ಹಾಥ್‌ರಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ದಂಡಾಧಿಕಾರಿಯನ್ನು (ಮ್ಯಾಜಿಸ್ಟ್ರೇಟ್) ವರ್ಗಾವಣೆ ಮಾಡದಿರಲು ನಿರ್ಧರಿಸಲಾಗಿದೆ ಎಂದು ಉತ್ತರಪ್ರದೇಶ ಸರ್ಕಾರ ಅಲಾಹಾಬಾದ್ ಹೈಕೋರ್ಟ್‌ಗೆ ತಿಳಿಸಿದೆ. “ಅವರ ವರ್ಗಾವಣೆಗಾಗಿ ರಾಜಕೀಯ ಆಟ ಆಡಲಾಗುತ್ತಿದೆ. ರಾಜಕೀಯ ಪಕ್ಷಗಳು ತಮ್ಮ ಕುಟಿಲ ಉದ್ದೇಶಕ್ಕೆ ಈ ಸಂಗತಿಯನ್ನು ಬಳಸಿಕೊಂಡಿವೆ” ಎಂದು ಸರ್ಕಾರ ಆರೋಪಿಸಿದೆ. ಜಿಲ್ಲಾ ದಂಡಾಧಿಕಾರಿ ಸಾಕ್ಷ್ಯಗಳನ್ನು ನಾಶ ಪಡಿಸುವ ಪ್ರಮೇಯ ಬರುವುದಿಲ್ಲ. ಹಾಗಾಗಿ ಅವರ ವರ್ಗಾವಣೆಯ ಪ್ರಶ್ನೆ ಉದ್ಭವಿಸುವುದಿಲ್ಲ. ಸಂತ್ರಸ್ತೆಯ ಕುಟುಂಬದ ರಕ್ಷಣೆ ಸಿಆರ್‌ಪಿಎಫ್ ಕೈಯಲ್ಲಿದ್ದು ಅದಕ್ಕೂ ರಾಜ್ಯ ಸರ್ಕಾರಕ್ಕೂ ಸಂಬಂಧವಿಲ್ಲ ಮತ್ತು ಖುದ್ದು ಸಿಬಿಐ ತನಿಖೆ ನಡೆಸುತ್ತಿದ್ದು ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ಇಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಇದೇ ವೇಳೆ ಪ್ರಕರಣದ ಸ್ಥಿತಿಗತಿ ಕುರಿತು ಸಿಬಿಐ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿತು. ಡಿ. 10ರ ಒಳಗಾಗಿ ತನಿಖೆಯನ್ನು ಪೂರ್ಣಗೊಳಿಸಲಾಗುವುದು ಎಂದು ಸಿಬಿಐ ಪರ ವಕೀಲ ಅನುರಾಗ್ ಸಿಂಗ್ ತಿಳಿಸಿದರು. ಪ್ರಕರಣವನ್ನು ಡಿ. 16ಕ್ಕೆ ಮುಂದೂಡಲಾಗಿದೆ.
ಬೆಂಗಳೂರು ವ್ಯಾಪ್ತಿಯ ಬಹುತೇಕ ಪೊಲೀಸ್ ಠಾಣೆಗಳು ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತಂತೆ ಇರುವ ಶಾಸನಗಳ ಪ್ರತಿಯನ್ನು ಹೊಂದಿಲ್ಲ ಮತ್ತು ಪ್ರದರ್ಶಿಸುತ್ತಿಲ್ಲ ಎಂದು ಮಕ್ಕಳ ಕಲ್ಯಾಣ ಸಮಿತಿ- 2 ನಗರದ ಪೊಲೀಸ್ ಕಮಿಷನರ್ ಅವರ ಗಮನಕ್ಕೆ ತಂದಿದ್ದು ಕೂಡಲೇ ಮಧ್ಯಪ್ರವೇಶಿಸುವಂತೆ ಕೋರಿದೆ. ಬಹುತೇಕ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿಕೊಳ್ಳುವಾಗ ತಪ್ಪಾಗಿ ಸೆಕ್ಷನ್‌ಗಳನ್ನು ವಿಧಿಸುತ್ತಿದ್ದಾರೆ ಇಲ್ಲವೇ ರದ್ದಾದ ಕಾಯಿದೆಗಳ ನಿಬಂಧನೆಗಳನ್ನೇ ಅನ್ವಯಿಸುತ್ತಿದ್ದಾರೆ ಎಂದು ದೂರಿದೆ.
