ಕೋವಿಡ್ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಬೇಸಿಗೆ ರಜಾಕಾಲವನ್ನು ಮುಂಚಿತವಾಗಿ ಆರಂಭಿಸಿದೆ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಬೇಸಿಗೆ ರಜೆ ಮೇ 10ರಂದು ಆರಂಭವಾಗಲಿದ್ದು, ನ್ಯಾಯಾಲಯವು ಜೂನ್ 28ಕ್ಕೆ ಪುನಾರಂಭವಾಗಲಿದೆ.
ಈ ಸಂಬಂಧ ಹೆಚ್ಚುವರಿ ರೆಜಿಸ್ಟ್ರಾರ್ ಮಹೇಶ್ ಟಿ ಪಟಾಣ್ಕರ್ ಅವರು ಶನಿವಾರ ಸುತ್ತೋಲೆ ಹೊರಡಿಸಿದ್ದಾರೆ. ಈ ಹಿಂದೆ ರಜಾ ಕಾಲವು ಮೇ 14ಕ್ಕೆ ಆರಂಭವಾಗಿ ಜೂನ್ 30ಕ್ಕೆ ಮುಗಿಯುತ್ತಿತ್ತು. ಬೇಸಿಗೆ ರಜೆಯ ಮಾಹಿತಿಯಲ್ಲದೆ ನವೆಂಬರ್ 13ರಂದು ನ್ಯಾಯಾಲಯ ಕಾರ್ಯನಿರ್ವಹಿಸಲಿದೆ ಎನ್ನುವ ಬಗ್ಗೆಯೂ ಸರ್ವೋಚ್ಚ ನ್ಯಾಯಾಲಯದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಹಿಂದೆ ಒಪ್ಪಿಗೆ ನೀಡಲಾದ ಮಾತೃತ್ವ ರಜೆಯ ಅವಧಿ ಮುಗಿದು ಎರಡು ವರ್ಷಗಳ ಒಳಗೆ ಎರಡನೇ ಬಾರಿ ಮಾತೃತ್ವ ರಜೆ ನೀಡುವುದನ್ನು ಮಾತೃತ್ವ ಸೌಲಭ್ಯ ಕಾಯಿದೆ 1961 ತಡೆಯುವುದಿಲ್ಲ ಎಂದು ಅಲಾಹಾಬಾದ್ ಹೈಕೋರ್ಟ್ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಎರಡು ವರ್ಷ ಮುಗಿಯುವುದರಳೊಗೆ ಮತ್ತೊಮ್ಮೆ ಹೆರಿಗೆ ರಜೆ ಕೋರುವಂತಿಲ್ಲ ಎಂಬ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿ ವಿಚಾರಣೆಯನ್ನು ಪೀಠ ನಡೆಸಿತು. ರಿಚಾ ಶುಕ್ಲಾ ವರ್ಸಸ್ ಉತ್ತರ ಪ್ರದೇಶ ರಾಜ್ಯ ಪ್ರಕರಣದಲ್ಲಿ ಅಲಾಹಾಬಾದ್ ಹೈಕೋರ್ಟ್ ಆದೇಶವನ್ನು ಅರ್ಜಿದಾರರು ಉಲ್ಲೇಖಿಸಿದ್ದರು. ಇದಕ್ಕೆ ನ್ಯಾಯಮೂರ್ತಿ ಸೌರಭ್ ಲವಾನಿಯಾ ಸಮ್ಮತಿಸಿದರು.
ಧರ್ಮದ ಆಧಾರದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯಿದೆಯು ತಾರತಮ್ಯ ಮಾಡುವುದಿಲ್ಲ ಎಂದಿರುವ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಕಾಯಿದೆಯ ಅನ್ವಯ ಯಾವುದೇ ಅಪರಾಧ ಎಸಗಿದರೂ ಅದು ಶಿಕ್ಷೆಗೆ ಅರ್ಹ ಎಂದಿದೆ.
ಹೀಗಾಗಿ, ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ, ಪ್ರೌಢಾವಸ್ಥೆ ತಲುಪಿದ ನಂತರ ನಡೆವ ವಿವಾಹಗಳು ಮಾನ್ಯವಾಗುತ್ತವೆ. ಆದರೆ, ಇದಕ್ಕೇನೂ ಬಾಲ್ಯ ವಿವಾಹ ನಿಷೇಧ ಕಾಯಿದೆಯಲ್ಲಿ ವಿಶೇಷ ವಿನಾಯಿತಿ ಇಲ್ಲ ಎಂದು ನ್ಯಾಯಾಲಯ ಹೇಳಿದೆ.