ವಿಚಾರದಲ್ಲಿ ನಿರಂತರವಾಗಿ ನ್ಯಾಯಾಲಯ ಒತ್ತಡ ಹಾಕುತ್ತಿದೆ. ಕಳೆದ ವರ್ಷದ ಜುಲೈ 26ರಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (ಕೆಎಸ್‌ಪಿಸಿಬಿ) ವಿಶ್ಲೇಷಣಾ ವರದಿ ಸಲ್ಲಿಸಿದ್ದು, ಇದರಲ್ಲಿ ಅಲ್ಲಿನ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ವಿವರಿಸಿದೆ. ಹೀಗಾಗಿ, ಸಾರ್ವಜನಿಕ ಹಿತಾಸಕ್ತಿ ಇರುವುದರಿಂದ ಪ್ರತಿವಾದಿಗಳಿಗೆ ಕೆಲಸ ಆರಂಭಿಸುವ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಡಲು ಯತ್ನಿಸಲಾಗುತ್ತಿದೆ. ಆದರೆ, ಅವರಿಗೆ ಇದು ಅರಿವಾಗುತ್ತಿಲ್ಲ” ಎಂದು ಬೇಸರದಿಂದ ಆದೇಶದಲ್ಲಿ ಉಲ್ಲೇಖಿಸಿದೆ.
“ಪ್ರತಿ ಬಾರಿಯೂ ಪ್ರಕರಣ ವಿಚಾರಣೆಗೆ ಬಂದಾಗ ಕೆಲಸ ಆರಂಭಿಸದಿರುವುದಕ್ಕೆ ನೆಪಗಳನ್ನು ಹೇಳಲಾಗುತ್ತಿದೆ. ಈ ಬಾರಿ, ಹಣಕಾಸು ಅನುಮೋದನೆ ದೊರೆತಿದ್ದು, ಸದರಿ ವಿಚಾರವನ್ನು ಸಂಪುಟದ ಒಪ್ಪಿಗೆಗೆ ಮಂಡಿಸಲಾಗಿದೆ ಎಂದು ಹೇಳಲಾಗಿದೆ. ಸುದೀರ್ಘ ಅವಧಿಯಿಂದ ಇರುವ ತ್ಯಾಜ್ಯದಿಂದ 19 ಮಂದಿ ಸಾವಿಗೀಡಾಗಿದ್ದು, ಸಾರ್ವಜನಿಕ ಹಿತಾಸಕ್ತಿ ವಿಚಾರ ಅಡಕವಾಗಿರುವುದನ್ನು ಪರಿಗಣಿಸಿ, ರಾಜ್ಯದ ಮುಖ್ಯ ಕಾರ್ಯದರ್ಶಿಯು ವೈಯಕ್ತಿಕವಾಗಿ ಈ ವಿಚಾರದತ್ತ ಗಮನಹರಿಸಬೇಕು. ಸುದೀರ್ಘ ಅವಧಿಯಿಂದ ಶೇಖರಣೆಯಾಗಿರುವ ತ್ಯಾಜ್ಯವನ್ನು ವಿಲೇವಾರಿ ಮಾಡುವ ಕೆಲಸ ತಕ್ಷಣ ಆರಂಭ ಮಾಡುವ ಕುರಿತು ಎಲ್ಲಾ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ನಿರ್ದೇಶಿಸುತ್ತಿದ್ದೇವೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಶ್ರೀಧರ್ ಪ್ರಭು ಅವರು “ಕಳೆದ ವರ್ಷದ ಸೆಪ್ಟೆಂಬರ್ 24ರ ಆದೇಶದಲ್ಲಿ ರಾಜ್ಯ ಸರ್ಕಾರವು ತ್ಯಾಜ್ಯ ವಿಲೇವಾರಿಗೆ 72 ಕೋಟಿ ಬಿಡುಗಡೆ ಮಾಡಿದೆ ಎಂದು ಹೇಳಲಾಗಿದೆ. ಫೆಬ್ರವರಿ 10 ಮುಗಿದಿದ್ದು, ಇನ್ನೂ ಕೆಲಸ ಆರಂಭವಾಗಿಲ್ಲ” ಎಂದು ಪೀಠದ ಗಮನಸೆಳೆದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಿಶೇಷ ವಕೀಲೆ ಮಾನಸಿ ಕುಮಾರ್ ಅವರು “72 ಕೋಟಿ ರೂಪಾಯಿಗೆ ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. 