ಏಕೀಕೃತ ಹಣಪಾವತಿ ತಾಣಗಳ (ಯುಪಿಐ) ಮೂಲಕ ಸಂಗ್ರಹಿಸಲಾದ ಭಾರತೀಯರ ದತ್ತಾಂಶವನ್ನು ದುರ್ಬಳಕೆ ಮಾಡಿಕೊಳ್ಳದಂತೆ ಗೂಗಲ್, ಫೇಸ್‌ಬುಕ್, ವಾಟ್ಸಾಪ್ ಮತ್ತು ಅಮೆಜಾನ್ ಸಂಸ್ಥೆಗಳಿಗೆ ಸೂಚಿಸುವಂತೆ ಕೋರಿ ರಾಜ್ಯಸಭಾ ಸದಸ್ಯ ಬಿನೋಯ್ ವಿಸ್ವಮ್ ಸಲ್ಲಿಸಿದ್ದ ಮನವಿಯನ್ನು ಆಧರಿಸಿ ಆ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದ್ದು, ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ. ಇದೇ ಸಂದರ್ಭದಲ್ಲಿ ನಾಲ್ಕು ವಾರಗಳ ಕಾಲ ಪ್ರಕರಣದ ವಿಚಾರಣೆ ಮುಂದೂಡಲಾಗಿದ್ದು, ಇದರೊಳಗೆ ಪ್ರತಿವಾದಿಗಳು ಪ್ರತಿಕ್ರಿಯೆ ಸಲ್ಲಿಸಬೇಕಿದೆ.
ಯುಪಿಐ ತಾಣಗಳ ಮೂಲಕ ಸಂಗ್ರಹಿಸಲಾಗದ ದತ್ತಾಂಶವನ್ನು ದುರ್ಬಳಕೆ ಮಾಡಿಕೊಳ್ಳದಂತೆ ತಡೆಯುವ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ನಿಯಮ ರೂಪಿಸುವಂತೆ ನಿರ್ದೇಶನ ನೀಡುವಂತೆ ಕೋರಲಾಗಿದ್ದು, ಈ ಮೂಲಕ ಜನರ ಖಾಸಗಿ ಹಕ್ಕುಗಳನ್ನು ಉಲ್ಲಂಘಿಸದಂತೆ ಎಚ್ಚರವಹಿಸುವಂತೆ ಕೋರಲಾಗಿದೆ. ಸೋಮವಾರದ ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರರ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ವಾಟ್ಸಾಪ್, ಫೇಸ್‌ಬುಕ್ ಮತ್ತಿತರ ಸಂಸ್ಥೆಗಳು ಔಪಚಾರಿಕ ಪ್ರತಿಕ್ರಿಯೆ ಸಲ್ಲಿಸಿಲ್ಲ ಎಂದು ಹೇಳಿದೆ. ಕಳೆದ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿತ್ತು. ಗೂಗಲ್, ಅಮೆಜಾನ್ ಮತ್ತು ವಾಟ್ಸಾಪ್ ಹಣ ವರ್ಗಾವಣೆಗಾಗಿ ಸಂಗ್ರಹಿಸುವ ದತ್ತಾಂಶವನ್ನು ತಮ್ಮ ಮಾತೃಸಂಸ್ಥೆ ಅಥವಾ ಇನ್ನಾವುದೇ ಮೂರನೇ ವ್ಯಕ್ತಿಯ ಜೊತೆ ಹಂಚಿಕೊಳ್ಳದಂತೆ ಆರ್‌ಬಿಐ ಮತ್ತು ಭಾರತೀಯ ಹಣಪಾವತಿ ಕಾರ್ಪೊರೇಶನ್‌ಗೆ ಖಾತರಿಪಡಿಸುವಂತೆ ಸೂಚಿಸಿತ್ತು.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 377 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ (ಪೋಕ್ಸೊ) ಕಾಯಿದೆಯ ಸೆಕ್ಷನ್ 4ರ ಅಡಿ ಅಪರಾಧಗಳು ಖಾಸಗಿ ರೂಪದಲ್ಲಿಲ್ಲ ಎಂದಿರುವ ದೆಹಲಿ ಹೈಕೋರ್ಟ್ ಪಕ್ಷಕಾರರು ರಾಜಿಸಂಧಾನಕ್ಕೆ ಒಪ್ಪಿಕೊಂಡಿದ್ದರೂ ಎಫ್‌ಐಆರ್ ರದ್ದುಗೊಳಿಸಲು ನಿರಾಕರಿಸಿದೆ. ಐಪಿಸಿ ಸೆಕ್ಷನ್ 377 ಅಸಹಜ ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ್ದು, ಪೋಕ್ಸೊ ಕಾಯಿದೆಯ ಸೆಕ್ಷನ್ 4 ಲೈಂಗಿಕ ಸಂಭೋಗ ದೌರ್ಜನ್ಯಕ್ಕೆ ಸಂಬಂಧಿಸಿದ್ದಾಗಿದೆ.