ಸಮಿತಿ ವಿಚಾರಣೆ ಮಾಡಿದಾಗ ʼಕಾಯಿದೆಯ ಪ್ರತಿ ಹೊಂದಿಲ್ಲ' ಎಂಬ ಉತ್ತರ ಪೊಲೀಸ್ ಠಾಣೆಗಳಿಂದ ದೊರೆತಿದೆ. ಮಕ್ಕಳ ಕಾಯಿದೆಗಳಿಗೆ ಸಂಬಂಧಿಸಿದ ಎಲ್ಲಾ ತಿದ್ದುಪಡಿ ಮಾಡಿದ ಮತ್ತು ಪರಿಷ್ಕರಿಸಿದ ಕಾಯಿದೆಗಳ ಪ್ರತಿ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಇರುವಂತೆ ಮತ್ತು ಅವುಗಳನ್ನು ಪ್ರದರ್ಶಿಸುವಂತೆ ಮಾಡಲು ಕಮಿಷನರ್ ಅವರು ಮಧ್ಯಪ್ರವೇಶಿಸಬೇಕು ಎಂದು ಸಮಿತಿಯು ಪತ್ರದಲ್ಲಿ ಕೋರಿದೆ. ಸಮಿತಿಯ ಅಧ್ಯಕ್ಷೆ ಅಂಜಲಿ ರಾಮಣ್ಣ ಮತ್ತು ಸದಸ್ಯರು ವಿವಿಧ ಠಾಣೆಗಳಿಗೆ ಭೇಟಿ ನೀಡಿದ ವೇಳೆ ಮೇಲಿನ ಮಾಹಿತಿ ತಿಳಿದು ಬಂದಿತ್ತು. 2015ರ ಬಾಲನ್ಯಾಯ (ಪೋಷಣೆ ಮತ್ತು ರಕ್ಷಣೆ) ಕಾಯಿದೆಯಡಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಜ್ಯದಾದ್ಯಂತ ಮಕ್ಕಳ ಕಲ್ಯಾಣ ಸಮಿತಿಗಳನ್ನು ರಚಿಸಲಾಗಿದೆ.
ಹೋಮಿಯೊಪಥಿ ವೈದ್ಯರು ರೋಗಿಗಳಿಗೆ ಸೋಂಕು ತಡೆ ನಿಟ್ಟಿನಲ್ಲಿ ಕೋವಿಡ್ ಚಿಕಿತ್ಸೆಯನ್ನು ನೀಡಬಹುದ್ದಾಗಿದ್ದು ಅದನ್ನು ಔಷಧಿ ಎಂದು ಪರಿಗಣಿಸಲು ನಿರ್ಬಂಧ ಇದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಆಗಸ್ಟ್ 21 ರಂದು ಕೇರಳ ಹೈಕೋರ್ಟ್‌ನ ಆದೇಶದ ವಿರುದ್ಧ ಡಾ.ಎ.ಕೆ.ಬಿ ಸದ್ಭಾವನಾ ಮಿಷನ್ ಸ್ಕೂಲ್ ಆಫ್ ಹೋಮಿಯೋ ಫಾರ್ಮಸಿ ಸಲ್ಲಿಸಿದ್ದ ಮೇಲ್ಮನವಿಗೆ ಪ್ರತಿಕ್ರಿಯೆಯಾಗಿ ಆಯುಷ್ ಸಚಿವಾಲಯ ಅಫಿಡವಿಟ್ ಸಲ್ಲಿಸಿದೆ.
ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡಿದ್ದ ಕೇಂದ್ರ ಸರ್ಕಾರದ ನಿಯಮಾವಳಿಗಳಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಿರುವ ವಿಚಾರಗಳನ್ನು ಹೊರತುಪಡಿಸಿ ಆಯುಷ್ ವೈದ್ಯರು ಕೋವಿಡ್‌ಗೆ ಚಿಕಿತ್ಸೆ ನೀಡುವುದಾಗಿ ಜಾಹೀರಾತು ಅಥವಾ ಶಿಫಾರಸು ನೀಡಬಾರದು ಎಂದು ಕೇರಳ ಹೈಕೋರ್ಟ್ ಆದೇಶಿಸಿತ್ತು. ಕೋವಿಡ್ ಅಪಾಯ ಕಡಿಮೆ ಮಾಡುವ ನಿಟ್ಟಿನಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಗೆ ಹೋಮಿಯೋಪತಿ, ಆಯುರ್ವೇದ, ಸಿದ್ಧ, ಯುನಾನಿ, ಪ್ರಕೃತಿ ಚಿಕಿತ್ಸೆ ನೀಡಬಹುದು ಎಂದು ಹೈಕೋರ್ಟ್ ಹೇಳಿತ್ತು. ತಪ್ಪಿತಸ್ಥ ಆಯುಷ್ ವೃತ್ತಿಪರರ ವಿರುದ್ಧ 2015ರ ವಿಪತ್ತು ನಿರ್ವಹಣಾ ಕಾಯಿದೆಯಡಿ ಕ್ರಮ ಕೈಗೊಳ್ಳುವ ಸ್ವಾತಂತ್ರ್ಯವನ್ನೂ ಅದು ರಾಜ್ಯ ಸರ್ಕಾರಕ್ಕೆ ಒದಗಿಸಿತ್ತು.
