ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 23-2-2021
[ಶಾರದಾ ಚಿಟ್ ಫಂಡ್] ಚುನಾವಣೆಗಳ ಸಂದರ್ಭದಲ್ಲಿ ನಿಂದನಾ ಮನವಿಗಳು ಜೀವಂತಿಕೆ ಪಡೆಯುತ್ತವೆ: ಸುಪ್ರೀಂಗೆ ಬಂಗಾಳ ಸರ್ಕಾರ ವಿವರಣೆ
ರಾಜಕೀಯ ಮಹತ್ವ ಹೊಂದಿರುವ ನ್ಯಾಯಾಂಗ ನಿಂದನಾ ಮನವಿಗಳು ಚುನಾವಣೆಯ ಸಂದರ್ಭದಲ್ಲಿ ಜೀವಂತಿಕೆ ಪಡೆದುಕೊಳ್ಳುತ್ತವೆ ಎಂದು ಪಶ್ಚಿಮ ಬಂಗಾಳ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮಂಗಳವಾರ ತಿಳಿಸಿದೆ. ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿರುವ ನ್ಯಾಯಾಂಗ ನಿಂದನಾ ಮನವಿಯ ವಿಚಾರಣೆ ವೇಳೆ ಪಶ್ಚಿಮ ಬಂಗಾಳ ಸರ್ಕಾರವು ಮೇಲಿನಂತೆ ಹೇಳಿದೆ.

ನ್ಯಾಯಾಂಗ ನಿಂದನಾ ಮನವಿಗಳು 'ಹಳೆಯ ಸಂಗತಿಯಾಗಿದ್ದು', ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಸಕ್ತ ಮನವಿಯನ್ನು ಸಲ್ಲಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಹೇಳಿದರು. ಇದಕ್ಕೆ ಪ್ರತಿಯಾಗಿ, 'ನಿಂದನಾ ಮನವಿಯು ಯಾವಾಗಲೂ ಜೀವಂತವಾಗಿರುತ್ತದೆ' ಎಂದು ಸಿಬಿಐ ಪ್ರತಿನಿಧಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. ಇದಕ್ಕೆ ಉತ್ತರಿಸಿದ ಸಿಂಘ್ವಿ, “ಅವು ಚುನಾವಣೆಯ ಸಂದರ್ಭದಲ್ಲಿ ಜೀವಂತಿಕೆ ಪಡೆಯುತ್ತವೆ” ಎಂದರು. ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಮತ್ತು ಸಂಜೀವ್ ಖನ್ನಾ ಅವರು ಸಿಬಿಐ ಕೋರಿಕೆಯ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಂದೂಡಿದರು.
ಪ್ರೊ. ವೇದಕುಮಾರಿ ಒಡಿಶಾ ಎನ್‌ಎಲ್‌ಯು ಕುಲಪತಿಯಾಗಿ ನೇಮಕ
ದೆಹಲಿ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕರ ವಿಭಾಗದ ಮಾಜಿ ಡೀನ್ ಪ್ರೊ. ವೇದಕುಮಾರಿ ಅವರನ್ನು ಒಡಿಶಾದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕ ಮಾಡಲಾಗಿದೆ. ಕಳೆದ ವರ್ಷದ ಅಕ್ಟೋಬರ್‌ನಿಂದ ಹಂಗಾಮಿ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊ. ಯೋಗೇಶ್ ಪ್ರತಾಪ್ ಸಿಂಗ್ ಅವರಿಂದ ವೇದಕುಮಾರಿ ಅಧಿಕಾರ ಸ್ವೀಕರಿಸಲಿದ್ದಾರೆ. ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೊ. ಶ್ರೀಕೃಷ್ಣ ದೇವರಾವ್ ಅವರು ನೇಮಕವಾಗಿದ್ದರಿಂದ ಆ ಸ್ಥಾನ ತೆರವಾಗಿತ್ತು.

