ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 19-1-2021
ಸಿಎಂ ಯಡಿಯೂರಪ್ಪಗೆ ಸಲಹೆಗಾರರಾಗಿ ಎಂಟು ಮಂದಿ ನೇಮಕ: ಸರ್ಕಾರದ ಪ್ರತಿಕ್ರಿಯೆ ಸಲ್ಲಿಸುವಂತೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಎಂಟು ಮಂದಿಯನ್ನು ಸಲಹೆಗಾರರನ್ನಾಗಿ ನೇಮಕ ಮಾಡಿ ಅವರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಕಲ್ಪಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ್ದು, ಪ್ರತಿಕ್ರಿಯಿಸುವಂತೆ ಸೂಚಿಸಿದೆ.
ಸರ್ಕಾರೇತರ ಸಂಸ್ಥೆ ಸಮಾಜ ಪರಿವರ್ತನ ಸಮುದಾಯವು ಶಾಸಕ ಎಂ ಪಿ ರೇಣುಕಾಚಾರ್ಯ, ಶಂಕರಗೌಡ ಪಾಟೀಲ, ಮಹದೇವ ಪ್ರಕಾಶ್, ಮೋಹನ್ ಲಿಂಬಿಕಾಯಿ, ಸುನಿಲ್ ಜಿ ಎಸ್, ಎಂ ಬಿ ಮರಮಕಲ್ ಮತ್ತು ಲಕ್ಷ್ಮಿನಾರಾಯಣ ಅವರಿಗೆ ಕಲ್ಪಿಸಲಾಗಿರುವ ಸ್ಥಾನಮಾನಗಳನ್ನು ಪ್ರಶ್ನಿಸಿದೆ. ಈ ಕುರಿತಾದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ವಿಭಾಗೀಯ ಪೀಠವು ನೋಟಿಸ್ ಜಾರಿಗೊಳಿಸಿದೆ. ವಿಭಿನ್ನವಾಗಿ ಹೊರಡಿಸಲಾದ ಎಂಟು ಆದೇಶಗಳಲ್ಲಿ ವಿವಿಧ ಸಲಹೆಗಾರರನ್ನಾಗಿ ಮುಖ್ಯಮಂತ್ರಿ ಅವರನ್ನು ನೇಮಕ ಮಾಡಲಾಗಿದೆ ಎಂದು ಮನವಿದಾರರು ವಿವರಿಸಿದ್ದಾರೆ. ಸಂವಿಧಾನದ 164ನೇ ವಿಧಿಯ ಅನ್ವಯ ನೇಮಕಾತಿ ಮಾಡಲಾಗಿದ್ದು, ಅವುಗಳಿಗೆ ಸಾಂವಿಧಾನಿಕ ನಿಬಂಧನೆಯ ಬಲವಿಲ್ಲ ಎಂದು ವಿವರಿಸಲಾಗಿದೆ.
ವಿದ್ಯುತ್ ತಂತಿಗಳ ನಿರ್ವಹಣೆಯಲ್ಲಿ ದೊಡ್ಡ ನಿರ್ಲಕ್ಷ್ಯ: ಮೃತರ ಕುಟುಂಬಕ್ಕೆ ರೂ 10 ಲಕ್ಷ ಪರಿಹಾರ ನೀಡುವಂತೆ ಸೂಚಿಸಿದ ದೆಹಲಿ ಹೈಕೋರ್ಟ್
ವಿದ್ಯುತ್ ತಂತಿಗಳ ನಿರ್ವಹಣೆಯಲ್ಲಿ ಬಿಎಸ್ಇಎಸ್ ರಾಜಧಾನಿ ಕಂಪೆನಿಯ ನಿರ್ಲಕ್ಷ್ಯ ದೊಡ್ಡದಾಗಿದೆ ಎಂದು ತಿಳಿಸಿರುವ ದೆಹಲಿ ಹೈಕೋರ್ಟ್ ಇತ್ತೀಚೆಗೆ ವಿದ್ಯುತ್ ಸ್ಪರ್ಶದಿಂದಾಗಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ರೂ ೧೦ ಲಕ್ಷ ಪರಿಹಾರ ನೀಡುವಂತೆ ಸೂಚಿಸಿದೆ. ಸಂವಿಧಾನದ 226 ನೇ ವಿಧಿ ಅಡಿ ಸಲ್ಲಿಸಲಾಗಿರುವ ಅರ್ಜಿಯನ್ನು ನ್ಯಾ. ಜಯಂತ್ ನಾಥ್ ಅವರಿದ್ದ ಏಕಸದಸ್ಯ ಪೀಠ ಆಲಿಸಿತು. ಮೇ 2017 ರಲ್ಲಿ ಅರ್ಜಿದಾರೆ ಮುನ್ನಿದೇವಿ ಅವರ 23 ವರ್ಷದ ಮಗನಿಗೆ ವಿದ್ಯುತ್ ತಂತಿ ತಗುಲಿ ಆತ ಪ್ರಾಣ ಕಳೆದುಕೊಂಡಿದ್ದರು. ಅರ್ಜಿದಾರರು ಗೃಹಿಣಿಯಾಗಿದ್ದು, ತೀವ್ರ ಅನೀಮಿಯಾದಿಂದ ಬಳಲುತ್ತಿದ್ದರು. ಅವರ ಪತಿ ಕಾರ್ಮಿಕನಾಗಿದ್ದು ಕುಟುಂಬದ ಆದಾಯ ವಾರ್ಷಿಕ 48000 ರೂ. ಅವರಿಗೆ ಬೇರೆ ಆದಾಯದ ಮೂಲ ಇರಲಿಲ್ಲ. ಬಿಹಾರದ ದರ್ಭಾಂಗ್ ಮೂಲದ ಈ ಕುಟುಂಬ ನ್ಯಾಯಾಕ್ಕಾಗಿ ಅನೇಕ ಕಚೇರಿಗಳನ್ನು ಅಲೆದಾಡಿ ಕೊನೆಗೆ ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ ವಿತರಣಾ ಪರವಾನಗಿ ಪಡೆದ ಬಿಎಸ್ಇಎಸ್ ಆರ್‌ಪಿಎಲ್ ವ್ಯಾಪ್ತಿಯಲ್ಲಿ ಘಟನೆ ನಡೆದ ಕಾರಣ ಇದರಲ್ಲಿ ತನ್ನ ಪಾತ್ರವಿಲ್ಲ ಎಂದು ದೆಹಲಿ ಸರ್ಕಾರ ಹೇಳಿತ್ತು. ಅಲ್ಲದೆ ಪರಿಹಾರ ಕುರಿತಂತೆ ಬಿಎಸ್ಇಎಸ್ ಆರ್‌ಪಿಎಲ್ ಹಲವು ಆಕ್ಷೇಪಣೆಗಳನ್ನು ಎತ್ತಿತ್ತು.
ಮೃತವ್ಯಕ್ತಿ ಪದವಿ ಓದುತ್ತಿದ್ದರು ಎಂಬುದನ್ನು ಪರಿಗಣಿಸಿದ ನ್ಯಾಯಾಲಯ ಆತ ಕನಿಷ್ಠ ವೇತನ ಪಡೆದಿದ್ದರೂ ತಿಂಗಳಿಗೆ ಹತ್ತರಿಂದ ಹದಿನೈದು ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದರು ಎಂಬುದನ್ನು ಗಣನೆಗೆ ತೆಗೆದುಕೊಂಡಿತು. ಅದರಂತೆ ರೂ .10 ಲಕ್ಷ ಪರಿಹಾರ ನೀಡುವಂತೆ ಸೂಚಿಸಿತು. ನ್ಯಾಯಾಲಯದ ಆದೇಶದ ಪ್ರಕಾರ, ಪರಿಹಾರದ ಮೊತ್ತವನ್ನು ಬಿಎಸ್ಇಎಸ್ ಆರ್‌ಪಿಎಲ್ ಮತ್ತು ರಿಲಯನ್ಸ್ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್, ಜಂಟಿಯಾಗಿ ನೀಡಬೇಕಿದೆ. ಅರ್ಜಿದಾರರ ಪರ ದೆಹಲಿ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿಯ ವಕೀಲೆ ಅಂಕಿತಾ ಪಟ್ನಾಯಕ್ ವಾದ ಮಂಡಿಸಿದರು. ದೆಹಲಿ ಸರ್ಕಾರದ ಪರವಾಗಿ ಹೆಚ್ಚುವರಿ ಸ್ಥಾಯಿ ವಕೀಲ ಜವಾಹರ್ ರಾಜ್ ಹಾಜರಿದ್ದರು. ಹಿರಿಯ ವಕೀಲ ರವಿ ಗುಪ್ತಾ, ವಕೀಲೆ ಅಂಜು ಥಾಮಸ್ ಅವರು ಬಿಎಸ್ಇಎಸ್-ಆರ್ಪಿಎಲ್ ಪರ ವಾದಿಸಿದರು. ರಿಲಯನ್ಸ್ ಜನರಲ್ ಇನ್ಶುರೆನ್ಸ್ ಪರ ನ್ಯಾಯವಾದಿಗಳಾದ ರಾಜೀವ್ ಎಂ ರಾಯ್ ಮತ್ತು ಪಿ ಶ್ರೀನಿವಾಸನ್ ಉಪಸ್ಥಿತರಿದ್ದರು.
