ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮದಲ್ಲಿ ಸುದ್ದಿ / ಇನ್ನಾವುದೇ ಕಾರ್ಯಕ್ರಮದ ಭಾಗವಾಗಿ ಅಸಭ್ಯ ಮತ್ತು ಅಶ್ಲೀಲ ವಿಷಯವನ್ನು ಪ್ರಕಟಿಸುವುದನ್ನು ತಡೆಯಲು ಶಾಸನಬದ್ಧ ನಿಯಮಗಳನ್ನು ರೂಪಿಸುವುದಕ್ಕೆ ಸಂಬಂಧಿಸಿದಂತೆ ನಿರ್ದೇಶನ ನೀಡುವಂತೆ ಕೋರಿದ್ದ ಮನವಿ ಕುರಿತಾಗಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಪ್ರತಿಕ್ರಿಯಿಸುವಂತೆ ಸೂಚಿಸಿದೆ.
ಅಂಥ ಸುದ್ದಿ ಪ್ರಸರಣವನ್ನು ಸಂಜ್ಞೇಯ ಅಪರಾಧ ಎಂದು ಪರಿಗಣಿಸುವಂತೆ ಅರ್ಜಿದಾರ ಎಚ್ ನಾಗಭೂಷಣ್ ರಾವ್ ಕೋರಿದ್ದು, ಅದರಿಂದ ಕಠಿಣ ಶಿಕ್ಷೆ ವಿಧಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಕರಣದ ಸಂಬಂಧ ರಾಜ್ಯ ಸರ್ಕಾರ, ಮಾಹಿತಿ ಮತ್ತು ಪ್ರಸಾರ ಇಲಾಖೆ ಹಾಗೂ ರಾಜ್ಯ ಪೊಲೀಸರಿಗೆ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠವು ನೋಟಿಸ್ ನೀಡಿದೆ. ರಾಜ್ಯ ಸರ್ಕಾರವನ್ನು ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿಸುವಂತೆ ಅರ್ಜಿದಾರರಿಗೆ ನ್ಯಾಯಾಲಯ ಸೂಚಿಸಿದೆ. ಜೂನ್ 7ಕ್ಕೆ ವಿಚಾರಣೆ ಮುಂದೂಡಲಾಗಿದೆ. ಅರ್ಜಿದಾರರನ್ನು ಹಿರಿಯ ವಕೀಲ ನಾಗೇಂದ್ರ ನಾಯ್ಕ್ ಪ್ರತಿನಿಧಿಸಿದ್ದರು.
ವೆಸ್ಟ್‌ಮಿನಿಸ್ಟರ್ ಮಾದರಿಯಲ್ಲಿ ಭಾರತದಲ್ಲಿ ಸಂವಿಧಾನ ರೂಪಿಸುವ ಮೂಲಕ ಸರ್ಕಾರ ನಡೆಸಲಾಗುತ್ತಿದೆಯಾದರೂ ದೇಶದಲ್ಲಿನ ಕೆಲವು ಸರ್ಕಾರಗಳನ್ನು ಅಮೆರಿಕದ ಏಕ/ಕೆಲವೇ ವ್ಯಕ್ತಿಗಳಿಂದ ನಿಯಂತ್ರಿಸಲ್ಪಡುವ ಅಧ್ಯಕ್ಷೀಯ ವ್ಯವಸ್ಥೆ ರೀತಿಯಲ್ಲಿ ನಡೆಸಲಾಗುತ್ತಿದೆ ಎಂದು ಮದ್ರಾಸ್ ಹೈಕೋರ್ಟ್ ಈಚೆಗೆ ಅಭಿಪ್ರಾಯಪಟ್ಟಿದೆ. ವಿಧಾನಸಭಾ ಚುನಾವಣೆಗೂ ಮುನ್ನ ತಮಿಳುನಾಡಿನಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳು ಆಂತರಿಕ ಚುನಾವಣೆ ನಡೆಸುವ ಸಂಬಂಧ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ರಾಮಮೂರ್ತಿ ಅವರಿದ್ದ ವಿಭಾಗೀಯ ಪೀಠ ನಡೆಸಿತು.
“ಕೇಂದ್ರ ಮತ್ತು ರಾಜ್ಯಗಳಲ್ಲಿ ಸರ್ಕಾರದ ಸ್ವರೂಪವನ್ನು ವೆಸ್ಟ್‌ಮಿನಿಸ್ಟರ್ ಶೈಲಿಯ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದರೂ ಅವುಗಳಲ್ಲಿ ಕೆಲವು ಅಧ್ಯಕ್ಷೀಯ ಆಧಾರದ ಮೇಲೆ ನಡೆಯವ ಸಂಭಾವ್ಯತೆಯ ಬಗ್ಗೆ ಸಂವಿಧಾನ ರಚಿಸುವವರ ಆಲೋಚನೆಯಲ್ಲಿ ಇರಲಿಲ್ಲ. ಒಬ್ಬ ವ್ಯಕ್ತಿ ಅಥವಾ ನಿಜವಾದ ಅಧಿಕಾರವನ್ನು ಹೊಂದಿರುವ ಕೆಲವು ವ್ಯಕ್ತಿಗಳು ಅಮೆರಿಕದಲ್ಲಿ ಅಧಿಕಾರ ನಡೆಸುವಂತೆ ಭಾರತದಲ್ಲಿಯೂ ನಡೆಸಲಾಗುತ್ತಿದೆ. ಎಲ್ಲರನ್ನೂ ಒಳಗೊಂಡು ಅಧಿಕಾರ ನಡೆಸುವುದು ಅಥವಾ ಎಲ್ಲರಲ್ಲಿನ ಒಳಿತುಗಳನ್ನು ಕಲೆಹಾಕಿ ಅಧಿಕಾರ ನಡೆಸುವ ವಿಚಾರಗಳನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ. ಇದರಿಂದ ಅದರ ಉದ್ದೇಶಕ್ಕೆ ಸಮಸ್ಯೆಯಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ. ಏಪ್ರಿಲ್ 6ರಂದು ತಮಿಳುನಾಡು ಚುನಾವಣೆ ಮುಗಿದಿರುವುದರಿಂದ ಅರ್ಜಿಗೆ ಯಾವುದೇ ಪ್ರಾಮುಖ್ಯತೆ ಇಲ್ಲ ಎಂದು ನ್ಯಾಯಾಲಯವು ಅದನ್ನು ವಜಾಗೊಳಿಸಿದೆ.