“ಆರೋಪಿಯ ಜೊತೆ ವಿವಾದವನ್ನು ರಾಜಿ ಮಾಡಿಕೊಳ್ಳಲು ಸಂತ್ರಸ್ತೆಯ ತಂದೆಗೆ ಅವಕಾಶ ನೀಡಲಾಗದು. ಆತ ಸಂತ್ರಸ್ತನಲ್ಲ. ದುಷ್ಟ ಶಕ್ತಿಗಳ ದಾಳಿಯಿಂದ ಮಕ್ಕಳ ಹಿತಾಸಕ್ತಿಯನ್ನು ನ್ಯಾಯಾಲಯವು ಸಂರಕ್ಷಿಸಬೇಕಿದೆ. ಸಮಾಜದ ಮೌಲ್ಯ ವ್ಯವಸ್ಥೆಯನ್ನು ಘಾಸಿಗೊಳಿಸುವ ಪ್ರಕರಣದಲ್ಲಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿರುವುದಕ್ಕೆ ನಾವು ಅಂಧರಾಗುವಂತಿಲ್ಲ. ತೀರ ಸಾಮಾನ್ಯ ಪ್ರಕರಣ ಎಂದು ರಾಜಿ ಮಾಡಿಕೊಳ್ಳಲು ಒಪ್ಪಿಕೊಳ್ಳುವಂತಿಲ್ಲ. ಇದೇ ರೀತಿಯ ಅಪರಾಧ ಎಸಗುವ ಇತರರನ್ನು ತಡೆಯುವುದು ಅತ್ಯಗತ್ಯ ಮತ್ತು ಯಾವುದಕ್ಕೂ ಮತ್ತು ಎಲ್ಲದಕ್ಕೂ ರಾಜಿ ಮಾಡಿಕೊಳ್ಳಬಹುದು ಎಂಬ ಸಂಕೇತವನ್ನು ಅವರು ಪಡೆಯಲು ಸಾಧ್ಯವಿಲ್ಲ ... ಸಂತ್ರಸ್ತೆಯ ತಂದೆ ಅರ್ಜಿದಾರ/ಆರೋಪಿರೊಂದಿಗೆ ರಾಜಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎಂದ ಮಾತ್ರಕ್ಕೆ ಎಫ್‌ಐಆರ್ ರದ್ದುಮಾಡಲು ನ್ಯಾಯಾಲಯವು ಅನುಮತಿಸುವುದಿಲ್ಲ,” ಎಂದು ಹೇಳಿದೆ. ಏಳು ವರ್ಷದ ಬಾಲಕನ ಮೇಲೆ ಆರೋಪಿಯು ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ಇದಾಗಿದೆ.
ದ್ವೇಷಭಾಷೆ ಪ್ರಸಾರಕ್ಕೆ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಟರ್ ಮತ್ತು ವಾಟ್ಸಾಪ್ ಹೊಣೆಯಾಗಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಗೃಹ ಇಲಾಖೆಗೆ ನೋಟಿಸ್ ಜಾರಿಗೊಳಿಸಿದೆ. ಹಿಂದೂ ದೇವತೆಗಳ ವಿರುದ್ಧ ಅರ್ಮೀನ್ ನವಾಬಿ (@ArminNavabi ಎಂಬ ಟ್ವಿಟರ್ ಖಾತೆ) ಎಂಬವರು ಆಕ್ಷೇಪಾರ್ಹ ಟ್ವೀಟ್ ಮಾಡಿದ ಬಳಿಕ ಮನವಿ ಸಲ್ಲಿಸಲಾಗಿದೆ. ಈ ಸಂಬಂಧ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎಸ್ ಎ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠ ನೋಟಿಸ್ ಜಾರಿ ಮಾಡಿದ್ದಾರೆ.
