ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |23-6-2021

>> ಆಂಧ್ರ ಸಿಎಂ ಮೇಲೆ ʼಹೊಸʼ ತೂಗುಗತ್ತಿ >> ʼಮೈಲಾರ್ಡ್‌ ಎನ್ನದಿರಿʼ >>ಎಫ್‌ಐಆರ್‌ ರದ್ದತಿ ಕೋರಿದ ರಾಮದೇವ್‌ >> ವಾಟ್ಸಾಪ್‌ ಪ್ರಕರಣ >> ʼಟೈಮ್ಸ್‌ ನೌಗೆ ಕೋಟ್ಯಂತರ ರೂಪಾಯಿ ನಷ್ಟʼ >> ನ್ಯೂಸ್‌ಕ್ಲಿಕ್ ಸಂಸ್ಥಾಪಕನಿಗೆ ಮಧ್ಯಂತರ ರಕ್ಷಣೆ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |23-6-2021

ಆಂಧ್ರ ಸಿಎಂ ವಿರುದ್ಧದ ಕ್ರಿಮಿನಲ್‌ ಮೊಕದ್ದಮೆ ಹಿಂತೆಗೆತ: 11 ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಹೈಕೋರ್ಟ್‌

ಮಹತ್ವದ ಬೆಳವಣಿಗೆಯೊಂದರಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ ಎಸ್‌ ಜಗನ್‌ಮೋಹನ್‌ ರೆಡ್ಡಿ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಂಡಿರುವುದರ ವಿರುದ್ಧ ಹೈಕೋರ್ಟ್‌ 11ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಬುಧವಾರವೇ ಈ ಪ್ರಕರಣಗಳ ವಿಚಾರಣೆಗಾಗಿ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರೆದುರು ಪಟ್ಟಿ ಮಾಡಲಾಗಿದೆ. ಪ್ರಕರಣಗಳನ್ನು ದಾಖಲಿಸಿಕೊಂಡಿರುವುದಕ್ಕೆ ರಾಜ್ಯ, ಅಡ್ವೊಕೇಟ್ ಜನರಲ್ ಸುಬ್ರಹ್ಮಣ್ಯಂ ಶ್ರೀರಾಮ್ ಆಕ್ಷೇಪ ವ್ಯಕ್ತಪಡಿಸಿದರು.

YS Jagan Mohan Reddy, Andhra Pradesh High Court
YS Jagan Mohan Reddy, Andhra Pradesh High Court

ಸರ್ಕಾರ ದೂರು ಹಿಂಪಡೆಯುತ್ತಿರುವ ಸಂಬಂಧ ರಾಜ್ಯದ ವಿವಿಧೆಡೆಯಿಂದ ಅರ್ಜಿಗಳನ್ನು ಸಲ್ಲಿಸಿದ ನಂತರ ನ್ಯಾಯಾಲಯ ಆಡಳಿತಾತ್ಮಕ ದೃಷ್ಟಿಯಿಂದ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದೆ. ಪ್ರಕರಣದ ವಿಚಾರಣೆ ಜೂನ್ 25ರಂದು ನಡೆಯಲಿದೆ.

ಮೈಲಾರ್ಡ್‌ ಎನ್ನಬೇಡಿ ಮೇಡಂ ಎಂದು ಕರೆಯಿರಿ: ನ್ಯಾ. ಜ್ಯೋತಿ ಮೂಲಿಮನಿ

ವಸಹಾತುಶಾಹಿ ಕಾಲದಲ್ಲಿ ಆರಂಭವಾದ ʼಯುವರ್‌ ಲಾರ್ಡ್‌ಶಿಪ್‌/ಮೈ ಲಾರ್ಡ್‌ʼ ಎಂದು ನ್ಯಾಯಮೂರ್ತಿಗಳನ್ನು ಕರೆಯುವ ಪರಂಪರೆಯನ್ನು ಅನೇಕ ನ್ಯಾಯಮೂರ್ತಿಗಳು ತೊರೆಯುತ್ತಿರುವಂತಿದೆ. ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರು ತಮ್ಮನ್ನು ಮೇಡಂ ಎಂದು ಸಂಬೋಧಿಸುವಂತೆ ವಕೀಲರಿಗೆ ಹೇಳುವ ಮೂಲಕ ಈ ನಿರ್ಧಾರ ಕೈಗೊಂಡ ಕರ್ನಾಟಕ ಹೈಕೋರ್ಟ್‌ನ ಎರಡನೇ ನ್ಯಾಯಮೂರ್ತಿ ಎನಿಸಿಕೊಂಡಿದ್ದಾರೆ.

