ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 17-11-2020
ವರದಕ್ಷಿಣೆ ಸಾವು: ಜಿಲ್ಲಾ ಮಟ್ಟದ ವಿವಾಹ ಸಮಾಲೋಚನಾ ಕೇಂದ್ರ ಸ್ಥಾಪಿಸುವಂತೆ ಸೂಚಿಸಿದ ಜಮ್ಮು ನ್ಯಾಯಾಲಯ
ವರದಕ್ಷಿಣೆಗೆ ಸಂಬಂಧಿಸಿದ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಂಪತಿ ಮತ್ತವರ ಕುಟುಂಬಗಳಿಗಾಗಿ ಜಿಲ್ಲಾ ಮಟ್ಟದ ವಿವಾಹ ಸಮಾಲೋಚನಾ ಕೇಂದ್ರ ಸ್ಥಾಪಿಸುವಂತೆ ಜಮ್ಮುವಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಅಲ್ಲಿನ ಸರ್ಕಾರಕ್ಕೆ ಸೂಚಿಸಿದೆ. ತನ್ನ ಸೊಸೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಮಹಿಳೆಯೊಬ್ಬರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ವಿವಾಹ ಆಚರಣೆಗೂ ಮೊದಲು ಸಮಾಲೋಚನಾ ಕೇಂದ್ರದಲ್ಲಿ ದಂಪತಿ ಮತ್ತವರ ಕುಟುಂಬದವರಿಗೆ ಸಲಹೆ ಸೂಚನೆಗಳನ್ನು ನೀಡಬೇಕು. ಸಾಮಾಜಿಕ, ನೈತಿಕ, ಧಾರ್ಮಿಕ ಹಾಗೂ ಸನ್ನಡತೆಯ ವಿಧಿ ವಿಧಾನಗಳನ್ನು ಕೇಂದ್ರಗಳು ಬೋಧಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ. ಇದೇ ವೇಳೆ ಪ್ರಕರಣದಲ್ಲಿ ಮಹಿಳೆಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ.
ಅನೇಕ ಪ್ರಕರಣಗಳು ದಾಖಲಾಗಿರುವುದು ಜಾಮೀನು ರದ್ದತಿಗೆ ಆಧಾರವಾಗದು: ಕರ್ನಾಟಕ ಹೈಕೋರ್ಟ್
ವ್ಯಕ್ತಿಯೊಬ್ಬರ ವಿರುದ್ಧ ವಿವಿಧ ಪ್ರಕರಣಗಳನ್ನು ದಾಖಲಿಸಿರುವುದು ಜಾಮೀನು ರದ್ದತಿಗೆ ಆಧಾರವಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಆರೋಪಿ ವಿರುದ್ಧ ಅನೇಕ ಪ್ರಕರಣಗಳಿವೆ ಎಂದು ತಿಳಿಸಿ ಆತನಿಗೆ ಜಾಮೀನು ನೀಡಬಾರದು ಎಂದು ಕೋರಿ ಅತ್ಯಾಚಾರ ಸಂತ್ರಸ್ತೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ವ್ಯಕ್ತಿ ಅನೇಕ ಕೃತ್ಯಗಳನ್ನು ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದರು. ಆದರೆ ನ್ಯಾಯಾಲಯ ʼಆರೋಪಿಯ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ಹೀಗಾಗಿ ಜಾಮೀನು ಅರ್ಜಿ ರದ್ದು ಮಾಡಲು ಈ ಅಂಶ ಕಾರಣವಾಗಬಾರದುʼ ಎಂದು ತಿಳಿಸಿ ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತು.