ಸಿವಿಲ್ ನ್ಯಾಯಾಧೀಶರ ಹುದ್ದೆ ಆಕಾಂಕ್ಷಿಗಳಿಗಾಗಿ ನಾಳೆ ಎಐಎಲ್‌ಐಯು ಕರ್ನಾಟಕ ವತಿಯಿಂದ ವರ್ಚುವಲ್ ಕಾರ್ಯಾಗಾರ
ಸಿವಿಲ್ ನ್ಯಾಯಾಧೀಶರ ಹುದ್ದೆ ಆಕಾಂಕ್ಷಿಗಳಿಗಾಗಿ ಅಖಿಲ ಭಾರತ ವಕೀಲರ ಸಂಘ ಕರ್ನಾಟಕ ರಾಜ್ಯ ಸಮಿತಿ (ಎಐಎಲ್‌ಯು ಕರ್ನಾಟಕ) ನ್ಯಾಯಾಂಗ ಕಾರ್ಯಾಗಾರ ಏರ್ಪಡಿಸಿದೆ. ಅದರ ಭಾಗವಾಗಿ ʼಸಿವಿಲ್ ನ್ಯಾಯಾಧೀಶರ ಹುದ್ದೆಯ ವೈವಾಗಾಗಿ ಪ್ರಾಯೋಗಿಕ ಸಲಹೆ ಎಂಬ ವಿಷಯ ಕುರಿತು ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಉಪ ನಿರ್ದೇಶಕರಾದ ಎಚ್ ಆರ್ ರವಿಕುಮಾರ್ ನಾಳೆ (ಜ. 20) ಬುಧವಾರ ಉಪನ್ಯಾಸ ನೀಡಲಿದ್ದಾರೆ. ಸಂಜೆ 5.30ರಿಂದ ಕಾರ್ಯಕ್ರಮ ಆರಂಭವಾಗಲಿದೆ.
ಇದೊಂದು ವರ್ಚುವಲ್ ಕಾರ್ಯಕ್ರಮವಾಗಿದ್ದು ಝೂಂ ಐಡಿ: 599 267 2811 ಪಾಸ್‌ವರ್ಡ್ AILUKARNA3 ಬಳಸಿ ಪಾಲ್ಗೊಳ್ಳಬಹುದು. ಅಲ್ಲದೆ ಎಐಎಲ್‌ಯು ಕರ್ನಾಟಕದ ಫೇಸ್‌ಬುಕ್ ಪೇಜ್ ಮೂಲಕವೂ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ್ ಕುಮ್ಮಾರ್, ಕೆ ಎಚ್ ಪಾಟೀಲ್, ಬಿ ವಿ ಕೋರಿಮಠ್ ಎಸ್ ಕೆ ಮರದ್ ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಭದ್ರತೆ, ಮಧ್ಯಂತರ ಆದೇಶದ ಉಲ್ಲಂಘಿಸದ ಹೊರತು ಕೌಟುಂಬಿಕ ದೌರ್ಜನ್ಯ ಕಾಯಿದೆ ಪ್ರಕ್ರಿಯೆ ಸಿವಿಲ್ ರೂಪದಲ್ಲಿರುತ್ತವೆ: ಮದ್ರಾಸ್ ಹೈಕೋರ್ಟ್
ಕೌಟುಂಬಿಕ ದೌರ್ಜನ್ಯ ಕಾಯಿದೆಯ (ಡಿವಿ ಕಾಯಿದೆ) ಸೆಕ್ಷನ್‌ಗಳಾದ 31 ಮತ್ತು 33 (ಭದ್ರತೆ ಅಥವಾ ಮಧ್ಯಂತರ ಆದೇಶದ ಉಲ್ಲಂಘನೆ) ಅನ್ವಯ ಆಗದ ಹೊರತು ಡಿವಿ ಕಾಯಿದೆಯ ಅಡಿಯಲ್ಲಿನ ಪ್ರಕ್ರಿಯೆಗಳು ಸಿವಿಲ್ ರೂಪದಲ್ಲಿರುತ್ತವೆ ಎಂದು ಈಚೆಗೆ ಮದ್ರಾಸ್ ಹೈಕೋರ್ಟ್ ಹೇಳಿದೆ.