Justice Jyoti Mulimani, Karnataka HC
Justice Jyoti Mulimani, Karnataka HC

“ಪೀಠವನ್ನು ಮೇಡಂ ಎಂದು ಸಂಬೋಧಿಸುವಂತೆ ವಕೀಲರ ಸಮುದಾಯವನ್ನು ಕೋರಲಾಗಿದೆ” ಎಂದು ನ್ಯಾ. ಮೂಲಿಮನಿ ಅವರ ಪೀಠದ ದಾವೆ ಪಟ್ಟಿಯಲ್ಲಿ ವಿವರಿಸಲಾಗಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ನ್ಯಾ. ಕೃಷ್ಣ ಭಟ್‌ ಅವರು ʼಲಾರ್ಡ್‌ಶಿಪ್‌ʼ ಅಥವಾ ʼಮೈ ಲಾರ್ಡ್‌ʼ ಪರಂಪರೆಗೆ ಇತಿಶ್ರೀ ಹೇಳಿತ್ತು. ಅದಕ್ಕೆ ಬದಲಾಗಿ ʼಸರ್‌ʼ ಎಂದು ಸಂಬೋಧಿಸುವಂತೆ ಕೋರಿದ್ದರು. ಒಡಿಶಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಮುರಳೀಧರ್‌, ಕಲ್ಕತ್ತಾ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ತೊಟ್ಟತ್ತಿಲ್ ಬಿ ರಾಧಾಕೃಷ್ಣನ್‌ ಅವರು ʼಸರ್‌ʼ ಎಂದು ಸಂಬೋಧಿಸುವಂತೆ ಕೋರಿದ್ದರು. 2019ರಲ್ಲಿ ರಾಜಸ್ಥಾನ ಹೈಕೋರ್ಟ್‌ನ ಪೂರ್ಣ ಪೀಠವು ʼಲಾರ್ಡ್‌ಶಿಪ್‌ʼ ಅಥವಾ ʼಮೈ ಲಾರ್ಡ್‌ʼ ಪರಂಪರೆಗೆ ಅಂತ್ಯ ಹಾಡಿತ್ತು.

ಕೋವಿಡ್‌ ಚಿಕಿತ್ಸೆಗೆ ಅಲೋಪತಿ ಪರಿಣಾಮಕಾರಿತ್ವ ಕುರಿತ ಹೇಳಿಕೆ: ಎಫ್‌ಐಆರ್‌ ರದ್ದತಿ ಕೋರಿ ಸುಪ್ರೀಂ ಮೆಟ್ಟಿಲೇರಿದ ರಾಮದೇವ್‌

ಕೋವಿಡ್‌ ಚಿಕಿತ್ಸೆಯ ಶಿಷ್ಟಾಚಾರದ ಕುರಿತಂತೆ ಅಲೋಪತಿ ವಿರುದ್ಧ ಹೇಳಿಕೆ ನೀಡಿದ್ದ ಬಾಬಾ ರಾಮದೇವ್‌ ವಿರುದ್ಧ ದೇಶದ ವಿವಿಧ ರಾಜ್ಯಗಳಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಆ ಪ್ರಕ್ರಿಯೆಗೆ ತಡೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಪಟ್ನಾ ಮತ್ತು ರಾಯಪುರದಲ್ಲಿ ದಾಖಲಿಸಿರುವ ಎಫ್‌ಐಆರ್‌ಗೆ ತಡೆ ನೀಡಬೇಕು ಮತ್ತು ಅವುಗಳನ್ನು ದೆಹಲಿ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿದ್ದಾರೆ.

Baba Ramdev, Supreme Court
Baba Ramdev, Supreme Court

ಐಎಂಎ ಛತ್ತೀಸ್‌ಗಢ ಘಟಕವು ರಾಮದೇವ್‌ ದೂರು ದಾಖಲಿಸಿದ ಬಳಿಕ ವಿವಿಧೆಡೆ ದೂರು ದಾಖಲಾಗಿದೆ. ವಿಪತ್ತು ನಿರ್ವಹಣಾ ಕಾಯಿದೆ 2005ರ ವಿವಿಧ ಸೆಕ್ಷನ್‌ಗಳ ಅಡಿ ದೂರು ನೀಡಲಾಗಿದೆ.

