ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |8-6-2021

>> ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ಸುಪ್ರೀಂ ವಕೀಲರ ನೇಮಕಕ್ಕೆ ಸಿಜೆಐ ಒಪ್ಪಿಗೆ ಎಂದ ಎಸ್‌ಸಿಬಿಎ >> ಸಿಜೆಐ ಮನಗೆದ್ದ ಕೇರಳದ ಪೋರಿ >> ಕಾರ್ಮಿಕರ ಪರಿಹಾರ ಕುರಿತ ಪ್ರಕರಣ >> ವಜಾಗೊಂಡಿದ್ದ ಪೈಲಟ್‌ಗಳು ಮರಳಿ ಸೇವೆಗೆ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |8-6-2021
Published on

ʼಸುಪ್ರೀಂʼ ವಕೀಲರನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ನೇಮಿಸಲು ಸಿಜೆಐ ಎನ್‌ ವಿ ರಮಣ ಒಪ್ಪಿಗೆ: ಎಸ್‌ಸಿಬಿಎ

ಸುಪ್ರೀಂ ಕೋರ್ಟ್‌ ವಕೀಲರ ಪರಿಷತ್‌ (ಎಸ್‌ಸಿಬಿಎ) ಸದಸ್ಯರನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ನೇಮಿಸುವಂತ ಕೋರಿದ್ದ ಎಸ್‌ಸಿಬಿಎ ಮನವಿಗೆ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತನ್ನ ಸದಸ್ಯರಿಗೆ ಕಳುಹಿಸಿದ್ದ ಮಾಹಿತಿಯಲ್ಲಿ ಎಸ್‌ಸಿಬಿಎ ತಿಳಿಸಿದೆ. ಈ ವಿಚಾರವನ್ನು ಸಿಜೆಐ ಅವರ ಕಚೇರಿ ಖಾತರಿಗೊಳಿಸಿಲ್ಲ. ಆದರೆ, ಆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಸ್ತಾವ ಸ್ವೀಕರಿಸಿರುವುದಾಗಿ ಹೇಳಿದೆ.

CJI Ramana and SCBA
CJI Ramana and SCBA

ಈ ಕುರಿತಾದ ಪ್ರಸ್ತಾವವನ್ನು ಮೇ 31ರಂದು ತಾನು ಮತ್ತು ಕಾರ್ಯಕಾರಿ ಸಮಿತಿಯು ಸಿಜೆಐ ರಮಣ ಅವರಿಗೆ ಸಲ್ಲಿಸಿದ್ದಾಗಿ ಎಸ್‌ಸಿಬಿಎ ಅಧ್ಯಕ್ಷ ಹಿರಿಯ ವಕೀಲ ವಿಕಾಸ್‌ ಸಿಂಗ್‌ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಹಲವಾರು ಮಹಿಳಾ ವಕೀಲರು ಕರ್ತವ್ಯ ನಿರ್ವಹಿಸುತ್ತಿದ್ದು, ಅವರನ್ನು ನ್ಯಾಯಮೂರ್ತಿ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಪರಿಷತ್‌ ಸದಸ್ಯರು ಆಗ್ರಹಿಸಿದ್ದರು.

ಕೋವಿಡ್‌ ಬಿಕ್ಕಟ್ಟು ಬಗೆಹರಿಸಲು ಶ್ರಮಿಸಿದ ʼಸುಪ್ರೀಂʼ ಬಗ್ಗೆ ಪುಟಾಣಿಯ ಮೆಚ್ಚುಗೆ: ಸಂವಿಧಾನದ ಪ್ರತಿ ಕಳಿಸಿಕೊಟ್ಟ ಸಿಜೆಐ

ಕೇರಳದ ವಿದ್ಯಾರ್ಥಿನಿಯೊಬ್ಬಳು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರಿಗೆ ಹೃದಯಸ್ಪರ್ಶಿ ಪತ್ರ ಬರೆದು ಕೋವಿಡ್‌ ಬಿಕ್ಕಟ್ಟು ಬಗೆಹರಿಸಲು ಶ್ರಮಿಸಿದ ಸುಪ್ರೀಂಕೋರ್ಟ್‌ ಕ್ರಮವನ್ನು ಕೊಂಡಾಡಿದಳು. ಇದಕ್ಕೆ ಪ್ರತಿಯಾಗಿ ನ್ಯಾಯಮೂರ್ತಿಗಳು ತಮ್ಮ ಸಹಿ ಇರುವ ಸಂವಿಧಾನ ಗ್ರಂಥವನ್ನು ಆಕೆಗೆ ಕಳಿಸಿಕೊಟ್ಟರು.

