ಬ್ಯಾಂಕ್ ಖಾತೆ ಸೇರಿದಂತೆ ತೆರಿಗೆ ಅನ್ವಯಿಸದ ವ್ಯಕ್ತಿಯ ಆಸ್ತಿಯನ್ನು ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯಿದೆಯ (ಸಿಜಿಎಸ್‌ಟಿ) ಸೆಕ್ಷನ್ 83ರ ಅಡಿ ಜಪ್ತಿ ಮಾಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ. ನ್ಯಾಯಮೂರ್ತಿಗಳಾದ ರಾಜೀವ್ ಶಕ್ದೆರ್ ಮತ್ತು ತಲ್ವಂತ್ ಸಿಂಗ್ ಅವರಿದ್ದ ಪೀಠ ”ಕಂದಾಯದ ಬಡ್ಡಿ ರಕ್ಷಿಸುವ ಭರದಲ್ಲಿ ತೆರಿಗೆ ವಿಧಿಸಬಹುದಾದ ವ್ಯಕ್ತಿಯನ್ನು ಹೊರತಪಡಿಸಿ ಉಳಿದ ವ್ಯಕ್ತಿಗಳ ಬ್ಯಾಂಕ್ ಖಾತೆ ಸೇರಿದಂತೆ ಪ್ರತಿಯೊಂದು ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದೆ.
ಕಾಯಿದೆಯ ಸೆಕ್ಷನ್ 67ರ ಅಡಿ ತನಿಖೆ ಎದುರಿಸುತ್ತಿರುವ ಕಂಪೆನಿಯೊಂದರ ನಿರ್ದೇಶಕಿ ರೋಶನಿ ಜೈವಾಲ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ಜಾರಿಗೊಳಿಸಲಾಗಿದೆ. ಕಂಪೆನಿಯಲ್ಲಿ ಷೇರುದಾರರಾಗಿದ್ದ ಅರ್ಜಿದಾರರು ಪ್ರಸ್ತುತ ಅದರ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅರ್ಜಿದಾರರ ಹಲವಾರು ಬ್ಯಾಂಕ್ ಖಾತೆಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿರುವ ಜಿಎಸ್‌ಟಿ ವಿಭಾಗದ ಕೇಂದ್ರ ತೆರಿಗೆ ಆಯುಕ್ತರ ಆದೇಶವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು. ಈ ಆದೇಶವನ್ನು ನ್ಯಾಯಾಲಯ ವಿಚಾರಣೆ ವೇಳೆ ತಿರಸ್ಕರಿಸಿದೆ.
ಕೋವಿನ್ ಲಸಿಕೆ ಆನ್‌ಲೈನ್ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಂಡ 18-44 ವರ್ಷದೊಳಗಿನ ವ್ಯಕ್ತಿಗಳು ತಮಗೆ ಯಾವಾಗ ಲಸಿಕೆ ದೊರೆಯುತ್ತದೆ ಎಂಬ ಮಾಹಿತಿ ಇಲ್ಲದೆ ನಿರಂತರವಾಗಿ ಪೋರ್ಟಲ್ ವೀಕ್ಷಿಸುತ್ತಿದ್ದಾರೆ. ಇದರಿಂದ ಅವರ ಅಮೂಲ್ಯ ಸಮಯ ಮತ್ತು ಸಂಪನ್ಮೂಲ ವ್ಯರ್ಥವಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಮುಂಬೈಗೆಂದೇ ಪ್ರತ್ಯೇಕವಾದ ನೋಂದಣಿ ವ್ಯವಸ್ಥೆ ರೂಪಿಸಬೇಕೆಂದು ನಗರದ ಶಿಕ್ಷಕಿಯೊಬ್ಬರು ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಎಲ್ಲಾ ವಯೋಮಾನದವರಿಗೆ ಲಸಿಕಾ ಸ್ಲಾಟ್‌ಗಳ ವಿವರ ಕೇವಲ ಒಂದು ದಿನ ಮೊದಲು ಲಭ್ಯವಾಗುತ್ತಿದ್ದು ನಾಗರಿಕರು ಪ್ರತಿದಿನವೂ ಈ ಅಗ್ನಿ ಪರೀಕ್ಷೆ ಎದುರಿಸಬೇಕಿದೆ ಎಂದು ಅರ್ಜಿದಾರರಾದ ಯೋಗಿತಾ ಆರ್ ವಂಜಾರಾ ದೂರಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಅಂತರ್ಜಾಲ ಸೌಲಭ್ಯ ಇಲ್ಲದಿರುವುದರಿಂದ ಮೊದಲೇ ನಿರ್ಧರಿಸಿದ ಸಮಯದಲ್ಲಿ ಲಸಿಕೆ ಕಾಯ್ದಿರಿಸಲು ಮುಂಬೈ ಮಹಾನಗರ ಪಾಲಿಕೆಗೆ ನಿರ್ದೇಶಿಸಬೇಕು ಎಂದು ವಕೀಲ ರಾಜೇಶ್ ವಂಜರಾ ಅವರ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ.
ವಿಚಾರಣೆಗಳ ನೇರ ಪ್ರಸಾರ, ಭೌತಿಕ ಮತ್ತು ವರ್ಚುವಲ್ ವಿಧಾನಗಳೆರಡರ ಮೂಲಕವೂ ನ್ಯಾಯಾಲಯ ಕಲಾಪಗಳ ವರದಿಗಾರಿಕೆಗೆ ಅವಕಾಶ ಕಲ್ಪಿಸಲು ನಿರ್ದೇಶಿಸುವಂತೆ ಕೋರಿ ಇಬ್ಬರು ಪತ್ರಕರ್ತರು ಅಲಾಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಸಂಬಂಧ ಉನ್ನತಾಧಿಕಾರ ಸಮಿತಿಯೊಂದನ್ನು ರಚಿಸಬೇಕಿದ್ದು ಅದು ಪತ್ರಕರ್ತರ ಅನುಕೂಲಕ್ಕಾಗಿ ನ್ಯಾಯಾಲಯ ಕಲಾಪಗಳ ನೇರ ಪ್ರಸಾರ/ ಪ್ರಸಾರ ಮಾಡಲು ಶಿಫಾರಸು ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಕೋವಿಡ್ ಬಿಕ್ಕಟ್ಟಿನ ಮೊದಲು ಕೂಡ ನ್ಯಾಯಾಲಯ ಕಲಾಪಗಳಿಗೆ ಅಲಾಹಾಬಾದ್ ಹೈಕೋರ್ಟ್ ದೊಡ್ಡಮಟ್ಟದಲ್ಲಿ ಅವಕಾಶ ಕಲ್ಪಿಸಿರಲಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಕಾನೂನು ವರದಿಗಾರರಾದ ʼಬಾರ್ ಅಂಡ್ ಬೆಂಚ್ʼ ಜಾಲತಾಣದ ಅರೀಬ್ ಉದ್ದೀನ್, ಲೈವ್ ಲಾ ಜಾಲತಾಣದ ಸ್ಪರ್ಶ್ ಉಪಾಧ್ಯಾಯ್ ಅವರು ವಕೀಲರಾದ ಶಾಶ್ವತ್ ಆನಂದ್ ಮತ್ತು ಮೊಹಮ್ಮದ್ ಕುಮೈಲ್ ಹೈದರ್ ಅವರ ಮೂಲಕ ಅರ್ಜಿ ಸಲ್ಲಿಸಿದ್ದಾರೆ.