ವೊಡಾಫೋನ್ ಮಧ್ಯಸ್ಥಿಕೆ ತೀರ್ಮಾನ ಪ್ರಶ್ನಿಸುವ ನಿರ್ಧಾರ ಕೈಗೊಳ್ಳಲು ಹೆಚ್ಚಿನ ಸಮಯ ಬೇಕು: ದೆಹಲಿ ಹೈಕೋರ್ಟ್‌ಗೆ ಕೇಂದ್ರದ ವಿವರಣೆ
ಇಂಡೋ-ನೆದರ್‌ಲ್ಯಾಂಡ್ ದ್ವಿಪಕ್ಷೀಯ ಹೂಡಿಕೆ ರಕ್ಷಣಾ ಒಪ್ಪಂದದ (ಬಿಐಪಿಎ) ಅಡಿ ವೊಡಾಫೋನ್ ಆರಂಭಿಸಿದ್ದ ಪ್ರಕ್ರಿಯೆಯ ಮಧ್ಯಸ್ಥಿಕೆ ತೀರ್ಪನ್ನು ಭಾರತ ಸರ್ಕಾರ ಪ್ರಶ್ನಿಸುವ ಸಂಬಂಧ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಹೆಚ್ಚಿನ ಸಮಯ ನೀಡಬೇಕು ಎಂದು ದೆಹಲಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಮನವಿ ಮಾಡಿದೆ.

ಸಚಿವ ಸಂಪುಟದ ಉನ್ನತಾಧಿಕಾರ ಸಮಿತಿಯ ಮುಂದೆ ವಿಚಾರ ಪ್ರಸ್ತಾಪಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ನಿರ್ಧಾರ ಕೈಗೊಳ್ಳಲು ಹೆಚ್ಚಿನ ಸಮಯಬೇಕಿದೆ ಎಂದು ಕೇಂದ್ರ ಸರ್ಕಾರ ಪ್ರತಿನಿಧಿಸಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ನ್ಯಾಯಾಲಯಕ್ಕೆ ವಿವರಿಸಿದರು. ರಾಜೀವ್ ಸಹಾಯ್ ಎಂಡ್‌ಲಾ ಮತ್ತು ಆಶಾ ಮೆನನ್ ಅವರಿದ್ದ ಪೀಠವು ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು.
ರಾವ್ ಬಿಡುಗಡೆ ಪ್ರಕರಣ-ವರ್ಚುವಲ್ ನ್ಯಾಯಾಲಯದಲ್ಲಿ ಆಡಿಯೊ ಸಮಸ್ಯೆ: ಭೌತಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಿರುವ ಬಾಂಬೆ ಹೈಕೋರ್ಟ್
ಕವಿ-ಹೋರಾಟಗಾರ ವರವರ ರಾವ್ ಅವರ ಬಿಡುಗಡೆಗೆ ಕೋರಿ ಸಲ್ಲಿಸಿರುವ ವೈದ್ಯಕೀಯ ಜಾಮೀನು ಹಾಗೂ ಮತ್ತಿತರೆ ಪೂರಕ ಮನವಿ ಅರ್ಜಿಗಳ ಭೌತಿಕ ವಿಚಾರಣೆಯನ್ನು ಬುಧವಾರ ಬಾಂಬೆ ಹೈಕೋರ್ಟ್ ನಡೆಸಲಿದೆ.

ನವೆಂಬರ್ 12ರ ವಿಚಾರಣೆಯ ಬಳಿಕ ಇಂದು ಪ್ರಕರಣದ ವಿಚಾರಣೆ ನಡೆಯಿತು. ರಾವ್ ಅವರ ವಕೀಲೆ ಇಂದಿರಾ ಜೈಸಿಂಗ್ ಅವರ ವಾದಗಳನ್ನು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸ್ಪಷ್ಟವಾಗಿ ಆಲಿಸಲು ತಾಂತ್ರಿಕ ಸಮಸ್ಯೆಯಾಗುತ್ತಿದ್ದ ಹಿನ್ನೆಲೆ ಬುಧವಾರ ಭೌತಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಪೀಠ ಹೇಳಿತು. ರಾವ್ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿರುವ ವೈದ್ಯಕೀಯ ವರದಿ, ಇದಕ್ಕೆ ಸಂಬಂಧಿಸಿದಂತೆ ರಾವ್ ಅವರ ವಕೀಲೆ ತಮಗೆ ಒಂದು ಪುಟದ ವರದಿ ಮಾತ್ರ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿರುವುದನ್ನು ಪೀಠವು ಪರಿಗಣನೆ ತೆಗೆದುಕೊಂಡಿದೆ.