ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 07-12-2020

>> ಗ್ರಾಮೀಣ ಭಾಗದಲ್ಲಿ ಬಾಲ ಕಾರ್ಮಿಕರು, ಬಾಲ್ಯ ವಿವಾಹ ಹೆಚ್ಚಳ >> ಸಣ್ಣ ವ್ಯಾಪಾರಿಗಳು ಮತ್ತು ಬೀದಿ ಬದಿಯ ವ್ಯಾಪಾರಿಗಳಿಗೆ ನೆರವು >> ಪೊಲೀಸ್‌ ಪಡೆ ಬಗ್ಗೆ ಮದ್ರಾಸ್‌ ಹೈಕೋರ್ಟ್‌ ಕಳಕಳಿ >> ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಲಿಂಗ ವಿಭಾಗ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 07-12-2020

ಶಾಲೆಗೆ ತೆರಳದ ಮಕ್ಕಳು: ಗ್ರಾಮೀಣ ಭಾಗದಲ್ಲಿ ಬಾಲ ಕಾರ್ಮಿಕರು, ಬಾಲ್ಯ ವಿವಾಹ ಹೆಚ್ಚಳ ಎಂದು ಆತಂಕ ವ್ಯಕ್ತಪಡಿಸಿದ  ಕರ್ನಾಟಕ ಹೈಕೋರ್ಟ್‌

ಕೋವಿಡ್‌ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ 14 ವರ್ಷಕ್ಕಿಂತ ಕೆಳಗಿರುವ ಮಕ್ಕಳು ಶಾಲೆಗೆ ಹೋಗದ ಹಿನ್ನೆಲೆಯಲ್ಲಿ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಬಾಲ ಕಾರ್ಮಿಕರು ಮತ್ತು ಬಾಲ್ಯ ವಿವಾಹದಲ್ಲಿ ಹೆಚ್ಚಳವಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಹೇಳಿದೆ.

Karnataka High Court
Karnataka High Court

ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್‌ನಲ್ಲಿ ಭಾಗವಹಿಸಲು ಉಚಿತವಾಗಿ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಮತ್ತು ಇತರೆ ಡಿಜಿಟಲ್‌ ಸಂಪನ್ಮೂಲ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಎನ್‌ ಎಸ್‌ ಸಂಜಯ್‌ ಗೌಡ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ಬಂದ್ ಸಮಯದಲ್ಲಿ ಸಣ್ಣ ವ್ಯಾಪಾರಿಗಳಿಗೆ ಉಂಟಾದ ನಷ್ಟವನ್ನು ಭರಿಸಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಸಣ್ಣ ವ್ಯಾಪಾರಿಗಳು ಮತ್ತು ಬೀದಿ ಬದಿಯ ವ್ಯಾಪಾರಿಗಳಿಗೆ ಬಂದ್‌ನಿಂದಾಗುವ ನಷ್ಟವನ್ನು ಬಂದ್‌ಗೆ ಕರೆ ನೀಡುವ ಸಂಘಟಕರು, ಪಕ್ಷಗಳಿಂದ ವಸೂಲಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಈಚೆಗೆ ಹೈಕೋರ್ಟ್‌ ಸೂಚಿಸಿದೆ.

Karnataka bandh
Karnataka bandh

“ಸಾಂಕ್ರಾಮಿಕತೆಯಿಂದಾಗಿ ಸಣ್ಣ ವ್ಯಾಪಾರಿಗಳ ಬದುಕಿಗೆ ತೀವ್ರ ಹೊಡೆತ ಬಿದ್ದಿದೆ. ಈಗ ರಾಜಕೀಯ ಪಕ್ಷಗಳು ಆಹ್ವಾನ ನೀಡಿರುವ ಬಂದ್‌ ಕರೆಯಿಂದ ಅವರಿಗೆ ಮತ್ತಷ್ಟು ನಷ್ಟವಾಗಲಿದೆ” ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ಹೇಳಿದೆ. ಡಿಸೆಂಬರ್‌ 5ಕ್ಕೆ ಕರೆ ನೀಡಲಾಗಿದ್ದ ಬಂದ್‌ಗೆ ಮಧ್ಯಂತರ ತಡೆ ನೀಡುವಂತೆ ಕೋರಲಾಗಿತ್ತು. ಇದಕ್ಕೆ ನಿರಾಕರಿಸಿದ್ದ ಪೀಠವು ಬಂದ್‌ ಆಯೋಜಕರಾದ ಕನ್ನಡ ಚಳುವಳಿ ವಾಟಳ್‌ ಪಕ್ಷ ಇನ್ನಷ್ಟೇ ನೋಟಿಸ್‌ಗೆ‌ ಪ್ರತಿಕ್ರಿಯಿಸಬೇಕಿದೆ ಎಂದಿತ್ತು.