ಕೌಟುಂಬಿಕ ಹಿಂಸಾಚಾರ ಕಾಯಿದೆ ಅಡಿ ದೂರುಗಳನ್ನು ರದ್ದುಗೊಳಿಸಲು ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 482 ಅನ್ನು ಚಲಾಯಿಸಲಾಗುವುದಿಲ್ಲ. ಏಕೆಂದರೆ ಈ ನಿಬಂಧನೆಯು ಅಪರಾಧ ವಿಚಾರಣೆಗೆ ಮಾತ್ರ ಅನ್ವಯಿಸುತ್ತದೆ ಎಂದು ನ್ಯಾಯಾಲಯವು ಹೇಳಿದೆ. ಬಿಜು ವರ್ಸಸ್ ಲತಾ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ವಿರುದ್ಧ ಆದೇಶ ಹೊರಡಿಸಿರುವುದಕ್ಕೂ ನ್ಯಾಯಮೂರ್ತಿ ಆನಂದ್ ವೆಂಕಟೇಶ್ ಅವರಿದ್ದ ಪೀಠ ಅಸಮ್ಮತಿ ವ್ಯಕ್ತಪಡಿಸಿದೆ.
ಹೈಕೋರ್ಟ್‌ನಲ್ಲಿ ಧಾರ್ಮಿಕ ಮತಾಂತರ ಪ್ರಶ್ನಿಸಿರುವ ಮನವಿಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ ಉತ್ತರ ಪ್ರದೇಶ ಸರ್ಕಾರ
ಅಂತರ ಧರ್ಮೀಯ ವಿವಾಹಗಳ ನಿಯಂತ್ರಣ ಮತ್ತು ಧಾರ್ಮಿಕ ಮತಾಂತರ ಸುಗ್ರೀವಾಜ್ಞೆ ಪ್ರಶ್ನಿಸಿ ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ವಿಚಾರಣೆಗೆ ಬಾಕಿ ಇರುವ ಮನವಿಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಉತ್ತರ ಪ್ರದೇಶ ಸರ್ಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ವರ್ಗಾವಣೆ ಮನವಿ ಸಲ್ಲಿಸಿದೆ.
ಈಚೆಗೆ ಜಾರಿಗೊಳಿಸಲಾದ ಉತ್ತರ ಪ್ರದೇಶ ಕಾನೂನು ಬಾಹಿರ ಧಾರ್ಮಿಕ ಮತಾಂತರ ಸುಗ್ರೀವಾಜ್ಞೆ-2020 ಯನ್ನು ಪ್ರಶ್ನಿಸಿ ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಮನವಿ ವಿಚಾರಣೆಯ ಸಂದರ್ಭದಲ್ಲಿ, ರಾಜ್ಯ ಸರ್ಕಾರವು ಈ ಬಗೆಯ ಎಲ್ಲಾ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಮನವಿ ಸಲ್ಲಿಸಿದೆ ಎಂಬ ಅಂಶ ಬೆಳಕಿಗೆ ಬಂದಿತು. ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ವರ್ಗಾವಣೆ ಅರ್ಜಿ ಈ ವಾರದಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.