50.78 ಕೋಟಿ ರೂಪಾಯಿ ಟೆಂಡರ್‌ಗೆ ಒಪ್ಪಿಗೆ ನೀಡಲಾಗಿದೆ. ಬಾಕಿ ಹಣಕ್ಕೆ ಸಂಬಂಧಿಸಿದಂತೆ ಅನುಮೋದನೆ ಪಡೆಯಲು ಕಡತವನ್ನು ಸಂಪುಟದ ಸಭೆಯ ಮುಂದೆ ಮಂಡಿಸಲಾಗಿದೆ. ಕೆಲವೇ ದಿನಗಳಲ್ಲಿ ಸಂಪುಟ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಅದಕ್ಕಾಗಿ 10 ದಿನ ಕಾಲಾವಕಾಶ ನೀಡಬೇಕು” ಎಂದು ಕೋರಿದರು.
ಇದರಿಂದ ಕೆರಳಿದ ಸಿಜೆ ಅವಸ್ಥಿ ಅವರು “ಹಣಕಾಸು ಅನುಮೋದನೆ ದೊರೆತಿದೆಯೇ? ಏತಕ್ಕಾಗಿ ಕಡತವನ್ನು ಸಂಪುಟದ ಮುಂದೆ ಇಡಲಾಗಿದೆ? ಹಣಕಾಸು ಅನುಮೋದನೆ ದೊರೆತಿದೆಯೋ, ಇಲ್ಲವೋ ಹೇಳಿ. ಕಳೆದ ಮೂರು ವಿಚಾರಣೆಗಳಿಂದ ಸಬೂಬುಗಳನ್ನೇ ಕೇಳುವುದಾಗಿದೆ. ಕೆಲಸ ಮಾತ್ರ ಆರಂಭವಾಗಿಲ್ಲ” ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು.
“ಜನರನ್ನು ಕಲುಷಿತ ಮತ್ತು ವಿಷಪೂರಿತ ನೀರು ಕುಡಿಯುವುದರಿಂದ ಪಾರು ಮಾಡಿ ಸಾರ್ವಜನಿಕ ಹಿತಾಸಕ್ತಿ ಕಾಪಾಡುವುದು ನಿಮಗೆ (ಸರ್ಕಾರ) ಬೇಕಾಗಿಲ್ಲ. ನೀವು ಹೇಳುತ್ತಿರುವುದನ್ನು ನಾವು ದಾಖಲಿಸಿಕೊಳ್ಳೋಣವೇ? ಈಗಿರುವುದು ಸಂವೇದನಾರಹಿತ ಸರ್ಕಾರ ಎಂಬುದನ್ನು ದಾಖಲಿಸಿಕೊಳ್ಳೋಣವೇ? ಜನರು ವಿಷಪೂರಿತವಾದ ನೀರು ಕುಡಿಯುವ ಪರಿಸ್ಥಿತಿ ನಿರ್ಮಿಸುವ ಸರ್ಕಾರ ಎಂಬುದನ್ನು ದಾಖಲಿಸಿಕೊಳ್ಳೋಣವೇ? ಈಗ ಸಂಪುಟ ತೀರ್ಮಾನದ ಬಗ್ಗೆ ನಿಮಗೆ ಚಿತ್ತ ನೆಟ್ಟಿದೆ. ಹಿಂದೆ ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆಯಲಾಗಿರಲಿಲ್ಲ. ನಿಮ್ಮಿಂದ ಏನೂ ಮಾಡಲಾಗುತ್ತಿಲ್ಲ ಎಂದು ಆದೇಶದಲ್ಲಿ ದಾಖಲಿಸುತ್ತೇವೆ. ಸರ್ಕಾರಕ್ಕೆ ಛೀಮಾರಿ ಹಾಕುತ್ತೇವೆ” ಎಂದು ಪೀಠವು ಮೌಖಿಕವಾಗಿ ಆಕ್ರೋಶದಿಂದ ನುಡಿಯಿತು.
