ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |27-4-2021

>> ಕಪ್ಪನ್ ಪ್ರಕರಣ: ಹೇಬಿಯಸ್‌ ಕಾರ್ಪಸ್‌ ಅರ್ಜಿ ಅನರ್ಹ ಎಂದ ಸರ್ಕಾರ >> ವಿಜಯೋತ್ಸವ ನಿಷೇಧಿಸಿದ ಭಾರತೀಯ ಚುನಾವಣಾ ಆಯೋಗ >> ವಿಶೇಷ ಎನ್‌ಐಎ ನ್ಯಾಯಾಲಯದ ಜಾಮೀನು ನಿರಾಕರಣೆ ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ ಸ್ಟ್ಯಾನ್ ಸ್ವಾಮಿ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |27-4-2021

[ಕಪ್ಪನ್‌ಪ್ರಕರಣ] ಹೇಬಿಯಸ್‌ ಕಾರ್ಪಸ್‌ ಅರ್ಜಿ ಅನರ್ಹ ಎಂದ ಸರ್ಕಾರ

ಪತ್ರಕರ್ತ ಸಿದ್ದಿಕಿ ಕಪ್ಪನ್‌ ಅವರನ್ನು ಕಾನೂನಿನ ಅನ್ವಯ ವಶಕ್ಕೆ ಪಡೆಯಲಾಗಿರುವುದರಿಂದ ಹೇಬಿಯಸ್‌ ಕಾರ್ಪಸ್‌ ಮನವಿಯು ನಿರ್ವಹಣೆಗೆ ಅನರ್ಹ ಎಂದು ಉತ್ತರ ಪ್ರದೇಶ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದೆ. ಕಪ್ಪನ್ ಅವರನ್ನು ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಉತ್ತರ ಪ್ರದೇಶ ಸರ್ಕಾರ ಮಂಗಳವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕಪ್ಪನ್‌ ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿ ದೂರು ದಾಖಲಿಸಿ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು ಎಂದು ಉತ್ತರ ಪ್ರದೇಶ ಸರ್ಕಾರ ಪ್ರತಿನಿಧಿಸುತ್ತಿರುವ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದಿಸಿದರು.

Siddique Kappan with Supreme Court
Siddique Kappan with Supreme Court

ವೈದ್ಯಕೀಯ ತುರ್ತುಸ್ಥಿತಿಯನ್ನು ಉಲ್ಲೇಖಿಸಿ ಕಪ್ಪನ್ ಅವರನ್ನು ಉತ್ತರ ಪ್ರದೇಶ ಆಸ್ಪತ್ರೆಯಿಂದ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಏಮ್ಸ್‌) ವರ್ಗಾಯಿಸಲು ಕೋರಿ ಪ್ರಸ್ತುತ ಸಲ್ಲಿಸಿರುವ ಅರ್ಜಿಯ ನಿರ್ವಹಣೆಯೂ ಸಾಧ್ಯವಿಲ್ಲ, ಏಕೆಂದರೆ ಈ ಅರ್ಜಿಯನ್ನು ಹೇಬಿಯಸ್ ಕಾರ್ಪಸ್ ಮನವಿಯಡಿ ಸಲ್ಲಿಸಲಾಗಿದ್ದು ಅದುವೇ ಸ್ವತಃ ನಿರ್ವಹಣೆಗೆ ಒಳಪಡುವುದಿಲ್ಲ ಎಂದು ಮೆಹ್ತಾ ಹೇಳಿದ್ದಾರೆ. “ಕಪ್ಪನ್‌ ಅವರನ್ನು ಕಾನೂನು ರೀತಿಯಲ್ಲಿಯೇ ವಶಕ್ಕೆ ಪಡೆದಿರುವುದರಿಂದ ಅವರು ಜಾಮೀನಿಗೆ ಮನವಿ ಸಲ್ಲಿಸಬಹುದಾಗಿದೆ ಹೊರತು ಈ ಹೇಬಿಯಸ್‌ ಕಾರ್ಪಸ್‌ ಮನವಿಯು ನಿರ್ವಹಣೆಗೆ ಅರ್ಹವಲ್ಲ” ಎಂದು ಮೆಹ್ತಾ ಅವರು ನ್ಯಾಯಾಲಯಕ್ಕೆ ತಿಳಿಸಿದರು. ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿರುವ ಪೀಠವು ಕಪ್ಪನ್‌ ಅವರ ವೈದ್ಯಕೀಯ ದಾಖಲೆ ಸಲ್ಲಿಸುವಂತೆ ಸೂಚಿಸಿದೆ.