ನಿರ್ದಿಷ್ಟ ಕಾಲಾವಧಿಯ ಒಳಗೆ ದ್ವೇಷಭಾಷೆ ಮತ್ತು ನಕಲಿ ಸುದ್ದಿಗಳನ್ನು ತೆಗೆದು ಹಾಕುವ ಸಂಬಂಧ ವ್ಯವಸ್ಥೆ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಮನವಿಯಲ್ಲಿ ಕೋರಲಾಗಿದೆ. “ನೋಂದಾಯಿತ ಖಾತೆ ಹೊಂದಿದ್ದರೆ ಸಾಕು ಚಾನೆಲ್ ಆರಂಭಿಸಬಹುದಾಗಿದೆ. ಇದರ ಮೂಲಕ ಟ್ವಿಟರ್, ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಇತ್ಯಾದಿಗಳ ಮೂಲಕ ವಿಡಿಯೋ ಅಪ್‌ಲೋಡ್ ಮಾಡಬಹುದಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಯಾರು ಬೇಕಾದರೂ ಏನು ಬೇಕಾದರೂ ಅಪ್‌ಲೋಡ್ ಮಾಡಬಹುದಾಗಿದ್ದು, ಯಾವುದಕ್ಕೂ ಸೆನ್ಸಾರ್ ಅಥವಾ ನಿರ್ಬಂಧವಿಲ್ಲ. ಈ ಸಂಬಂಧ ಸರ್ಕಾರವು ಯಾವುದೇ ನಿಯಂತ್ರಣವನ್ನು ಹೊಂದಿಲ್ಲ,” ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಮಾರ್ಚ್ ಮೊದಲ ವಾರದೊಳಗೆ ಪ್ರಕರಣಗಳ ಭೌತಿಕ ವಿಚಾರಣೆಯನ್ನು ಸೀಮಿತ ರೀತಿಯಲ್ಲಿ ಪುನರಾರಂಭಿಸಲು ಸುಪ್ರೀಂ ಕೋರ್ಟ್ ಯೋಜಿಸಿದೆ ಎಂದು ಭಾರತೀಯ ವಕೀಲರ ಪರಿಷತ್ (ಬಿಸಿಐ) ಪತ್ರಿಕಾ ಹೇಳಿಕೆ ತಿಳಿಸಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಭೌತಿಕ ವಿಚಾರಣೆ ಆರಂಭಿಸುವ ಕುರಿತು ಚರ್ಚಿಸಲು ನ್ಯಾಯವಾದಿ ಸಮುದಾಯದ ಮುಖಂಡರು ಮತ್ತು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ನಡುವೆ ನಡೆದ ಮಾತುಕತೆಯ ವಿವರಗಳನ್ನು ಪ್ರಕಟಣೆ ತಿಳಿಸಿದೆ.