Letter to CJI
Letter to CJI

ತ್ರಿಶೂರಿನ ಕೇಂದ್ರೀಯ ವಿದ್ಯಾಲಯದಲ್ಲಿ 5ನೇ ತರಗತಿ ಓದುತ್ತಿರುವ ಲಿಡ್ವಿನಾ ಜೋಸೆಫ್‌ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿರುವ ಬಾಲೆ. ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಗೌರವಾನ್ವಿತ ನ್ಯಾಯಾಲಯ ಸಾಮಾನ್ಯ ಜನರ ಸಾವು ನೋವುಗಳನ್ನು ತಡೆಯಲು ಪರಿಣಾಮಕಾರಿಯಾಗಿ ಮಧ್ಯಪ್ರವೇಶಿಸಿದೆ ಎಂದು ಮೆಚ್ಚುಗೆ ಸೂಚಿಸಿದ್ದಳು. ಪತ್ರದ ಜೊತೆಗೆ ಸಿಜೆಐ ಅವರ ಚಿತ್ರವನ್ನು ಕೂಡ ಬರೆದು ಕಳುಹಿಸಿದ್ದಳು. ಇದಕ್ಕೆ ಪ್ರತಿಯಾಗಿ ನ್ಯಾಯಮೂರ್ತಿಗಳು “ನೀನು ದೇಶದಲ್ಲಿ ನಡೆಯುತ್ತಿರುವ ಆಗುಹೋಗುಗಳ ಬಗ್ಗೆ ನಿಗಾ ಇಟ್ಟಿರುವ ರೀತಿ ಮತ್ತು ಜನರ ಯೋಗಕ್ಷೇಮಕ್ಕಾಗಿ ತೋರಿರುವ ಕಾಳಜಿಯಿಂದ ನಿಜಕ್ಕೂ ಪ್ರಭಾವಿತನಾಗಿದ್ದೇನೆ. ದೇಶ ಕಟ್ಟುವ ವಿಚಾರದಲ್ಲಿ ನೀನೊಬ್ಬಳು ಜಾಗೃತ, ಮಾಹಿತಿಯುಕ್ತ ಹಾಗೂ ಜವಾಬ್ದಾರಿಯುತ ಪ್ರಜೆಯಾಗುವೆ” ಎಂದು ಪ್ರತಿಕ್ರಿಯಿಸಿದ್ದಾರೆ. ಕೇಂದ್ರದ ಲಸಿಕೆ ನೀತಿ ಕುರಿತು ಅನೇಕ ಆದೇಶಗಳನ್ನು ಹೊರಡಿಸಿದ ಬಳಿಕ ಕೇಂದ್ರ ಸರ್ಕಾರ ಹದಿನೆಂಟು ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡುವುದಾಗಿ ಪ್ರಕಟಿಸಿತ್ತು.

ಸಾರಿಗೆ ವ್ಯವಸ್ಥೆ ಇಲ್ಲದಿರುವಾಗ ಕಾರ್ಮಿಕರು ಪರಿಹಾರ ಪಡೆಯಲು ಸರ್ಕಾರಿ ಕೇಂದ್ರಗಳಿಗೆ ತೆರಳುವುದು ಹೇಗೆ?: ಹೈಕೋರ್ಟ್‌

ಕೋವಿಡ್‌ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಘೋಷಿಸಿರುವುದರಿಂದ ಸಾರಿಗೆ ವ್ಯವಸ್ಥೆ ಇಲ್ಲ. ಹೀಗಿರುವಾಗ ಅಸಂಘಟಿತ ವಲಯದಲ್ಲಿರುವ ಕಾರ್ಮಿಕರು ರೂ. 2,000 ಪರಿಹಾರ ಪಡೆಯಲು ಸೇವಾ ಸಿಂಧು ಕೇಂದ್ರಗಳಿಗೆ ತೆರಳುವುದು ಹೇಗೆ ಎಂದು ಮಂಗಳವಾರ ಕರ್ನಾಟಕ ಹೈಕೋರ್ಟ್‌ ಪ್ರಶ್ನಿಸಿದೆ.