ಕೋವಿಡ್‌ ಸಂಖ್ಯೆಯಲ್ಲಿ ವ್ಯಾಪಕ ಹೆಚ್ಚಳ: ವಿಜಯೋತ್ಸವ ನಿಷೇಧಿಸಿದ ಭಾರತೀಯ ಚುನಾವಣಾ ಆಯೋಗ

ಭಾರತದಲ್ಲಿ ಕೋವಿಡ್‌ ಸಂಖ್ಯೆ ಅಪಾರವಾಗಿ ಹೆಚ್ಚಾಗುತ್ತಿರುವುದರಿಂದ ವಿವಿಧ ರಾಜ್ಯಗಳಲ್ಲಿ ಮತ ಎಣಿಕೆ ಮುಗಿದ ಬಳಿಕ ವಿಜಯೋತ್ಸವ ಆಚರಿಸಲು ಅವಕಾಶ ಇರುವುದಿಲ್ಲ ಎಂದು ಭಾರತೀಯ ಚುನಾವಣಾ ಆಯೋಗವು ಅಧಿಸೂಚನೆಯಲ್ಲಿ ತಿಳಿಸಿದೆ. ಮೇ 2ರಂದು ಮತ ಎಣಿಕೆಯ ಬಳಿಕ ವಿಜಯೋತ್ಸವ ನಡೆಸಲು ಅನುಮತಿಸಲಾಗದು. ಚುನಾವಣಾಧಿಕಾರಿಯಿಂದ ಚುನಾವಣಾ ಸರ್ಟಿಫಿಕೇಟ್‌ ಪಡೆಯಲು ಮಹಿಳೆ/ಪುರುಷ ವಿಜೇತ ಅಭ್ಯರ್ಥಿಯ ಜೊತೆ ನೋಂದಾಯಿತ ಇಬ್ಬರನ್ನು ಹೊರತುಪಡಿಸಿ ಹೆಚ್ಚಿನ ಜನರು ನೆರೆಯುವಂತಿಲ್ಲ ಎಂದು ಮಂಗಳವಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಆಯೋಗ ತಿಳಿಸಿದೆ.

Election
Election

ಚುನಾವಣೆಯ ಸಂದರ್ಭದಲ್ಲಿ ಕೋವಿಡ್‌ ಶಿಷ್ಟಾಚಾರ ಪಾಲಿಸುವುದಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಮನವಿಗಳ ವಿಚಾರಣೆಯನ್ನು ಆಯೋಗವು ನಡೆಸಿತು. ಹಿರಿಯ ವಕೀಲ ರಾಕೇಶ್‌ ದ್ವಿವೇದಿ ಅವರು ಇಸಿಐ ಪ್ರತಿನಿಧಿಸಿದ್ದರು. ತನ್ನ ಆದೇಶದ ಮೂಲಕ ಆಯೋಗವು ಹೊರಡಿಸಿರುವ ನಿರ್ಬಂಧಗಳನ್ನು ಸರ್ಕಾರಿ ಪ್ರಾಧಿಕಾರಗಳು ಗಂಭೀರವಾಗಿ ಪಾಲಿಸಬೇಕು ಎಂದು ಕಲ್ಕತ್ತಾ ಹೈಕೋರ್ಟ್‌ ಹೇಳಿದೆ. ಚುನಾವಣಾ ಸಮಾವೇಶ ಮತ್ತು ಪ್ರಚಾರದ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳಲು ವಿಫಲವಾದ ಆಯೋಗದ ವಿರುದ್ಧ ಮದ್ರಾಸ್‌ ಹೈಕೋರ್ಟ್‌ ಕಟುವಾಗಿ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿಯೇ ಈ ಬೆಳವಣಿಗೆ ನಡೆದಿದೆ.