ಕುತೂಹಲದ ಸಂಗತಿ ಎಂದರೆ ದೆಹಲಿಯಲ್ಲಿರುವ ವಕೀಲರಿಗೆ ಮಾತ್ರ ವರ್ಚುವಲ್ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಹಿರಿಯ ನ್ಯಾಯವಾದಿ ವಿಕಾಸ್ ಸಿಂಗ್ ತಿಳಿಸಿದ್ದಾರೆ. ಜಾಲ ಕಲಾಪಕ್ಕೆ ಉಳಿದ ವಕೀಲರಿಗೆ ಅವಕಾಶ ಮಾಡಿಕೊಟ್ಟರೆ ಬಹಳಷ್ಟು ಸಮಸ್ಯೆ ಸೃಷ್ಟಿಯಾಗುತ್ತದೆ. ಸುಪ್ರೀಂಕೋರ್ಟ್ ಸದಸ್ಯರಲ್ಲಿ ತೀವ್ರ ಅಸಮಾಧಾನ ಉಂಟಾಗಬಹುದು ಎಂದು ತಿಳಿಸಲಾಗಿದೆ. ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ನಂತರವೂ ವರ್ಚುವಲ್ ಕಲಾಪಕ್ಕೆ ಅವಕಾಶ ಕಲ್ಪಿಸುವುದನ್ನು ಭಾರತೀಯ ನ್ಯಾಯವಾದಿ ಸಮುದಾಯ ಒಪ್ಪುವುದಿಲ್ಲ. ಸಾಮಾನ್ಯ ದಿನಗಳಲ್ಲಿ ಮುಕ್ತ ನ್ಯಾಯಾಲಯದ ವಿಚಾರಣೆ ಬದಲಿಸಲು ಸಾಧ್ಯವಿಲ್ಲ ಎಂದು ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ. ಇದೇ ವೇಳೆ 3-4 ವಾರಗಳಲ್ಲಿ ಭೌತಿಕ ವಿಚಾರಣೆ ಆರಂಭವಾಗಲಿದೆ ಎಂದು ತಿಳಿದು ಬಂದಿದೆ. ಭೌತಿಕ ವಿಚಾರಣೆಯನ್ನು ಪುನರಾರಂಭಿಸಲು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಸಿದ್ಧರಿದ್ದಾರೆ ಎಂದು ಸಭೆಯಲ್ಲಿ ಸಿಜೆಐ ಬೊಬ್ಡೆ ಸ್ಪಷ್ಟಪಡಿಸಿದರು. ಆದರೂ ಇನ್ನೂ ಹಲವು ವೈದ್ಯಕೀಯ / ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ನ್ಯಾಯಾಲಯದ ರೆಜಿಸ್ಟ್ರಿ ಯತ್ನಿಸುತ್ತಿದೆ.
ಸುಪ್ರೀಂ ಕೋರ್ಟ್ ಶೀಘ್ರದಲ್ಲೇ ಪ್ರಕರಣಗಳ ಭೌತಿಕ ವಿಚಾರಣೆ ಆರಂಭಿಸಲಿದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಸೋಮವಾರ ನ್ಯಾಯವಾದಿ ವರ್ಗಕ್ಕೆ ಭರವಸೆ ನೀಡಿದರು. ವೈದ್ಯಕೀಯ ಸಲಹೆ ಪರಿಗಣಿಸಿ ಮತ್ತು ಭಾಗೀದಾರರ ಆರೋಗ್ಯ, ತಂತ್ರಜ್ಞಾನ ಮೂಲಸೌಕರ್ಯ ಹಾಗೂ ರೆಜಿಸ್ಟ್ರಿಯ ಸಿಬ್ಬಂದಿಯ ಲಭ್ಯತೆಗೆ ಸಬಂಧಿಸಿದಂತೆ ಅಸ್ತಿತ್ವದಲ್ಲಿರುವ ಅಡೆತಡೆಗಳು ಕೊನೆಗೊಂಡ ಬಳಿಕ ಇದು ಸಾಕಾರಗೊಳ್ಳಲಿದೆ. ವರ್ಚುವಲ್ ಮತ್ತು ಭೌತಿಕ ಕಲಾಪಗಳನ್ನೊಳಗೊಂಡ ಹೈಬ್ರಿಡ್ ವಿಧಾನದಲ್ಲಿ ಪ್ರಕರಣಗಳ ವಿಚಾರಣೆ ನಡೆಯಲಿದೆ. ಮುಖ್ಯವಾಗಿ ಭೌತಿಕ ವಿಚಾರಣೆಗೆ ವಕೀಲರು ಅಥವಾ ಅಡ್ವೊಕೇಟ್ ಆನ್ ರೆಕಾರ್ಡ್ ಅನುಮತಿ ಪಡೆಯಬೇಕಿರುವುದಿಲ್ಲ. “ಪ್ರಕರಣಗಳ ಸಾಮಾನ್ಯ ಪಟ್ಟಿ ಆಧರಿಸಿ ಹೈಬ್ರಿಡ್ ರೀತಿಯಲ್ಲಿ ಭೌತಿಕ ವಿಚಾರಣೆ ಪುನಾರಾರಂಭಿಸಲಾಗುತ್ತಿದ್ದು ಅಡ್ವೊಕೇಟ್ ಆನ್ ರೆಕಾರ್ಡ್ ಅಥವಾ ವಕಲೀರ ಒಪ್ಪಿಗೆ ಆಧಾರದ ಮೇಲೆ ಅಲ್ಲ ಎಂದು ಸುಪ್ರೀಂಕೋರ್ಟ್ ಅಡ್ವೊಕೇಟ್ಸ್ ಆನ್ ರೆಕಾರ್ಡ್ಸ್ ಸಂಘದ (ಎಸ್‌ಸಿಎಒಆರ್‌ಎ) ಪತ್ರ ತಿಳಿಸಿದೆ.