Migrant workers
Migrant workers

ಲಾಕ್‌ಡೌನ್‌ ಘೋಷಣೆಯಿಂದ ಅಸಂಘಟಿತ ವಲಯದ ಕಾರ್ಮಿಕರಿಗೆ ಎದುರಾಗಿರುವ ಆರ್ಥಿಕ ಸಮಸ್ಯೆ ನಿವಾರಿಸಲು ರೂ. 2,000 ಪರಿಹಾರ ನೀಡಲಾಗುವುದು ಎಂದು ಮೇ 20ರಂದು ಸರ್ಕಾರ ಆದೇಶ ಹೊರಡಿಸಿದೆ ಎಂಬ ವಿಚಾರವನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾ. ಸೂರಜ್‌ ಗೋವಿಂದರಾಜ್‌ ಅವರಿದ್ದ ವಿಭಾಗೀಯ ಪೀಠಕ್ಕೆ ತಿಳಿಸಲಾಗಿತ್ತು. ಅರ್ಹರು ಸೇವಾ ಸಿಂಧು ಪೋರ್ಟಲ್‌ ಮೂಲಕ ಮನವಿ ಸಲ್ಲಿಸಬಹುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿತ್ತು. ಪೋರ್ಟಲ್‌ನಲ್ಲಿ ಪರಿಹಾರಕ್ಕೆ ಮನವಿ ಸಲ್ಲಿಸುವಾಗ ಸಮಸ್ಯೆಗಳಿವೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು. ಅದಕ್ಕೆ ಸರ್ಕಾರದ ಪರ ವಕೀಲರು ಸೇವಾ ಸಿಂಧು ಕೇಂದ್ರಗಳಿಗೆ ಭೇಟಿ ನೀಡಬಹುದು ಎಂದಾಗ ಅರ್ಜಿದಾರರ ಪರ ವಕೀಲರು ಲಾಕ್‌ಡೌನ್‌ನಿಂದಾಗಿ ಸಾರಿಗೆ ವ್ಯವಸ್ಥೆ ಇಲ್ಲ ಎಂದರು. ಆಗ ಪೀಠ ಮೇಲಿನಂತೆ ಹೇಳಿದೆ.

ಏರ್‌ ಇಂಡಿಯಾದ 40ಕ್ಕೂ ಹೆಚ್ಚು ಪೈಲಟ್‌ಗಳ ಸೇವಾ ರದ್ದತಿ ಆದೇಶ ರದ್ದುಗೊಳಿಸಿದ ದೆಹಲಿ ಹೈಕೋರ್ಟ್‌

ನಲವತ್ತಕ್ಕೂ ಹೆಚ್ಚು ಪೈಲಟ್‌ಗಳ ಸೇವೆಯನ್ನು ಅಂತ್ಯಗೊಳಿಸಿದ್ದ ಏರ್‌ ಇಂಡಿಯಾ ಆದೇಶವನ್ನು ರದ್ದುಗೊಳಿಸಿರುವ ದೆಹಲಿ ಹೈಕೋರ್ಟ್‌ ಅವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಏರ್ ಇಂಡಿಯಾಕ್ಕೆ ಇತ್ತೀಚೆಗೆ ನಿರ್ದೇಶನ ನೀಡಿದೆ. ಪ್ರಸ್ತುತ ಪ್ರಕರಣದಲ್ಲಿ ನೌಕರರನ್ನು ಸೇವೆಯಿಂದ ತೆಗೆದು ಹಾಕುವುದಕ್ಕೆ ಹಣಕಾಸಿನ ಮುಗ್ಗಟ್ಟು ಅಥವಾ ಸಾಂಕ್ರಾಮಿಕ ರೋಗದ ಬಿಕ್ಕಟ್ಟು ಕಾರಣ ಎಂದು ಹೇಳಿಕೊಳ್ಳುವಂತಿಲ್ಲ ಎಂಬುದಾಗಿ ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠ ತಿಳಿಸಿದೆ.

Air India
Air India

ಸೇವೆಯಿಂದ ತೆಗೆದುಹಾಕಿದ ಅವಧಿಯಿಂದ ಪೈಲಟ್‌ಗಳು ಕೆಲಸಕ್ಕೆ ಸೇರುವ ದಿನದವರೆಗಿನ ವೇತನವನ್ನು ಕೂಡ ವಿಮಾನಯಾನ ಸಂಸ್ಥೆ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ. ಕಾರ್ಯಕ್ಷಮತೆ ತೃಪ್ತಿದಾಯಕವಾಗಿದ್ದರೆ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಪೈಲಟ್‌ಗಳ ಸೇವಾವಧಿ ನವೀಕರಿಸಬೇಕು ಇಲ್ಲವೇ ವಿಸ್ತರಿಸಬೇಕು ಎಂದಿರುವ ನ್ಯಾಯಾಲಯ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಏರ್‌ ಇಂಡಿಯಾಗೆ ಆರು ವಾರಗಳ ಗಡುವು ನೀಡಿದೆ.

Kannada Bar & Bench
kannada.barandbench.com