ಲಖನೌನ ರಾಮಮನೋಹರ ಲೋಹಿಯಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ (ಆರ್‌ಎಂಎನ್‌ಎಲ್‌ಯು) ಕುಲಪತಿ ಪ್ರೊ. ಎಸ್ ಕೆ ಭಟ್ನಾಗರ್, ಹೈದರಾಬಾದ್‌ನ ಎನ್‌ಎಎಲ್‌ಎಸ್‌ಎಆರ್ ಕುಲಪತಿ ಪ್ರೊ. ಫೈಜಾನ್ ಮುಸ್ತಾಫ ಮತ್ತು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ ಕೆ ಪಟ್ನಾಯಕ್ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯು ಪ್ರೊ. ವೇದಕುಮಾರಿ ಸೇರಿದಂತೆ ಮೂವರ ಹೆಸರನ್ನು ಶಿಫಾರಸ್ಸು ಮಾಡಿತ್ತು. ಪ್ರೊ. ಕುಮಾರಿ ಅವರು ಶಿಕ್ಷಣ ತಜ್ಞೆಯಾಗಿ ಮೂವತ್ತು ವರ್ಷಗಳ ಅನುಭವಿಯಾಗಿದ್ದಾರೆ. ದೆಹಲಿ ನ್ಯಾಯಿಕ ಅಕಾಡೆಮಿಯ ಮುಖ್ಯಸ್ಥೆಯಾಗಿಯೂ ಅವರು ಕೆಲಸ ಮಾಡಿದ್ದಾರೆ. ಇದರ ಜೊತೆಗೆ ದೆಹಲಿ ವಿಶ್ವವಿದ್ಯಾಲಯದ ಒಂದನೇ ಕೇಂದ್ರದ ಉಸ್ತುವಾರಿ ಪ್ರಾಧ್ಯಾಪಕಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.
ಹಿರಿಯ ನಾಗರಿಕರ ಕಾಯಿದೆ ಅಡಿ ಹಿರಿಯ ನಾಗರಿಕರು ಅಥವಾ ಪೋಷಕರು ಮಾತ್ರ ಮೇಲ್ಮನವಿ ಸಲ್ಲಿಸಬಹುದು: ಮದ್ರಾಸ್ ಹೈಕೋರ್ಟ್
ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ 2007ರ ಪ್ರಕಾರ ಹಿರಿಯ ನಾಗರಿಕರ ನಿರ್ವಹಣಾ ನ್ಯಾಯಾಧಿಕರಣ ಆದೇಶವನ್ನು ಪೋಷಕರು ಅಥವಾ ಹಿರಿಯ ನಾಗರಿಕರು ಮಾತ್ರ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬಹುದಾಗಿದೆ ಎಂದು ಈಚೆಗೆ ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.

ಕಾಯಿದೆಯ ನಿಬಂಧನೆಗಳ ಪ್ರಕಾರ ವಿಶೇಷವಾಗಿ ಸೆಕ್ಷನ್ 16ರ ಅಡಿ ಪೋಷಕರು ಅಥವಾ ಹಿರಿಯ ನಾಗರಿಕರನ್ನು ಹೊರತುಪಡಿಸಿ ಬೇರೆ ಯಾರೂ ನ್ಯಾಯಾಧಿಕರಣದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗದು ಎಂದು ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ರಾಮಮೂರ್ತಿ ಹೇಳಿದ್ದಾರೆ.
ಖಾಸಗಿ ವ್ಯಕ್ತಿಗಳು, ದೇವಸ್ಥಾನಗಳು ಭವಿಷ್ಯದಲ್ಲಿ ಆನೆಗಳ ಮಾಲೀಕತ್ವ ಹೊಂದುವುದಕ್ಕೆ ನಿಷೇಧ ಹೇರುವಂತೆ ನೀತಿ ರೂಪಿಸಲು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ
ಯಾವುದೇ ವ್ಯಕ್ತಿ ಅಥವಾ ದೇವಸ್ಥಾನಗಳು ಭವಿಷ್ಯದಲ್ಲಿ ಆನೆಯ ಮಾಲೀಕತ್ವ ಹೊಂದುವುದಕ್ಕೆ ನಿಷೇಧ ಹೇರಬೇಕು ಮತ್ತು ಈಗ ಅಲ್ಲಿರುವ ಆನೆಗಳನ್ನು ಅರಣ್ಯ ಇಲಾಖೆಯ ವ್ಯಾಪ್ತಿಗೆ ತರುವ ಸಂಬಂಧ ಒಂದೇ ನೀತಿಯನ್ನು ಜಾರಿಗೆ ತರಬೇಕು ಎಂದು ಮದ್ರಾಸ್ ಹೈಕೋರ್ಟ್ ಮಂಗಳವಾರ ಹೇಳಿದೆ.

ಶ್ರೀರಂಗಂನ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಕೆಲವು ಆನೆಗಳನ್ನು ಅಮಾನವೀಯವಾಗಿ ಕಾಣಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ರಂಗರಾಜನ್ ನರಸಿಂಹನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ಸೆಂಥಿಲ್ ರಾಮಸ್ವಾಮಿ ಅವರಿದ್ದ ವಿಭಾಗೀಯ ಪೀಠ ನಡೆಸಿತು. ಸರ್ಕಾರದ ಸೀಮಿತ ಚಟುವಟಿಕೆ ಹೊರತುಪಡಿಸಿ ಉದಾಹರಣೆಗೆ ಕುದುರೆ ಸವಾರಿ ಅಥವಾ ಸಮುದ್ರ ತೀರದಲ್ಲಿ ಒಂಟೆ ಸವಾರಿಯನ್ನು ಹೊರತುಪಡಿಸಿ ಪ್ರಾಣಿಗಳ ಮೇಲಿನ ಎಲ್ಲಾ ಅವಶ್ಯಕತೆಗಳಿಗೆ ನಿಷೇಧ ವಿಧಿಸಬೇಕು ಎಂದು ಪೀಠ ಹೇಳಿದೆ.