ಕೇರಳದ ಪ್ರಸಕ್ತ ವಿಧಾನಸಭೆಯ ಅವಧಿ ಮೇ 2ರಂದು ಪೂರ್ಣಗೊಳ್ಳುವುದರೊಳಗೆ ಖಾಲಿಯಾಗಿರುವ ರಾಜ್ಯಸಭೆಯ ಮೂರು ಸ್ಥಾನಗಳಿಗೆ ಚುನಾವಣೆ ನಡೆಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಕೇರಳ ಹೈಕೋರ್ಟ್ ಆದೇಶಿಸಿದೆ. ಸಿಪಿಐ (ಎಂ) ನೇತೃತ್ವದ ಕೇರಳ ವಿಧಾನಸಭೆಯು ಅಸ್ತಿತ್ವದಲ್ಲಿ ಇರುವುದರ ಒಳಗೆ ರಾಜ್ಯಸಭೆಯ ಮೂರು ಸ್ಥಾನಗಳಿಗೆ ಚುನಾವಣೆ ಪೂರ್ಣಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ವಿ ಆಶಾ ಅವರಿದ್ದ ಪೀಠವು ಆದೇಶ ನೀಡಿದೆ.
ಪ್ರಸಕ್ತ ವಿಧಾನಸಭೆ ಅವಧಿ ಮುಗಿಯುವುದರ ಒಳಗೆ ಚುನಾವಣೆ ನಡೆಸುವುದಾಗಿ ವಿಚಾರಣೆಯ ಸಂದರ್ಭದಲ್ಲಿ ಆಯೋಗವು ಪೀಠಕ್ಕೆ ತಿಳಿಸಿದ್ದು, ಚುನಾವಣೆಯ ನಿರ್ದಿಷ್ಟ ದಿನಾಂಕವನ್ನು ಅದು ಪ್ರಕಟಿಸಿಲ್ಲ. ಐಯುಎಂಎಲ್‌ನ ಅಬ್ದುಲ್ ವಹಾಬ್, ಸಿಪಿಐ(ಎಂ)ನ ಕೆ ಕೆ ರಾಗೇಶ್ ಮತ್ತು ಕಾಂಗ್ರೆಸ್‌ನ ವಯಲಾರ್ ರವಿ ನಿವೃತ್ತಿಯಿಂದಾಗಿ ಏಪ್ರಿಲ್ 21ರಂದು ಮೂರು ರಾಜ್ಯಸಭಾ ಸ್ಥಾನಗಳು ಖಾಲಿಯಾಗಲಿವೆ.
45 ವರ್ಷ ಕೆಳಪಟ್ಟವರೂ ಸೇರಿದಂತೆ ಎಲ್ಲರಿಗೂ ಕೋವಿಡ್ ಲಸಿಕೆ ನೀಡುವ ಸಂಬಂಧ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ತೆಹ್ಸೀನ್ ಪೂನಾವಾಲಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ. ದೇಶದಲ್ಲಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎಂಬ ಎರಡು ಲಸಿಕೆಗಳನ್ನು ಬಳಕೆ ಮಾಡಲಾಗುತ್ತಿದ್ದು, ಅದನ್ನು 45 ವರ್ಷ ಮತ್ತು ಅದರ ಮೇಲ್ಪಟ್ಟವರಿಗೆ ನೀಡಲಾಗುತ್ತಿದೆ.
“ದೇಶದಲ್ಲಿ ಈಚೆಗೆ ಕೋವಿಡ್ ಸೋಂಕಿತರ ಸಂಖ್ಯೆ ವ್ಯಾಪಕವಾಗುತ್ತಿದ್ದು, ಏಪ್ರಿಲ್ 9ರ ವರೆಗೆ 1.31 ಲಕ್ಷ ಪ್ರಕರಣಗಳು ವರದಿಯಾಗಿವೆ. ರೋಗ ಲಕ್ಷಣಗಳಿದ್ದರೂ 45 ವರ್ಷ ಕೆಳಪಟ್ಟವರಿಗೆ ಲಸಿಕೆ ನೀಡದೆ ನಿರ್ಬಂಧ ವಿಧಿಸಿರುವುದು ಅವಿವೇಕದ ಮತ್ತು ಅನಿಯಂತ್ರಿತ ಕ್ರಮವಾಗಿದೆ. ಇದು ಸಂವಿಧಾನದ 21ನೇ ವಿಧಿಯ ಅಡಿ ಕಲ್ಪಿಸಲಾಗಿರುವ ಜೀವನದ ಹಕ್ಕು ಹಾಗೂ 14ನೇ ವಿಧಿಯಡಿ ಕಲ್ಪಿಸಲಾಗಿರುವ ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ” ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.