ಸಾಲಿಸಿಟರ್ ಜನರಲ್, ಭಾರತೀಯ ವಕೀಲರ ಪರಿಷತ್‌ನ (ಬಿಸಿಐ) ಅಧ್ಯಕ್ಷರು ಎಸ್‌ಸಿಎಒಆರ್‌ಎ ಪದಾಧಿಕಾರಿಗಳು, ಸುಪ್ರೀಂಕೋರ್ಟ್ ವಕೀಲರ ಸಂಘ ಹಾಗೂ ಹಿರಿಯ ನ್ಯಾಯವಾದಿ ವಿಕಾಸ್ ಸಿಂಗ್ ಅವರು ಸೋಮವಾರ ನ್ಯಾ. ಬೊಬ್ಡೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಕೋವಿಡ್‌ನಿಂದಾಗಿ ಕಳೆದ ವರ್ಷದ ಮಾರ್ಚ್ 23ರಿಂದಲೂ ನ್ಯಾಯಾಲಯ ವೀಡಿಯೊ ಕಲಾಪದ ಮೂಲಕ ಕಾರ್ಯ ನಿರ್ವಹಿಸುತ್ತಿದೆ. ನ್ಯಾಯಾಲಯದ ಆವರಣದಲ್ಲಿ ವಕೀಲರು ಮತ್ತು ದಾವೆ ಹೂಡುವವರ ಪ್ರವೇಶ ನಿರ್ಬಂಧಿಸಲಾಗುವುದು ಮತ್ತು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ತುರ್ತು ಪ್ರಕರಣಗಳನ್ನು ಮಾತ್ರ ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ಅದು ಮಾರ್ಚ್ 23 ರಂದು ಸುತ್ತೋಲೆ ಹೊರಡಿಸಿತ್ತು. ವಿಡಿಯೊ ಆಪ್ ಮೂಲಕ ಜಾಲ ಕಲಾಪ ನಡೆಯಲಿದ್ದು ಅದನ್ನು ಮೊಬೈಲ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಕಳೆದ ಸೆಪ್ಟೆಂಬರ್‌ನಲ್ಲಿ ಭೌತಿಕ ವಿಚಾರಣೆ ಪುನರಾರಂಭಿಸಲು ನ್ಯಾಯಾಲಯ ಪ್ರಯತ್ನಿಸಿತ್ತು, ಆದರೆ ಅಲ್ಪ ಯಶಸ್ಸನ್ನು ಕಂಡಿತು. ಭೌತಿಕ ವಿಚಾರಣೆಯನ್ನು ಸೀಮಿತ ರೀತಿಯಲ್ಲಿ ಪ್ರಾರಂಭಿಸಲು ಕೊಠಡಿಗಳನ್ನು ಮಾರ್ಪಡಿಸಿ ಮೂಲಸೌಕರ್ಯ ಒದಗಿಸಿತ್ತು. ಆದರೆ ನ್ಯಾಯವಾದಿ ವರ್ಗದಿಂದ ನಿರುತ್ಸಾಹದ ಪ್ರತಿಕ್ರಿಯೆ ದೊರೆಯಿತು. ಆದರೆ ಕೋವಿಡ್ ಲಸಿಕೆ ಬಿಡುಗಡೆಯಾಗುವುದರೊಂದಿಗೆ ಭೌತಿಕ ವಿಚಾರಣೆ ಆರಂಭಿಸುವ ಕುರಿತಂತೆ ಬೇಡಿಕೆ ಬಲವಾಯಿತು. ಕಳೆದ ಕೆಲ ವಾರಗಳ ಹಿಂದೆ ಖುದ್ದು ಸುಪ್ರೀಂಕೋರ್ಟ್ ಭೌತಿಕ ವಿಚಾರಣೆಯ ಶೀಘ್ರ ಆರಂಭದ ಬಗ್ಗೆ ಸುಳಿವು ನೀಡಿತ್ತು.