ವಾಟ್ಸಾಪ್‌ ನವೀಕೃತ ಗೌಪ್ಯತಾ ನೀತಿ: ಸಿಸಿಐಗೆ ನೋಟಿಸ್‌ ನೀಡಲು ದೆಹಲಿ ಹೈಕೋರ್ಟ್‌ ನಕಾರ

ವಾಟ್ಸಾಪ್‌ ನವೀಕೃತ ಗೌಪ್ಯತಾ ನೀತಿಯ ಕುರಿತು ಹೆಚ್ಚಿನ ಮಾಹಿತಿ ನೀಡುವಂತೆ ಸೂಚಿಸಿದ್ದ ಭಾರತೀಯ ಸ್ಪರ್ಧಾತ್ಮಕ ಆಯೋಗದ ಜೂನ್‌ 4ರ ನೋಟಿಸ್‌ಗೆ ತಡೆ ನೀಡಲು ಸೋಮವಾರ ದೆಹಲಿ ಹೈಕೋರ್ಟ್‌ ನಿರಾಕರಿಸಿದೆ. ವಾಟ್ಸಾಪ್‌ ಮತ್ತು ಅದರ ಮಾತೃಸಂಸ್ಥೆ ಫೇಸ್‌ಬುಕ್‌, ಸಿಸಿಐ ನೋಟಿಸ್‌ ಆಧರಿಸಿ ದುರುದ್ದೇಶ ಪೂರಿತ ಕ್ರಮಕೈಗೊಳ್ಳದಂತೆ ತಡೆ ನೀಡಬೇಕೆಂದು ಕೋರಿದ್ದವು. ಈ ಮನವಿ ಆಧರಿಸಿ ನ್ಯಾಯಮೂರ್ತಿಗಳಾದ ಅನೂಪ್‌ ಭಂಭಾನಿ ಮತ್ತು ಜಸ್ಮೀತ್‌ ಸಿಂಗ್‌ ಅವರಿದ್ದ ವಿಭಾಗೀಯ ಪೀಠವು ನೋಟಿಸ್‌ ಜಾರಿ ಮಾಡಿದೆ.

Delhi high Court, Whatsapp
Delhi high Court, Whatsapp

ತಡೆ ನೀಡುವಂತೆ ಕೋರಲಾಗಿರುವ ಸಿಸಿಐ ನೋಟಿಸ್‌ಗೆ ಜೂನ್‌ 21ರ ಒಳಗೆ ಅವರು ಪ್ರತಿಕ್ರಿಯಿಸಬೇಕಿತ್ತು. ಪ್ರಕರಣದ ವಿಚಾರಣೆಯನ್ನು ಜೂನ್‌ 28ಕ್ಕೆ ಮುಂದೂಡಲಾಗಿದೆ.

ಟಿಆರ್‌ಪಿ ಹಗರಣ: ʼಅರ್ನಾಬ್‌, ಪಾರ್ಥೋ ಸಂಚಿನಿಂದಾಗಿ ಟೌಮ್ಸ್‌ ನೌ ಸುದ್ದಿವಾಹಿನಿಗೆ ಕೋಟ್ಯಂತರ ರೂಪಾಯಿ ನಷ್ಟʼ

ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಮುಂಬೈನ ನ್ಯಾಯಾಲಯವೊಂದಕ್ಕೆ ಪೂರಕ ಆರೋಪಪಟ್ಟಿ ಸಲ್ಲಿಸಿರುವ ಪೊಲೀಸರು ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್‌ ಗೋಸ್ವಾಮಿ ಮತ್ತು ಬಾರ್ಕ್‌ ಮಾಜಿ ಸಿಇಒ ಪಾರ್ಥೊ ದಾಸಗುಪ್ತ ಅವರು ನಡೆಸಿದ ಸಂಚಿನಿಂದಾಗಿ ಆಂಗ್ಲ ಸುದ್ದಿ ವಾಹಿನಿ ಟೈಮ್ಸ್ ನೌಗೆ ರೂ. 400 ಕೋಟಿ ನಷ್ಟವಾಗಿದೆ ಎಂದಿದ್ದಾರೆ.