“ತ್ಯಾಜ್ಯವನ್ನು ವಿಲೇವಾರಿ ಮಾಡುವ ಪ್ರಕ್ರಿಯೆ ಆರಂಭವಾಗಿದೆ” ಎಂದು ವಕೀಲೆ ಮಾನಸಿ ಕುಮಾರ್ ಹೇಳುತ್ತಿದ್ದಂತೆ ಮತ್ತಷ್ಟು ಆಕ್ರೋಶಗೊಂಡ ಪೀಠವು “ತ್ಯಾಜ್ಯ ವಿಲೇವಾರಿ ಯೋಜನೆ ಆರಂಭವಾಗಿದೆ ಎಂಬ ಹೇಳಿಕೆ ನೀಡಿ. ನಾವು ಅದನ್ನು ಪರಿಶೀಲಿಸುತ್ತೇವೆ. ಅಲ್ಲಿಂದ ನೀರು ತರಿಸಿ ಕುಡಿಯಲು ಹೇಳುತ್ತೇವೆ. ನೀವು ಆ ನೀರನ್ನು ಕುಡಿಯಲು ಸಿದ್ಧವಿದ್ದೀರಾ? ಇಲ್ಲಿ ಕುಳಿತು ಏನು ಬೇಕಾದರೂ ಹೇಳುವುದು ಸುಲಭ” ಎಂದು ಸರ್ಕಾರದ ಪರ ವಕೀರನ್ನು ತರಾಟೆಗೆ ತೆಗೆದುಕೊಂಡಿತು.
ಅಂತಿಮವಾಗಿ ಸರ್ಕಾರಿ ವಕೀಲರ ಕೋರಿಕೆಯಂತೆ ವಿಚಾರಣೆಯನ್ನು ಹತ್ತು ದಿನಗಳ ಕಾಲ ಮುಂದೂಡಿದ್ದು, ಫೆಬ್ರವರಿ 23ಕ್ಕೆ ಮರು ವಿಚಾರಣೆ ನಡೆಯಲಿದೆ.
ತ್ಯಾಜ್ಯ ವಿಲೇವಾರಿ ಕೆಲಸ ಆರಂಭವಾಗದಿದ್ದಲ್ಲಿ ಮುಂದಿನ ವಿಚಾರಣೆಯ ವೇಳೆ ಮಂಗಳೂರು ಪಾಲಿಕೆ ಆಯುಕ್ತರು ವಿಚಾರಣೆಗೆ ಹಾಜರಾಗಬೇಕು ಎಂದು ಪೀಠವು ಆದೇಶಿಸಿತ್ತು. ಇದರಂತೆ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು.
ಇದಕ್ಕೆ ಪೀಠವು ನಿಮ್ಮನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ಹಾಜರಾಗಲು ಸೂಚಿಸಲಾಗಿತ್ತೇ? ನಿರ್ದಿಷ್ಟ ಆದೇಶ ಇದ್ದರೆ ಮಾತ್ರ ವರ್ಚುವಲ್ ವಿಚಾರಣೆಯಲ್ಲಿ ಹಾಜರಾಗಬಹುದು. ಇಲ್ಲವಾದಲ್ಲಿ ಖುದ್ದು ವಿಚಾರಣೆಗೆ ಹಾಜರಾಗಬೇಕು. ನಿಮಗೆ ವರ್ಚುವಲ್ ವಿಚಾರಣೆಗೆ ಹಾಜರಾಗಲು ಹೇಳಿದವರು ಯಾರು? ಎಂದು ತರಾಟೆಗೆ ತೆಗೆದುಕೊಂಡಿತು. ಪೀಠದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಸರ್ಕಾರಿ ವಕೀಲರು ಮತ್ತು ಅಧಿಕಾರಿ ಕ್ಷಮೆಯಾಚಿಸಿದರು.