ಸರ್ಕಾರದ ಮಾಹಿತಿ ಸಂಗ್ರಾಹಕ ವ್ಯವಸ್ಥೆಗಳಾದ ನ್ಯಾಟ್‌ಗ್ರಿಡ್, ಸೆಂಟ್ರಲ್ ಮಾನಿಟರಿಂಗ್ ಸಿಸ್ಟಮ್ (ಸಿಎಂಎಸ್) ಮತ್ತು ನೇತ್ರ (ಎನ್‌ಇಟಿಆರ್‌ಎ) ಮೂಲಕ ನಾಗರಿಕರ ಮಾಹಿತಿ ಸಂಗ್ರಹಿಸುವುದನ್ನು ನಿಲ್ಲಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಲಾಗಿದ್ದು ಈ ಸಂಬಂಧ ದೆಹಲಿ ಹೈಕೋರ್ಟ್ ಬುಧವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಬಯಸಿದೆ.
ಅರ್ಜಿದಾರ ಸಂಸ್ಥೆಯಾದ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ ಪರವಾಗಿ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್ "ಇದು ಆತಂಕಕಾರಿಯಾದ ವ್ಯವಹಾರವಾಗಿದೆ. ಪುಟ್ಟಸ್ವಾಮಿ ಮತ್ತು ಪಿಯುಸಿಎಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದ ಎಲ್ಲವನ್ನೂ ಮೂರು ವ್ಯವಸ್ಥೆಗಳು ನಾಶ ಮಾಡುತ್ತಿವೆ” ಎಂದರು. ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರ ವಿಭಾಗೀಯ ಪೀಠ ಕೇಂದ್ರದ ನಿಲುವನ್ನು ಅಫಿಡವಿಟ್‌ನಲ್ಲಿ ಸಲ್ಲಿಸುವಂತೆ ಸೂಚಿಸಿತು. ಜನವರಿ 7ಕ್ಕೆ ಪ್ರಕರಣದ ವಿಚಾರಣೆ ನಿಗದಿಪಡಿಸಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಮುಖಗವಸು ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತಾ ಮಾನದಂಡ ಉಲ್ಲಂಘಿಸುವವರಿಗೆ ಸಮುದಾಯ ಸೇವೆಯ ಸಜೆ ವಿಧಿಸುವಂತೆ ಗುಜರಾತ್ ಹೈಕೋರ್ಟ್ ಬುಧವಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ನಿಯಮ ಉಲ್ಲಂಘಿಸುವವರು ಸ್ಥಳೀಯ ಸಂಸ್ಥೆಗಳು ನಡೆಸುವ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ವೈದ್ಯಕೀಯೇತರ ಸೇವೆ ಸಲ್ಲಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಜೆ ಬಿ ಪಾರ್ಡಿವಾಲಾ ಅವರ ವಿಭಾಗೀಯ ಪೀಠ ನಿರ್ದೇಶನ ನೀಡಿದೆ.
ಕೆಲ ದಿನಗಳ ಹಿಂದೆ ಮುಖಗವಸು ಧರಿಸದ ಕಾರಣಕ್ಕೆ ದಂಡ ವಿಧಿಸಲಾದ ನೂರು ಮಂದಿಯಲ್ಲಿ 47 ಮಂದಿಗೆ ಲಕ್ಷಣ ರಹಿತ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಕಾರ್ಯಕ್ಕೆ ಮುಂದಾಗಿದೆ. ಸಲಹೆಯನ್ನು ಕಾರ್ಯರೂಪಕ್ಕೆ ತರಬಹುದು ಎಂದು ಅಡ್ವೊಕೇಟ್ ಜನರಲ್ ಕಮಲ್ ತ್ರಿವೇದಿ ಮತ್ತು ಸರ್ಕಾರಿ ವಕೀಲ ಮನೀಶಾ ಷಾ ಅವರು ಒಪ್ಪಿಕೊಂಡಿದ್ದು ಈ ಸಂಬಂಧ ಸರ್ಕಾರದ ನಿಲುವನ್ನು ನ್ಯಾಯಾಲಯಕ್ಕೆ ತಿಳಿಸುವುದಾಗಿ ಹೇಳಿದ್ದಾರೆ.