Partho Dasgupta, Arnab Goswami
Partho Dasgupta, Arnab Goswami

ಈಗಿನ ಆರೋಪಪಟ್ಟಿಯಲ್ಲಿ ಅರ್ನಾಬ್‌ ಸೇರಿದಂತೆ ಏಳು ಮಂದಿಯ ಹೆಸರನ್ನು ಪೊಲೀಸರು ಹೊಸದಾಗಿ ಸೇರಿಸಿದ್ದಾರೆ. ತನಿಖೆ ವೇಳೆ ಪಾರ್ಥೋ ಅವರೊಂದಿಗೆ ವಾಟ್ಸಾಪ್‌ ಸಂದೇಶ ವಿನಿಮಯವಾಗಿರುವುದನ್ನು ಅರ್ನಾಬ್‌ ಒಪ್ಪಿದರು. ಈ ಸಂಭಾಷಣೆಗಳು ಪೂರಕ ಆರೋಪಪಟ್ಟಿಯ ಭಾಗವಾಗಿದ್ದವು. ರಿಪಬ್ಲಿಕ್‌ ಟಿವಿಗೆ ಅನುಕೂಲವಾಗುವಂತೆ ಪಾರ್ಥೋ ಅವರು ಅರ್ನಾಬ್‌ಗೆ ರಹಸ್ಯ ಮಾಹಿತಿ ಸೋರಿಕೆ ಮಾಡುತ್ತಿದ್ದರು ಎಂದು ಸಂಭಾಷಣೆಗಳು ವಿವರಿಸಿವೆ ಎಂಬುದಾಗಿ ಪೊಲೀಸರು ಹೇಳಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ: ನ್ಯೂಸ್‌ಕ್ಲಿಕ್‌ ಸಂಸ್ಥಾಪಕ ಪ್ರಬೀರ್‌ಗೆ ಮಧ್ಯಂತರ ರಕ್ಷಣೆ ನೀಡಿದ ದೆಹಲಿ ಹೈಕೋರ್ಟ್‌

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಜುಲೈ 5ರವರೆಗೆ ಡಿಜಿಟಲ್‌ ಸುದ್ದಿತಾಣ ನ್ಯೂಸ್‌ಕ್ಲಿಕ್‌ ಸಂಸ್ಥಾಪಕ ಪ್ರಬೀರ್‌ ಪುರ್ಕಾಯಸ್ಥ ಅವರ ಮನೆ, ಕಚೇರಿ ಶೋಧದಲ್ಲಿ ತೊಡಗುವ ಮತ್ತು ದಾಖಲೆಗಳ ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ದೆಹಲಿ ಹೈಕೋರ್ಟ್‌ ಸೋಮವಾರ ಮಧ್ಯಂತರ ರಕ್ಷಣೆ ಒದಗಿಸಿದೆ.

Newsclick Logo, Prabir Purkayastha
Newsclick Logo, Prabir Purkayastha

ನ್ಯೂಸ್‌ ಕ್ಲಿಕ್‌ ವಿರುದ್ಧ ಜಾರಿ ನಿರ್ದೇಶನಾಲಯ ಸಲ್ಲಿಸಿದ ಇಸಿಐಆರ್‌ ವರದಿಯ ಪ್ರತಿಯನ್ನು ಪುರ್ಕಾಯಸ್ಥ ಅವರಿಗೆ ನೀಡುವಂತೆ ಕೂಡ ನ್ಯಾಯಮೂರ್ತಿ ಜಸ್ಮೀತ್‌ ಸಿಂಗ್‌ ಅವರಿದ್ದ ಏಕಸದಸ್ಯ ಪೀಠ ತಿಳಿಸಿದೆ. ಮಂಗಳವಾರ ರಾತ್ರಿ 11: 30 ರವರೆಗೆ ನ್ಯಾಯಧೀಶರು ಪ್ರಕರಣದ ವಿಚಾರಣೆ ನಡೆಸಿದ್ದರು. ಮುಂದಿನ ವಿಚಾರಣೆ ಜುಲೈ ಜುಲೈ 5ಕ್ಕೆ ನಿಗದಿಯಾಗಿದೆ.

Related Stories

No stories found.
Kannada Bar & Bench
kannada.barandbench.com