ಎನ್‌ಐಎ ನ್ಯಾಯಾಲಯದ ಜಾಮೀನು ನಿರಾಕರಣೆ ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ ಸ್ಟ್ಯಾನ್ ಸ್ವಾಮಿ

ಭೀಮಾ ಕೋರೆಗಾಂವ್‌ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಸ್ಟ್ಯಾನ್‌ ಸ್ವಾಮಿ ಅವರು ವಿಶೇಷ ಸಿಬಿಐ ಎನ್‌ಐಎ ನ್ಯಾಯಾಲಯ ಜಾಮೀನು ನಿರಾಕರಿಸಿರುವುದನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಕೋವಿಡ್‌ನಿಂದ ಎದುರಾಗಿರುವ ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಉಲ್ಲೇಖಿಸಿ ಸ್ಟ್ಯಾನ್‌ ಸ್ವಾಮಿ ಅವರು ಕೋರಿದ್ದ ಜಾಮೀನು ಮನವಿಯನ್ನು ವಿಶೇಷ ನ್ಯಾಯಾಲಯವು ವಜಾಗೊಳಿಸಿತ್ತು. ಜಾಮೀನು ನೀಡುವುದಕ್ಕೆ ಸಮರ್ಥವಾದ ಕಾರಣಗಳನ್ನು ನೀಡದಿರುವ ಹಿನ್ನೆಲೆಯಲ್ಲಿ ಜಾಮೀನು ನಿರಾಕರಿಸಲಾಗಿದೆ ಎಂದು ವಿಶೇಷ ನ್ಯಾಯಾಲಯವು ಮಾರ್ಚ್‌ನ ತನ್ನ ಆದೇಶದಲ್ಲಿ ಹೇಳಿತ್ತು.

Stan Swamy and Bombay HC
Stan Swamy and Bombay HC

ಎರಡು ಆದೇಶಗಳನ್ನೂ ಸ್ವಾಮಿ ಅವರು ಪ್ರಶ್ನಿಸಿ ಎರಡು ಪ್ರತ್ಯೇಕ ಮೇಲ್ಮನವಿಗಳನ್ನು ಸಲ್ಲಿಸಿದ್ದಾರೆ. ಇದಲ್ಲದೆ ಅಕ್ಟೋಬರ್‌ 2020ರ ಆದೇಶವನ್ನು ಪ್ರಶ್ನಿಸಿ 90 ದಿನಗಳೊಳಗೆ ಮನವಿ ಸಲ್ಲಿಸಲು ತಡವಾಗಿರುವ ಬಗ್ಗೆಯೂ ವಿಳಂಬವನ್ನು ಮನ್ನಿಸಲು ಕೋರಿ (Condonation of Delay) ಮಧ್ಯಂತರ ಮನವಿ ಸಲ್ಲಿಸಿದ್ದಾರೆ. ವಿಶೇಷ ನ್ಯಾಯಾಲಯವು ತಪ್ಪಾಗಿ ತನಗೆ ಜಾಮೀನು ನಿರಾಕರಿಸಿದೆ ಎಂದಿದ್ದಾರೆ. ಪಾರ್ಕಿನ್‌ಸನ್‌ನಿಂದಾಗಿ ಎದುರಾಗಿರುವ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಮಧ್ಯಂತರ ಜಾಮೀನು ನೀಡುವಂತೆ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

Related Stories

No stories found.
Kannada Bar & Bench
kannada.barandbench.com