“ವಿರಾಮರಹಿತವಾಗಿ ದಿನಪೂರ್ತಿ ಪೊಲೀಸರಿಂದ ಕೆಲಸ”: ಪೊಲೀಸ್‌ ಪಡೆಯಲ್ಲಿನ ಒತ್ತಡ, ಆತ್ಮಹತ್ಯೆ ಕುರಿತು ಆತಂಕ ವ್ಯಕ್ತಪಡಿಸಿದ ಮದ್ರಾಸ್‌ ಹೈಕೋರ್ಟ್‌

ಪೊಲೀಸ್‌ ಪಡೆಯಲ್ಲಿ ಆತ್ಮಹತ್ಯೆ ಮತ್ತು ಪರಿತ್ಯಾಗಗಳನ್ನು ಪರಿಗಣಿಸಿರುವ ಮದ್ರಾಸ್‌ ಹೈಕೋರ್ಟ್‌ನ ಮದುರೈ ಪೀಠವು ವಿರಾಮರಹಿತವಾಗಿ ದಿನಪೂರ್ತಿ ಪೊಲೀಸರು ಕೆಲಸ ಮಾಡುತ್ತಾರೆ ಎಂದು ಪೊಲೀಸ್‌ ಅಧಿಕಾರಿಗಳ ಕಲ್ಯಾಣದ ಬಗ್ಗೆ ಕಾಳಜಿ ವ್ಯಕ್ತಪಡಿಸಿದೆ.

Chennai Police outside Madras High Court
Chennai Police outside Madras High Court

“ಯಾವುದೇ ಕ್ರಮ ಕೈಗೊಂಡರೂ ಪೊಲೀಸರನ್ನು ನಿಂದಿಸಲಾಗುತ್ತದೆ. ಕ್ರಮ ಕೈಗೊಳ್ಳದಿದ್ದರೂ ಅವರನ್ನು ನಿಂದಿಸಲಾಗುತ್ತದೆ. ಪೊಲೀಸರು ಅನಾಥರಂತೆ” ಎಂದು ಮೌಖಿಕವಾಗಿ ಪೀಠ ಹೇಳಿತು. ಇದೇ ಸಂದರ್ಭದಲ್ಲಿ, ಸಾತನ್‌ಕುಲಮ್‌ ಲಾಕಪ್‌ಡೆತ್‌ ಪ್ರಕರಣದಲ್ಲಿ ಪೊಲೀಸರ ವಿರುದ್ಧದ ಗಂಭೀರ ಆರೋಪದ ಬಗ್ಗೆಯೂ ಪೀಠಕ್ಕೆ ಮಾಹಿತಿ ಇದೆ, ಹಾಗೆಂದು ಪೊಲೀಸರ ಕಾಳಜಿಯ ಬಗ್ಗೆ ಅಲಕ್ಷಿಸುವಂತಿಲ್ಲ ಎಂದಿತು. ಪೊಲೀಸರಿಲ್ಲದೆ ಹೋದರೆ ಈ ಸಮಾಜದಲ್ಲಿ ಕನಿಷ್ಠ ಒಂದು ಗಂಟೆ ಬದುಕುವುದೂ ದುಸ್ಸಾಧ್ಯ ಎಂದು ಎನ್‌ ಕಿರುಬಾಕರನ್‌ ಅವರಿದ್ದ ವಿಭಾಗೀಯ ಪೀಠವು ಅಭಿಪ್ರಾಯಪಟ್ಟಿತು.

ಜೈಲು ಅಂಕಿ-ಅಂಶ ವರದಿಯಲ್ಲಿ ತೃತೀಯ ಲಿಂಗಿಗಳನ್ನು ಪ್ರತ್ಯೇಕ ಲಿಂಗವಾಗಿ ದಾಖಲಿಕೆ: ದೆಹಲಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರದ ವಿವರಣೆ

ರಾಷ್ಟ್ರೀಯ ಅಪರಾಧ ದಾಖಲೆ ಬ್ಯುರೊ (ಎನ್‌ಸಿಆರ್‌ಬಿ) ಅಂಕಿ-ಅಂಶ ವರದಿಯಲ್ಲಿ ತೃತೀಯ ಲಿಂಗಿಗಳನ್ನು ಪ್ರತ್ಯೇಕ ಲಿಂಗ ವಿಭಾಗಕ್ಕೆ ಸೇರಿಸಲಾಗುವುದು ಎಂದು ದೆಹಲಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರವು ಸೋಮವಾರ ವಿವರಿಸಿದೆ.

Transgenders
Transgenders

ಎನ್‌ಸಿಆರ್‌ಬಿ ವರದಿಯಲ್ಲಿ ತೃತೀಯ ಲಿಂಗಗಳನ್ನು ಪ್ರತ್ಯೇಕ ವಿಭಾಗದಲ್ಲಿ ಸೇರ್ಪಡೆಗೊಳಿಸುವಂತೆ ಕೋರಿ ಕರಣ್‌ ತ್ರಿಪಾಠಿ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಡಿ ಎನ್‌ ಪಟೇಲ್‌ ಮತ್ತು ಪ್ರತೀಕ್‌ ಜಲನ್‌ ಅವರಿದ್ದ ವಿಭಾಗೀಯ ಪೀಠವು ನಡೆಸಿತು. ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಚೇತನ್‌ ಶರ್ಮಾ ಅವರು ವಿಭಾಗೀಯ ಪೀಠದ ಮುಂದೆ ವಿವರಣೆ ನೀಡಿದರು.

Related Stories

No stories found.
Kannada Bar & Bench
kannada.barandbench.com